Site icon Vistara News

ರಾಜ್ಯದೆಲ್ಲೆಡೆ ಧಾರಾಕಾರ ಮಳೆ: ಮನೆಗೆ ನುಗ್ಗಿದ ನೀರು, ಶಾಲೆ ಗೋಡೆ ಕುಸಿತ, ತುಂಬಿದ ಜಲಾಶಯ

ಮಾಲೆ

ಬೆಂಗಳೂರು: ರಾಜ್ಯಾದ್ಯಂತ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ಪರದಾಡುವಂತಾಗಿದೆ. ಈಗಾಗಲೇ ಶಾಲೆಗಳು ಕೂಡ ಪ್ರಾರಂಭಗೊಂಡಿದ್ದು, ಎಲ್ಲೆಂದರಲ್ಲಿ ಮರಗಳು ಉರುಳಿ, ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಕಷ್ಟಕರ ವಾತಾವರಣ ಸೃಷ್ಟಿಯಾಗಿದೆ. ನಗರಗಳಲ್ಲಿ ನೀರು ಮನೆಗಳಲ್ಲಿ ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇದೇ ವೇಳೆ ಕೆರೆ ಕಟ್ಟೆ, ಜಲಾಶಯಗಳು ಒಂದೇ ಮಳೆಗೆ ತುಂಬಿ ತುಳುಕುತ್ತಿವೆ.

ಮಂಡ್ಯದಲ್ಲಿ ಮಳೆ ಅವಾಂತರದಿಂದಾಗಿ ರಾತ್ರಿ ಸುರಿದ ಭಾರೀ ಮಳೆಗೆ ಸ್ಲಂ ಬೋರ್ಡ್ ಸಂಪೂರ್ಣ ಜಲಾವೃತಗೊಂಡಿದೆ. ಕೊಳಗೇರಿ ನಿವಾಸಿಗಳ ಮನೆಗೆ ಮಳೆ ನೀರು ನುಗ್ಗಿ, ವರುಣನ ಆರ್ಭಟಕ್ಕೆ ಹಾಲಹಳ್ಳಿ ಕೊಳಗೇರಿ ನಿವಾಸಿಗಳು ಸ್ಥಿತಿ ಕಷ್ಟಕರವಾಗಿದೆ. ಈಗಾಗಲೇ 632 ಮನೆಗಳು ಪೂರ್ಣಗೊಂಡಿವೆ. 3 ವರ್ಷಗಳು ಕಳೆದರೂ ಅಧಿಕಾರಿಗಳು ಮನೆ ಹಂಚಿಕೆ ಮಾಡಲು ಹಿಂದೇಟು ಹಾಕಿದ ಕಾರಣ ಜನರು ಬೀದಿಪಾಲಾಗಿದ್ದಾರೆ. ಸದ್ಯ ತಾತ್ಕಾಲಿಕ ಶೆಡ್‌ಗಳಲ್ಲಿ ಕೊಳಗೇರಿ ನಿವಾಸಿಗಳು ವಾಸವಾಗಿದ್ದಾರೆ. ಆದರೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನೂರಕ್ಕೂ ಹೆಚ್ಚು ಶೆಡ್‌ಗಳು ಜಲಾವೃತಗೊಂಡು ಆಹಾರ, ಬಟ್ಟೆ, ಪಾತ್ರೆ ಸಾಮಾಗ್ರಿಗಳು ನೀರು ಪಾಲಾಗಿವೆ. ಮಲಗಲು ಜಾಗವಿಲ್ಲದೇ ಇಡೀ ರಾತ್ರಿ ವೃದ್ಧರು ಹಾಗೂ ಮಕ್ಕಳು ಪರದಾಟ ಪಡುವಂತಾಗಿದೆ. ಒಂದು ವೇಳೆ ಸಮಸ್ಯೆ ಬಗೆಹರಿಸದೆ ಮತ ಕೇಳಲು ಬಂದರೆ ಪಾದರಕ್ಷೆಯಲ್ಲಿ ಹೊಡಿತೀವಿ ಎಂದು ಜನಪ್ರತಿನಿಧಿಗಳ ವಿರುದ್ಧ ಕೊಳಗೇರಿ ನಿವಾಸಿಗಳು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ | Bengaluru Rain | ಅಬ್ಬರಿಸಿದ ಮಳೆ-ತತ್ತರಿಸಿದ ಬೆಂಗಳೂರು: ಇಬ್ಬರು ಕಾರ್ಮಿಕರ ಸಾವು

ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ಬಲ್ಲೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಕುಸಿದು ಶಾಲೆಯ ಪಕ್ಕದಲ್ಲಿ ನಿಲ್ಲಿಸಿದ್ದ ಆಟೋ ಜಖಂಗೊಂಡಿದೆ.

ಅದೇ ರೀತಿ ತುಮಕೂರು ಜಿಲ್ಲೆಯ ಮಾರ್ಕೋನಹಳ್ಳಿ ಡ್ಯಾಂ ಭರ್ತಿ ಆದ ಕಾರಣ ಡ್ಯಾಂ‌ನಿಂದ ಅಧಿಕ ಪ್ರಮಾಣದಲ್ಲಿ ನೀರು ಹೊರಕ್ಕೆ ಹಾಕಲಾಗಿದೆ. ಕುಣಿಗಲ್ ತಾಲೂಕಿನ ಮಾರ್ಕೋನಳ್ಳಿ ಜಲಾಶಯ ಮಟ್ಟ 88.5 ಅಡಿಗೆ  ಭರ್ತಿಯಾಗಿದೆ.  2 ಸಾವಿರ ಕ್ಯುಸೆಕ್ ಒಳ ಹರಿವು ಹಾಗೂ 2 ಸಾವಿರ ಕ್ಯುಸೆಕ್ ಹೊರಹರಿವು ಆಗಿದೆ. ಇದರಿಂದಾಗಿ ಮಂಡ್ಯದ ಮದ್ದೂರು ಹಾಗೂ ಮಳವಳ್ಳಿ ಜಲಾನಯನ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಿದ್ದು, ಇಂದಿನಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸುವ ಸಾಧ್ಯತೆ ಇದೆ. ನದಿ ಪಾತ್ರದ ಜನರು ಆಸ್ತಿ-ಪಾಸ್ತಿ, ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಬೇಕೆಂದು ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಎಚ್ಚರಿಕೆ ನೀಡಿದ್ದಾರೆ.

ಸಿಡಿಎಸ್ ನಾಲೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಚಿಕ್ಕಪಾಳ್ಯ ಗ್ರಾಮ ವ್ಯಾಪ್ತಿಯ ಗದ್ದೆಗಳಿಗೆ ನೀರು ನುಗ್ಗಿದೆ. ಭತ್ತ, ಹೂ, ಟೊಮ್ಯಾಟೊ ಸೇರಿದಂತೆ ವಿವಿಧ ಬೆಳೆ ಬೆಳೆದಿದ್ದ ಜಮೀನಿಗೆ ಕಿರುನಾಲೆ ನೀರು ನುಗ್ಗಿದ್ದು, ಜಮೀನಿನ ಫಸಲು ಕೊಚ್ಚಿ ಹೋಗಿದೆ. ಈ ಅವಘಡಕ್ಕೆ ಅಧಿಕಾರಿಗಳ ನಿರ್ಲಕ್ಷ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯದ ಅರೆಕೆರೆ ಗ್ರಾಮದ ಸಮೀಪ ಬಳ್ಳಕೆರೆ ಸಂಪರ್ಕ ಸೇತುವೆ ಮುಳುಗಡೆಗೊಂಡಿದ್ದು, ರಾತ್ರಿ ಸುರಿದ ಧಾರಾಕಾರ ಮಳೆಗೆ ರಸ್ತೆ ಮೇಲೆ ಹಳ್ಳದ ನೀರು ಹರಿಯುತ್ತಿದೆ. ಬಳ್ಳೆಕೆರೆ ಸಂಪರ್ಕ ಸೇತುವೆ ಮುಳುಗಡೆಯಾಗಿ ಜನ ಸಂಪರ್ಕ ಕಡಿತಗೊಂಡಿದ್ದು, ಧಾರಾಕಾರ ಮಳೆಗೆ  ಜನ ಜೀವನ ಅಸ್ತವ್ಯಸ್ಥಗೊಂಡಿದೆ.

