ಬೆಂಗಳೂರು: ರಾಜ್ಯಾದ್ಯಂತ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವ ತರಾತುರಿಯಲ್ಲಿರುವ ರಾಜ್ಯ ಸರ್ಕಾರಕ್ಕೆ ಈಗ ಮತ್ತೊಂದು ಬಿಸಿ ತಟ್ಟಿದೆ. ಈಗಾಗಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಪ್ರತಿ ಯುನಿಟ್‌ಗೆ 70 ಪೈಸೆ ಹೆಚ್ಚಳ ಮಾಡಿದೆ. ಇದರಿಂದ ವಿದ್ಯುತ್ ಬಿಲ್‌ನಲ್ಲಿ ಭಾರಿ ಹೆಚ್ಚಳವಾಗಿರುವುದಕ್ಕೆ (Electricity Bill) ವಿವಿಧೆಡೆ ರಾಜ್ಯ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಬಡವರ ಮೇಲೆ ಹೊರೆ ಹಾಕುವುದೇ ಸರ್ಕಾರದ ಕೆಲಸ
ವಿಜಯನಗರ: ವಿದ್ಯುತ್ ದರ ಏರಿಕೆ ವಿರೋಧಿಸಿ ಹೊಸಪೇಟೆಯಲ್ಲಿ ಸರ್ಕಾರದ ವಿರುದ್ಧ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ. 200-300 ರೂಪಾಯಿ ಬರುತ್ತಿದ್ದ ವಿದ್ಯುತ್ ದರ 600-800 ರೂಪಾಯಿ ಬರುತ್ತಿದೆ. ನಮಗೆ ಬರುವುದೇ ತಿಂಗಳಿಗೆ 8 ರಿಂದ 10 ಸಾವಿರ ರೂಪಾಯಿ ಸಂಬಳ. ಈ ರೀತಿ ವಿದ್ಯುತ್ ಬಿಲ್ ಬಂದರೆ ನಾವು ಹೇಗೆ ಕಟ್ಟಬೇಕು? ಸರ್ಕಾರ ಫ್ರೀ ಎಂದು ಹೇಳುತ್ತಿದೆ, ಎಲ್ಲಿದೆ ಫ್ರೀ ಎಂದು ಮಹಿಳೆಯರು ಸರ್ಕಾರವನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಕರೆಂಟ್ ಬಿಲ್ ಕಟ್ಟುವುದು ಗಂಡಸರೇ ಇರಬಹುದು, ಆದರೆ, ಮನೆ ನಡೆಸಿಕೊಂಡು ಹೋಗುವುದು ಮಹಿಳೆಯರು. ಏಕಾಏಕಿ ಬಿಲ್ ದುಪ್ಪಟ್ಟಾಗಿದೆ. ಜನರಿಗೆ ಅದನ್ನು ಫ್ರೀ ಕೊಟ್ಟಿದ್ದೇವೆ, ಇದನ್ನು ಫ್ರೀ ಕೊಟ್ಟಿದ್ದೇವೆ ಅಂತ ಹೇಳುವುದು, ಆಮೇಲೆ ನಮ್ಮಂತ ಬಡವರ ಮೇಲೆ ಹೊರೆ ಹಾಕುವುದು ಸರ್ಕಾರದ ಕೆಲಸ. ಈ ರೀತಿಯ ಸರ್ಕಾರವನ್ನು ಯಾರೂ ಇಷ್ಟನೇ ಪಡುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ | H.D. Kumaraswamy: ಇದು 40+5 ಪರ್ಸೆಂಟ್ ಕಮಿಷನ್ ಸರ್ಕಾರ: ಕಾಂಗ್ರೆಸ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್!
ಸರ್ಕಾರ ಬಂದು ಕೇವಲ ಒಂದು ತಿಂಗಳಾಗಿದೆ. ಆದರೆ, ಒಂದೇ ತಿಂಗಳಿನಲ್ಲಿ ರಾಜ್ಯದ ಜನ ಬೇಸತ್ತಿದ್ದಾರೆ. ಕರೆಂಟ್ ಬಿಲ್ ನೋಡಿದ ಕೂಡಲೇ ಸರ್ಕಾರದ ಮೇಲೆ ಬೇಸರ ಬರುತ್ತದೆ. ದುಡಿದು ತಿಂದರೂ ಪರವಾಗಿಲ್ಲ, ವಿದ್ಯುತ್ ದರ ಏರಿಕೆ ನೋಡಿ ಶಾಕ್ ಆಗಿದೆ. ಕರೆಂಟ್ ಬಿಲ್ ಜಾಸ್ತಿ ಬರುವುದರಿಂದ ಟಿವಿ, ಫ್ಯಾನ್ ಆಫ್ ಮಾಡಿಕೊಂಡು ಮಲಗಬೇಕಾ? ಸರ್ಕಾರ ವಿದ್ಯುತ್ ದರ ಇಳಿಕೆ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ವಿಜಯಪುರದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ
