ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಮಳೆಗೆ (Heavy Rain) ಜನರು ನಲುಗಿ ಹೋಗಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದ ಸೇತುವೆಗಳು ಮುಳುಗಡೆಯಾಗಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಮಳೆ ಬಂದರೂ ಕಷ್ಟ, ಬರದೇ ಇದ್ದರೆ ನಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಕಳೆದೆರಡು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಬೆಳೆ ನಾಶವಷ್ಟೇ ಅಲ್ಲ, ಬದಲಾಗಿ ಮನೆಯ ಛಾವಣಿ ಕುಸಿತದ ಜತೆಗೆ ಹಲವು ಮನೆಗಳು ಮುಳುಗಡೆಯಾಗಿವೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಚಟ್ನಳ್ಳಿ- ಯಾದಗಿರಿಗೆ ಸಂಪರ್ಕ ಕಲ್ಪಿಸುವ ಸೇತುವೆಯು ಜಲಾವೃತಗೊಂಡಿದೆ. ಸತತ ಮಳೆಗೆ ಹತ್ತಿ,ಹೆಸರು ಬೆಳೆ ನೀರು ಪಾಲಾಗಿದ್ದು ರೈತರು ಕಂಗಾಲಾಗಿದ್ದಾರೆ. ಸುರಪುರ ತಾಲ್ಲೂಕಿನ ಅಲ್ದಾಳ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿನ ದವಸ ಧಾನ್ಯ, ವಸ್ತುಗಳೆಲ್ಲವೂ ಹಾಳಾಗಿವೆ. ಗ್ರಾಮದಲ್ಲಿ ಸುವ್ಯವಸ್ಥಿತ ಚರಂಡಿ ಇಲ್ಲದೇ ಇರುವುದೇ ನೀರು ನುಗ್ಗಲು ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸರ್ಕಾರ ತಕ್ಷಣ ತಾತ್ಕಾಲಿಕ ಮಳೆ ಹಾನಿ ಪರಿಹಾರ ನೀಡಲು ಜನರು ಒತ್ತಾಯಿಸಿದ್ದಾರೆ. ಇದೇ ಗ್ರಾಮದಲ್ಲಿ ಆದಪ್ಪ ಜಂಬಲದಿನ್ನ ಎಂಬುವವರು ರಾತ್ರಿ ಮನೆಯಲ್ಲಿ ಮಲಗಿದ್ದಾಗ ಮನೆ ಮೇಲ್ಚಾವಣಿ ಕುಸಿದಿದೆ. ಅದೃಷ್ಟವಾಶತ್ ಪ್ರಾಣಾಪ್ರಾಯದಿಂದ ಪಾರಾಗಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟಕ್ಕೆ ಕೆರೆಗಳು ತುಂಬಿ ಹೋಗಿದ್ದು, ರಸ್ತೆ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದೆ. ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ನುಗ್ಗೇಹಳ್ಳಿ ಗ್ರಾಮದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ನುಗ್ಗೇಹಳ್ಳಿ ಗ್ರಾಮದಲ್ಲಿ ಮನೆ, ಅಂಗಡಿಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಜಂಬೂರು ಗ್ರಾಮದಲ್ಲಿ ಕೋಟೆ ಮಾರಮ್ಮ ದೇವರ ತೇರು ಮನೆ ಕುಸಿದು ಬಿದ್ದ ಘಟನೆಯು ನಡೆದಿದೆ. ಮಳೆ ಬಂದ ವೇಳೆ ಜಮೀನಿಗೆ ತೆರಳಿದ್ದ ರೈತರು ತೇರಿನ ಮನೆಯಲ್ಲಿ ನಿಲ್ಲುತ್ತಿದ್ದರು.ರಾತ್ರಿ ವೇಳೆಯಾದ್ದರಿಂದ ಯಾರು ಇಲ್ಲದ ಕಾರಣ ಅವಘಟವೊಂದು ತಪ್ಪಿದೆ.
ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧೆ ಕೂದಲೆಳೆ ಅಂತರದಲ್ಲಿ ಪಾರು
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಗುಡದನಾಳದಲ್ಲಿ ಶನಿವಾರ ಸಂಜೆ 60 ವರ್ಷದ ವೃದ್ಧೆ ಹನುಮವ್ವ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದರು. ಅಕ್ಕಪಕ್ಕದ ಜಮೀನನಲ್ಲಿದ್ದ ಸ್ಥಳೀಯರು ಪ್ರಾಣದ ಹಂಗು ತೊರೆದು ಹನುಮವ್ವಳ ರಕ್ಷಣೆ ಮಾಡಲಾಗಿದೆ. ಇದೇ ಗುಡದನಾಳದ ಹಳ್ಳದಲ್ಲಿ ಜಲಾವೃತವಾಗಿದ್ದ ಸೇತುವೆ ಮೇಲೆ ಬೈಕ್ ಮೂಲಕ ಸಂಚಾರ ಮಾಡಲು ಹೋಗಿ ಬೈಕ್ ಸಮೇತ ಕೊಚ್ಚಿಕೊಂಡು ಹೋಗುತ್ತಿದ್ದ, ಸ್ಥಳೀಯರ ಸಮಯ ಪ್ರಜ್ಞೆಯಿಂದ ಬೈಕ್ ಸವಾರ ಹಾಗೂ ಬೈಕ್ ರಕ್ಷಣೆ ಮಾಡಲಾಗಿದೆ.
ಮಳೆಗೆ ಮನೆ ನೆಲಸಮ
ವಿಜಯನಗರದಲ್ಲಿ ಮಳೆಯಿಂದಾಗಿ ಮನೆಗಳಿಗೆ ಹಾನಿಯಾಗಿದ್ದು, ಭಾಗಶಃ ಸುಮಾರು 6 ಮನೆಗಳು ಬಿದ್ದು ಹೋಗಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ವಿವಿಧೆಡೆ ಮನೆಯ ಮೇಲ್ಛಾಣಿ ಕುಸಿದಿದೆ.
20 ವರ್ಷದ ಬಳಿಕ ತುಂಬಿ ಹರಿದ ಕಾಗಲವಾಡಿ ಕೆರೆ
ಚಾಮರಾಜನಗರ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಕಾರ ಮಳೆಗೆ 20 ವರ್ಷದ ಬಳಿಕ ಕಾಗಲವಾಡಿ ಕೆರೆ ತುಂಬಿ ಹರಿದಿದೆ. ಕೋಡಿ ಬಿದ್ದಿರುವುದರಿಂದ ರಸ್ತೆ ಮೇಲೆ ಸುಮಾರು ಒಂದು ಅಡಿಗೂ ಹೆಚ್ಚು ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಕಾಗಲವಾಡಿ-ಅಮ್ಮನಪುರ-ಜ್ಯೋತಿಗೌಡನಪುರ ನಡುವೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇತ್ತ ಹಾಸನದ ಚನ್ನರಾಯಪಟ್ಟಣ ತಾಲ್ಲೂಕಿನ ಯಾಚನಘಟ್ಟ ಗ್ರಾಮದ ಕೆರೆಯು 25 ವರ್ಷಗಳ ಬಳಿಕ ತುಂಬಿ ಹರಿದಿದೆ. ಪರಿಣಾಮ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಹಿರೀಸಾವೆ ಹೋಬಳಿಯ ದಿಡಗ ಗ್ರಾಮದಲ್ಲಿ 18 ವರ್ಷಗಳ ಬಳಿಕ ದಿಡಗ ಗ್ರಾಮದ ಕೆರೆ ಭರ್ತಿಯಾಗಿದ್ದು, ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿತ್ತು.
ಶಾಲೆಗೂ ನುಗ್ಗಿದ ನೀರು
ಮೈಸೂರಿನ ತಿ.ನರಸೀಪುರ ತಾಲೂಕಿನಲ್ಲಿ ಮಳೆ ಅವಾಂತರವೇ ಸೃಷ್ಟಿಯಾಗಿದೆ. ವಾಟಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿ ಪೀಠೋಪಕರಣವೆಲ್ಲವೂ ಹಾಳಾಗಿವೆ. ಶಾಲಾ ಕೊಠಡಿಯೊಳಗೆ ಮಳೆ ನೀರು ನಿಂತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆಯುಂಟಾಗಿದೆ.
ಮಳೆಗೆ ಧರೆಗುರುಳಿದ ಮರ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ರಸ್ತೆಯ ಮ್ಯಾಕಲಹಳ್ಳಿ ಗ್ರಾಮದ ಬಳಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಉರುಳಿ ಬಿತ್ತು. ರೇಣುಮಾಲಹಳ್ಳಿ ಹಾಗೂ ಮ್ಯಾಕಲಹಳ್ಳಿ ಮಧ್ಯೆ ರಸ್ತೆ ಸಂಚಾರ ಬಂದ್ ಆಗಿತ್ತು. ಉರುಳಿ ಬಿದ್ದ ಬೃಹತ್ ಮರವನ್ನು ಕಟಾವು ಮಾಡಿ ತೆರವು ಕಾರ್ಯಾಚರಣೆ ಮಾಡಲಾಯಿತು.
