ಬೆಂಗಳೂರು: ದತ್ತು ಮಕ್ಕಳು ಕೂಡ ಸರ್ಕಾರದಿಂದ ಅನುಕಂಪದ ಆಧಾರದಲ್ಲಿ ನೀಡುವ ನೌಕರಿ(Compassionate Appointment) ಪಡೆಯಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ. ಸ್ವಂತ ಮಕ್ಕಳು ಮತ್ತು ದತ್ತು ಮಕ್ಕಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಒಂದು ವೇಳೆ ವ್ಯತ್ಯಾಸ ಮಾಡಿದ್ದೇ ಆದರೆ ದತ್ತು ತೆಗೆದುಕೊಳ್ಳುವ ಉದ್ದೇಶವೇ ನಿರರ್ಥಕವಾಗಲಿದೆ ಎಂದು ನ್ಯಾ, ಸೂರಜ್ ಗೋವಿಂದರಾಜ್, ನ್ಯಾ.ಜಿ.ಬಸವರಾಜ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
ಗಿರೀಶ್ ಎಂಬುವವರು ವಿನಾಯಕ ಮುತ್ತತ್ತಿ ಅವರ ದತ್ತುಪುತ್ರ ಆಗಿದ್ದಾರೆ. ಅಭಿಯೋಜನೆ ವಿಭಾಗದಲ್ಲಿ ವಿನಾಯಕ ಮುತ್ತತ್ತಿ ದಲಾಯತ್ ಆಗಿದ್ದರು. ಇವರು 2010ರಲ್ಲಿ ಮೃತಪಟ್ಟಿದ್ದರಿಂದ ಅನುಕಂಪದ ನೌಕರಿಗಾಗಿ ಪುತ್ರ ಗಿರೀಶ್ ಅರ್ಜಿ ಸಲ್ಲಿಸಿದ್ದರು. ಆದರೆ ದತ್ತು ಪುತ್ರನೆಂಬ ಕಾರಣಕ್ಕೆ ಅನುಕಂಪದ ನೌಕರಿ ನಿರಾಕರಿಸಲಾಗಿತ್ತು. ಈ ಬಗ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ 12 ವಾರದಲ್ಲಿ ಅನುಕಂಪದ ಹುದ್ದೆ ಕೋರಿದ ಅರ್ಜಿಯನ್ನು ಪರಿಗಣಿಸಿ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ತಂದೆ ಮೃತಪಟ್ಟಾಗ ಅನುಕಂಪದ ಆಧಾರದಲ್ಲಿ ನೌಕರಿ ನೀಡಬೇಕು ಎಂದು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಗೆ ಗಿರೀಶ್ ಅರ್ಜಿ ಸಲ್ಲಿಸಿದ್ದರು. ಆದರೆ, ದತ್ತು ಮಕ್ಕಳಿಗೆ ಅನುಕಂಪದಲ್ಲಿ ನೇಮಕಾತಿ ಮಾಡಿಕೊಳ್ಳುವುದಕ್ಕೆ ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಇಲಾಖೆ ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಗಿರೀಶ್ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ಇದನ್ನೂ ಓದಿ | Ola, uber tariff | ಆ್ಯಪ್ ಆಧರಿತ ಆಟೋರಿಕ್ಷಾ ಸೇವೆಗಳ ದರದ ಬಗ್ಗೆ ನವೆಂಬರ್ 25ರೊಳಗೆ ಅಂತಿಮ ನಿರ್ಧಾರ