ಹಲವು ರಾಜವಂಶಗಳ ಆಳ್ವಿಕೆಯಲ್ಲಿದ್ದ ಕೋಲಾರ ಮೊದಲು ಕುವಲಾಲಾ, ಕೋಲಾ, ಕೋಲಾಹಲಪುರ ಎಂದೆಲ್ಲಾ ಕರೆಸಿಕೊಂಡಿತ್ತು. ಈ ಅರಸೊತ್ತಿಗೆಗಳು ನಿರ್ಮಿಸಿದ ಹಲವು ದೇವಾಲಯಗಳು ಇಂದಿಗೂ ಅವುಗಳ ಆಳ್ವಿಕೆಗೆ ಸಾಕ್ಷಿಯಾಗಿ ನಿಂತಿವೆ. ಇತಿಹಾಸ ಪ್ರಿಯರ ಆಸಕ್ತಿಗೆ ಕಾರಣವಾಗಿವೆ. ಹಾಗೆ ನೋಡಿದರೆ ಕೋಲಾರ (10 Places To Visit In Kolar) ಕೇವಲ ಇತಿಹಾಸ ಪ್ರಿಯರಿಗೆ ಮಾತ್ರವಲ್ಲ, ಚಾರಣಿಗರಿಗೆ, ಸಾಹಸ ಪ್ರಿಯರಿಗೆ, ಆಸ್ತಿಕರಿಗೆ, ಸಾಮಾನ್ಯ ಪ್ರವಾಸಿಗರಿಗೂ ಆಸಕ್ತಿಯ ತಾಣವಾಗಿದೆ.
ಸಾಂಸ್ಕೃತಿಕ ವಿಷಯಗಳ ಆಸಕ್ತರ ಪಾಲಿಗೆ ಇದು ಕುತೂಹಲದ ತಾಣ. ಕಾರಣ, ಪಶ್ಚಿಮದಲ್ಲಿ ಬೆಂಗಳೂರು ಗ್ರಾಮೀಣ ಮತ್ತು ಉತ್ತರದಲ್ಲಿ ಚಿಕ್ಕಬಳ್ಳಾಪುರದೊಂದಿಗೆ ಸಂಪೂರ್ಣ ಕರ್ನಾಟಕದ ಸೊಗಡನ್ನು ಹೊಂದಿದೆ. ಆದರೆ ಪೂರ್ವದಲ್ಲಿ ಆಂಧ್ರಪ್ರದೇಶ ಮತ್ತು ದಕ್ಷಿಣದಲ್ಲಿ ತಮಿಳುನಾಡನ್ನು ಗಡಿಯಾಗಿಸಿಕೊಂಡು, ತೆಲುಗು ಮತ್ತು ತಮಿಳು ಭಾಷಿಕರನ್ನು ಹೊಂದಿದೆ. ಹಾಗಾಗಿ ಕನ್ನಡ, ತೆಲುಗು ಮತ್ತು ತಮಿಳು ಸಂಸ್ಕೃತಿಗಳ ಮಿಶ್ರಣವನ್ನು ಕೋಲಾರದಲ್ಲಿ ಕಾಣಬಹುದು. ಇದಲ್ಲದೆ, ಆಸಕ್ತಿಯ ತಾಣಗಳು ಏನೆಲ್ಲಾ ಇವೆ ಕೋಲಾರದಲ್ಲಿ?
