ಚಿಕ್ಕಮಗಳೂರು: ಇಲ್ಲಿನ ಬಾಬಾ ಬುಡನ್ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ಡಿಸೆಂಬರ್ ೬ರಿಂದ ೮ರವರೆಗೆ ನಡೆಯಲಿರುವ ದತ್ತ ಜಯಂತಿಗಾಗಿ ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಹಿಂದೂ ಅರ್ಚಕರಿಂದ ದತ್ತಾತ್ರೇಯ ಪೀಠದಲ್ಲಿ ದತ್ತ ಪಾದುಕೆಗಳಿಗೆ ಶಾಸ್ತ್ರೋಪ್ತವಾಗಿ ಪೂಜೆ ನಡೆಯಲಿದೆ. ಬರೋಬ್ಬರಿ ಒಂದು ದಶಕಗಳ ಬಳಿಕ ಹಿಂದೂ ಸಂಘಟನೆಗಳ ಹೋರಾಟದ ಫಲವಾಗಿ ಅರ್ಚಕರ ಪೂಜೆ ನಡೆಯಲಿದೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಚಿಕ್ಕಮಗಳೂರು ನಗರ ಒಂದರಲ್ಲೇ 3000 ಪೊಲೀಸರನ್ನು ಭದ್ರತೆಗಾಗಿ ನೇಮಿಸಲಾಗಿದ್ದರೆ, ಜಿಲ್ಲೆಯಾದ್ಯಂತ 4,000ಕ್ಕೂ ಹೆಚ್ಚು ಪೊಲೀಸರು ಕಟ್ಟೆಚ್ಚರ ವಹಿಸಲಿದ್ದಾರೆ.
ಕೇವಲ ಎರಡು ದಿನಗಳ ಹಿಂದೆಯಷ್ಟೇ ನ್ಯಾಯಾಲಯದಿಂದ ಇಂದು ಅರ್ಚಕರ ನೇಮಕಾತಿ ಬಂದಿದ್ದೇ ತಡ ಈ ಬಾರಿಯ ದತ್ತ ಜಯಂತಿಗೆ ಭಾರಿ ಕಳೆ ಕಟ್ಟಿದೆ. ಹಿಂದೆಂದಿಗಿಂತಲೂ ಈ ಬಾರಿಯ ಉತ್ಸವ ವಿಶೇಷತೆ ಪಡೆದಿದೆ. ಚುನಾವಣೆ ಹೊಸ್ತಿಲಲ್ಲಿರುವುದರಿಂದ ಇದು ಇನ್ನಷ್ಟು ವಿಶೇಷತೆಯನ್ನು ಪಡೆದಿದೆ.
ಚಿಕ್ಕಮಗಳೂರಿನಲ್ಲಿ ಬರೋಬ್ಬರಿ ನಾಲ್ಕು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ರೂಟ್ ಮಾರ್ಚ್ ನಡೆಸಿ ಯಾವುದೇ ಅಹಿತಕರ ಘಟನೆ ನಡೆದಂತೆ ಎಚ್ಚರ ವಹಿಸಲಾಗಿದೆ.
ಮಂಗಳವಾರ ಬೆಳಗ್ಗೆ 10 ಗಂಟೆಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ನೂರಾರು ಮಹಿಳೆಯರು, ಸಾವಿರಾರು ಭಕ್ತರಿಂದ ಸಂಕೀರ್ತನೆ ಯಾತ್ರೆ ನಡೆಯಲಿದ್ದು, ಇಡೀ ಚಿಕ್ಕಮಗಳೂರು ನಗರ ಕೇಸರಿಮಯಗೊಂಡಿದೆ.
ಇದನ್ನೂ ಓದಿ ದತ್ತ ಪೀಠ ವಿವಾದ | ದತ್ತಪೀಠದ ಇತಿಹಾಸದಲ್ಲೇ ಮೊದಲ ಬಾರಿಗೆ ದತ್ತಾತ್ರೇಯನಿಗೆ ಸಂದ ಪೂಜೆ