Site icon Vistara News

Gruha jyothi Scheme : ಗೃಹಜ್ಯೋತಿ ಬಿಲ್‌ ಬಂತಾ? ಅಪ್ಲೈ ಮಾಡಿಲ್ವಾ? ಫ್ರೀ ಬೇಕಿದ್ದರೆ ಹೀಗೆ ಮಾಡಿ!

how to apply Gruha jyoti scheme

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿಯಲ್ಲಿ (Congress Guarantee scheme) ಒಂದಾಗಿರುವ ಗೃಹ ಜ್ಯೋತಿ ಯೋಜನೆಗೆ (Gruha jyothi Scheme) ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜೂನ್‌ 18ಕ್ಕೆ ಆರಂಭಗೊಂಡಿತ್ತು. ಆಗಸ್ಟ್‌ 5ರಂದು ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಚಾಲನೆ ನೀಡುವರು. ಬುಧವಾರದವರೆಗೆ 1.42 ಕೋಟಿ ಸಂಪರ್ಕಗಳ ನೋಂದಣಿಯಾಗಿದೆ. ಹಾಗಾಗಿ ಈ ಕುಟುಂಬಗಳು ಜುಲೈ ತಿಂಗಳ ಉಚಿತ ವಿದ್ಯುತ್‌ನ (Free Electricity Bill) ಲಾಭವನ್ನು ಪಡೆಯಲಿದ್ದಾರೆ. ಆದರೆ, ಇನ್ನೂ ಈ ಯೋಜನೆಗೆ ಅರ್ಜಿ ಸಲ್ಲಿಸದೇ ಇರುವವರು ಏನು ಮಾಡಬೇಕು? ಈ ಆಗಸ್ಟ್‌ ತಿಂಗಳ ಬಿಲ್‌ ಅನ್ನು ಉಚಿತವಾಗಿ ಪಡೆಯಬಹುದೇ ಎಂಬ ಅನುಮಾನಗಳು ಕೆಲವರಲ್ಲಿ ಮೂಡಿದೆ. ಆದರೆ, ಖಂಡಿತವಾಗಿಯೂ ಅರ್ಜಿ ಸಲ್ಲಿಸಿ ಅರ್ಹರು ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.

ಈ ತಿಂಗಳ ಉಚಿತ ವಿದ್ಯುತ್‌ ಹೇಗೆ ಸಿಗಲಿದೆ?

ನಿಮಗೆ ಈ ತಿಂಗಳು ಬರಲಿರುವ ಬಿಲ್‌ನಲ್ಲಿ ಹಣ ನೀಡಬೇಕಾದ ಜಾಗದಲ್ಲಿ “ಶೂನ್ಯ” ಎಂದು ಬರಲಿದೆ. ಆದರೆ, ಇದಕ್ಕೆ ನೀವು 200 ಯುನಿಟ್‌ಗಿಂತ (200 Unit Electricity) ಕಡಿಮೆ ಬಳಕೆ ಮಾಡಿರಬೇಕು. ಅದಕ್ಕಿಂತ ಮುಖ್ಯವಾಗಿ ನಿಮ್ಮ ಕಳೆದ ವರ್ಷದ ಸರಾಸರಿ ವಿದ್ಯುತ್‌ ಇಲ್ಲಿ ಮುಖ್ಯವಾಗುತ್ತದೆ. ಆ ಸರಾಸರಿ ಯುನಿಟ್‌ಗೆ ಮತ್ತೆ ಹೆಚ್ಚುವರಿಯಾಗಿ ಶೇಕಡಾ 10 ಯುನಿಟ್‌ ಸೇರಿಸಲಾಗುವುದು. ಈ ವ್ಯಾಪ್ತಿಯಲ್ಲಿ ನೀವು ವಿದ್ಯುತ್‌ ಬಳಕೆ ಮಾಡಿದ್ದರೆ ಉಚಿತವಾಗಿ ವಿದ್ಯುತ್‌ ಸಿಗಲಿದೆ.

ಗ್ರಾಹಕರು ಬಳಸಿದ ಯುನಿಟ್‌ಗಳು, ಅದಕ್ಕೆ ತಗಲುವ ವೆಚ್ಚ, ಮೀಟರ್‌ ಚಾರ್ಜ್‌ ಎಲ್ಲವೂ ಹಿಂದಿನ ಬಿಲ್‌ನಲ್ಲಿ ಹೇಗಿರುತ್ತಿತ್ತೋ ಈಗಲೂ ಹಾಗೆಯೇ ಇರುತ್ತದೆ. ಅದರ ಜತೆಗೆ ಹೆಚ್ಚುವರಿಯಾಗಿ ಸರ್ಕಾರ ಯಾವ್ಯಾವ ದರಕ್ಕೆ ಪ್ರತಿಯಾಗಿ ಎಷ್ಟೆಷ್ಟು ಹಣ ನೀಡಲಿದೆ ಎನ್ನುವುದನ್ನು ಈ ಬಾರಿ ಸ್ಪಷ್ಟವಾಗಿ ಹೇಳಲಿದೆ. ಒಂದು ವೇಳೆ ನಿಗದಿತ ಯುನಿಟ್‌ಗಿಂತ ಹೆಚ್ಚುವರಿಯಾಗಿ ನೀವು ಬಳಸಿದ್ದರೆ ದುಡ್ಡು ಕಟ್ಟಬೇಕು.

ಜುಲೈ ಕರೆಂಟ್‌ ಫ್ರೀ ಹೇಗೆ?