ಕೋಲಾರ ಪ್ರವಾಸದ ಸೂಕ್ತ ಸ್ಥಳಗಳು :
ಚಾರಣ ಮತ್ತು ಸಾಹಸ ಪ್ರಿಯರಿಗೆ…
ಅಂತರಗಂಗೆ ಗುಹೆ
ಕೋಲಾರದ ಚಿತ್ರಕ್ಕೆ ಗಿರಿಶೃಂಗಗಳ ಹಿನ್ನೆಲೆ ಒದಗಿದ್ದರೆ ಅದು ಶತಶೃಂಗ ಪರ್ವತಶ್ರೇಣಿಯಿಂದ. ಇದರ ಭಾಗವೇ ಅಂತರಗಂಗೆ ಬೆಟ್ಟಗಳು. ಇವು ಕೋಲಾರದಿಂದ 3 ಕಿ. ಮೀ. ದೂರದಲ್ಲಿವೆ. ಇಲ್ಲಿ ಕಾಶಿಯ ಶ್ರೀ ವಿಶ್ವೇಶ್ವರ ದೇವಾಲಯ ಸುಂದರವಾಗಿದ್ದು, ನೆಲದಡಿ ಹರಿಯುವ ಗಂಗೆ ಅಥವಾ ಅಂತರಗಂಗೆ ನಂದಿಯ ಬಾಯಿಂದ ಹೊರಬರುತ್ತದೆ. ಈ ಕೊಳದ ಸಮೀಪದಿಂದ ಕಲ್ಲಿನ ಪಾವಟಿಗೆಗಳನ್ನು ಹತ್ತುತ್ತಾ ಬೆಟ್ಟದ ತುದಿಗೂ ಹೋಗಬಹುದು. ಇಲ್ಲಿಂದ ದೊರೆಯುವ ಕೋಲಾರದ ವಿಹಂಗಮ ನೋಟ ಅದ್ಭುತವಾಗಿದೆ
ಟೇಕಲ್ ಗುಡ್ಡ
ಕೋಲಾರದಿಂದ 17 ಕಿ. ಮೀ. ದೂರದಲ್ಲಿದೆ. ಭೀಮನ ಗರಡಿಯೆಂಬ ಗುಹೆ ಈ ಗುಡ್ಡಗಳಲ್ಲಿರುವ ದೊಡ್ಡ ಗವಿ. ದೊಡ್ಡ ಬಂಡೆಗಳು ಮತ್ತು ಬಹಳಷ್ಟು ಗವಿಗಳಿಂದ ಕೂಡಿದ ಕುಮುದಾದ್ರಿ ಮತ್ತು ಹೇಮಾದ್ರಿ ಎಂಬ ಜೋಡಿ ಗುಡ್ಡಗಳು ಇಲ್ಲಿನ ಆಕರ್ಷಣೆ. ಅದಲ್ಲದೆ, ಆಂಜನೇಯ ಮತ್ತು ಸಿಂಗಪೆರುಮಾಳ್ ದೇವಾಲಯಗಳು ಸಹ ಇಲ್ಲಿವೆ.
ಧಾರ್ಮಿಕ ಸ್ಥಳಗಳು
ಕೋಲಾರಮ್ಮ ದೇವಸ್ಥಾನ
ಕೋಲಾರದ ನಗರ ದೇವತೆ ಕೋಲಾರಮ್ಮ ದೇಗುಲ ಹಲವು ಶತಮಾನಗಳಷ್ಟು ಹಿಂದಿನದು. 11ನೇ ಶತಮಾನದಲ್ಲಿ ಚೋಳರ ಆಡಳಿತದ ಕಾಲದಲ್ಲಿ ಈ ದೇಗುಲಕ್ಕೆ ಹಲವು ನವೀಕರಣಗಳನ್ನು ಮಾಡಲಾಗಿದೆ ಎನ್ನಲಾಗುತ್ತದೆ. ಗ್ರಾನೈಟ್ ಶಿಲೆಗಳ ಸುಂದರ ಕೆತ್ತನೆಯನ್ನು ದೇವಾಲಯ ಹೊಂದಿದೆ. ಈ ಶಕ್ತಿ ದೇವತೆಯೆ ನೇರ ದರ್ಶನ ಭಕ್ತರಾರಿಗೂ ಇಲ್ಲ. ಬದಲಿಗೆ, ಗರ್ಭಗುಡಿಯಲ್ಲಿರುವ ಮೂರ್ತಿಯ ಬಿಂಬವನ್ನು ಕನ್ನಡಿಯಲ್ಲಿ ದರ್ಶನ ಮಾಡಿಸಲಾಗುತ್ತದೆ
ಕೋಟಿಲಿಂಗೇಶ್ವರ
ಕೋಲಾರದಿಂದ ಸುಮಾರು 18 ಕಿ. ಮೀ. ದೂರದಲ್ಲಿರುವ ಈ ದೇವಳ ವರ್ಷಂಪ್ರತಿ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಸಣ್ಣ ಮತ್ತು ದೊಡ್ಡ ಶಿವಲಿಂಗಗಳ ಸಂಖ್ಯೆ ಸುಮಾರು 60 ಲಕ್ಷಕ್ಕೂ ಅಧಿಕವಿದೆ. ಮುಖ್ಯ ದ್ವಾರದ ಬಳಿಯಲ್ಲಿ 108 ಅಡಿ ಎತ್ತರ ಶಿವಲಿಂಗವಿದ್ದು, 35 ಅಡಿ ಎತ್ತರದ ಬೃಹತ್ ನಂದಿಯೂ ಇದೆ. ಇದಲ್ಲದೆ, ತ್ರಿಮೂರ್ತಿಗಳು ಮತ್ತು ನವಗ್ರಹದ ದೇವಸ್ಥಾನವೂ ಇಲ್ಲಿದೆ.
