ಬೆಂಗಳೂರು: ನಗರದ ವಿವಿಧೆಡೆ ಮಂಗಳವಾರವೂ ಭಾರಿ ಮಳೆ ಸುರಿದಿದೆ. ಹಳೆ ಏರ್‌ಪೋರ್ಟ್ ರಸ್ತೆ, ಮಾರತ್ ಹಳ್ಳಿ, ವರ್ತೂರು, ಮಹದೇವಪುರ ಹಾಗೂ ದೇವನಹಳ್ಳಿ ಭಾಗದಲ್ಲಿ (Bengaluru Rain) ಮಂಗಳವಾರ ಸಂಜೆ ಸುರಿದ ನಿರಂತರ ಮಳೆಯಿಂದ ರಸ್ತೆಗಳು ಜಲಾವೃತವಾಗಿ ಸಂಚಾರ ದಟ್ಟಣೆ ಉಂಟಾಯಿತು. ಅಲ್ಲದೇ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೋರು ಮಳೆ ಪರಿಣಾಮ ಹಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಿದ್ದು, ಲ್ಯಾಂಡಿಂಗ್‌ನಲ್ಲೂ ವ್ಯತ್ಯಯ ಉಂಟಾಯಿತು. ಜತೆಗೆ ನಗರದ ನಲ್ಲೂರ ಹಳ್ಳಿ ಮೆಟ್ರೋ ನಿಲ್ದಾಣಕ್ಕೆ ನೀರು ನುಗ್ಗಿದ್ದರಿಂದ ಪ್ರಯಾಣಿಕರು ಪರದಾಡಬೇಕಾಯಿತು.
ಬೆಂಗಳೂರು-ಮಹದೇವಪುರ ವಲಯ ಸೇರಿ ವಿವಿಧ ಭಾಗದಲ್ಲಿ ಸತತ 2 ಗಂಟೆ ಮಳೆ ಅಬ್ಬರದಿಂದ ಜನ ಜೀವನ ಅಸ್ತವ್ಯಸ್ತಗೊಂಡಿತು. ಮಳೆಯಿಂದ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ಆವರಿಸಿದ್ದರಿಂದ ಭಾರಿ ಅವಾಂತರ ಸೃಷ್ಟಿಯಾಗಿದೆ. ಪ್ರಮುಖ ರಸ್ತೆಗಳು ಜಲಾವೃತವಾಗಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ತೊಂದರೆ ಪಡಬೇಕಾಯಿತು.
ದೇವನಹಳ್ಳಿ ಭಾಗದಲ್ಲಿ ಮಳೆಯಿಂದ ಕೆಂಪೇಗೌಡ ಸರ್ಕಲ್ ಜಲಾವೃತವಾಗಿತ್ತು. ವರ್ತೂರು ಸಮೀಪವೂ ರಸ್ತೆ ಸಂಪೂರ್ಣ ಜಲಾವೃತವಾಗಿದ್ದರಿಂದ ವಾಹನ ಸವಾರರು ಪರದಾಡಿದರು. ಮಳೆಯಿಂದ ರಸ್ತೆಯಲ್ಲಿ 3-4 ಅಡಿ ಮಳೆ ನೀರು ನಿಂತಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.
ನಲ್ಲೂರಹಳ್ಳಿ ಮೆಟ್ರೋ ಸ್ಟೇಷನ್‌ಗೆ ನುಗ್ಗಿದ ಮಳೆನೀರು
ಭಾರಿ ಮಳೆ ಹಿನ್ನೆಲೆಯಲ್ಲಿ ಕೆ.ಆರ್. ಪುರಂ, ವೈಟ್ ಫೀಲ್ಡ್ ನಡುವಿನ ನಲ್ಲೂರಹಳ್ಳಿ ಮೆಟ್ರೋ ಸ್ಟೇಷನ್‌ಗೆ ಮಳೆನೀರು ನುಗ್ಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಪ್ಲಾಟ್ಫಾರ್ಮ್ ಹಾಗೂ ಟಿಕೆಟ್ ಕೌಂಟರ್ ಒಳಗೆ ಕೂಡ ನೀರು ನುಗ್ಗಿತ್ತು. ಮಳೆ ನೀರು ಹೊರ ಹಾಕಲು ಸಿಬ್ಬಂದಿ ಮೆಟ್ರೋ ಸಿಬ್ಬಂದಿ ಪರದಾಡಿದರು.
ಡ್ರೈನೇಜ್ಗೆ ಬಿದ್ದು ಬೈಕ್ ಸವಾರನ ಪರದಾಟ
ತುರುಬರಹಳ್ಳಿಯಲ್ಲಿ ಮಳೆಗೆ ರಸ್ತೆ ಜಲಾವೃತವಾಗಿತ್ತು. ಈ ಮಾರ್ಗದಲ್ಲಿ ಬರುತ್ತಿದ್ದ ಸವಾರರೊಬ್ಬರು ಆಯತಪ್ಪಿ ಡ್ರೈನೇಜ್ಗೆ ಬಿದ್ದಿದ್ದು, ಸ್ಥಳೀಯರು ಧಾವಿಸಿ ರಕ್ಷಣೆ ಮಾಡಿದ್ದಾರೆ.
8ಕ್ಕೂ ಅಧಿಕ ವಿಮಾನಗಳು ಡೈವರ್ಟ್, 19 ವಿಮಾನಗಳ ಲ್ಯಾಂಡಿಂಗ್‌ನಲ್ಲಿ ವ್ಯತ್ಯಯ
ದೇವನಹಳ್ಳಿ ಸುತ್ತಮುತ್ತ ಬಿರುಗಾಳಿ ಸಹಿತ ಭಾರಿ ಮಳೆಯಿಂದ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 8ಕ್ಕೂ ಹೆಚ್ಚು ವಿಮಾನಗಳನ್ನು ಬೇರೆಡೆ ಡೈವರ್ಟ್ ಮಾಡಲಾಗಿದೆ. ಹಾಗೆಯೇ ನಿರಂತರ ಮಳೆಯಿಂದ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದ ಕಾರಣ 19 ವಿಮಾನಗಳ ಲ್ಯಾಂಡಿಂಗ್ ಸಮಯದಲ್ಲಿ ವ್ಯತ್ಯಯವಾಗಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಯಿತು.
ಕೋಲ್ಕೊತಾ, ಜೋಧಪುರ್, ಮುಂಬೈ, ರಾಜ್‌ಕೋಟ್, ದುಬೈ, ಪಾಟ್ನಾ, ಮತ್ತು ಇಂದೋರ್‌ನಿಂದ ಬರುತ್ತಿದ್ದ ವಿಮಾನಗಳನ್ನು ಚೆನ್ನೈ ಮತ್ತು ಹೈದರಾಬಾದ್ ಏರ್‌ಪೋರ್ಟ್‌ಗೆ ಡೈವರ್ಟ್ ಮಾಡಲಾಗಿದೆ. ಮತ್ತೆ ಕೆಲವು ವಿಮಾನಗಳು ಏರ್‌ಪೋರ್ಟ್ ಸುತ್ತಮುತ್ತ ಸುತ್ತಾಡಿ ಮಳೆ ನಿಂತ ನಂತರ ಲ್ಯಾಂಡಿಂಗ್ ಆಗಿದ್ದು ಕಂಡುಬಂತು. ಮಳೆಯ ಕಾರಣ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ವಿಮಾನಗಳು ಟೇಕಾಫ್ ಆದವು.