ಮಳೆಗಾಲದ ನಿರೀಕ್ಷೆಯಲ್ಲೇ ಇದ್ದೇವೆ. ಊರಿಗೆ ಬಂದವರು ನೀರಿಗೆ ಬರದಿರುತ್ತಾರೆಯೇ ಎನ್ನುವಂತೆ ಕೇರಳಕ್ಕೆ ಬಂದ ಮುಂಗಾರು ಮಾರುತಗಳು ಕರ್ನಾಟಕಕ್ಕೆ ಬಾರದೇ ಇರುತ್ತವೆಯೇ? ಒಮ್ಮೆ ಮಳೆ ಪ್ರಾರಂಭವಾದರೆ ಈಗಿನ ಖಡಕ್ ವಾತಾವರಣ ಮಾಯವಾಗಿ, ಶೀತ-ಥಂಡಿ-ಒದ್ದೆಯ ದಿನಗಳು ಪ್ರಾರಂಭವಾಗುತ್ತವೆ. ಆವರೆಗೆ ಬೇಸಿಗೆಯ ವಾತಾವರಣಕ್ಕೆ ಹೊಂದಿಕೊಂಡಿದ್ದ ದೇಹಕ್ಕೆ ಈ ಬದಲಾವಣೆಗೆ ಒಗ್ಗಲೂ ಸಮಯ ಬೇಕು. ಅಷ್ಟರಲ್ಲೇ ಕೆಲವೊಮ್ಮೆ ಸೋಂಕುಗಳು ದಾಳಿ ಮಾಡಬಹುದು. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ನೆಗಡಿ, ಕೆಮ್ಮು, ಜ್ವರ, ಗಂಟಲುನೋವಿನಂಥ ತೊಂದರೆಗಳಿಗೆ ಸರಳವಾಗಿ ಪಾಲಿಸಬಹುದಾದ ಮನೆಮದ್ದುಗಳೇನು (Home remedies for Monsoon) ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.
ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಬೆನ್ನುಬೀಳುವ ವೈರಸ್ ಸೋಂಕುಗಳು ಹೆಚ್ಚಿನ ಸಾರಿ ವೈದ್ಯರ ದರ್ಶನವಿಲ್ಲದೆಯೇ ಗುಣವಾಗುವಂಥವು. ಬ್ಯಾಕ್ಟೀರಿಯಾ ಉಪಟಳವಾದರೆ ಇದಕ್ಕೆ ವೈದ್ಯರ ಭೇಟಿ ಅಗತ್ಯವಾಗುತ್ತದೆ. ಸಾಮಾನ್ಯವಾಗಿ ಕಣ್ಣು ಕೆಂಪಾಗುವುದು, ಗಂಟಲು ಕೆರೆತ ಅಥವಾ ನೋವು, ಮೈಕೈ ನೋವು, ಸ್ನಾಯು ಸೆಳೆತ, ಕೆಮ್ಮು, ಸೀನು, ನೆಗಡಿ, ಜ್ವರದಂಥ ಲಕ್ಷಣಗಳು ವೈರಸ್ ಸೋಂಕಿನಿಂದ ಬಂದಿದ್ದಾಗಿರಬಹುದು. ಗಂಟಲು ನೋವು ಅಥವಾ ಕಿವಿ ನೋವಿನಂಥ ಲಕ್ಷಣಗಳಿದ್ದರೆ ವೈದ್ಯರನ್ನು ಕಾಣಬೇಕಾಗುತ್ತದೆ.
ನೆಗಡಿ-ಕೆಮ್ಮಿನ ಮನೆಮದ್ದುಗಳು: ಮೊದಲನೇ ಕ್ರಮವೆಂದರೆ ಬೆಚ್ಚಗಿನ ಉಪ್ಪುನೀರಿನ ಗಾರ್ಗಲ್. ನೆಗಡಿ-ಕೆಮ್ಮು-ಗಂಟಲ ಕೆರೆತದಂಥ ಸಮಸ್ಯೆಗಳನ್ನು ಬಹುಮಟ್ಟಿಗೆ ತಹಬಂದಿಗೆ ತರುತ್ತದೆ. ದಿನಕ್ಕೆ ಮೂರ್ನಾಲ್ಕು ಬಾರಿ ಮಾಡುವುದರಿಂದ ಈ ಸಮಸ್ಯೆ ಆಳಕ್ಕಿಳಿದಂತೆ ತಡೆಯಬಹುದು.
