ಬೆಂಗಳೂರು: ಜಾಗತಿಕ ಹೆಗ್ಗುರುತುಗಳಾಗಿ ‘ಪ್ರಪಂಚದ 7 ಅದ್ಭುತಗಳು’ ಇರುವ ರೀತಿಯಲ್ಲೇ ಇದೀಗ ಕರುನಾಡಿನ ಹೆಗ್ಗುರುತುಗಳಾಗಿ ಕರ್ನಾಟಕದ 7 ಅದ್ಭುತಗಳು ಘೋಷಣೆಯಾಗಿವೆ. ರಾಜ್ಯದ ನೆಲ-ಜಲ, ಕಾಡು-ಕಡಲು, ವಾಸ್ತು-ವಿಜ್ಞಾನ, ಶಿಲ್ಪಕಲೆ, ಇತಿಹಾಸ-ಪರಂಪರೆ ಸೇರಿ ಎಲ್ಲ ವೈವಿಧ್ಯಗಳನ್ನೂ ಪ್ರತಿನಿಧಿಸುವ ಏಳು ವಿಶಿಷ್ಟ ತಾಣಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದ 7 ಅದ್ಭುತಗಳು (7 Wonders Of Karnataka) ಎಂದು ಘೋಷಿಸಿದ್ದಾರೆ.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿವಾಹಿನಿ ಕರ್ನಾಟಕದ 7 ಅದ್ಭುತಗಳ ಆಯ್ಕೆಗೆ ಮಹಾ ಅಭಿಯಾನ ಕೈಗೊಂಡಿದ್ದವು.
ಬೆಂಗಳೂರಿನ ಪಂಚತಾರಾ ಹೋಟೆಲ್‌ವೊಂದರಲ್ಲಿ ಶನಿವಾರ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ‘ಕರ್ನಾಟಕದ 7 ಅದ್ಭುತಗಳನ್ನು ಘೋಷಿಸಲಾಯಿತು. ಇದೇ ವೇಳೆ, ವಿಜೇತ ತಾಣಗಳಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪ್ರಮಾಣಪತ್ರ ಹಸ್ತಾಂತರಿಸಲಾಯಿತು. ನಾಡಿನ ಏಳು ಅದ್ಭುತ ತಾಣಗಳನ್ನು ಏಳು ವಿಭಾಗಗಳ ಅಡಿಯಲ್ಲಿ ಹೆಸರಿಸಲಾಗಿದ್ದು, ಅವು ಇಂತಿವೆ.
ಕರ್ನಾಟಕ 7 ಅದ್ಭುತಗಳು
1. ಹಿರೇಬೆಣಕಲ್ ಶಿಲಾ ಸಮಾಧಿಗಳು (ಬೃಹತ್ ಶಿಲಾಯುಗದ ಅದ್ಭುತ)
ಬಹುತೇಕ ಕನ್ನಡಿಗರಿಗೇ ಅಪರಿಚಿತವಾದ ಕರ್ನಾಟಕದ ಅದ್ಭುತ ಇದು. ಸುಮಾರು 3000-4000 ವರ್ಷಗಳಷ್ಟು ಹಳೆಯ ಇತಿಹಾಸ ಇರುವ ತಾಣ. ಕೊಪ್ಪಳ ಜಿಲ್ಲೆ ಗಂಗಾವತಿಯಿಂದ ಸುಮಾರು 10 ಕಿ.