ಕೊಪ್ಪಳದಲ್ಲೂ ನಿನ್ನೆ ರಾತ್ರಿಯಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು, ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ರಾತ್ರಿಯಿಂದ ಕೊಪ್ಪಳದಲ್ಲಿಯೂ ನಿರಂತರ ಮಳೆ ಯಾಗುತ್ತಿದ್ದು, ಕೊಪ್ಪಳ ಬೆಟ್ಟ ಮಂಜಿನಿಂದ ಮುಚ್ಚಿಕೊಂಡಿದೆ. ಹಾಗೂ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದೊಳಗೆ ನೀರು ನುಗ್ಗಿ ಗ್ರಾಮಸ್ಥರ ಪರದಾಟ ಪಡುತ್ತಿದ್ದಾರೆ. ದೊಡ್ಡದಾದ ಸಿಡಿ ನಿರ್ಮಿಸಲು ಹುಣಸಿಹಾಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಶಿವಮೊಗ್ಗದಲ್ಲೂ ರೆಡ್‌ ಅಲರ್ಟ್‌ ಘೋಷಣೆ ಮಾಡಿದ್ದು, ಇಂದು ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. 9 ಗಂಟೆವರೆಗೂ 6 ಸೆಂ.ಮೀ. ಮಳೆ ನಿರೀಕ್ಷೆ ಇದ್ದು, ಬೆಳಿಗ್ಗೆ 10 ರಿಂದ 11 ರವರೆಗೆ 5 ಮಿ.ಮೀ. ಮಳೆ ಹಾಗೂ  ಮಧ್ಯಾಹ್ನ 12 ಗಂಟೆಯ ವರೆಗೆ 5 ಮಿ.ಮೀ., ಮಧ್ಯಾಹ್ನ 3 ರಿಂದ 4 ರವರೆಗೆ 10 ಮಿ.ಮೀ., ಸಂಜೆ 4 ರಿಂದ‌ 5 ರವರೆಗೆ 10 ಮಿ.ಮೀ. ಮಳೆ ಹಾಗೂ ರಾತ್ರಿ 7 ರಿಂದ 11 ಗಂಟೆಯವರೆಗೆ ಸಾಧಾರಣ ಮಳೆ ಯಾಗುವ ಸಾಧ್ಯತೆ ಇದೆ. ರಾತ್ರಿ 12 ರ ನಂತರ ಮಳೆಕೊಂಚ‌ ಕಡಿಮೆ ಸಾಧ್ಯತೆ ಇದು ಎಂದು ಹವಮಾನ ಇಲಾಖೆ ತಿಳಿಸಿದೆ.

ದನ್ನೂ ಓದಿ | ಭಾರೀ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಅಪಘಾತ: ಉರುಳಿ ಬುದ್ದ ಕಂಟೈನರ್‌

ಶಿವಮೊಗ್ಗ ತಾಲ್ಲೂಕಿನಾದ್ಯಂತ ಅತಿಯಾದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಸರ್ಕಾರಿ ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಒಂದು ದಿನ ಮಟ್ಟಿಗೆ ರಜೆ ಘೋಷಣೆ ಮಾಡಲಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅಂಗನವಾಡಿಗಳಿಗೂ ರಜೆ ಘೋಷಣೆ ಮಾಡಿದ್ದು, ಶಿವಮೊಗ್ಗ ಜಿಲ್ಲಾಧಿಕಾರಿ ಡಾ ಆರ್. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

ಚಿತ್ರದುರ್ಗದಲ್ಲಿ ತಡರಾತ್ರಿ ಜಿಟಿಜಿಟಿ ಮಳೆ ಸುರಿದಿದೆ. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರವಾಗಿದ್ದು, ಬುದ್ದನಗರ, ಕೊಳಗೇರಿ ಪ್ರದೇಶದಲ್ಲಿನ ಮನೆಗಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ದವಸ, ಧಾನ್ಯ, ತರಕಾರಿ ನೀರುಪಾಲು ಆಗಿದ್ದು, ಚರಂಡಿಗಳು‌ ಭರ್ತಿಯಾಗಿ ಮನೆಗಳಿಗೆ ನುಗ್ಗಿದ ಪರಿಣಾಮ ನಗರಸಭೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಧೆಡೆ ಶಾಲೆಗಳಿಗೆ ರಜೆ

ಮೈಸೂರಿನಲ್ಲೂ ವರುಣನ ಆರ್ಭಟ ಹೆಚ್ಚಾಗಿದ್ದು, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಡಿಸಿಪಿಐ ರಾಮಚಂದ್ರರಾಜೇ ಅರಸ್ ರಿಂದ ಒಂದು ದಿನದ ಷರತ್ತು ಬದ್ದ ರಜೆ ಘೋಷಣೆ ಮಾಡಿದ್ದಾರೆ. ಮಂಗಳೂರಿನಲ್ಲಿ ಕೂಡ ನಿರಂತರ ಸುರಿಯುತ್ತಿರುವ ಮಳೆಯ ಕಾರಣ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಮೇ 19ರ ಗುರುವಾರ ಒಂದು ದಿನ ರಜೆ ಘೋಷಿಸಲು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ. ಉಡುಪಿಯಲ್ಲಿಯೂ ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ಶಾಲಾ ಹಂತದಲ್ಲೆ ರಜೆ ಸೂಚಿಸಲು ಡಿಸಿ ಆದೇಶ ನೀಡಿದ್ದಾರೆ.

ಇದನ್ನೂ ಓದಿ | ನೈಋತ್ಯ ಮುಂಗಾರು ಅಂಡಮಾನ್‌ ಪ್ರವೇಶ, ರಾಜ್ಯದಲ್ಲಿ ಇನ್ನೂ 4 ದಿನ ಭರ್ಜರಿ ಮಳೆ

Exit mobile version