ಬೆಂಗಳೂರು: ಹಾವೇರಿ ನಗರಸಭೆ ಕಾಮಗಾರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಹಣ ನಷ್ಟ ಉಂಟುಮಾಡಿದ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಎರಡು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿ ಅನರ್ಹತೆಯ ಭೀತಿ ಎದುರಿಸುತ್ತಿದ್ದ ಹಾವೇರಿ ಶಾಸಕ ನೆಹರು ಓಲೆಕಾರ್ ಅವರಿಗೆ ಜೀವದಾನ ಸಿಕ್ಕಿದೆ. ಪ್ರಕರಣದಲ್ಲಿ ಅವರನ್ನು ದೋಷಿ ಎಂದು ಸಾರಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪಿಗೆ ಹೈಕೋರ್ಟ್ (High court order) ತಡೆಯಾಜ್ಞೆ ನೀಡಿದೆ. ಈ ಮೂಲಕ ಯಾರಾದರೂ ಮನವಿ ಸಲ್ಲಿಸಿದ್ದರೆ ಎದುರಾಗಬಹುದಾಗಿದ್ದ ಅನರ್ಹತೆಯ ಭೀತಿಯೂ ದೂರಾಗಿದೆ. ನ್ಯಾ. ಕೆ. ನಟರಾಜನ್ ರವರಿದ್ದ ಹೈಕೋರ್ಟ್ ಪೀಠ ಈಗ ಶಿಕ್ಷೆಗೆ ತಡೆ ವಿಧಿಸಿದೆ.
ಜನಪ್ರತಿನಿಧಿಗಳಿಗೆ ಕ್ರಿಮಿನಲ್ ಪ್ರಕರಣದಲ್ಲಿ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆ ವಿಧಿಸಲ್ಪಟ್ಟರೆ ಅವರ ಆಯ್ಕೆ ಸ್ವಯಂಚಾಲಿತವಾಗಿ ಅನರ್ಹಗೊಳ್ಳುತ್ತದೆ ಎಂಬ ನಿಯಮದ ಅಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಅದಕ್ಕಿಂತಲೂ ಮೊದಲು ಶಿಕ್ಷೆಗೆ ಒಳಗಾಗಿದ್ದ ನೆಹರೂ ಓಲೆಕಾರ್ ಅವರನ್ನು ಯಾಕೆ ಅನರ್ಹಗೊಳಿಸಿಲ್ಲ ಎಂಬ ಪ್ರಶ್ನೆ ಚರ್ಚೆಗೆ ಒಳಗಾಗಿತ್ತು. ಶಿಕ್ಷೆಯ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯ ಪ್ರಾಥಮಿಕ ವಿಚಾರಣೆ ಸಂದರ್ಭದಲ್ಲಿ ಸ್ವತಃ ನ್ಯಾಯಮೂರ್ತಿಗಳೇ ಈ ಪ್ರಶ್ನೆಯನ್ನು ಕೇಳಿದ್ದರು. ಅದರೆ, ಅಂತಿಮವಾಗಿ ಅವರಿಗೆ ಜೀವದಾನ ಸಿಕ್ಕಂತಾಗಿದೆ.
ಹಾವೇರಿ ನಗರಸಭೆ ಕಾಮಗಾರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಹಣ ನಷ್ಟ ಉಂಟುಮಾಡಿದ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ನೆಹರೂ ಓಲೆಕಾರ್ ಅವರನ್ನು ದೋಷಿ ಎಂದು ತೀರ್ಮಾನಿಸಿದ್ದಲ್ಲದೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.
ಇದು ಕೆಲವು ಸಮಯದ ಹಿಂದೆ ನೀಡಿದ ತೀರ್ಪಾಗಿದ್ದರೂ ರಾಹುಲ್ ಪ್ರಕರಣದ ನಂತರ ಹೆಚ್ಚು ಮಹತ್ವವನ್ನು ಪಡೆದುಕೊಂಡಿತ್ತು. ನೆಹರೂ ಓಲೆಕಾರ್ ಅವರು ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಹೈಕೋರ್ಟ್ ಮೊರೆ ಹೊಕ್ಕಿದ್ದರು. ಕೋರ್ಟ್ ಬುಧವಾರ ಈ ಕುರಿತ ತೀರ್ಪು ಪ್ರಕಟಿಸಿದೆ.
2012ರಲ್ಲಿ ನಡೆದ ಈ ಹಗರಣಕ್ಕೆ ಸಂಬಂಧಿಸಿ ಕೋರ್ಟ್ ಕಳೆದ ಫೆಬ್ರವರಿ 13ರಂದು ತೀರ್ಪು ನೀಡಿತ್ತು. ನೆಹರೂ ಓಲೆಕಾರ್, ಅವರ ಇಬ್ಬರು ಪುತ್ರರು ಮತ್ತು ಐವರು ಅಧಿಕಾರಿಗಳನ್ನು ದೋಷಿಗಳೆಂದು ಘೋಷಿಸಿತ್ತು. ಎರಡು ವರ್ಷಗಳ ಸರಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿತ್ತಾದರೂ ನೆಹರೂ ಓಲೆಕಾರ್ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಯಾವಾಗ ರಾಹುಲ್ ಗಾಂಧಿ ಪ್ರಕರಣ ಮೇಲೆದ್ದು ಬಂದು ಅನರ್ಹತೆ ಶಿಕ್ಷೆ ನೀಡಲಾಯಿತೋ, ಯಾವಾಗ ಪ್ರತಿಪಕ್ಷಗಳು ಸ್ವಯಂಚಾಲಿತ ಅನರ್ಹತೆ ಎಂದಾದರೆ ನೆಹರೂ ಓಲೆಕಾರ್ ಯಾಕೆ ಅನರ್ಹಗೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದರ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ತರಾತುರಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ : Nehru Olekar Case: ನೆಹರೂ ಓಲೆಕಾರ್ ಅವರನ್ನು ಶಾಸಕತ್ವದಿಂದ ಇನ್ನೂ ಯಾಕೆ ಅನರ್ಹಗೊಳಿಸಿಲ್ಲ ಎಂದು ಕೇಳಿದ ಹೈಕೋರ್ಟ್!