ಬೆಂಗಳೂರು: ರಾಜ್ಯದ ವಿವಿಧೆಡೆ ಭಾರಿ ಮಳೆಯಾಗುತ್ತಿದ್ದು, ಕೆಲವು ಕಡೆ ನದಿ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತ, ಭೂಕುಸಿತ, ವಿದ್ಯುತ್ ಕಂಬಗಳಿಗೆ ಹಾನಿ ಸೇರಿದಂತೆ ಅಪಾರ ಪ್ರಮಾಣದ ನಷ್ಟಗಳಾಗಿವೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ವಿವಿಧೆಡೆ ಭೂ ಕುಸಿತ ಸಂಭವಿಸಿದೆ. ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2ನೇ ಮೊಣ್ಣಂಗೇರಿ ಗ್ರಾಮದ ರಸ್ತೆಯ ಮೇಲೆ ಭಾನುವಾರ ಮಣ್ಣು ಕುಸಿದಿದೆ. ಹೀಗಾಗಿ ಕೊಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕುಶಾಲನಗರ-ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಬಿರುಸಿನ ಮಳೆಯಾಗುತ್ತಿರುವುದರಿಂದ ಹರದೂರು ಹೊಳೆ ತುಂಬಿದೆ. ಭಾಗಮಂಡಲದಲ್ಲಿ ಧಾರಾಕಾರ ಮಳೆಯಿಂದ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ. ಭಾಗಮಂಡಲ-ನಾಪೋಕ್ಲು ರಸ್ತೆಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಭೂಕುಸಿತದ ಆತಂಕ
ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತ ಹಿನ್ನೆಲೆಯಲ್ಲಿ ಕೊಡಗಿನ ಕೋರಂಗಾಲದಲ್ಲಿರುವ ವಾಜಪೇಯಿ ವಸತಿ ಶಾಲೆಗೆ 8 ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ವಿವಿಧೆಡೆ ಅಲ್ಪ ಪ್ರಮಾಣದಲ್ಲಿ ಭೂ ಕಂಪನ ಸಂಭವಿಸಿದ್ದರಿಂದ ಭೂಕುಸಿತ ಹೆಚ್ಚಾಗಬಹುದು ಎಂದು ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. ಈ ನಡುವೆ ಬಿರುಸಿನ ಮಳೆಯಿಂದ ಹಲವೆಡೆ ವಿದ್ಯುತ್ ಕಂಬಗಳು ಉರುಳಿದ್ದು, ಮರಗಳು ನೆಲಕಚ್ಚಿವೆ.
ಉಳ್ಳಾಲದಲ್ಲಿ ಮನೆಗಳಿಗೆ ಹಾನಿ
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಅಪಾರ ಹಾನಿಯಾಗಿದ್ದು, ಸುಮಾರು 8 ಮನೆಗಳಿಗೆ ತೀವ್ರ ಹಾನಿಯಾಗಿದೆ. 58ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿದೆ. 9 ಮನೆಗಳು ಜಲಾವೃತಗೊಂಡಿದ್ದು, ಗುಡ್ಡ ಕುಸಿತ, ಕಡಲ್ಕೊರೆತ ಸೇರಿ ಹಲವಾರು ಮನೆಗಳು ಅಪಾಯದಲ್ಲಿವೆ. ಉಳ್ಳಾಲ ತಾಲೂಕಿನಲ್ಲಿ ಮನೆ ಹಾನಿಯಿಂದ ಸುಮಾರು 51 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಭಾಗದಲ್ಲಿ ಶನಿವಾರ ಮಳೆ ಪ್ರಮಣ ಕಡಿಮೆಯಾದರೂ ಪ್ರಾಕೃತಿಕ ವಿಕೋಪಗಳು ಮುಂದುವರಿದಿದೆ.
ಶಾಸಕ ಯು.ಟಿ.ಖಾದರ್ ಮಳೆ ಹಾನಿಯಾದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂತ್ರಸ್ತರಿಗೆ ಶೀಘ್ರ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಉಡುಪಿಯಲ್ಲಿ ವಿಪರೀತ ಕಡಲ್ಕೊರೆತ
ಉಡುಪಿ ಜಿಲ್ಲೆಯ ಕೋಡಿಕನ್ಯಾಣ ಹಾಗೂ ಮಣೂರು ಪಡುಕರೆಯಲ್ಲಿ ವಿಪರೀತ ಕಡಲ್ಕೊರೆತ ಉಂಟಾಗಿದ್ದು, ತೀರ ಪ್ರದೇಶದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಮಣೂರು ಪಡುಕರೆಯ ಬಿ.ಎ.ಕಾಂಚನ್ ರಸ್ತೆಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಎರಡು-ಮೂರು ದಿನಗಳ ಕಾಲ ಸುರಿದ ಮಳೆಯಿಂದಾಗಿ ಕಡಲಬ್ಬರ ಹೆಚ್ಚಿದ ಪರಿಣಾಮ ಸಂಪರ್ಕ ರಸ್ತೆ ಕಡಿತವಾಗುವ ಭೀತಿ ಎದುರಾಗಿದೆ. ಕೋಟ ಪಂಚಾಯಿತಿ ವ್ಯಾಪ್ತಿಯ ಲಿಲ್ಲಿ ಫೆರ್ನಾಂಡಿಸ್ ರಸ್ತೆಯಲ್ಲೂ ಕಡಲ್ಕೊರೆತ ಹೆಚ್ಚಿದ್ದು ಸಂಪರ್ಕ ರಸ್ತೆ, ತೀರ ಪ್ರದೇಶದ ಮನೆಗಳು ಅಪಾಯದಲ್ಲಿವೆ. ಕೋಟ ಸಮೀಪದ ಮಣೂರು- ಪಡುಕರೆಯಲ್ಲಿ ನೂರಕ್ಕೂ ಹೆಚ್ಚು ಮನೆಗಳು ಹಾಗೂ ರಸ್ತೆ ಅಪಾಯದಲ್ಲಿದ್ದು ಈ ಬಗ್ಗೆ ಶೀಘ್ರ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ತುಂಗಾ ಜಲಾಶಯಕ್ಕೆ ಹೆಚ್ಚಿದ ಒಳಹರಿವು: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದು, ಶೃಂಗೇರಿ, ಕಿಗ್ಗಾ ಭಾಗಗಳಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ತುಂಗಾ ನದಿಗೆ ವ್ಯಾಪಕ ನೀರು ಹರಿದುಬಂದಿದೆ. ತುಂಗಾ ಜಲಾಶಯಕ್ಕೂ ಒಳಹರಿವು ಹೆಚ್ಚಳವಾಗಿದ್ದು, 20 ಗೇಟ್ಗಳ ಮೂಲಕ 20 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗಿದೆ.
ಇದನ್ನೂ ಓದಿ | Weather Report: ರಾಜ್ಯದಲ್ಲಿ ಜುಲೈ 7ರವರೆಗೆ ಭಾರಿ ಮಳೆ ಮುನ್ಸೂಚನೆ