Site icon Vistara News

Rain News | ಮಳೆ ಆರ್ಭಟ, ಕರಾವಳಿ ಜಿಲ್ಲೆಗಳಲ್ಲಿ ಮತ್ತೆ 4 ದಿನ ರೆಡ್ ಅಲರ್ಟ್, ಸಂಚಾರಕ್ಕೆ ಕಂಟಕ

ರೆಡ್ ಅಲರ್ಟ್

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ತನ್ನ ಆರ್ಭಟವನ್ನು ಮುಂದುವರಿಸಿದ್ದು, ಮುಂದಿನ ನಾಲ್ಕು ದಿನ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಾಗೆಯೇ ಉತ್ತರ ಕರ್ನಾಟಕ ಭಾಗದ 5 ಜಿಲ್ಲೆಗಳು, ಮಲೆನಾಡಿನ 4 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಅನ್ನು ಭಾರತೀಯ ಹವಾಮಾನ ಇಲಾಖೆ ಘೋಷಣೆ ಮಾಡಿದೆ.

ಅರಬ್ಬಿ ಸಮುದ್ರ, ಒಡಿಶಾ ಭಾಗದಲ್ಲಿ ವಾಯುಭಾರ ಕುಸಿತದ ಪರಿಣಾಮದಿಂದ ಮುಂಗಾರು ಮಳೆ ಚುರುಕಾಗಿದೆ. ಕರಾವಳಿಯಲ್ಲಿ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಉತ್ತರ ಕರ್ನಾಟಕದ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿಯಲ್ಲಿ ಹಾಗೂ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಯಾದಗಿರಿ, ವಿಜಯಪುರ, ಬಾಗಲಕೋಟೆ, ದಾವಣಗೆರೆ, ಮೈಸೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಸಾಗರ ತಾಲೂಕಿನ ಕಾರ್ಗಲ್ ಪಟ್ಟಣದಲ್ಲಿ ರೈಸ್ ಮಿಲ್ ಗೋಡೆ ಕುಸಿದಿದೆ.

ಗುಡ್ಡ ಕುಸಿತ, ಆಗುಂಬೆ ಘಾಟ್‌ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ

ಶಿವಮೊಗ್ಗ: ಆಗುಂಬೆ ಘಾಟ್‌ನ 11ನೇ ತಿರುವಿನಲ್ಲಿ ಗುಡ್ಡ ಕುಸಿತವಾಗಿರುವ ಹಿನ್ನೆಲೆಯಲ್ಲಿ ಆಗುಂಬೆ ಘಾಟ್‌ನಲ್ಲಿ ಭೂ ಕುಸಿತದ ಮಣ್ಣು, ಮರಮಟ್ಟುಗಳ ತೆರವು ಕಾರ್ಯಾಚರಣೆ ಮುಂದುವರಿದಿರುವುದರಿಂದ ಜುಲೈ 12ರ ಬೆಳಗ್ಗೆ 8 ಗಂಟೆಯವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಜು.12ರಿಂದ ಜುಲೈ 30ರವರೆಗೆ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಲಾಗುತ್ತದೆ. ಸದ್ಯ ತೀರ್ಥಹಳ್ಳಿಯಿಂದ ಕರಾವಳಿ ಸಂಪರ್ಕಕ್ಕೆ ಬದಲಿ ಮಾರ್ಗ ವ್ಯವಸ್ಥೆ ಮಾಡಿದ್ದು, ವಾಹನಗಳು ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ-ಕಾರ್ಕಳ-ಮಂಗಳೂರು, ತೀರ್ಥಹಳ್ಳಿ-ಆಗುಂಬೆ-ಶೃಂಗೇರಿ-ಕಾರ್ಕಳ-ಮಂಗಳೂರು, ತೀರ್ಥಹಳ್ಳಿ-ಮಾಸ್ತಿಕಟ್ಟೆ- ಕುಂದಾಪುರಕ್ಕೆ ವಾಹನಗಳು ತೆರಳಬಹುದು.

