ಬೆಂಗಳೂರು: ನಗರದ ವಿವಿಧೆಡೆ ಗುರುವಾರ ರಾತ್ರಿ ಭಾರಿ ಮಳೆ ಸುರಿಯಿತು. ಕೋರಮಂಗಲ, ಮಾರತ್ ಹಳ್ಳಿ, ಕೆ.ಆರ್. ಪುರಂ, ಇಂದಿರಾನಗರ, ಬಿಇಎಲ್, ಎಂಜಿ ರೋಡ್, ಸಹಕಾರ ನಗರ ಮಲ್ಲೇಶ್ವರಂ ಸೇರಿ ಹಲವೆಡೆ ಧಾರಾಕಾರ ಮಳೆ ಸುರಿದಿದ್ದರಿಂದ ರಸ್ತೆಗಳು ಜಲಾವೃತವಾಗಿ, ವಾಹನ ಸಂಚಾರರು ಪರದಾಡುವಂತಾಯಿತು. ಕೆಲವಡೆ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ಮಳೆ ನೀರು (Bangalore Rain) ನುಗ್ಗಿದ್ದಲ್ಲದೆ, ವಾಹನಗಳು ಮುಳುಗಿ ಅವಾಂತರ ಸೃಷ್ಟಿಯಾಗಿತ್ತು.
ಸಹಕಾರ ನಗರದಲ್ಲಿ ಹತ್ತಕ್ಕೂ ಅಧಿಕ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನರು ಪರದಾಡಿದರು. ರಸ್ತೆಗಳೆಲ್ಲ ಜಲಾವೃತವಾಗಿ ರಸ್ತೆಬದಿ ನಿಲ್ಲಿಸಿದ್ದ ಕಾರುಗಳು, ಬೈಕ್‌ಗಳು ಮುಳುಗಡೆಯಾಗಿದ್ದವು. ಇನ್ನು ಕೆ.ಆರ್ ಸರ್ಕಲ್ ಬಳಿಯ ರಸ್ತೆಗಳಲ್ಲಿ ಮೂರು ಅಡಿಯಷ್ಟು ನೀರು ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು.
ಧಾರಕಾರ ಮಳೆಯಿಂದ ಮಲ್ಲೇಶ್ವರಂನ ರಾಘವೇಂದ್ರ ಸ್ವಾಮಿ ದೇವಸ್ಥಾನದೊಳಗೆ ಮಳೆ ನೀರು ನುಗ್ಗಿದ್ದರಿಂದ ಆರಾಧನೆಗೆ ಬಂದಿದ್ದ ಭಕ್ತರು ತೊಂದರೆ ಅನುಭವಿಸುವಂತಾಯಿತು. ದೇವಸ್ಥಾನದೊಳಗೆ ಮಳೆ ನೀರು ನಿಂತಿರುವ ಕಾರಣ ಆರಾಧನೆಗೆ ಜಾಗವೆ ಇಲ್ಲದಂತಾಗಿತ್ತು.
ಇದನ್ನೂ ಓದಿ | Weather Report : ಸೆಪ್ಟೆಂಬರ್ ಮೊದಲ ವಾರ ಅಲ್ಪಾವಧಿ ಮಳೆಯಷ್ಟೇ!
ಅಂಡರ್‌ಪಾಸ್‌ನಲ್ಲಿ ಕೆಟ್ಟು ನಿಂತ ಬಸ್
ಶಿವಾನಂದ ಸರ್ಕಲ್ ಬಳಿಯ ಅಂಡರ್‌ಪಾಸ್‌ನಲ್ಲಿ ಖಾಸಗಿ ಬಸ್ ಕೆಟ್ಟು ನಿಂತಿದ್ದರಿಂದ ಸಮಸ್ಯೆ ಉಂಟಾಯಿತು. ಇನ್ನು ಹೆಬ್ಬಾಳದ ಫ್ಲೈಓವರ್ ಕೆಳಗೆ ಭಾರಿ ಪ್ರಮಾಣದಲ್ಲಿ ಮಳೆ ನೀರು ನಿಂತಿದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಯಿತು. ನೀರು ಹೋಗುವ ಜಾಗ ಕಸದಿಂದ ಬ್ಲಾಕ್ ಆಗಿದ್ದರಿಂದ ರಸ್ತೆ ಮೇಲೆ ಎದೆಯತ್ತರದಷ್ಟು ನೀರು ನಿಂತಿತ್ತು. ಈ ವೇಳೆ ಪೊಲೀಸ್ ಸಿಬ್ಬಂದಿ ಕಬ್ಬಿಣದ ರಾಡ್‌ನಿಂದ ಕಸ ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹೋಗುವಂತೆ ಮಾಡಿದರು.
ಹೆಬ್ಬಾಳದ ಫ್ಲೈ ಓವರ್ ಬಳಿ ಮಳೆ ನೀರು ಹರಿದು ಹೋಗಲು ಪೊಲೀಸ್ ಸಿಬ್ಬಂದಿ ಶ್ರಮಿಸುತ್ತಿರುವುದು