ಮೀ. ದೂರದ ಹಿರೇಬೆಣಕಲ್ ಗ್ರಾಮದ ಮೋರ್ಯಾರ ಗುಡ್ಡದಲ್ಲಿ ಆದಿಮಾನವ ನಿರ್ಮಿತ ಬೃಹತ್ ಶಿಲಾಯುಗದ ನೂರಾರು ಶಿಲಾಸಮಾಧಿಗಳು ಹಾಗೂ ಆದಿಮಾನವ ರಚಿತ ಗುಹಾಚಿತ್ರಗಳು ಇವೆ. ಲಂಡನ್ನಿನ ಸ್ಟೋನ್ ಹೆಂಜಸ್, ಈಜಿಪ್ಟಿನ ಪಿರಮಿಡ್ಡುಗಳು, ಬಹರೈನಿನ ದಿಲ್ಮನ್ ಸಮಾಧಿ ದಿಬ್ಬಗಳಂತೆ ಸಾವಿನ ಗೌರವ ಸೂಚಕಗಳು ಈ ಶಿಲಾಸಮಾಧಿ ಡೋಲ್ಮನ್‌ಗಳು, ವಿಶ್ವದ ಹಲವೆಡೆ ಇಂಥ ಡೋಲ್ಮನ್‌ಗಳು ಇದ್ದು, ಕೊರಿಯಾ ಒಂದರಲ್ಲೇ ವಿಶ್ವದ ಶೇ.40ರಷ್ಟು ಡೋಲ್ಮನ್‌ಗಳು ಪತ್ತೆಯಾಗಿವೆ. ಭಾರತದಲ್ಲಿ ಹಲವೆಡೆ ಈ ಶಿಲಾಸಮಾಧಿಗಳು ಪತ್ತೆಯಾಗಿವೆಯಾದರೂ, ಹಿರೇಬೆಣಕಲ್ ಮೋರ್ಯಾರ ಗುಡ್ಡ ಇಡೀ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಮೆಗಾಲಿಥಿಕ್ ತಾಣವಾಗಿದೆ. ಒಂದು ಅಡಿಯ ಶಿಲಾಸಮಾಧಿಯಿಂದ ಹಿಡಿದು 10 ಅಡಿ ಶಿಲಾಚಪ್ಪಡಿಯ ಸಮಾಧಿಗಳು ಮೂರು-ನಾಲ್ಕು ಸಾವಿರ ವರ್ಷಗಳ ಪ್ರಾಕೃತಿಕ ಹೊಡೆತಗಳನ್ನು ತಾಳಿಯೂ ಇನ್ನೂ ಗಟ್ಟಿಯಾಗಿ ನಿಂತಿರುವುದು ನಿಜಕ್ಕೂ ಅದ್ಭುತ, ಕರ್ನಾಟಕದಲ್ಲಿ ಇರುವ ಇಂಥ ಅನೇಕ ಪ್ರಾಗೈತಿಹಾಸಿಕ ತಾಣಗಳ ಪ್ರಾತಿನಿಧಿಕ ಅದ್ಭುತವೇ ಹಿರೇಬೆಣಕಲ್ ಮೋರ್ಯಾರ ಗುಡ್ಡದ ಶಿಲಾ ಸಮಾಧಿಗಳು.
2. ಹಂಪಿ (ಪುರಾತತ್ವ ಅದ್ಭುತ)
ರೋಮ್‌ನಂತೆ ಇಡೀ ಹಂಪಿಯೇ ಒಂದು ಅದ್ಭುತ. ಇದನ್ನು ಜಗತ್ತಿನ ಅತಿದೊಡ್ಡ ಓಪನ್ ಏರ್ ಆರ್ಕಿಯಾಲಜಿಕಲ್ ಮ್ಯೂಸಿಯಂಗಳಲ್ಲಿ ಒಂದು ಎಂದು ಹೇಳಬಹುದು. ಇಲ್ಲಿನ ಶಿಲ್ಪಕಲಾ ವೈಭವ, ಶಿಲ್ಪಕಲಾ ವೈವಿಧ್ಯ, ನೂರಾರು ಸ್ಮಾರಕಗಳು ಜಗತ್ಪ್ರಸಿದ್ಧ. ಹಂಪಿಯ ಕಲ್ಲಿನ ರಥ ಯಾರಿಗೆ ಗೊತ್ತಿಲ್ಲ ಹೇಳಿ, ಇಲ್ಲಿನ ಕಲ್ಲುಕಲ್ಲಿನಲಿ ಶಿಲೆಗಳು ಸಂಗೀತ ನುಡಿಸುತ್ತವೆ ಎಂಬುದು ಅಕ್ಷರಶಃ ನಿಜ. ಇದಕ್ಕೆ ವಿಜಯ ವಿಠಲ ದೇವಾಲಯದ ಸಂಗೀತ ಕಂಬಗಳಿಂದ ಹಿಡಿದು, ಮಹಾನವಮಿ ದಿಬ್ಬದ ಬಳಿ ಇರುವ ಕಲ್ಲಿನ ಊಟದ ತಟ್ಟೆಗಳವರೆಗೆ ಅನೇಕ ಸಾಕ್ಷಾತ್ ನಿದರ್ಶನಗಳಿವೆ. ಅಲ್ಲದೆ, ಹಂಪಿಯ ಸುತ್ತ ಇರುವ ಬಂಡೆ ಬೆಟ್ಟಗಳ ಪರಿಸರ ಕರ್ನಾಟಕದ ವೈವಿಧ್ಯಮಯ ನಿಸರ್ಗ ಸೌಂದರ್ಯಕ್ಕೆ ಪ್ರತ್ಯೇಕ ಮೆರುಗನ್ನೇ ನೀಡಿದೆ. ಕರ್ನಾಟಕದಲ್ಲಿ ಹಂಪಿಯಂಥ ಹಲವಾರು ಶಿಲ್ಪಕಲೆಯ ಪುರಾತತ್ವ ಅದ್ಭುತಗಳಿವೆ. ಪ್ರತಿಯೊಂದೂ ತಾವೇ ತಾವಾಗಿ ಒಂದೊಂದು ಅದ್ಭುತ ಎನಿಸಿಕೊಳ್ಳಬೇಕಾದಂಥವು. ಬೇಲೂರು ಚನ್ನಕೇಶವ ದೇವಾಲಯ ಭಾರತೀಯ ಶಿಲ್ಪಕಲೆಯ ಔನ್ನತ್ಯಕ್ಕೆ ಉದಾಹರಣೆ. ಹಳೇಬೀಡು, ಪಟ್ಟದಕಲ್ಲು ದೇವಾಲಯಗಳು ಒಂದೆಡೆಯಾದರೆ ಐಹೊಳೆಯು ಭಾರತೀಯ ದೇವಾಲಯ ಶಿಲ್ಪಕಲೆಯ ತೊಟ್ಟಿಲು ಎಂದೇ ಖ್ಯಾತ. ಬಾದಾಮಿಯ ಗುಹಾಂತರ ದೇವಾಲಯಗಳೂ ಏನೂ ಕಡಿಮೆ ಇಲ್ಲ. ಲಕ್ಕುಂಡಿ, ತಲಕಾಡು ಸೇರಿದಂತೆ ಕರ್ನಾಟಕಾದ್ಯಂತ ಇರುವ ಇಂಥ ಹಲವಾರು ಪುರಾತತ್ವ ವೈಭವದ ಪ್ರಾತಿನಿಧಿಕ ಅದ್ಭುತವೇ ಹಂಪಿ.
3. ಶ್ರವಣಬೆಳಗೊಳದ ಗೊಮ್ಮಟೇಶ್ವರ (ತಾತ್ವಿಕ ಅದ್ಭುತ)
ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ರಿಯೋ-ಡಿ-ಜನೈರೋದ ಕ್ರಿಸ್ತನ ಪ್ರತಿಮೆ ಹೇಗೋ ನಮಗೆ ಕರ್ನಾಟಕದ ಶ್ರವಣಬೆಳಗೊಳದ ಗೊಮ್ಮಟೇಶ್ವರ ಪ್ರತಿಮೆ ಹಾಗೆ. ಇತ್ತೀಚೆಗೆ ರಾಜ್ಯದಲ್ಲಿ ಅತಿ ಎತ್ತರದ ಅನೇಕ ಏಕಶಿಲಾ ಪ್ರತಿಮೆಗಳು ರಚನೆಯಾಗುತ್ತಿದ್ದರೂ ಶ್ರವಣಬೆಳಗೊಳದ ಗೊಮ್ಮಟನ ನೂರಾರು ವರ್ಷದ ಇತಿಹಾಸಕ್ಕೆ ಅದ್ಯಾವುದೂ ಸಮವಾಗಲಾರದು. ಶ್ರವಣಬೆಳಗೊಳದ ಬಾಹುಬಲಿ ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಆಯ್ಕೆಯಾಗಲು ಈ ಪ್ರತಿಮೆ ಜಗತ್ತಿನಾದ್ಯಂತ ಪ್ರಸಿದ್ಧ ಎನ್ನುವುದಷ್ಟೇ ಕಾರಣವಲ್ಲ. ಈ ಪ್ರತಿಮೆ ಕನ್ನಡನಾಡಿನ ಸಮರ-ಶಾಂತಿ ತತ್ವದ ಪ್ರಾತಿನಿಧಿಕ ಕುರುಹು.