ತಕ್ಷಣವೇ ಮನೆ ಮತ್ತು ಬೆಳೆ ಪರಿಹಾರ ವಿತರಿಸಿ ಸಿಎಂ ಸೂಚನೆ
ಸಂತ್ರಸ್ತರಿಗೆ ವಿಳಂಬ ಮಾಡದೆ ತಕ್ಷಣವೇ ಮನೆ ಮತ್ತು ಬೆಳೆ ಹಾನಿಗೆ ಪರಿಹಾರ ವಿತರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಭಾನುವಾರ ಗೃಹ ಕಚೇರಿ ಕೃಷ್ಣಾದಿಂದ ಕಳೆದ ಮೂರು ದಿನಗಳಲ್ಲಿ ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಕೆರೆಗಳು ಒಡೆಯದಂತೆ ಹಾಗೂ ಬಿರುಕು ಬೀಳದಂತೆ ಎಚ್ಚರಿಕೆ ವಹಿಸಬೇಕು. ಸಮೀಕ್ಷೆ ನಡೆಸಿ ಅಗತ್ಯವಿದ್ದೆಡೆ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸೂಚಿಸಿದರು.
ದೊಡ್ಡ ಕೆರೆಗಳಿರುವಲ್ಲಿ ಜಾಗೃತರಾಗಿದ್ದು, ಸಾವು ನೋವು ಸಂಭವಿಸದಂತೆ ಎಚ್ಚರ ವಹಿಸಬೇಕು. ಜತೆಗೆ ಮೈಸೂರು ಹೆದ್ದಾರಿಯಲ್ಲಿ ಮಳೆಯಿಂದಾಗಿ ನೀರು ನಿಂತಿರುವುದರಿಂದ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಇಂದಿನಿಂದಲೇ ಅನುವು ಮಾಡಿಕೊಡುವಂತೆ ಮೈಸೂರು, ರಾಮನಗರ ಹಾಗೂ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.
ಮಳೆಯಿಂದ ಹಾನಿಗೊಳಗಾಗಿರುವ ರಸ್ತೆ ಮತ್ತು ಸೇತುವೆಗಳನ್ನು ತಕ್ಷಣವೇ ದುರಸ್ತಿ ಮಾಡಬೇಕು. ಅಧಿಕಾರಿಗಳು ಸಂವಹನದ ಮೂಲಕ ಕಾರ್ಯನಿರ್ವಹಿಸಬೇಕು ಎಂದ ಅವರು ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ರಸ್ತೆ ದುರಸ್ತಿ ಕೈಗೊಳ್ಳಬೇಕು ಎಂದರು.
ಸಕಾಲದಲ್ಲಿ ಕಡಿತಗೊಂಡಿರುವ ವಿದ್ಯುತ್ ಸಂಪರ್ಕ ಮರುಸ್ಥಾಪಿಸುವುದು. ಕಾಳಜಿ ಕೇಂದ್ರಗಳಲ್ಲಿರುವವರಿಗೆ ಗುಣಮಟ್ಟದ ಆಹಾರ ಹಾಗೂ ಬಂಧುಗಳ ಮನೆಗೆ ತೆರಲಿರುವವರಿಗೆ ಆಹಾರ ಕಿಟ್ ಗಳನ್ನು ತಲುಪಿಸುವಂತೆ ಸೂಚನೆ ನೀಡಿದರು. ಈ ವೇಳೆ ಸಚಿವರಾದ ಎಸ್.ಟಿ. ಸೋಮಶೇಖರ್, ಡಾ ಸಿ.ಎನ್.ಅಶ್ವತ್ಥ್ ನಾರಾಯಣ್, ಉಮೇಶ್ ಕತ್ತಿ ಸಭೆಯಲ್ಲಿ ಪಾಲ್ಗೊಂಡು ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಗಿರುವ ಹಾನಿಯ ಕುರಿತು ವಿವರಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ | ರಾಜ್ಯಸಭಾ ಸದಸ್ಯನ ಮನೆಯೊಳಕ್ಕೂ ನುಗ್ಗಿದ ಮಳೆ ನೀರು: ನವರಸನಾಯಕ ಜಗ್ಗೇಶ್ ಬೇಸರ