ವಿಜಯಪುರ: ಹೆಸ್ಕಾಂ ಕೊಟ್ಟ ದುಬಾರಿ ಬಿಲ್ ನೋಡಿ ಶಾಕ್ ಆಗಿರುವ ನಗರದ ಮಹಿಳೆಯರು, ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಗರದ ಜೋರಾಪುರ ಪೇಟೆ ಬಣಗಾರ ಗಲ್ಲಿ ನಿವಾಸಿಗಳು, ನಾವು ಕರೆಂಟ್ ಬಿಲ್ ಕಟ್ಟಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಧಿಕ್ಕಾರ ಎಂದು ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ನಾವೆಲ್ಲಾ ಬಡ ಮಧ್ಯಮ ವರ್ಗದ ಜನತೆ. ಕಷ್ಟಪಟ್ಟು ದುಡಿದು ದಿನನಿತ್ಯದ ಹೊಟ್ಟೆ ತುಂಬಿಸಿಕೊಳ್ಳುವವರು. ಹೀಗೆ ದುಬಾರಿ ಬಿಲ್ ಶಾಕ್ ಕೊಟ್ಟಿರುವುದು ಅನ್ಯಾಯ. ಎಲ್ಲರೂ ಒಗ್ಗಟ್ಟಾಗಿದ್ದೇವೆ, ಬಿಲ್ ಕಟ್ಟಂಗಿಲ್ಲ ಅಂದ್ರೆ ಕಟ್ಟಂಗಿಲ್ಲ.. ವಿದ್ಯುತ್ ಸಂಪರ್ಕ ಕಟ್ ಮಾಡ್ತಾರಾ ಮಾಡಲಿ. ದೀಪ ಹಚ್ಚಿಕೊಂಡು ಕಾಲ ಕಳೆಯುತ್ತೇವೆ ಎಂದು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಪ್ರದರ್ಶಿಸಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಗ್ಯಾರಂಟಿ ಸರ್ಕಾರಕ್ಕೆ ಹಿಡಿಶಾಪ ಹಾಕಿದರು.
ಮೊದಲೇ ದಿನಸಿ, ಗ್ಯಾಸ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದೇವೆ. ಈ ಬಾರಿ ಪ್ರತಿ ತಿಂಗಳಿಗಿಂತ ವಿದ್ಯುತ್ ಬಿಲ್ ದ್ವಿಗುಣಗೊಂಡಿದೆ ಎಂದು ಹೆಸ್ಕಾಂ ವಿರುದ್ಧ ಗ್ರಾಹಕರು ಆಕ್ರೋಶ ಹೊರಹಕಿದರು. ಪ್ರತಿ ತಿಂಗಳು ದುಡಿಯವ ಮಾಸಿಕ ಸಂಬಳದಲ್ಲಿ ಎರಡು ಮೂರು ದಿನ ಕರೆಂಟ್ ಬಿಲ್‌ಗಾಗಿಯೇ ನಾವು ದುಡಿಯಬೇಕಾ? ನಮ್ಮಂತಹ ಬಡಜನರ ಗೋಳು ಹೇಳತೀರದಾಗಿದೆ. ಗ್ಯಾರಂಟಿ ಯೋಜನೆಗಳ ಆಶ್ವಾಸನೆ ಮೇಲೆ ಅಧಿಕಾರಕ್ಕೆ ಬಂದ ಸರ್ಕಾರ ನುಡಿದಂತೆ ನಡೆಯಬೇಕು. ಬಡಜನರ ಕುರಿತಾಗಿ ಇನ್ನಾದರೂ ಕಾಳಜಿವಹಿಸಬೇಕು ಎಂದು ಆಗ್ರಹಿದ್ದಾರೆ.
ಇದನ್ನೂ ಓದಿ | Loksabha 2024: ಹೇ ಕೂತ್ಕೊಳಪ್ಪ, ಮೋದಿ ಸೋತಾಗ ಗೊಬ್ಬರದ ರೇಟ್ ಕಡಿಮೆ ಮಾಡ್ತೀವಿ: ಅಭಿಮಾನಿಗೆ ರೇಗಿದ ಸಿಎಂ ಸಿದ್ದರಾಮಯ್ಯ
ವಿದ್ಯುತ್ ಬಿಲ್ ನೋಡಿ ರೈತರ ಆಕ್ರೋಶ
ಹಾವೇರಿ: ಜೂನ್ ತಿಂಗಳ ವಿದ್ಯುತ್ ಬಿಲ್ ನೋಡಿ ಜಿಲ್ಲೆಯ ರೈತರು ಸಿಡಿದೆದ್ದಿದ್ದಾರೆ. 200 ಬರುತ್ತಿದ್ದ ಬಿಲ್ 600 ರಿಂದ 800 ರೂಪಾಯಿ ಬಂದಿದೆ ಎಂದು ಎರಡರಿಂದ ಮೂರು ಪಟ್ಟು ಬಿಲ್ ಹೆಚ್ಚಳಕ್ಕೆ ರೈತರು ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲೆ ಬ್ಯಾಡಗಿ ತಾಲೂಕಿನ ಹೊಸ ಶಿಡೇನೂರು ಗ್ರಾಮದಲ್ಲಿ ರೈತರು, ಸರ್ಕಾರದ ವಿರುದ್ಧ ಕಿಡಿಕಾರಿದ್ದು, ತಾವು ಬಿಲ್ ಕಟ್ಟುವುದಿಲ್ಲ. ಗ್ರಾಮದಲ್ಲಿ ಬಿಲ್ ನೀಡಬಾರದು ಎಂದು ವಿದ್ಯುತ್ ಬಿಲ್ ಕಲೆಕ್ಟರ್‌ಗೆ ಎಚ್ಚರಿಕೆ ನೀಡಿದ್ದಾರೆ.