ದೊಡ್ಡಪತ್ರೆಯನ್ನು ಬಿಸಿ ಮಾಡಿ ಎರಡು ಚಮಚದಷ್ಟು ರಸ ತೆಗೆದು ಜೊತೆಗೆ ಒಂದು ಚಮಚದಷ್ಟು ತುಳಸಿ ರಸವನ್ನು ಮತ್ತು ಜೇನುತುಪ್ಪವನ್ನು ಮಿಶ್ರ ಮಾಡಿ ಸೇವಿಸುವುದರಿಂದ ಥಂಡಿ-ಕೆಮ್ಮು ನಿಯಂತ್ರಣಕ್ಕೆ ಬರುತ್ತದೆ
ಕೆಮ್ಮು, ಗಂಟಲು ಕೆರೆತಕ್ಕೆ ಮತ್ತೊಂದು ಜನಪ್ರಿಯ ಮನೆ ಮದ್ದೆಂದರ ಶುಂಠಿ-ಕೊತ್ತಂಬರಿ ಕಾಫಿ ಅಥವಾ ಕಷಾಯ. ನಾಲು ಚಮಚ ಕೊತ್ತಂಬರಿ ಬೀಜ ಮತ್ತು ಒಂದಿಂಚುದ್ದದ ಶುಂಠಿಯನ್ನು ಅರ್ಧ ಲೀ. ನೀರಿಗೆ ಹಾಕಿ ಹತ್ತಾರು ನಿಮಿಷಗಳ ಕಾಲ ಕುದಿಸಿ. ಅದನ್ನು ಆಗಾಗ ಬೆಚ್ಚಗೆ ಮಾಡಿ ಕುಡಿಯುತ್ತಿರಿ.
ಒಂದು ಮಧ್ಯಮ ಗಾತ್ರದ ಈರುಳ್ಳಿಯನ್ನು ಹೆಚ್ಚಿ ಒಂದು ಲೋಟ ನೀರಿನೊಂದಿಗೆ ಕುದಿಸಿ ಕಷಾಯ ಮಾಡಿ. ಇದಕ್ಕೆ ಒಂದು ಸಣ್ಣ ತುಂಡು ಕಲ್ಲುಸಕ್ಕರೆ ಮತ್ತು ಆರೆಂಟು ಹನಿ ನಿಂಬೆರಸ ಸೇರಿಸಿ, ಬಿಸಿ ಇರುವಾಗಲೇ ಸೇವಿಸಿದರೆ ನೆಗಡಿ, ಕೆಮ್ಮು, ಕಫದ ಸಮಸ್ಯೆಗೆ ಉಪಶಮನ ದೊರೆಯುತ್ತದೆ.
ಸ್ವಲ್ಪ ಹಸಿಶುಂಠಿ, 1 ಲವಂಗ, ಕೊಂಚ ಹಿಪ್ಪಲಿ, ನಾಲ್ಕಾರು ಕಾಳು ಮೆಣಸು, ಸ್ವಲ್ಪ ಬೆಲ್ಲ, 2 ಸಣ್ಣ ಹರಳು ಉಪ್ಪನ್ನು ಸೇರಿಸಿ ಚೆನ್ನಾಗಿ ಕುದಿಸಿ, ಶೋಧಿಸಿಕೊಂಡು ಕುಡಿಯುವುದರಿಂದ ನೆಗಡಿ, ಕೆಮ್ಮು ಹತೋಟಿಗೆ ಬರುತ್ತದೆ
ಬಿಸಿಯಾದ ಹಾಲಿಗೆ ಚಿಟಿಕೆ ಅರಿಶಿನ, ಚಿಟಿಕೆ ಕಾಳು ಮೆಣಸಿನ ಪುಡಿ, ಚಿಟಿಕೆ ಜ್ಯೇಷ್ಠಮಧುವಿನ ಪುಡಿ ಅಥವಾ ಕೊಂಚ ಕಲ್ಲುಸಕ್ಕರೆಯನ್ನು ಸೇರಿಸಿ ಕುಡಿಯುವುದು ಶೀತ-ಕೆಮ್ಮಿಗೆ ಸೂಕ್ತ ಮದ್ದಾಗಬಲ್ಲುದು. ಕಫದ ಲಕ್ಷಣಗಳಿದ್ದರೆ ಜ್ಯೇಷ್ಠಮಧುವಿಗೆ ಒಂದೆರಡು ಹನಿ ಕರಗಿದ ತುಪ್ಪ ಸೇರಿಸಿ ಜೇನುತುಪ್ಪದ ಜೊತೆಗೆ ಸೇವಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಬಿಸಿನೀರಿನಲ್ಲಿ ದಿನಕ್ಕೆ ನಾಲ್ಕಾರು ಬಾರಿ ಚೆನ್ನಾಗಿ ಆವಿ ತೆಗೆದುಕೊಳ್ಳುವುದು ಕಫ, ಕೆಮ್ಮಿಗೆ ಉತ್ತಮ ಉಪಶಮನ ನೀಡುತ್ತದೆ.
ಹತ್ತನ್ನೆರಡು ದೊಡ್ಡ ತುಳಸಿ ದಳಗಳು ಮತ್ತು ನಾಲ್ಕು ಏಲಕ್ಕಿ ಮತ್ತು ಒಂದೆರಡು ಲವಂಗ ಸೇರಿಸಿ ಚೆನ್ನಾಗಿ ಕುದಿಸಿ ಕಷಾಯ ಮಾಡಿ ಕುಡಿಯುವುದರಿಂದ ನೆಗಡಿಯೊಂದಿಗೆ ಬರುವ ಸಣ್ಣ ಜ್ವರಕ್ಕೂ ಮದ್ದಾಗುತ್ತದೆ. ಗಂಟಲು ನೋವಿದ್ದರೆ ತುಳಸಿಯ ಕಷಾಯಕ್ಕೆ ಚಿಟಿಕೆ ಅರಿಶಿನ ಹಾಕಿ ಗಾರ್ಗಲ್ ಮಾಡಬಹುದು.
ಇಷ್ಟಾಗಿಯೂ ಜ್ವರ ಇದ್ದರೆ?
ಇದಕ್ಕೆ ಮಾಡಬೇಕಾದ ಮೊದಲ ಮದ್ದೆಂದರೆ ವಿಶ್ರಾಂತಿ. ನಿಜ, ಎಚ್ಚರ ಆಗುವುದಕ್ಕೇ ಪುರುಸೊತ್ತಿಲ್ಲದಂತೆ ನಿದ್ದೆ ಮಾಡಿ. ವೈರಸ್ ಸೋಂಕುಗಳು ಸಾಮಾನ್ಯವಾಗಿ ಗಾಳಿಯಲ್ಲಿ ಹರಡುವುದರಿಂದ ಆದಷ್ಟೂ ಮನೆಯೊಳಗೇ ಇರಿ. ಮನೆಮಂದಿಯನ್ನೂ ಸ್ವಲ್ಪ ದೂರ ಇರಿಸಿದರೆ ಸೋಂಕು ಹರಡುವುದನ್ನು ತಡೆಯಬಹುದು. ಸಾಕಷ್ಟು ದ್ರವಾಹಾರ ಅಗತ್ಯವಿದೆ. ಸೂಪ್, ಗಂಜಿ, ತೆಳುವಾದ ಕಿಚಡಿ ಮುಂತಾದವು ಜ್ವರ ಜೋರಿದ್ದಾಗ ದೇಹಕ್ಕೆ ಬೇಕಾದ ಸತ್ವ ನೀಡಿ, ಬಳಲದಂತೆ ಮತ್ತು ನಿರ್ಜಲೀಕರಣಕ್ಕೆ ತುತ್ತಾಗದಂತೆ ಕಾಪಾಡುತ್ತವೆ. ಆಹಾರದಲ್ಲಿ ವಿಟಮಿನ್ ಸಿ ಹೆಚ್ಚಿರುವಂತೆ ಯತ್ನಿಸಿ. ಮೂರು ದಿನಗಳಾದರೂ ಜ್ವರ ಕಡಿಮೆಯಾಗದಿದ್ದರೆ, ಲಕ್ಷಣಗಳು ಮೊದಲಿಗಿಂತ ಹೆಚ್ಚಾದರೆ ವೈದ್ಯರನ್ನು ಕಾಣಬೇಕೇ ಹೊರತು ಸ್ವಯಂವೈದ್ಯ ಮಾಡಿಕೊಳ್ಳುವುದು ಸಲ್ಲದು.