‘ಭರತ ಬಾಹುಬಲಿಯ ಕಥೆಯನ್ನೊಮ್ಮೆ ಅವಲೋಕಿಸಿ, ನಾವು ಕನ್ನಡಿಗರೂ ಅಷ್ಟೇ ಸಮರಕ್ಕೂ ಸಿದ್ಧ, ಶಾಂತಿಗೂ ಬದ್ಧ. ನಮ್ಮ ಅಪಾರ ಶಕ್ತಿ ಸಾಮರ್ಥ್ಯ ಯಾರ ಮೇಲೋ ದಬ್ಬಾಳಿಕೆ ನಡೆಸಲು ಅಲ್ಲ. ‘ಭರತನಂತೆ ಯಾರಾದರೂ ನಮ್ಮ ಮೇಲೆ ಹೋರಾಟಕ್ಕೆ ಇಳಿದಾಗ ಬಾಹುಬಲಿಯಾಗಿ ಅವರನ್ನು ಹೊಸಕಿ ಹಾಕುವುದು ನಮಗೆ ಕಷ್ಟವಲ್ಲ. ಆದರೂ ನಮ್ಮಷ್ಟಕ್ಕೆ ನಾವು ಗೊಮ್ಮಟನಂತೆ ಶಾಂತಿ ಪ್ರಿಯರು. ನಮ್ಮ ಈ ಸಮರಕ್ಕೂ ಸಿದ್ಧ, ಶಾಂತಿಗೂ ಬದ್ಧ ತತ್ವದ ಪ್ರಾತಿನಿಧಿಕ ಅದ್ಭುತವೇ ಶ್ರವಣಬೆಳಗೊಳದ ಗೊಮ್ಮಟೇಶ್ವರ. ಅಷ್ಟೇ ಅಲ್ಲ, ಜಗತ್ತಿಗೆ ಅನೇಕ ತತ್ವಾದರ್ಶಗಳನ್ನು ನೀಡಿದ ಕನಕ, ಪುರಂದರ, ಬಸವ, ಮಧ್ವ, ಶಿಶುನಾಳ ಶರೀಫ ಮುಂತಾದ ಎಲ್ಲ ಕನ್ನಡನಾಡಿನ ಮಹನೀಯರ ತಾತ್ವಿಕ ಪ್ರತಿನಿಧಿಯೂ ಹೌದು ಈ ಅದ್ಭುತ.
4. ಗೋಲ ಗುಮ್ಮಟ (ವಾಸ್ತು ವಿಜ್ಞಾನ ಅದ್ಭುತ)
ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಶ್ವೇತ ಸುಂದರಿಯಾದರೆ, ಕರ್ನಾಟಕದ ಗೋಲ ಗುಮ್ಮಟ ಕೃಷ್ಣ ಸುಂದರಿ. ಜಗತ್ತಿನ ಅತಿ ದೊಡ್ಡ ಗುಮ್ಮಟಗಳಲ್ಲಿ ಒಂದು ವಿಜಯಪುರದ ಗೋಲ ಗುಮ್ಮಟ. ಇಂಡೋ-ಸಾರ್ಸೆನಿಕ್ ಶೈಲಿಯ ಈ ಬೃಹತ್ ಸ್ಮಾರಕ ಆದಿಲ್ ಶಾಹಿ ರಾಜಮನೆತನದ ಮಹಾನ್ ಸಮಾಧಿಯಾದರೂ ಪುರಾತತ್ವ ವಾಸ್ತುಶಾಸ್ತ್ರ, ರೇಖಾಗಣಿತ ಮತ್ತು ಶಬ್ದವಿಜ್ಞಾನಕ್ಕೂ ಅತ್ಯುತ್ತಮ ಉದಾಹರಣೆ. ನಾಲ್ಕು ಗೋಡೆಗಳ ಮೇಲೆ, ನಡುವೆ ಯಾವುದೇ ಆಧಾರಗಳಿಲ್ಲದೆ ಬಹುದೊಡ್ಡ ಗುಮ್ಮಟವೊಂದನ್ನು ನಿರ್ಮಿಸಿರುವುದು ವಾಸ್ತುಶಾಸ್ತ್ರಜ್ಞರ ಅಪ್ರತಿಮ ಕೌಶಲಕ್ಕೆ ಸಾಕ್ಷಿ. ಅದಕ್ಕಿಂತ ಈ ಗುಮ್ಮಟದ ಶಬ್ದಚಾತುರ್ಯ ಅಮೋಘವಾದುದು. ಗುಮ್ಮಟದ ಒಂದು ಬದಿಯಲ್ಲಿ ಪಿಸುಮಾತನ್ನಾಡಿದರೂ ಅಷ್ಟು ದೂರದ ಇನ್ನೊಂದು ತುದಿಯಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ಗುಮ್ಮಟದಲ್ಲಿ ಒಂದು ಕೂಗು ಏಳು ಬಾರಿ ಮಾರ್ದನಿಸುತ್ತದೆ. ಈ ಶಬ್ದವೈಚಿತ್ರ್ಯವನ್ನು, ರೇಖಾಗಣಿತ ಆಧಾರಿತ ಕಟ್ಟಡ ವೈವಿಧ್ಯವನ್ನು ಪ್ರತಿನಿಧಿಸುವ ಕರ್ನಾಟಕದ ಅದ್ಭುತವೇ ಗೋಲ ಗುಮ್ಮಟ. ಅಷ್ಟೇ ಅಲ್ಲದೆ, ಕರ್ನಾಟಕದ ಅನೇಕ ಪ್ರಾಚೀನ ಹಾಗೂ ಆಧುನಿಕ ವಾಸ್ತು ವಿಜ್ಞಾನದ ಪ್ರಾತಿನಿಧಿಕವೂ ಹೌದು ಈ ಅದ್ಭುತ.
5. ಮೈಸೂರು ಅರಮನೆ (ರಾಜಪರಂಪರಾ ಅದ್ಭುತ)
ಭಾರತದ ಅತ್ಯಂತ ಸುಂದರ ಅರಮನೆಗಳಲ್ಲಿ ಮೈಸೂರಿನ ಅರಮನೆ ಒಂದಾಗಿದೆ. ಮೈಸೂರಿನ ಅಂಬಾವಿಲಾಸ ಅರಮನೆ, ಕರ್ನಾಟಕದ ಗತವೈಭವವನ್ನು ಭವ್ಯವಾಗಿ ಬಿಂಬಿಸುವ ಅರಮನೆಯಾಗಿದೆ. ದೀಪಾಲಂಕಾರಗೊಂಡಾಗ ಬಂಗಾರದ ಅರಮನೆಯಂತೆಯೇ ಇದು ಭಾಸವಾಗುತ್ತದೆ. ತಾಜ್ ಮಹಲಿನಷ್ಟೇ ಪ್ರವಾಸಿಗರನ್ನು ಸೆಳೆಯುವ ಈ ಅರಮನೆ ಕರ್ನಾಟಕ ಪ್ರವಾಸೋದ್ಯಮದ ಅತ್ಯಂತ ಪ್ರಮುಖ ಆಕರ್ಷಣೆಯೂ ಹೌದು.
ಕರ್ನಾಟಕದ 7 ಅದ್ಭುತಗಳಲ್ಲಿ ಒಂದಾಗಿ ಇದು ಆಯ್ಕೆಯಾಗಲು ಇಷ್ಟೇ ಕಾರಣವಲ್ಲ. ಸುಮಾರು 400 ವರ್ಷಗಳ ಇತಿಹಾಸ ಇರುವ ರಾಜಪರಂಪರೆಯ ಮೈಸೂರು ದಸರಾ ಹಬ್ಬ ಇಂದಿಗೂ ಸಜೀವ ಸಂಸ್ಕೃತಿಯಾಗಿ ವಿಜೃಂಭಣೆಯಿಂದ ಆಚರಣೆಯಾಗುತ್ತಿದೆ. ಅಲ್ಲದೆ, ಮೈಸೂರಿನ ಒಡೆಯರು, ಅಭಿವೃದ್ಧಿ, ಆಧುನಿಕತೆ, ಆಡಳಿತದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದರು.