ಗಾಳಿ ಮಳೆ, ಸಿಡಿಲಿನ ಆರ್ಭಟಕ್ಕೆ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಪಟ್ಟಣದ ವಿನೋದ ಎಸ್. ಮಹಾಲೆ ಅವರ ರೈಸ್ ಮಿಲ್ ಗೋಡೆ ಕುಸಿದಿದೆ. ಅವಘಡದಲ್ಲಿ ಸಾವಿರಕ್ಕೂ ಅಧಿಕ ಭತ್ತದ ಚೀಲ ನಷ್ಟವಾಗಿ, ಯಂತ್ರೋಪಕರಣ, ಡ್ರೈಯರ್ ಮಷಿನ್ ಸೇರಿದಂತೆ 2 ದೊಡ್ಡ ಜನರೇಟರ್‌ಗೆ ಹಾನಿಯಾಗಿದೆ.

ಇದನ್ನೂ ಓದಿ | Rain News | ಕೊಡಗಿನಲ್ಲಿ ಮುಂದುವರಿದ ಭಾರಿ ಮಳೆ, ರಾಜ್ಯದಲ್ಲಿ 5-6 ದಿನ ವರುಣನ ಅಬ್ಬರ ನಿರೀಕ್ಷೆ

ಕಿತ್ತೂರಲ್ಲಿ ಧಾರಾಕಾರ ಮಳೆಗೆ 20 ಮನೆಗಳಿಗೆ ಹಾನಿ
ಬೆಳಗಾವಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಿತ್ತೂರು ಸೇರಿ ತಾಲೂಕಿನ ಕತ್ರಿದಡ್ಡಿ, ದಿಂಡಲಕೊಪ್ಪ, ಗಲಗಿನಮಡಾ, ನಿಚ್ಚಣಕಿ, ದೇಗಾಂವ, ಚಿಕ್ಕನಂದಿಹಳ್ಳಿ, ತಿಗಡೊಳ್ಳಿ ಹಾಗೂ ಬೈಲೂರು ಗ್ರಾಮಗಳಲ್ಲಿ 20 ಮನೆಗಳು ಮನೆ ಗೋಡೆಗಳು ಭಾಗಶಃ ಕುಸಿದಿವೆ.

ಕತ್ರಿದಡ್ಡಿಯ ಬಸವರಾಜ ಕುರಬರ, ತುಳಜಾ ಹಟ್ಟಿಹೊಳಿ, ದಿಂಡಲಕೊಪ್ಪದಲ್ಲಿ ಬಂಗಾರೆವ್ವ ಎಮ್ಮಿ, ಲಕ್ಷ್ಮಿ ಬೆಣಚಮರಡಿ, ಗಲಗಿನಮಡದಲ್ಲಿ ಪರಶುರಾಮ ಬೂದಿಹಾಳ, ಯಲ್ಲವ್ವ ಬುಡ್ಡಾಗೋಳ ಮತ್ತು ಮಲವ್ವ ಸಣ್ಣನಾಯ್ಕರ ಮನೆ ಗೋಡೆಗಳು ಕುಸಿದಿವೆ. ಹೀಗಾಗಿ ಪ್ಲಾಸ್ಟಿಕ್ ಚೀಲ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿಷ್ಟಪ್ಪ ಶಿಂಧೆ, ಸದಸ್ಯರಾದ ಮಹಾಂತೇಶ ಎಮ್ಮಿ, ನಾಗಪ್ಪ ಅಸಲನ್ನವರ ಕುಲವಳ್ಳಿ ಗ್ರಾಮ ಪಂಚಾಯ್ತಿಯ ಊರುಗಳಲ್ಲಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಂದಾಯ ನಿರೀಕ್ಷಕ ವಿ. ಬಿ. ಬಡಗಾವಿ ಅವರೂ ಕೆಲ ಗ್ರಾಮಗಳಿಗೆ ಭೇಟಿ ನೀಡಿದ್ದರು.

ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಮಂಗಳೂರು: ಜುಲೈ 14ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಾನುವಾರ ರಾತ್ರಿಯಿಂದಲೇ ಜೋರಾಗಿ ಮಳೆ ಸುರಿಯುವ ಸಾಧ್ಯತೆ ಇದ್ದು, ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 20 ಸೆಮೀ ಮಳೆಯಾಗಿದೆ. ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ 21 ಸೆ.ಮೀ ಮಳೆಯಾಗಿದೆ. ಮುಂದಿನ ಮೂರು ದಿನಗಳಲ್ಲಿ ಭಾರಿ ಗಾಳಿ ಸಹಿತ ಮಳೆ ಸುರಿಯುವ ಸಾಧ್ಯತೆ ಇದ್ದು, ಗಂಟೆಗೆ 45 ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ.

ಸಮುದ್ರದಲ್ಲಿ 3.5 ರಿಂದ 4 ಅಡಿಯಷ್ಟು ಎತ್ತರಕ್ಕೆ ಅಲೆಗಳು ಏಳಲಿದ್ದು, ಭಾನುವಾರ ರಾತ್ರಿಯಿಂದ ನಾಳೆ ರಾತ್ರಿ 11.30ರವರೆಗೆ ಭಾರಿ ಅಲೆಗಳು ಏರಲಿವೆ. ಈಗಾಗಲೇ ಅಲೆಗಳು ಪ್ರತಿ ಸೆಕೆಂಡಿಗೆ 65 ಸೆ.ಮೀ ಏರುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ಸೋಮವಾರ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ. ರಜೆ ಘೋಷಣೆ ಮಾಡಿದ್ದಾರೆ. ಆದರೆ, ಪಿಯು ಹಾಗೂ ಪದವಿ ಕಾಲೇಜು ಮತ್ತು ಇತರ ಕಾಲೇಜುಗಳಲ್ಲಿ ತರಗತಿಗಳು ಎಂದಿನಂತೆ ನಡೆಯಲಿವೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಜುಲೈ 11ರಂದು ಎಲ್ಲ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಭರ್ತಿ ಅಂಚಿಗೆ ತಲುಪಿರುವ ಹಿನ್ನೆಲೆಯಲ್ಲಿ ತ್ರಿವರ್ಣ ಧ್ವಜದ ಬಣ್ಣದ ದೀಪಾಲಂಕಾರ ಮಾಡಲಾಗಿದೆ.

ಕೊಡಗಿನಲ್ಲಿ 2ನೇ ಮೊಣ್ಣಂಗೇರಿಯಲ್ಲಿ ಮತ್ತೆ ಭೂಕುಸಿತ

ಕೊಡಗು: ಜಿಲ್ಲೆಯಲ್ಲಿ ಈ ಹಿಂದೆ ಭೂಕುಸಿತವಾಗಿದ್ದ 2ನೇ ಮೊಣ್ಣಂಗೇರಿಯಲ್ಲಿ ಮತ್ತೆ ಭೂಕುಸಿತವಾಗಿದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭೂಕುಸಿತವಾಗಿದ್ದು, ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ-ಮಂಗಳೂರು ಮಾರ್ಗದಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಭಾರಿ ಮಳೆ ಬೀಳುತ್ತಿರುವುದರಿಂದ ಹಾರಂಗಿ ಜಲಾಶಯದಿಂದ ಹೆಚ್ಚಿನ ಪ್ರಮಾಣ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಕುಶಾಲನಗರ ನದಿ ತಟದ ಜನರಲ್ಲಿ ಆತಂಕ ಶುರುವಾಗಿದೆ. ಕುವೆಂವು ಬಡಾವಣೆ, ಸಾಯಿ ಬಡಾವಣೆ ಜನತೆಗೆ ಮನೆಗೆ ನೀರು ನುಗ್ಗುವ ಆತಂಕ ಮೂಡಿರುವುದರಿಂದ ನದಿ ತಟದ ನಿವಾಸಿಗಳು ಮನೆ ಖಾಲಿ ಮಾಡಿ ಬೇರೆಡೆಗೆ ತೆರಳುತ್ತಿದ್ದಾರೆ.