ಚಿಕ್ಕಮಕ್ಕಳಿಗೆ ಜ್ವರ ಬಂದು, 100ಕ್ಕಿಂತ ಕಡಿಮೆಯಿದ್ದರೆ ಆಗಿಂದಾಗ ವೈದ್ಯರಲ್ಲಿಗೆ ಓಡುವ ಅಗತ್ಯವಿಲ್ಲ. ಎಳೆಕೂಸುಗಳಾದರೆ ಬೆಚ್ಚಗಿನ ನೀರಿನಲ್ಲಿ ಬಟ್ಟೆ ಒದ್ದೆ ಮಾಡಿ ಮೈಯನ್ನೆಲ್ಲಾ ಒರೆಸುವುದರಿಂದ ದೇಹದ ಉಷ್ಣತೆಯನ್ನು ತಗ್ಗಿಸುವುದು ಸಾಧ್ಯ. ಸ್ವಲ್ಪ ದೊಡ್ಡ ಮಕ್ಕಳಾದರೆ ತಣ್ಣೀರಿನಲ್ಲೇ ಬಟ್ಟೆ ಒದ್ದೆ ಮಾಡಿ ಮೈಯೊರೆಸಬಹುದು.
ಇದನ್ನೂ ಓದಿ: Monsoon Precautions : ಮಳೆಗಾಲದಲ್ಲಿ ಅಪಾಯಗಳಿಂದ ದೂರವಿರಲು ಹೀಗೆ ಮಾಡಿ
ಮಕ್ಕಳಿರುವ ಕೋಣೆಯಲ್ಲಿ ಸಾಕಷ್ಟು ಗಾಳಿ-ಬೆಳಕು ಅಗತ್ಯ. ಅವುಗಳಿಗೆ ಮೈ ಬಿಸಿ ಆಗುತ್ತಿದ್ದಂತೆ ಸ್ವೆಟರು-ಟೋಪಿ ಹಾಕಬೇಡಿ. ಇದರಿಂದ ದೇಹದ ಉಷ್ಣತೆ ಇನ್ನೂ ಹೆಚ್ಚುತ್ತದೆ. ಜೋರು ಜ್ವರದಲ್ಲಿ ಇನ್ನಷ್ಟು ಬೆಚ್ಚಗೆ ಮಾಡುವುದರಿಂದ ಸಮಸ್ಯೆ ಹೆಚ್ಚುತ್ತದೆಯೇ ಹೊರತು ತಗ್ಗುವುದಿಲ್ಲ. ಅವರಿಗೆ ಆಗಾಗ ದ್ರವಾಹಾರ ನೀಡುತ್ತಿರಿ. ಎಳೆಕೂಸುಗಳಾದರೆ ಹಾಲೂಡಿಸುತ್ತಿರಬೇಕು. ಹೆಚ್ಚು ಸಮಯ ಮಕ್ಕಳೊಂದಿಗೆ ಕಳೆದು ಅವರ ಚಟುವಟಿಕೆಗಳನ್ನು ಉಪಾಯದಿಂದ ನಿಯಂತ್ರಿಸಿ ವಿಶ್ರಾಂತಿ ನೀಡಿದರೆ ಅನಗತ್ಯ ಔಷಧಿ ನೀಡುವುದನ್ನು ಕಡಿಮೆ ಮಾಡಬಹುದು. ಒಂದೆರಡು ದಿನಗಳಲ್ಲಿ ಲಕ್ಷಣಗಳು ಕಡಿಮೆಯಾಗದಿದ್ದರೆ ವೈದ್ಯರಲ್ಲಿ ಕರೆದೊಯ್ಯುವುದು ಅನಿವಾರ್ಯ.