ಅಣೆಕಟ್ಟೆ, ನೀರಾವರಿ, ವಿದ್ಯುತ್, ಬೀದಿದೀಪ, ಚಿನ್ನದ ಗಣಿ, ರೈಲ್ವೆಯಂತಹ ಅನೇಕ ಪ್ರಗತಿಪರ ಕೈಂಕರ್ಯದಲ್ಲಿ ಅಗ್ರಗಣ್ಯರಾಗಿದ್ದ ಮೈಸೂರು ಅರಸರು ದೇಶದ ಸ್ವಾತಂತ್ರ್ಯಕ್ಕೂ ಮುನ್ನವೇ ಪ್ರಜಾಪ್ರತಿನಿಧಿ ಸಭೆಯನ್ನೂ ನಡೆಸಿ ದೇಶಕ್ಕೆ ಮಾದರಿಯಾಗಿದ್ದರು. ಕರ್ನಾಟಕದಲ್ಲಿ ವಿಜಯನಗರ ಅರಸರು, ಕದಂಬರು, ರಾಷ್ಟ್ರಕೂಟರು, ಹೊಯ್ಸಳರು, ಚಾಲುಕ್ಯರು…ಹೀಗೆ ಅನೇಕ ಹಿರಿ-ಕಿರಿಯ ಸಂಸ್ಥಾನಗಳ ಶ್ರೇಷ್ಠ ರಾಜಪರಂಪರೆಯಿದೆ. ಈ ಎಲ್ಲ ರಾಜರಾಣಿಯರ ಕೊಡುಗೆ, ದಿಟ್ಟ, ಭವ್ಯ ಪರಂಪರೆಯ ಪ್ರಾತಿನಿಧಿಕ ಅದ್ಭುತವೇ ಮೈಸೂರು ಅರಮನೆ.
6. ಜೋಗ ಜಲಪಾತ (ನೈಸರ್ಗಿಕ ಅದ್ಭುತ – ನೆಲ)
ಭಾರತದ ಅತ್ಯಂತ ಸುಂದರ ಹಾಗೂ ಬೃಹತ್ ಜಲಪಾತಗಳಲ್ಲಿ ಜೋಗ ಜಲಪಾತ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. 830 ಅಡಿ ಎತ್ತರದಿಂದ ಧುಮುಕುವ ಜೋಗ ಜಲಪಾತ ಮಳೆಗಾಲದಲ್ಲಂತೂ ನೀರಿನಿಂದ ತುಂಬಿ ರಾಜಗಾಂಭೀರ್ಯವನ್ನು ಪಡೆಯುತ್ತದೆ. ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಜೋಗ ಕರ್ನಾಟಕ ಪ್ರವಾಸೋದ್ಯಮದ ಅತ್ಯಂತ ಪ್ರಮುಖ ಆಕರ್ಷಣೆಯಲ್ಲಿ ಒಂದು. ಕರ್ನಾಟಕದ 7 ಅದ್ಭುತಗಳಲ್ಲಿ ಒಂದಾಗಿ ಇದು ಆಯ್ಕೆಯಾಗಲು ಇವಿಷ್ಟೇ ಕಾರಣವಲ್ಲ. ಜೀವವೈವಿಧ್ಯಗಳಿಂದ ಶ್ರೀಮಂತವಾಗಿರುವ ಪಶ್ಚಿಮ ಘಟ್ಟಗಳು ಭೂಮಿಯ ಅತಿ ಅಪರೂಪದ ಕಾಡುಗಳಲ್ಲಿ ಒಂದು. ಅಂತಹ ಅದ್ಭುತ ನಿಸರ್ಗದಲ್ಲಿರುವ ಜೋಗದ ಪರಿಸರಲ್ಲಿ ಕರ್ನಾಟಕದ ಅಪರೂಪದ ಸಸ್ಯ ಹಾಗೂ ಪ್ರಾಣಿಸಂಕುಲಗಳೂ ಇವೆ.