ಚಿಕ್ಕ ತಿರುಪತಿ
ಮಾಲೂರು ತಾಲೂಕಿನ ಸರ್ಜಾಪುರದಿಂದ 10 ಕಿ. ಮೀ. ದೂರದಲ್ಲಿರುವ ಇದು, ಆಂಧ್ರಪ್ರದೇಶದ ತಿರುಪತಿಯಂತೆಯೇ ತೀರ್ಥಕ್ಷೇತ್ರ. ಶ್ರೀನಿವಾಸ ಎನ್ನಲಾಗುವ ಇಲ್ಲಿನ ವರದರಾಜ ವಿಗ್ರಹ ಸುಂದರವಾಗಿದ್ದು, ನವರಂಗದಲ್ಲಿ ರಾಮಾನುಜಾಚಾರ್ಯ ಮತ್ತು ವೇದಾಂತ ದೇಶಿಕರ್ ಅವರ ಚಿತ್ರಗಳಿವೆ.
ಮುಳಬಾಗಿಲು
ಮೈಸೂರು ಸಂಸ್ಥಾನದ ಪೂರ್ವದ ಪ್ರವೇಶ ಪ್ರಾಂತ್ಯ ಎಂಬ ಲೆಕ್ಕದಲ್ಲಿ, ಮೂಡಬಾಗಿಲು ಎನ್ನಲಾಗುತ್ತಿದ್ದ ಊರೀಗ ಮುಳಬಾಗಿಲು ಎನಿಸಿಕೊಂಡಿದೆ. ವಾಲ್ಮೀಕಿ ಆಶ್ರಮದಲ್ಲಿ ಸೀತೆ ವಾಸಿಸುತ್ತಿದ್ದಳು ಎಂಬ ಪೌರಾಣಿಕ ಹಿನ್ನೆಲೆಯಲ್ಲಿ, ಇಲ್ಲಿನ ಅವನಿ ಎಂಬ ಪ್ರದೇಶವು ಸೀತಾ ವಾಸ್ತವ್ಯದ ಐತಿಹ್ಯವನ್ನು ಹೊಂದಿದೆ. ಇಲ್ಲಿನ ರಾಮಲಿಂಗೇಶ್ವರ ದೇವಾಲಯವನ್ನು ದಕ್ಷಿಣದ ಗಯೆ ಎನ್ನಲಾಗುತ್ತದೆ. ನಾಚಾರಮ್ಮನ ಗುಹಾದೇಗುಲ ಹಾಗೂ ಆಂಜನೇಯ, ಶ್ರೀನಿವಾಸ, ವರದರಾಜ, ವೀರಭದ್ರ, ಗೋಪಾಲಕೃಷ್ಣ ಮುಂತಾದ ದೇವಾಲಯಗಳು ಇಲ್ಲಿವೆ.
ಮಹಾಗಣಪತಿ ದೇಗುಲ, ಕುರುಡುಮಲೆ
ಮುಳಬಾಗಿಲು ತಾಲೂಕಿನಿಂದ ಸುಮಾರು 10 ಕಿ. ಮೀ. ದೂರದಲ್ಲಿರುವ ಇದನ್ನು ವಿಜಯನಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ 8.5 ಅಡಿ ಎತ್ತರದ ಕಪ್ಪು ಕಲ್ಲಿನ ಗಣಪತಿಯ ಪ್ರತಿಮೆ ಹೆಸರುಮಾತಿನದ್ದು.
