ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಸಂಸದ ಸ್ಥಾನದಿಂದ ಅಸಿಂಧು ಅದೇಶಕ್ಕೆ ತಾತ್ಕಾಲಿಕ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ಏಕಸದಸ್ಯ ಪೀಠ ಪೂರ್ಣಗೊಳಿಸಿದ್ದು, ಅರ್ಜಿ ತೀರ್ಪನ್ನು ಕಾಯ್ದಿರಿಸಿದೆ. ಸೋಮವಾರ ಅಥವಾ ಮಂಗಳವಾರ ತೀರ್ಪು ಪ್ರಕಟಿಸುವುದಾಗಿ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವವರೆಗೆ ಅಸಿಂಧು ಆದೇಶಕ್ಕೆ ತಡೆ ಕೋರಿ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ಶುಕ್ರವಾರ ನಡೆದಿದೆ. ನ್ಯಾಯಮೂರ್ತಿ ಕೆ. ನಟರಾಜನ್ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದು, ಸೋಮವಾರ ಅಥವಾ ಮಂಗಳವಾರ ತೀರ್ಪು ಪ್ರಕಟಿಸುವುದಾಗಿ ಮೌಖಿಕವಾಗಿ ಹೇಳಿದ್ದಾರೆ.
ಸಂಸದ ಸ್ಥಾನ ಅನರ್ಹಕ್ಕೆ ಕಾರಣವೇನು?
2019ರ ಲೋಕಸಭಾ ಚುನಾವಣೆ ವೇಳೆ ನಾಮಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರ (Prajwal Revanna) ಸಂಸತ್ ಸದಸ್ಯತ್ವ ಅನರ್ಹಗೊಳಿಸಿ ಸೆ.1ರಂದು ಹೈಕೋರ್ಟ್ ಆದೇಶ ನೀಡಿತ್ತು. ಹೀಗಾಗಿ ಮುಂದಿನ 6 ವರ್ಷಗಳ ಕಾಲ ಅವರು ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ.
ಇದನ್ನೂ ಓದಿ | BJP-JDS Coalition : ಹೊಂದಾಣಿಕೆ ರಾಜಕೀಯದ ಬಗ್ಗೆ ಈಗ ಯತ್ನಾಳ್, ಪ್ರತಾಪ್ ಸಿಂಹ ಏನಂತಾರೆ? ನೀವೇ ನೋಡಿ!
2019ರ ಲೋಕಸಭಾ ಚುನಾವಣೆ ವೇಳೆ ನಾಮಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಎ.ಮಂಜು ಮತ್ತು ದೇವರಾಜೇಗೌಡ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರಜ್ವಲ್ ರೇವಣ್ಣ ಅವರ ಸಂಸತ್ ಸದಸ್ಯತ್ವ ಅಸಿಂಧುಗೊಳಿಸಿ ಆದೇಶ ಹೊರಡಿಸಿತ್ತು.
ಇದೇ ವೇಳೆ ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಅಸಿಂಧುಗೊಳಿಸಿ ತಮ್ಮನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸುವಂತೆ ಎ.ಮಂಜು ಮನವಿ ಮಾಡಿದ್ದರು. ಆದರೆ, ಮನವಿಯನ್ನು ನ್ಯಾ. ಕೆ. ನಟರಾಜನ್ ಅವರಿದ್ದ ಪೀಠದಿಂದ ವಜಾಗೊಳಿಸಿತ್ತು. ಹೀಗಾಗಿ ಸಂಸದ ಸ್ಥಾನದಿಂದ ಅಸಿಂಧು ಅದೇಶಕ್ಕೆ ತಾತ್ಕಾಲಿಕ ತಡೆ ನೀಡಲು ಕೋರಿ ಪ್ರಜ್ವಲ್ ರೇವಣ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ | HD Kumaraswamy : ಸೆ. 10ಕ್ಕೆ ಜೆಡಿಎಸ್ ಸಮಾವೇಶವೆಂದ ಎಚ್‌ಡಿಕೆ; ಬಿಜೆಪಿ ಜತೆಗಿನ ಮೈತ್ರಿ ಪ್ರಸ್ತಾಪ?
ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪವೇನು?
ಪ್ರಜ್ವಲ್ ರೇವಣ್ಣ ಅವರು ಸರ್ಕಾರಿ ಜಮೀನು ಖರೀದಿಸಿದ್ದಾರೆ. ಆದಾಯ ತೆರಿಗೆ ವಂಚಿಸಿ ಬೇನಾಮಿ ಆಸ್ತಿ ಗಳಿಸಿದ್ದಾರೆ. ಹೊಳೆನರಸೀಪುರದಲ್ಲಿರುವ ಚೆನ್ನಾಂಬಿಕ ಕನ್ವೆನ್ಶನ್ ಸೆಂಟರ್ ಕಟ್ಟಡ ಕನಿಷ್ಠ 5 ಕೋಟಿ ರೂ. ಬೆಲೆ ಬಾಳುತ್ತದೆ. ಆದರೆ ಅದರ ಮೌಲ್ಯವನ್ನು 14 ರೂ. ಲಕ್ಷ ಎಂದು ತೋರಿಸಲಾಗಿದೆ. ಬೆಂಗಳೂರಿನ ಮಿನರ್ವ ಸರ್ಕಲ್ ಶಾಖೆಯ ಕರ್ನಾಟಕ ಬ್ಯಾಂಕ್ ಖಾತೆಯಲ್ಲಿ 48 ಲಕ್ಷ ರೂ. ಹೊಂದಿದ್ದರೂ ಕೇವಲ 5 ಲಕ್ಷ ಇದೆ ಎಂದು ನಾಮಪತ್ರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ದೇವರಾಜೇಗೌಡ ಆರೋಪಿದ್ದರು.