ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಟಿಕೆಟ್ ವಂಚಿತ, ಮಾಜಿ ಎಂಎಲ್‌ಸಿ ರಘು ಆಚಾರ್ ಅವರು ಪಕ್ಷ ಬದಲಾಯಿಸುತ್ತಿದ್ದಂತೆಯೇ ಅವರ ಹೆಲಿಕಾಪ್ಟರ್ ಕೂಡಾ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಪಕ್ಷಾಂತರ ಮಾಡಲಿದೆ. ರಘು ಆಚಾರ್ ಅವರು ಏಪ್ರಿಲ್ 14ರಂದು ಜೆಡಿಎಸ್‌ಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. ಅದರೆ, ಹೆಲಿಕಾಪ್ಟರ್ ಮಾತ್ರ ಅವರಿಗಿಂತ ಮೊದಲೇ ಪಕ್ಷಾಂತರ ಮಾಡಿದೆ.
ರಘು ಆಚಾರ್ ಅವರು ಟಿಕೆಟ್ ಬಗ್ಗೆ ಭಾರಿ ಆಸೆ ಹೊಂದಿದ್ದರು. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಆಪ್ತರಾಗಿರುವ ರಘು ಆಚಾರ್ ತಮ್ಮ ಬಳಿ ಇದ್ದ ಹೆಲಿಕಾಪ್ಟರನ್ನೇ ಅವರ ಸಂಚಾರಕ್ಕೆ ಕೊಟ್ಟಿದ್ದರು. ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರಕ್ಕೆ ಬಳಸುತ್ತಿದ್ದ ಹೆಲಿಕಾಪ್ಟರ್ ರಘು ಆಚಾರ್ ಅವರದೇ ಆಗಿತ್ತು. ಸಿದ್ದರಾಮಯ್ಯ ಅವರು ತನಗೆ ಟಿಕೆಟ್ ಕೊಟ್ಟೇ ಕೊಡಿಸುತ್ತಾರೆ ಎನ್ನುವ ಅತೀವ ನಂಬಿಕೆ ಅವರಿಗಿತ್ತು. ಆದರೆ, ಎರಡನೇ ಪಟ್ಟಿ ಬಿಡುಗಡೆಯಾದಾಗ ಅವರಿಗೆ ಶಾಕ್ ಕಾದಿತ್ತು. ತಮಗೇ ಸಿಗುತ್ತದೆ ಎಂದು ನಂಬಿದ್ದ ಟಿಕೆಟ್ ವೀರೇಂದ್ರ ಪಪ್ಪಿ ಪಾಲಾಗಿತ್ತು.
ಇದೀಗ ರಘು ಆಚಾರ್ ಕೆರಳಿ ಕೆಂಡವಾಗಿದ್ದಾರೆ. ಒಂದೇ ದಿನದಲ್ಲಿ ಜೆಡಿಎಸ್‌ನ್ನು ಸಂಪರ್ಕಿಸಿ ಟಿಕೆಟ್ ಖಾತ್ರಿ ಮಾಡಿಕೊಂಡಿದ್ದಾರೆ. ಏಪ್ರಿಲ್ 14ರಂದು ಅವರು ಜೆಡಿಎಸ್ ಸೇರಿ ಏಪ್ರಿಲ್ 17ಕ್ಕೆ ನಾಮಪತ್ರ ಸಲ್ಲಿಸುವುದು ಬಹುತೇಕ ಪಕ್ಕಾ ಆಗಿದೆ.
ಈ ನಡುವೆ ರಘು ಆಚಾರ್ ಅವರ ಹೆಲಿಕಾಪ್ಟರ್ ಕೂಡಾ ಸಿದ್ದರಾಮಯ್ಯ ಅವರಿಗೆ ಬೈ ಬೈ ಹೇಳಿ ಎಚ್.ಡಿ ಕುಮಾರಸ್ವಾಮಿ ಪಾಲಾಗಲಿದೆ!
ನಿಜವೆಂದರೆ ಈ ಹೆಲಿಕಾಪ್ಟರ್‌ನ್ನು ರಘು ಆಚಾರ್ ಕೆಲವು ದಿನಗಳ ಹಿಂದೆಯೇ ಸಿದ್ದರಾಮಯ್ಯ ಕೈಯಿಂದ ರಘು ಆಚಾರ್ ವಾಪಸ್ ಪಡೆದಿದ್ದರು. ಕಳೆದ ಒಂದು ತಿಂಗಳಿನಿಂದಲೇ ರಘು ಆಚಾರ್‌ಗೆ ತಮಗೆ ಟಿಕೆಟ್ ಕೈತಪ್ಪುವ ಸುಳಿವು ಸಿಕ್ಕಿತ್ತು. ಹಾಗಾಗಿ ಅವರು ಸಿದ್ದರಾಮಯ್ಯ ಅವರ ಜತೆ ನಿರಂತರ ಮಾತುಕತೆ ನಡೆಸುತ್ತಿದ್ದರು. ಟಿಕೆಟ್ ಸಿಗುವುದಿಲ್ಲ ಎಂಬ ಸುಳಿವು ಸಿಗುತ್ತಿದ್ದಂತೆಯೇ ತಟಸ್ಥರಾದರು. ಆ ಹೊತ್ತಿನಲ್ಲೇ ತಾವು ನೀಡಿದ್ದ ಹೆಲಿಕಾಪ್ಟರನ್ನೂ ವಾಪಸ್ ಪಡೆದಿದ್ದರು ಎನ್ನಲಾಗುತ್ತಿದೆ.
ಈ ನಡುವೆ ಕಾಂಗ್ರೆಸ್‌ನಲ್ಲಿ ಇರುವಾಗಲೇ ರಘು ಆಚಾರ್ ತಮ್ಮ ಹೆಲಿಕಾಪ್ಟರನ್ನು ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರಿಗೆ ನೀಡಿದ್ದರು ಎನ್ನಲಾಗುತ್ತಿದೆ. ಹಾಗಿದ್ದರೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದರೆ ಜೆಡಿಎಸ್‌ಗೆ ಹೋಗುವುದನ್ನು ರಘು ಆಚಾರ್ ಮೊದಲೇ ಫೈನಲೈಸ್ ಮಾಡಿದ್ದರಾ ಎಂಬ ಸಂಶಯ ಹುಟ್ಟಿಕೊಂಡಿದೆ. ಏನೇ ಆದರೂ ಈಗಂತೂ ಅಧಿಕೃತವಾಗಿ ಹೆಲಿಕಾಪ್ಟರ್ ಶಿಫ್ಟ್ ಆಗುವುದು ಖಚಿತವಾಗಿದೆ.
ಅಂತೂ ಹೆಲಿಕಾಪ್ಟರ್ ಕೂಡಾ ಪಕ್ಷಾಂತರ ಮಾಡುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಇದೇ ಮೊದಲು ಅನಿಸುತ್ತದೆ. ರಘು ಆಚಾರ್ ಅವರು ಈ ಹೆಲಿಕಾಪ್ಟರನ್ನು ಸ್ವಂತ ಬಳಕೆಗೆ ಇಟ್ಟುಕೊಂಡಿದ್ದರು!
ಇದನ್ನೂ ಓದಿ : Karnataka Elections : ಚಿತ್ರದುರ್ಗದ ಕಾಂಗ್ರೆಸ್ ಟಿಕೆಟ್ ವಂಚಿತ ರಘು ಆಚಾರ್ ಜೆಡಿಎಸ್ ಸೇರ್ಪಡೆ?