ಬೆಂಗಳೂರು: ನಗರದ ವಿವಿಧೆಡೆ ಸೋಮವಾರ ರಾತ್ರಿ ಭಾರಿ ಮಳೆ ಸುರಿದಿದ್ದರಿಂದ ರಸ್ತೆಗಳು ಜಲಾವೃತವಾಗಿ, ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಯಿತು. ದೊಡ್ಡ ಪ್ರಮಾಣದಲ್ಲಿ ನೀರು ನಿಂತಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಂಡರ್‌ಪಾಸ್‌ಗಳನ್ನು ಪೊಲೀಸರು ಮುಚ್ಚಿದ್ದರು. ಇನ್ನು ಕೆಲವೆಡೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಯಿತು.
ವಿಧಾನ ಸೌಧ, ಆರ್.ಟಿ ನಗರ, ಕಾವಲ್ ಭೈರಸಂದ್ರ, ಬಾಣಸವಾಡಿ, ಕುಕ್ ಟೌನ್, ಶ್ರೀರಾಂಪುರ, ಯಲಹಂಕ ರಸ್ತೆ ಭಾಗದಲ್ಲಿ ಧಾರಕಾರ ಮಳೆ ಸುರಿದಿದ್ದರಿಂದ ರಸ್ತೆಗಳು ಕೆರೆಗಳಂತೆ ಬದಲಾಗಿದ್ದವು. ಕೆಲಸ ಮುಗಿಸಿ ಮನೆಗಳಿಗೆ ತೆರಳುತ್ತಿದ್ದ ಬೈಕ್ ಸವಾರರು ಮಳೆ ಸಿಲುಕಿ ಬಸ್ ತಂಗುದಾಣ, ಕಟ್ಟಡಗಳ ಬಳಿ ಆಶ್ರಯ ಪಡೆದರು.
ಸುಮಾರು ಒಂದು ಗಂಟೆ ಕಾಲ ಸುರಿದ ಮಳೆಗೆ ವಿಧಾನ ಸೌಧ ಮುಂಭಾಗದ ರಸ್ತೆ, ಲಿಂಗರಾಜ ಪುರಂ ಅಂಡರ್ ಪಾಸ್, ಬಾಣವಾಡಿ ರೈಲ್ವೇ ಗೇಟ್ ಮುಂಭಾಗ ಜಲಾವೃತವಾಗಿದ್ದವು. ಮ್ಯಾನ್‌ಹೋಲ್‌ಗಳಿಂದ ಚರಂಡಿ ನೀರು ಚಿಮ್ಮುತ್ತಿದ್ದರಿಂದ ರಸ್ತೆ ಮೇಲೆಯೇ ಭಾರಿ ಪ್ರಮಾಣದ ನೀರು ಹರಿಯುತ್ತಿತ್ತು.
ಕುರುಬರಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಪಾತ್ರೆ, ಹಾಸಿಗೆ, ದಿನಸಿ ಸೇರಿ ಮನೆಯಲ್ಲಿನ ಸಾಮಾಗ್ರಿಗಳು ಎಲ್ಲವೂ ನೀರು ಪಾಲಾಗಿವೆ. ನೀರನ್ನು ಹೊರಹಾಕಲು ಜನರು ಪರದಾಡಿದರು.
ಇನ್ನು ನಗರದ ಹಲವು ಅಂಡರ್ ಪಾಸ್‌ಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಅವಾಂತರ ಸೃಷ್ಟಿಯಾಗಿತ್ತು. ಕೆಲವೆಡೆ ಮುನ್ನೆಚ್ಚರಿಕೆಯಿಂದ ಪೊಲೀಸರು ಅಂಡರ್‌ಪಾಸ್‌ಗಳನ್ನು ಮುಚ್ಚಿದ್ದರು. ಬಾಣಸವಾಡಿ ಬಳಿಯ ಲಿಂಗರಾಜಪುರಂ ಅಂಡರ್ ಪಾಸ್, ಫ್ರೆಜರ್ ಟೌನ್ -ಹೆಣ್ಣೂರು ಮುಖ್ಯರಸ್ತೆಯ ಅಂಡರ್ ಪಾಸ್ ಜಲಾವೃತವಾಗಿದ್ದರಿಂದ ವಾಹನ ಸವಾರರಿಗೆ ಕಿರಿಕಿರಿಯಾಯಿತು.