ಮಹಾಮಳೆಗೆ ಎರಡನೇ ಸಾವು

ಚಿಕ್ಕಮಗಳೂರು: ಕಾಫಿನಾಡಲ್ಲಿ ಮಹಾಮಳೆಗೆ ಎರಡನೇ ಸಾವು ಸಂಭವಿಸಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಮರ ಬಿದ್ದು ಕಳಸ ತಾಲೂಕಿನ ಹೊರನಾಡಿನ ಹೂವಿನ ಹಿತ್ತಲು ಗ್ರಾಮದ ಪ್ರಿಯಾಂಕ (22) ಮೃತಪಟ್ಟಿದ್ದಾಳೆ. ಕಳಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮಳೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಚಂದ್ರದ್ರೋಣ ಪರ್ವತ ಸಾಲಿನ ಪ್ರವಾಸಿ ಸ್ಥಳಗಳಿಗೆ ಜಿಲ್ಲಾಡಳಿತ ಕೆಲ ನಿರ್ಬಂಧಗಳನ್ನು ಹೇರಿದೆ. 1200 ಕೆಜಿಗಿಂತ ಹೆಚ್ಚಿನ ತೂಕದ ಸರಕು ಸಾಗಣೆ ವಾಹನಗಳಿಗೆ ನಿಷೇಧ ಹೇರಲಾಗಿದೆ. ಇನ್ನು ಅಧಿಕೃತ ಹೋಂ ಸ್ಟೇ, ರೆಸಾರ್ಟ್ ಬುಕ್ಕಿಂಗ್ ಮಾಡಿದವರಿಗೆ ಬೆಳಗ್ಗೆ 6ರಿಂದ 9 ಹಾಗೂ ಸಂಜೆ 2ರಿಂದ 4 ಗಂಟೆವರೆಗೆ ತಲಾ 150 ವಾಹನಗಳಂತೆ ದಿನಕ್ಕೆ 300 ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮುಳ್ಳಯ್ಯನಗಿರಿ, ದತ್ತಪೀಠ, ಝರಿ ಪಾಲ್ಸ್ ಮಾಣಿಕ್ಯಧಾರ ಪ್ರವಾಸಿ ಸ್ಥಳಗಗಳಿಗೆ ನಿರ್ಬಂಧ ವಿಧಿಸಲಾಗಿದೆ. ಇನ್ನು ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ, ಕಳಸ, ಚಿಕ್ಕಮಗಳೂರು ತಾಲೂಕುಗಳಲ್ಲಿ ಜುಲೈ 11 ಮತ್ತು 12ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ದೋಣಿಗಲ್‌ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿತ
ಹಾಸನ: ನಿರಂತರ ಮಳೆಯಿಂದ ಸಕಲೇಶಪುರ ತಾಲೂಕಿನ ದೋಣಿಗಲ್ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿತವಾಗಿದೆ. ಕಳೆದ ವರ್ಷ ಕೂಡ ಇದೇ ಸ್ಥಳದಲ್ಲಿ ಭೂ ಕುಸಿತವಾಗಿ ಒಂದು ತಿಂಗಳು ಸಂಚಾರ ಬಂದ್ ಆಗಿತ್ತು. ಈಗ ಮತ್ತೆ ಅದೇ ಜಾಗದಲ್ಲಿ ರಸ್ತೆ ಕುಸಿದಿದೆ. ಸಕಲೇಶಪುರದಿಂದ ಮಂಗಳೂರಿಗೆ ತೆರಳುವ ಮಾರ್ಗದಲ್ಲಿ ಮತ್ತಷ್ಟು ಭೂ ಕುಸಿತ ಆಗದಂತೆ ತಡೆಯಲು ಸಿಬ್ಬಂದಿ ಮರಳು ಚೀಲ ಜೋಡಿಸುತ್ತಿದ್ದಾರೆ. ನಿತ್ಯ ಐದಾರು ಸಾವಿರ ವಾಹನಗಳು ಓಡಾಡುವ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಮತ್ತೆ ಬಂದ್ ಆಗುವ ಆತಂಕ ಎದುರಾಗಿದೆ.

ಇದನ್ನೂ ಓದಿ | Rain News | ಧಾರಾಕಾರ ಮಳೆಗೆ ವಿವಿಧೆಡೆ ಭೂಕುಸಿತ, ರಸ್ತೆಗಳು ಜಲಾವೃತ

Exit mobile version