ಬೆಂಗಳೂರು: ಚಾಮರಾಜಪೇಟೆ ಮೈದಾನ ವಿವಾದಕ್ಕೆ ಸಂಬಂಧಿಸಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ರಾಜ್ಯ ಹೈಕೋರ್ಟ್ ಮೌಖಿಕ ಆದೇಶ ನೀಡಿದೆ. ಹೀಗಾಗಿ ಈ ಬಾರಿ ಗಣೇಶೋತ್ಸವಕ್ಕೆ ಅವಕಾಶ ಸಿಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಮೈದಾನವನ್ನು ಕಂದಾಯ ಇಲಾಖೆಯ ಆಸ್ತಿ ಎಂದು ಘೋಷಿಸಿದ ಬಿಬಿಎಂಪಿ ಜಂಟಿ ಆಯುಕ್ತರ ಆದೇಶವನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಮಹತ್ವದ ಸೂಚನೆಯನ್ನು ನೀಡಿದೆ.
ಹೈಕೋರ್ಟ್ ಆದೇಶದ ಪ್ರಕಾರ ಸದ್ಯಕ್ಕೆ ವರ್ಷಕ್ಕೆ ಎರಡು ಬಾರಿ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆಗೆ ಮತ್ತು ಆಟದ ಮೈದಾನವಾಗಿ ಬಳಸಬಹುದು. ರಾಷ್ಟ್ರ ಧ್ವಜಾರೋಹಣಕ್ಕೆ ಯಾವುದೇ ಅನುಮತಿ ಬೇಕಾಗಿಲ್ಲ. ಆದರೆ, ಇದನ್ನು ಉಳಿದು ಬೇರೆ ಯಾವ ಉದ್ದೇಶಕ್ಕೂ ಬಳಸದೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು.
ಹೈಕೋರ್ಟ್‌ನ ಈ ಸೂಚನೆಯ ಬಗ್ಗೆ ಚಾಮರಾಜಪೇಟೆ ನಾಗರಿಕರ ವೇದಿಕೆ ಒಕ್ಕೂಟ ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಕಂಡುಬಂದಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ ೨೩ಕ್ಕೆ ನಿಗದಿ ಮಾಡಲಾಗಿದೆ.
ನ್ಯಾ. ಹೇಮಂತ್ ಚಂದನ್ ಗೌಡರ್ ಪೀಠದಲ್ಲಿ ವಿಚಾರಣೆ
ಚಾಮರಾಜಪೇಟೆ ಆಟದ ಮೈದಾನ ಮಾಲೀಕತ್ವಕ್ಕೆ ಸಂಬಂಧಿಸಿ ಬಿಬಿಎಂಪಿ ಜಂಟಿ ಆಯುಕ್ತರು ನೀಡಿದ ಆದೇಶವನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ಸಲ್ಲಿಸಿದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಪೀಠದಲ್ಲಿ ಗುರುವಾರ ನಡೆಯಿತು. ಅರ್ಜಿದಾರರ ಪರವಾಗಿ ವಕೀಲ ಜಯಕುಮಾರ್ ಪಾಟೀಲ್ ಹಾಜರಾಗಿದ್ದರೆ, ಸರ್ಕಾರದ ಪರವಾಗಿ ಎಜಿ ಪ್ರಭುಲಿಂಗ ನಾವಡಗಿ ಹಾಜರಾಗಿದ್ದರು.
ಚಾಮರಾಜ ಪೇಟೆ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂಬ ಬಿಬಿಎಂಪಿ ಜಂಟಿ ಆಯುಕ್ತರ ಆದೇಶ ಕಾನೂನು ಬದ್ಧವಾಗಿಲ್ಲ. ಹೀಗಾಗಿ ಆದೇಶದ ಕುರಿತು ಮಧ್ಯಂತ ಆದೇಶ ನೀಡಬೇಕು ಎಂದು ವಕ್ಫ್ ಬೋರ್ಡ್ ಪರ ವಕೀಲರು ಮನವಿ ಮಾಡಿದರು.
ಬೆಂಗಳೂರು ಮಹಾನಗರ ಪಾಲಿಕೆ ಹೊರಡಿಸಿರುವ ಆದೇಶದಲ್ಲಿ ಸರ್ವೇ ನಂಬರ್ ಉಲ್ಲೇಖಿಸಿಲ್ಲ ಎಂದು ಉಲ್ಲೇಖಿಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರು, ಆದೇಶಕ್ಕೆ ಕಾನೂನು ಬದ್ಧತೆ ಇದೆಯೇ ಎಂದು ಪ್ರಶ್ನಿಸಿದರು.
ಆಗ ಸರಕಾರದ ಪರವಾಗಿ ಮಾತನಾಡಿದ ಎಜಿ ಅವರು, ಸರಕಾರ 1967ರಲ್ಲಿ ಸುತ್ತೋಲೆ ಹೊರಡಿಸಿ ಮಾಲೀಕತ್ವ ಕ್ಲೈಂ ಮಾಡುವಂತೆ ಸೂಚಿಸಿತ್ತು. ಆದರೆ, ವಕ್ಫ್ ಬೋರ್ಡ್ ಇದುವರೆಗೂ ಕ್ಲೈಂ ಮಾಡಿಲ್ಲ ಎಂದರು.
ಯಥಾಸ್ಥಿತಿ ಕಾಪಾಡಲು ಆದೇಶ ನೀಡಿದ ಕೋರ್ಟ್
ವಕ್ಫ್ ಬೋರ್ಡ್ ವಕೀಲರು ಮತ್ತು ಸರಕಾರದ ಎಜಿ ವಾದ ಆಲಿಸಿದ ನ್ಯಾಯಮೂರ್ತಿಗಳು ಯಥಾಸ್ಥಿತಿ
ಕಾಪಾಡುವಂತೆ ಸೂಚಿಸಿದರು. ಆಟದ ಮೈದಾನ ಹೊರತುಪಡಿಸಿ ಯಾವುದೇ ಉದ್ದೇಶಕ್ಕೆ ಬಳಕೆ ಬೇಡ ಎಂದು ಸೂಚಿಸಿದ ನ್ಯಾಯಮೂರ್ತಿಗಳು, ಆಟದ ಮೈದಾನ ಆಗಿ ಮುಂದುವರಿಯಲು ನಿಮ್ಮ ತಕರಾರು ಇದೆಯೇ ಎಂದು ಅರ್ಜಿದಾರರನ್ನು ಪ್ರಶ್ನಿಸಿದರು.
ಆಗ ಅರ್ಜಿದಾರರ ಪರ ವಕೀಲರು, ಆಟದ ಮೈದಾನದ ಜೊತೆಗೆ ಎರಡು ಸಂದರ್ಭದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಿ ಸ್ವಾಮಿ, ಉಳಿದಂತೆ ನಮಗೆ ಯಾವುದೇ ತಕರಾರು ಇಲ್ಲ ಎಂದು ಹೇಳಿದರು. ಬಳಿಕ ಸರಕಾರದ ವಕೀಲರ ವಾದ ಕೇಳಿದ ಬಳಿಕ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದರು. ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಮಾಡಲು ಅವಕಾಶ ನೀಡಿದ ಕೋರ್ಟ್, ತ್ರಿವರ್ಣ ಧ್ವಜಾರೋಹಣಕ್ಕೆ ಯಾವುದೇ ಅನುಮತಿ ಬೇಕಿಲ್ಲ ಎಂದು ಹೇಳಿತು.