ಹಾಸನ/ರಾಮನಗರ: ಆನೆ ಬಂತೊಂದಾನೆ ಅಲ್ಲ ಬದಲಿಗೆ ಹತ್ತಾರು ಕಾಡಾನೆ (Elephant Attack) ಹಿಂಡು ಹಾಸನದಲ್ಲಿ ಪ್ರತ್ಯಕ್ಷವಾಗಿತ್ತು. ರಸ್ತೆ ತುಂಬೆಲ್ಲ ಕಾಡಾನೆಗಳೇ ಆವರಿಸಿಕೊಂಡು ಪೆರೇಡ್ ಮಾಡುವಂತೆ ಭಾಸವಾಗಿತ್ತು. ಕಾಫಿ ತೋಟದಿಂದ ಒಂದೊಂದಾಗಿ ಹೊರ ಬಂದ ಕಾಡಾನೆಗಳ ಕಂಡು ಸವಾರರು ಜೀವ ಭಯದಲ್ಲೇ ನಿಲ್ಲುವಂತಾಗಿತ್ತು.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದ ಬಳಿ ಗಜಪಡೆಗಳು ದರ್ಶನ ನೀಡಿದ್ದವು. ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ರಸ್ತೆ ಮೂಲಕ ದಾಟಿ ಮರಿಗಳೊಂದಿಗೆ ಸುರಕ್ಷಿತವಾಗಿ ಕಾಡಾನೆಗಳು ಹೋದವು. ಕಾಡಾನೆಗಳ ಓಡಾಟವನ್ನು ಸವಾರರು ತಮ್ಮ ಮೊಬೈಲ್‌ನಲ್ಲಿ ಸೆರೆಯಿಡಿದಿದ್ದಾರೆ.
ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳು ಕಾಫಿ ತೋಟದಲ್ಲಿ ಬೀಡುಬಿಟ್ಟಿವೆ. ಮರಿಗಳೇ ಹೆಚ್ಚಿರುವುದರಿಂದ ಜನರ ಮೇಲೆ ಕಾಡಾನೆಗಳು ದಾಳಿ ಮಾಡುವ ಆತಂಕ ಸೃಷ್ಟಿಯಾಗಿದೆ. ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿವೆ. ನಿತ್ಯ ಜೀವ ಭಯದಲ್ಲಿ ಜೀವನ ಸಾಗಿಸುತ್ತಿದ್ದು, ಅರಣ್ಯಾಧಿಕಾರಿಗಳು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Elephant attack : ಮೈಸೂರಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ರಾಮನಗರದಲ್ಲಿ ಒಂಟಿ ಸಲಗ ನೈಟ್ ವಾಕಿಂಗ್
ರಾಮನಗರ ಜಿಲ್ಲೆಯಲ್ಲೂ ಕಾಡಾನೆ ಹಾವಳಿ ಮುಂದುವರಿದಿದೆ. ಚನ್ನಪಟ್ಟಣ ತಾಲೂಕಿನ ಬಿ.ವಿ ಹಳ್ಳಿ ಗ್ರಾಮದಲ್ಲಿ ಒಂಟಿ ಸಲಗವೊಂದು ಕಾಣಿಸಿಕೊಂಡಿದೆ. ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಗ್ರಾಮದಲ್ಲಿ ಒಂಟಿ ಸಲಗ ಓಡಾಡಿದೆ.
ಗ್ರಾಮದಲ್ಲಿನ ವಿದ್ಯುತ್ ಕಂಬಗಳನ್ನು ಕೆಡವಿ, ತೆಂಗಿನ ಮರಗಳನ್ನು ನಾಶ ಮಾಡಿವೆ. ಪದೇಪದೆ ಕಾಡಾನೆ ದಾಳಿಗೆ ಜನರು ಬೇಸತ್ತು ಹೋಗಿದ್ದಾರೆ. ಒಂಟಿ ಸಲಗ ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಗಡೆ ಬರಲು ಭಯಪಡುವಂತಾಗಿದೆ. ಇತ್ತ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿನತ್ತ ಆನೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ.
ಸೋಲಾರ್ ಬೇಲಿಗೂ ಡೋಂಟ್ ಕೇರ್ ಎಂದು ತಣ್ಣೀರು!
ಸೋಲಾರ್ ಬೇಲಿಗೂ ಡೋಂಟ್ ಕೇರ್ ಎಂದು ಒಂಟಿ ಸಲಗವೊಂದು ಬೇಲಿ ಮುರಿದು ಎಸ್ಟೇಟ್ ಒಳ ನುಗ್ಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಳೆ ಬಾಗೆ ಸಮೀಪದ ದಿವಾನ್ ಎಸ್ಟೇಟ್ ಬಳಿ ಸಲಗ ಕಾಣಿಸಿಕೊಂಡಿದೆ. ಕಾಡಾನೆ ಹಾವಳಿ ತಡೆಯಲು ಕಾಫಿ ತೋಟದ ಮಾಲೀಕರು ಸೋಲಾರ್ ಬೇಲಿ ನಿರ್ಮಿಸಿದ್ದರು.
ಕೆಲ ತಿಂಗಳ ಹಿಂದೆ ತಣ್ಣೀರು ಎಂಬ ಹೆಸರಿನ ಕಾಡಾನೆ ನಾಪತ್ತೆಯಾಗಿತ್ತು. ಈಗ ಮತ್ತೆ ಸಕಲೇಶಪುರದಲ್ಲಿ ಕಾಣಿಸಿಕೊಂಡಿದೆ. ಕಾಡಾನೆ ಹಾವಳಿ ತಡೆಯಲು ಸೋಲಾರ್ ಬೇಲಿಯು ಕಾಡಾನೆಗೆ ಪರಿಣಾಮಕಾರಿಯಲ್ಲ ಎಂಬುದು ಸಾಬೀತಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