Site icon Vistara News

ಬೆಂಗಳೂರಿನಲ್ಲಿ ಅತಿವೃಷ್ಟಿ: ವಾರ್ಡ್‌ವಾರು ಅಹವಾಲು ಕೇಂದ್ರಗಳ ಆರಂಭಕ್ಕೆ ಹೈಕೋರ್ಟ್‌ ಸೂಚನೆ

ಹೈಕೋರ್ಟ್‌

ಬೆಂಗಳೂರು: ಅತಿವೃಷ್ಟಿಯಿಂದ ಸಂಕಷ್ಟ ಅನುಭವಿಸುತ್ತಿರುವ ನಗರದ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ವಾರ್ಡ್‌ವಾರು ಅಹವಾಲು ಕೇಂದ್ರ (ಕುಂದು ಕೊರತೆ ಕೋಶ) ಆರಂಭಿಸಲು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಸಿಜೆ ಅಲೋಕ್‌ ಅರಾಧೆ ಮತ್ತು ನ್ಯಾ.ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಹೈಕೋರ್ಟ್‌ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಇದನ್ನೂ ಓದಿ | Rain News | ಉಕ್ಕಿ ಹರಿಯುತ್ತಿರುವ ಮಲಪ್ರಭಾ ಪ್ರಭಾವಕ್ಕೆ ಮುಳುಗಿದ ಸೇತುವೆ, ಭಾರಿ ಬೆಳೆ ಹಾನಿ

ವಿಚಾರಣೆ ವೇಳೆ ನಗರದ ರಸ್ತೆಗಳ ಕಳಪೆ ನಿರ್ವಹಣೆ ಬಗ್ಗೆ ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ, ನಗರದ ರಸ್ತೆಗಳೆಲ್ಲಾ ಗುಂಡಿಮಯವಾಗಿ ನೀರು ತುಂಬಿವೆ, ರಸ್ತೆಗಳು ಜಲಾವೃತವಾಗಿ ಜನ ಪರದಾಡುತ್ತಿದ್ದಾರೆ. ಇದಕ್ಕಾಗಿ ಅಹವಾಲು ಕೇಂದ್ರ, ಪರಿಹಾರ ಕೇಂದ್ರ ಆರಂಭಿಸಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಬಿಬಿಎಂಪಿ ಪರ ವಕೀಲರಾದ ವಿ.ಶ್ರೀನಿಧಿ ಉತ್ತರ ನೀಡಿ, ಭಾರಿ ಮಳೆಯಿಂದ ರಸ್ತೆಯಲ್ಲಿ ನೀರು ತುಂಬಿದ್ದು, ಪ್ರವಾಹ ನಿರ್ವಹಣೆಗಾಗಿ ಬಿಬಿಎಂಪಿ ಅಧಿಕಾರಿಗಳು ನಿರಂತರವಾಗಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇದಕ್ಕೆ ಸ್ಪಂದಿಸಿದ ನ್ಯಾಯಮೂರ್ತಿಗಳು, ವಲಯವಾರು ಸಾರ್ವಜನಿಕರ ಸಮಸ್ಯೆ ಆಲಿಸುವ ಬದಲು ವಾರ್ಡ್‌ವಾರು ಅಹವಾಲು ಕೇಂದ್ರಗಳ ಸ್ಥಾಪಿಸಲು ಸಮಿತಿ ರಚಿಸಬೇಕು, ಈ ಸಮಿತಿಯಲ್ಲಿ ಎಂಜಿನಿಯರ್‌ಗಳು ಸೇರಿ ಅಧಿಕಾರಿಗಳು ಭಾಗಿಯಾಗಬೇಕು ಎಂದು ಸೂಚಿಸಿದ್ದಾರೆ.

ಪ್ರವಾಹ ತಡೆಯಲು ಕೆರೆಗಳ ತೂಬುಗಳಿಗೆ ಗೇಟ್‌ ಅಳವಡಿಸಲು ಪಾಲಿಕೆಯಿದ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ ಎಂದು ವಕೀಲರು ಮಾಹಿತಿ ನೀಡಿದಾಗ, ಅದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳು, ಈ ದಿಸೆಯಲ್ಲಿ ಬಿಬಿಎಂಪಿ ಪ್ರಸ್ತಾವನೆ ಸಿದ್ಧಪಡಿಸಬೇಕು, ಇದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಮುಂದೂಡಿದ್ದಾರೆ.

ಇದನ್ನೂ ಓದಿ | Rain news | ಬೆಂಗಳೂರಿನಲ್ಲಿ ವರುಣನ ಆರ್ಭಟದ ನಡುವೆ ಟ್ರಾಫಿಕ್ ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ

Exit mobile version