ಶೋಲಾ ಕಾಡುಗಳಿಂದ ಹಿಡಿದು ದಟ್ಟ ನಿತ್ಯಹರಿದ್ವರ್ಣ ಕಾಡುಗಳವರೆಗೆ ಕರ್ನಾಟಕದಲ್ಲಿ 6 ವೈವಿಧ್ಯಮಯ ಕಾಡುಗಳಿವೆ. ನಾಗರಹೊಳೆ, ದಾಂಡೇಲಿಯಂಥ ಹುಲಿ ಸಂರಕ್ಷಿತ ಅಭಯಾರಣ್ಯಗಳಿವೆ. ಕುದುರೆಮುಖ, ಕೊಡಗು, ಕೊಡಚಾದ್ರಿಯಂಥ ಹಸಿರು ಗಿರಿಧಾಮಗಳಿವೆ. ಶರಾವತಿಯಲ್ಲದೆ ಕಾವೇರಿ, ಕೃಷ್ಣ, ತುಂಗಭದ್ರಾದಂಥ ಅನೇಕ ಹಿರಿ-ಕಿರಿಯ ನದಿಗಳಿವೆ. ಹೆಬ್ಬೆ, ಗೋಕಾಕ್ ಫಾಲ್ಸ್, ಗಗನಚುಕ್ಕಿ, ಭರಚುಕ್ಕಿ, ಉಂಚಳ್ಳಿಯಂಥ ಹಲವಾರು ಸುಂದರ ಜಲಪಾತಗಳಿವೆ. ಈ ಎಲ್ಲ ಕರ್ನಾಟಕದ ನೆಲದ ಸೌಂದರ್ಯ ಮತ್ತು ಮಹತ್ವಗಳ ಪ್ರಾತಿನಿಧಿಕ ಅದ್ಭುತವೇ ಜೋಗ ಜಲಪಾತ.
7. ನೇತ್ರಾಣಿ ದ್ವೀಪ (ನೈಸರ್ಗಿಕ ಅದ್ಭುತ – ಜಲ)
ಕರ್ನಾಟಕದ ಅದ್ಭುತಗಳೆಂದರೆ ಬರೀ ನೆಲದ ಮೇಲಿನ ಅದ್ಭುತಗಳಷ್ಟೇ ಅಲ್ಲ. ಕರ್ನಾಟಕದ ಅರಬ್ಬಿ ಸಮುದ್ರದ ಕಡಲಗರ್ಭವೂ ಕೂಡ ಅದ್ಭುತವೇ. ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಬಳಿ ಇರುವ ನೇತ್ರಾಣಿ ದ್ವೀಪ ಪ್ರೀತಿಯ ಸಂಕೇತದಂತೆ ಹೃದಯಾಕಾರದಲ್ಲಿದೆ. ಈ ದ್ವೀಪದ ಸುತ್ತ ಇರುವ ಸಮುದ್ರ ಗರ್ಭ ಎಷ್ಟು ಅದ್ಭುತವಾಗಿದೆಯೆಂದರೆ, ಸ್ಕೂಬಾ ಡೈವಿಂಗ್ ಮಾಡಲು ಭಾರತದಲ್ಲಿ ನೇತ್ರಾಣಿ ದ್ವೀಪ ಎರಡನೇ ಅತ್ಯುತ್ತಮ ಪ್ರದೇಶ. ಒಂದನೇ ಅತ್ಯುತ್ತಮ ಪ್ರದೇಶ ಅಂಡಮಾನ್ ದ್ವೀಪ, ನೇತ್ರಾಣಿ ದ್ವೀಪದ ಕಡಲ ಗ’ರ್ದಲ್ಲಿ ಆರೋಗ್ಯಕರ ಹವಳದ ಬಂಡೆಗಳಿವೆ. ಅಪರೂಪದ ಜಲಚರಗಳಿವೆ. ಸಾಗರ ಸಸ್ಯಗಳಿವೆ. ಇನ್ನೊಂದು ಗಮನೀಯ ವಿಚಾರ ಎಂದರೆ, ದೇಶದ ಎಲ್ಲ ರಾಜ್ಯಗಳಿಗೂ ಸಮುದ್ರ ಸೌಂದರ್ಯವಿಲ್ಲ. ಆದರೆ, ಕರ್ನಾಟಕದಲ್ಲಿ 310 ಕಿ.ಮೀ.ಯಷ್ಟು ಅದ್ಭುತ ಸಮುದ್ರ ಕಿನಾರೆಯಿದೆ. ನೇತ್ರಾಣಿ ಬಳಿ ಇರುವ ಮುರುಡೇಶ್ವರ ಈಗಾಗಲೇ ಕರ್ನಾಟಕದ ಪ್ರವಾಸೋದ್ಯಮದಲ್ಲಿ ಪ್ರಮುಖ ಸ್ಥಾನ ಪಡೆದಿದ್ದು ರಾಜ್ಯದ ಸಾಗರ ಪ್ರವಾಸೋದ್ಯಮಕ್ಕೆ ಇನ್ನಷ್ಟು ಹೇರಳ ಅವಕಾಶಗಳನ್ನು ಹೊಂದಿದೆ. ಇದರಿಂದ ಕರ್ನಾಟಕದ ಎಲ್ಲ ಸಮುದ್ರ ಕಿನಾರೆಗಳ ಪ್ರಾತಿನಿಧಿಕ ಅದ್ಭುತವೇ ನೇತ್ರಾಣಿ ದ್ವೀಪದ ಕಡಲಗರ್ಭ.