ಬಂಗಾರು ತಿರುಪತಿ, ಗುಟ್ಟಳ್ಳಿ
ಭೃಗು ಮಹರ್ಷಿಯ ಕ್ಷೇತ್ರವೆಂದೇ ಹೆಸರಾಗಿರುವ ಇದು, ಬಂಗಾರಪೇಟೆ ತಾಲೂಕಿನಲ್ಲಿದೆ. ಬಂಗಾರಗಿರಿ ಎಂದು ಕರೆಯಲಾಗುವ ಸಣ್ಣ ಗುಡ್ಡವೊಂದು ಇಲ್ಲಿದ್ದು, ಇದರ ತುದಿಯಲ್ಲಿ ವೆಂಕಟೇಶ್ವರ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಇದನ್ನು ಬಂಗಾರು ತಿರುಪತಿ ಅಥವಾ ಚಿನ್ನ ತಿರುಪತಿ ಎಂದು ಕರೆಯಲಾಗುತ್ತದೆ.
ಇತಿಹಾಸ ಪ್ರಿಯರಿಗೆ
ಇಲ್ಲಿರುವ ಬಹುತೇಕ ದೇವಳಗಳು ಒಂದಿಲ್ಲೊಂದು ರಾಜವಂಶಗಳಿಂದ ನಿರ್ಮಿತವಾಗಿದ್ದು, ಇತಿಹಾಸ ಪ್ರಿಯರಿಗೆ ಮೆಚ್ಚಾಗುವಂಥವು. ಅದಲ್ಲದೆ ಕೆಲವು ಕೋಟೆ-ಕೊತ್ತಲಗಳೂ ಇವೆ.
ಪಾಪ ರಾಜನಹಳ್ಳಿ
ಶಿವ ಹಾಗೂ ಪಟಾಲಮ್ಮ ದೇವಸ್ಥಾನ ಮತ್ತು ಉಸ್ಮಾನ್ ಅಲಿ ದರ್ಗಾಗಳಿಗೆ ಈ ಊರು ನೆಲೆಯಾಗಿದೆ. ಕನ್ನಡ ಶಾಸನಗಳು, ರೊಟ್ಟಿಬಂಡೆಯ ಸಮೀಪದ ಗುಹೆಗಳು, ಅರಸೊತ್ತಿಗೆ ಅವಶೇಷವಾದ ಕೋಟೆ ಮತ್ತು ಅರಮನೆಯ ಉಳಿಕೆಗಳು ಕಾಣಸಿಗುತ್ತವೆ
ಮಾರ್ಕಾಂಡೇಶ್ವರ ದೇವಾಲಯ, ವಕ್ಕಲೇರಿ
ಕೋಲಾರದಿಂದ 12 ಕಿ. ಮೀ. ದೂರದಲ್ಲಿರುವ ಮಾರ್ಕಾಂಡೇಯ ಬೆಟ್ಟಗಳ ತಪ್ಪಲಿನಲ್ಲಿದೆ ವಕ್ಕಲೇರಿ. ೮ನೇ ಶತಮಾನದ ಬಾದಾಮಿ ಚಾಲುಕ್ಯ ದೊರೆ ಕೀರ್ತಿವರ್ಮನ ತಾಮ್ರ ಫಲಕದ ಶಾಸನಗಳಿಂದಾಗಿ ಈ ಸ್ಥಳಕ್ಕೆ ಮಹತ್ವ ದೊರೆತಿದೆ. ಇವುಗಳನ್ನು ವಕ್ಕಲೇರಿ ಶಾಸನಗಳು ಎಂದೇ ಗುರುತಿಸುತ್ತಾರೆ. ರಾಜಾ ಕೀರ್ತಿವರ್ಮನ ವೀರಗಾಥೆಯನ್ನು ಈ ಶಾಸನಗಳು ಹೇಳುತ್ತವೆ. ಬೆಟ್ಟದ ಮೇಲ್ಭಾಗದಲ್ಲಿ ಮಾರ್ಕಾಂಡೇಯ ದೇಗುಲವಿದ್ದು, ವಿಜಯನಗರದ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ.
ಕೋಲಾರ ಯಾವುದಕ್ಕೆ ಪ್ರಸಿದ್ಧವಾಗಿದೆ?
ಬೆಂಗಳೂರಿನಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಕೋಲಾರದಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಅವುಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.