ನೀವು ಜುಲೈ 27ರೊಳಗೆ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದರೆ, ಈಗಿರುವ ನಿಯಮಾವಳಿಯೊಳಗೆ ಇದ್ದರೆ ಉಚಿತ ವಿದ್ಯುತ್‌ ನಿಮಗೆ ಲಭ್ಯವಾಗುತ್ತದೆ. ಅದೇ ಜುಲೈ 27ರ ಬಳಿಕ ನೋಂದಾವಣಿ ಮಾಡಿಕೊಂಡಿದ್ದರೆ ಆಗಸ್ಟ್‌ನಲ್ಲಿ ಬರುವ ಜುಲೈ ತಿಂಗಳ ಬಿಲ್‌ ಅನ್ನು ಪಾವತಿಸಬೇಕು.

ಈಗಲೂ ನೋಂದಾಯಿಸಿ

ಈವರೆಗೂ ನೀವು ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡದೇ ಇದ್ದರೆ ಆಗಸ್ಟ್‌ ತಿಂಗಳಲ್ಲಿಯೂ ಇದರ ಪ್ರಯೋಜನ ಪಡೆಯಬಹುದು. ಹಾಗಾಗಿ ಕೂಡಲೇ ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿ, ಸೆಪ್ಟೆಂಬರ್‌ ತಿಂಗಳಲ್ಲಿ ಬರುವ ಆಗಸ್ಟ್‌ ತಿಂಗಳ ಬಿಲ್‌ ಅನ್ನು ಉಚಿತವಾಗಿ ಪಡೆಯಿರಿ.

ಸಮಸ್ಯೆ ಆದರೆ?

ಒಂದು ವೇಳೆ ನೀವು ಈ ಯೋಜನೆಗೆ ಅರ್ಹರಿದ್ದರೂ ನಿಮಗೆ ವಿದ್ಯುತ್‌ ಬಿಲ್‌ ಎಂದಿನಂತೆ ಬಂದಿದೆ ಎಂದಾದರೆ ನೀವು ದುಡ್ಡು ಪಾವತಿ ಮಾಡುವ ಅಗತ್ಯವಿಲ್ಲ. ಬದಲಾಗಿ ವಿದ್ಯುತ್‌ ನಿಗಮ ಮಂಡಳಿ ಇಲ್ಲವೇ 24×7 ಸಹಾಯವಾಣಿ 1912ಕ್ಕೆ ಕರೆ ಮಾಡಿ ದೂರು ನೀಡಬಹುದು.

ಬಿಲ್ ಕಟ್ಟದಿದ್ದರೆ ಏನಾಗುತ್ತೆ?

ಇಲ್ಲಿ ಸರ್ಕಾರ ಉಚಿತ ವಿದ್ಯುತ್‌ ಘೋಷಣೆ ಮಾಡಿದೆ ಎಂದು ಸುಮ್ಮನೆ ಕುಳಿತುಕೊಳ್ಳಬಾರದು. ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಹಾಗೇ ನೋಂದಣಿ ಮಾಡಿಕೊಳ್ಳದೆ ಬಿಲ್‌ ಬಂದಲ್ಲಿ ಅದನ್ನು ನೀವು ಪಾವತಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ತಿಂಗಳ ಬಿಲ್‌ನಲ್ಲಿ ಅದರ ಬಡ್ಡಿಯೂ ಸೇರಿಸಿ ಬರುತ್ತದೆ. ಮೂರು ತಿಂಗಳು ನೀವು ಪಾವತಿ ಮಾಡದೇ ಹೋದರೆ ನಿಮ್ಮ ಮನೆಯ ವಿದ್ಯುತ್‌ ಸಂಪರ್ಕ ಕಡಿತವಾಗಲಿದೆ.

ಇದನ್ನೂ ಓದಿ: Job News : ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಉಪನ್ಯಾಸಕರ ಹುದ್ದೆ; 21 ವಿಭಾಗಗಳಿಗೆ ಅರ್ಜಿ ಆಹ್ವಾನ

ಸೇವಾಸಿಂಧು ಪೋರ್ಟಲ್‌ ಬಳಸಿ

ನೋಂದಣಿ ಮಾಡಿಕೊಳ್ಳಲು ನೀವು ಸೇವಾಸಿಂಧು ಪೋರ್ಟಲ್‌ (SevaSindhu Portal) ಬಳಸಿ. ಇದರಲ್ಲಿ ಮೊದಲು ಲಾಗ್‌ ಇನ್‌ ಆಗಿ. ರಿಜಿಸ್ಟರ್‌ ಆಗಿರದಿದ್ದರೆ ನೀವೇ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ನಿಮ್ಮ ಆಧಾರ್‌ ಕಾರ್ಡ್‌ ನಂಬರ್‌ ಹಾಗೂ ವಿದ್ಯುತ್‌ ಬಿಲ್‌ನಲ್ಲಿರುವ ಕಸ್ಟಮರ್‌ ಐಡಿ ಹಾಕಿ ನೋಂದಣಿ ಮಾಡಿಕೊಳ್ಳಬಹುದು. ಈ ವೇಳೆ ನಿಮಗೊಂದು ಒಟಿಪಿ ಬರುತ್ತದೆ. ಅದನ್ನು ನಮೂದಿಸಿದರೆ ನೀವು ಯೋಜನೆಗೆ ಸೇರ್ಪಡೆಗೊಂಡಂತೆ. ಬಳಿಕ ನೋಂದಣಿಯಾದ ಬಗ್ಗೆ ನಿಮಗೊಂದು ದೃಢೀಕರಣ ಮೆಸೇಜ್‌ ಸಹ ಬರಲಿದೆ.

Exit mobile version