ಏಳು ಅದ್ಭುತಗಳು ಹೊಸ ಪ್ರವಾಸೋದ್ಯಮ ಮಾದರಿಗಳ ಸೃಷ್ಟಿಗೆ ದಿಕ್ಸೂಚಿ
ಕರ್ನಾಟಕದ ಏಳು ಅದ್ಭುತಗಳ ಘೋಷಣೆ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ‘ಕರ್ನಾಟಕದ ಏಳು ಅದ್ಭುತಗಳು ಹೊಸ ಪ್ರವಾಸೋದ್ಯಮ ಮಾದರಿಗಳ ಸೃಷ್ಟಿಗೆ ದಿಕ್ಸೂಚಿಯಾಗಲಿವೆ. ಈ ಏಳು ಅಧಿಕೃತ ಅದ್ಭುತಗಳ ಪಟ್ಟಿಯಲ್ಲಿ ಒಂದಾಗಿರುವ ಹಿರೇಬಣಕಲ್ ಅಭಿವೃದ್ಧಿಗೆ ಸಮಗ್ರ ವರದಿ ಸಿದ್ಧಪಡಿಸಲು ಈಗಾಗಲೇ ಸೂಚಿಸಿದ್ದೇನೆ. ಜತೆಗೆ ಏಳೂ ಅದ್ಭುತಗಳ ಸ್ಥಳದಲ್ಲಿ ಆಗಬೇಕಿರುವ ಅಭಿವೃದ್ಧಿಗಳ ಬಗ್ಗೆ ನೀಲನಕ್ಷೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಕರ್ನಾಟಕದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಕೊಪ್ಪಳ ಜಿಲ್ಲಾಧಿಕಾರಿ ಸುಂದರೇಶ್ ಬಾಬು, ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಹಾಸನ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ವಿಜಯಪುರ ಜಿಲ್ಲಾಧಿಕಾರಿ ಮಹಾಂತೇಶ್ ದಾನಮ್ಮನವರ್, ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಶಿವಮೊಗ್ಗ ಜಿಲ್ಲಾಧಿಕಾರಿಗಳ ಪರವಾಗಿ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ, ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ವಿಜೇತ ತಾಣಗಳ ಪ್ರಮಾಣಪತ್ರ ಹಾಗೂ ಘೋಷಣಾ ಫಲಕ ಸ್ವೀಕರಿಸಿದರು.
ಇದನ್ನೂ ಓದಿ | Barisu Kannada Dindimava: ಕರ್ನಾಟಕದ ಹೊರತಾಗಿ ಭಾರತದ ವೈವಿಧ್ಯತೆ ಅಪೂರ್ಣ, ನರೇಂದ್ರ ಮೋದಿ ಶ್ಲಾಘನೆ