ಕೆಲ ತಿಂಗಳ ಹಿಂದೆ ಕೆ.ಆರ್. ಸರ್ಕಲ್ ಅಂಡರ್ ಪಾಸ್‌ನಲ್ಲಿ ಕಾರು ಮುಳುಗಿದ್ದರಿಂದ ಯುವತಿ ಸಾವನ್ನಪ್ಪಿದ್ದಳು. ಘಟನೆ ನಂತರ ಮಳೆ ಬಂದ ಕೂಡಲೇ ಅಂಡರ್ ಪಾಸ್‌ಗಳನ್ನು ಕ್ಲೋಸ್ ಮಾಡುತ್ತಿದ್ದಾರೆ. ಹೀಗಾಗಿ ಹಲವೆಡೆ ಅಂಡರ್‌ಪಾಸ್‌ಗಳನ್ನು ಮುಚ್ಚಲಾಗಿತ್ತು.
ಯಲಹಂಕ ರಸ್ತೆ ಕೋಗಿಲು ಕ್ರಾಸ್ ಬಳಿ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್‌ಗೆ ನೀರು ನುಗ್ಗಿದ್ದರಿಂದ ವಾಹನಗಳು ನೀರಿನಲ್ಲಿ ಮುಳುಗಿದ್ದವು. ಬಾಣಸವಾಡಿ ಹಾಗೂ ಫ್ರೆಸರ್ ಟೌನ್ ಬಳಿಯ ಪ್ರದೇಶಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ರಸ್ತೆಯುದ್ದಕ್ಕೂ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡಿದರು. ಮಳೆಯಿಂದಾಗಿ ಶ್ರೀರಾಂಪುರ ಅಂಡರ್ ಪಾಸ್ ಕೆರೆಯಂತಾಗಿತ್ತು. ಮಳೆ ಪರಿಸ್ಥಿತಿಯ ಮಾಹಿತಿ ಪಡೆಯಲು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಬಿಬಿಎಂಪಿ ವಾರ್ ರೂಂಗೆ ಭೇಟಿ ನೀಡಿದ್ದರು.
ಇದನ್ನೂ ಓದಿ | Karnataka Weather : ಬೆಂಗಳೂರಲ್ಲಿ ಭರ್ಜರಿ ವರ್ಷಧಾರೆ; ನಾಳೆಯೂ ಇದೆ ಮಳೆರಾಯನ ಗುಡುಗು
ಧರೆಗುರುಳಿದ ನಾಲ್ಕು ಮರ
ಮಳೆ ಅವಾಂತರದಿಂದ ನಾಲ್ಕು ಮರಗಳು ಧರೆಗುರುಳಿವೆ. ಬೆಂಗಳೂರು ಪೂರ್ವ ವಲಯದಲ್ಲಿ 1, ಮಹದೇವಪುರ ವಲಯದಲ್ಲಿ ಒಂದು ಮರ, ಬೆಂಗಳೂರು ದಕ್ಷಿಣದಲ್ಲಿ ಎರಡು ಮರ ಧರೆಗುರುಳಿವೆ. ರಸ್ತೆಯಲ್ಲಿ ಚರಂಡಿ ನೀರು ತುಂಬಿದ್ದರಿಂದ ವಾಹನ ಸವಾರರು ಪರದಾಡಿದರು. ನಗರದ ಏಳು ವಲಯಗಳ ಪೈಕಿ 18 ಕಡೆ ಡ್ರೈನೇಜ್ ನೀರು ರಸ್ತೆಗೆ ಹರಿಯುತ್ತಿತ್ತು. 10 ಕಂಪ್ಲೇಟ್ ಬಂದಿದೆ, ಈ ಪೈಕಿ 6 ದೂರುಗಳನ್ನು ಪರಿಹರಿಸಲಾಗಿದೆ ಎಂದು ಬಿಬಿಎಂಪಿ ವಾರ್ ರೂಂ ಅಧಿಕಾರಿಗಳು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮಾಹಿತಿ ನೀಡಿದರು.