ಬೆಂಗಳೂರು: ಕೆಲವು ದಿನಗಳಿಂದ ಮಾಯವಾಗಿದ್ದ ಮಳೆ ಮತ್ತೆ ಬೆಂಗಳೂರಿಗೆ ಬಂದಿದೆ. ರಾಜಧಾನಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವೆಡೆ ಅವಾಂತರವನ್ನೇ ಸೃಷ್ಟಿಸಿದೆ (Heavy Rain). ಶುಕ್ರವಾರ ಸುರಿದ ಭಾರೀ ಮಳೆಯಿಂದ ಹಾನಿಯಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಇನ್ನು ಕೆಲೆವೆಡೆ ರಸ್ತೆಗಳಲ್ಲೇ ನೀರು ಹರಿದು ಮುಂದಕ್ಕೆ ಚಲಿಸಲಾಗದೆ ವಾಹನ ಸವಾರರು ಪರದಾಡಿದರು. ವಿವಿಧೆಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ವಾಹನಗಳೂ ಜಖಂಗೊಂಡಿವೆ.
ಮನೆಯೊಳಗೆ ನುಗ್ಗಿದ ನೀರು
ಅರ್.ಅರ್. ನಗರ ವಿಧಾನಸಭಾ ಕ್ಷೇತ್ರದ ಲಕ್ಷ್ಮೀ ದೇವಿನಗರದಲ್ಲಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿನ ನಿವಾಸಿಗಳು ರಾತ್ರಿ ಇಡೀ ನಿದ್ದೆಗೆಟ್ಟು ಮನೆಯಿಂದ ನೀರು ಹೊರ ಹಾಕುವ ದೃಶ್ಯ ಕಂಡು ಬಂತು. ಇನ್ನು ಕೆಂಗೇರಿ ಟಿಟಿಎಂಸಿ ಕಾಂಪೌಂಡ್ ಕುಸಿದು ಬಿದ್ದಿದೆ. ಭಾರಿ ಮಳೆಯಿಂದಾಗಿ ಕಾಂಪೌಂಡ್ ವಾಲ್ ಕುಸಿದಿದ್ದು, ವಾಹನ ನಿಲುಗಡೆಯ ಪಾರ್ಕಿಂಗ್ ಸ್ಥಳ ಸಂಪೂರ್ಣ ಜಲಾವೃತವಾಗಿತ್ತು.
ಕಾರು, ಟಿಟಿ ವಾಹನ ಜಖಂ
ದೀಪಾಂಜಲಿ ನಗರದ ವ್ಯಾಪ್ತಿಯಲ್ಲಿಯಂತೂ ವರುಣ ಸಾಕಷ್ಟು ಅವಾಂತರ ಸೃಷ್ಟಿಸಿದ್ದಾನೆ. ಶುಕ್ರವಾರದ ಗಾಳಿ ಮಳೆಯ ರೌದ್ರಾವತಾರಕ್ಕೆ ನಗರದ ಜನ ಬೆಚ್ಚಿ ಬಿದ್ದಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ವಿದ್ಯುತ್ ಕಂಬ ಧರೆಗುರುಳಿವೆ. ಜತೆಗೆ ಹೆಮ್ಮರವೊಂದು ಉರುಳಿ ಬಿದ್ದ ಕಾರಣ ಮನೆ ಮುಂದೆ ನಿಲ್ಲಿಸಿದ್ದ 2 ಕಾರು, ಒಂದು ಟಿಟಿ ಜಖಂಗೊಂಡಿದೆ. ರಾತ್ರಿ ಸುಮಾರು 11.30ಕ್ಕೆ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಮಳೆ ಅವಾಂತರ ನೋಡಿದ ಜನರು ಕಂಗಾಲಾಗಿದ್ದಾರೆ. ನಾಗರಭಾವಿಯ ಗೋವಿಂದ ರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾರಿನ ಮೇಲೆ ಮರದ ಬೃಹತ್ ಕೊಂಬೆ ಬಿದ್ದು ಹಾನಿಯಾಗಿದೆ.
ಪೆಟ್ರೋಲ್ ಬಂಕ್ ಜಲಾವೃತ
ಇತ್ತ ಆರ್.ಆರ್.ನಗರದಲ್ಲಿಯೂ ಮಳೆಯ ಅಬ್ಬರ ಕಂಡು ಬಂತು. ವರುಣಾರ್ಭಟಕ್ಕೆ ಇಲ್ಲಿನ ಸರ್ಕಲ್ ಬಳಿಯ ಪೆಟ್ರೋಲ್ ಬಂಕ್ ಜಲಾವೃತಗೊಂಡಿತ್ತು. ಪೆಟ್ರೋಲ್ ಟ್ಯಾಂಕ್ ಒಳಗಡೆಯೇ ನೀರು ನುಗ್ಗಿ ತೊಂದರೆ ಎದುರಾಗಿದೆ. ರಾತ್ರಿ ಸಂಪೂರ್ಣ ಜಲಾವೃತವಾಗಿದ್ದ ಪೆಟ್ರೋಲ್ ಬಂಕ್ ಅನ್ನು ಸದ್ಯ ಸಿಬ್ಬಂದಿ ಶುಚಿಗೊಳಿಸುತ್ತಿದ್ದಾರೆ. ಪೆಟ್ರೋಲ್ ಸಿಗದೆ ಬಂಕ್ ಬಳಿ ಬಂದು ವಾಹನ ಸವಾರರು ವಾಪಾಸ್ ಹೋಗುತ್ತಿದ್ದಾರೆ.
ಮೈಸೂರಿನಲ್ಲಿಯೂ ಹಾನಿ
ಮೈಸೂರಿನಲ್ಲಿಯೂ ಬಿರುಗಾಳಿ ಸಹಿತ ಸುರಿದ ಮಳೆ ವಿವಿಧೆಡೆ ಹಾನಿ ಉಂಟು ಮಾಡಿದೆ. ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದ ಬೃಹತ್ ಗಾತ್ರದ ಅರಳಿ ಮರ ಉರುಳಿ ನಾಲ್ಕು ಮನೆಗಳಿಗೆ ಹಾನಿಯಾಗಿವೆ. ಗ್ರಾಮದ ಸಿದ್ದರಾಜು, ಮೂಗಯ್ಯ, ಮಲ್ಲೇಶ್, ಚೆನ್ನೇಗೌಡ ಎಂಬುವವರಿಗೆ ಸೇರಿದ ಮನೆಗಳಿಗೆ ಹಾನಿಯಾಗಿದ್ದು, ಕುಟುಂಬಸ್ಥರು, ಜಾನುವಾರುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಮರ ಬಿದ್ದ ಪರಿಣಾಮ ಹಲವು ವಿದ್ಯುತ್ ಕಂಬಗಳು ನೆಲ ಕಚ್ಚಿವೆ. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಸ್ಥಳಕ್ಕೆ ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಾನಿಯಾಗಿರುವ ಮನೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇನ್ನೂ ಕೆಲವು ದಿನ ರಾಜ್ಯದ ವಿವಿಧೆಡೆ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಇದನ್ನೂ ಓದಿ: Karnataka Weather : ಬಿರುಗಾಳಿ ಸಹಿತ ಭಾರಿ ಮಳೆ; ಸಿಡಿಲು ಬಡಿದು ಮಹಿಳೆ ಸೇರಿ ಶ್ವಾನ ಸಾವು, ಮತ್ತೊಬ್ಬ ಗಂಭೀರ