Site icon Vistara News

Teachers alcohol party | ಕ್ಲಾಸ್‌ಗೆ ಚಕ್ಕರ್‌ ಹಾಕಿ ಮಧ್ಯಾಹ್ನವೇ ಎಣ್ಣೆ ಪಾರ್ಟಿಗೆ ಹಾಜರ್‌: ಇದು ಹಟ್ಟಿಯ ಶಿಕ್ಷಕರ ಗ್ಯಾಂಗ್‌ ಸ್ಟೋರಿ!

Yenne party

ರಾಯಚೂರು:‌ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕಾದ ಶಿಕ್ಷಕರೇ ನಡು ಮಧ್ಯಾಹ್ನ ಬಾರ್‌ಗಳಲ್ಲಿ ಕುಳಿತು ಮತ್ತೇರಿಸುತ್ತಿರುವ ಘಟನೆ ರಾಯಚೂರು ಜಿಲ್ಲೆಯ ಹಟ್ಟಿಯಲ್ಲಿ ನಡೆದಿದೆ. ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕ್ಯಾಂಪಿನ ಪ್ರೌಢ ಶಾಲೆಯ ಶಿಕ್ಷಕರು ಪ್ರತಿ ದಿನ ಮಧ್ಯಾಹ್ನ ಈ ರೀತಿ ಮೋಜು (Teachers alcohol party) ಮಾಡುತ್ತಿರುವುದನ್ನು ಸ್ವತಃ ಪೋಷಕರೇ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ. ನೋಡಲು ಸಂಭಾವಿತರಂತೆ ಕಾಣುವ ಈ ಶಿಕ್ಷಕರ ಮೋಜಿನ ವರ್ತನೆಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು ಅಮಾನತು ಮಾಡಬೇಕು ಎಂದು ಡಿಡಿಪಿಐ ಮತ್ತು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕ್ಲಾಸಿಗೆ ಚಕ್ಕರ್‌ ಪಾರ್ಟಿಗೆ ಹಾಜರ್‌!
ಹಟ್ಟಿ ಪ್ರೌಢ ಶಾಲಾ ಮುಖ್ಯಗುರುಗಳಾದ ಮುರಳೀಧರ ರಾವ್ ನೇತೃತ್ವದಲ್ಲೇ ಈ ಪಾರ್ಟಿ ನಡೆಯುತ್ತಿದೆ ಎಂದು ಆಪಾದಿಸಲಾಗಿದೆ. ಶಿಕ್ಷಕರಾದ ದೈ.ಶಿ ಚನ್ನಪ್ಪ ರಾಠೋಡ್, ಲಿಂಗಪ್ಪ ಪೂಜಾರ, ಕೇಶವ್ ಕುಮಾರ್, ಅಬ್ದುಲ್ ಅಜೀಜ್ ಅವರಿಗೆ ಪಾರ್ಟಿಯಲ್ಲಿ ಸಹವರ್ತಿಗಳು!

ಇವರು ಮಧ್ಯಾಹ್ನ ಊಟಕ್ಕೆಂದು ಬಿಟ್ಟ ಅವಧಿಯಲ್ಲಿ ಬಾರ್‌ಗಳಿಗೆ ಹೋಗಿ ಮೋಜು ಮಸ್ತಿ ಮಾಡುತ್ತಾರೆ ಎಂದು ಆಪಾದಿಸಲಾಗಿದೆ. ಹಾಗೆ ಹೋದವರು ಎಷ್ಟೋ ಗಂಟೆಗಳ ಕಾಲ ಮರಳಿ ಬರುವುದಿಲ್ಲ. ಬಂದರೂ ಕೆಲವೊಮ್ಮೆ ಪಾಠ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಹೀಗಾಗಿ ಬಹುತೇಕ ಸಂದರ್ಭದಲ್ಲಿ ಮಧ್ಯಾಹ್ನದ ನಂತರ ಕ್ಲಾಸ್‌ಗಳೇ ಇರುವುದಿಲ್ಲ.

ಕ್ಲಾಸ್‌ಗೆ ಚಕ್ಕರ್‌ ಹಾಕಿ ಬೇರೆ ಬೇರೆ ಬಾರ್‌ಗಳಿಗೆ ಹೋಗುವ ಈ ಶಿಕ್ಷಕರ ಬಗ್ಗೆ ಸಾರ್ವಜನಿಕವಾಗಿಯೂ ಚರ್ಚೆ ನಡೆಯುತ್ತಿತ್ತು. ನಡು ಮಧ್ಯಾಹ್ನವೇ ಈ ರೀತಿ ಕುಡಿತಕ್ಕೆ ದಾಸರಾದರೆ ಇವರು ಮಕ್ಕಳಿಗೆ ಏನು ಪಾಠ ಮಾಡಬಹುದು ಎಂದು ಜನರೂ ಕೇಳುತ್ತಿದ್ದರು. ಈ ವಿಚಾರಗಳನ್ನು ಗಮನಿಸಿದ ಪೋಷಕರಲ್ಲಿ ಕೆಲವರು ಜತೆಯಾಗಿ ಇವರ ಕುಡಿತದ ಚಟುವಟಿಕೆಗಳನ್ನು ವಿಡಿಯೊ ಮಾಡಿದ್ದಾರೆ. ಜತೆಗೆ ಜಿಪಿಎಸ್‌ ಅಳವಡಿಸಿ ತರಗತಿಗೆ ನಿಗದಿಯಾದ ಸಂದರ್ಭದಲ್ಲಿ ಶಾಲೆಯಲ್ಲಿ ಯಾರೂ ಇಲ್ಲದಿರುವ ಚಿತ್ರಗಳನ್ನು ತೆಗೆದಿದ್ದಾರೆ.

ಸ್ಕೂಲ್‌ ಟೈಮಲ್ಲಿ ಕ್ಲಾಸೆಲ್ಲ ಖಾಲಿ!

ಈ ಚಿತ್ರಗಳು ಮತ್ತು ವಿಡಿಯೊವನ್ನು ಬಿಡುಗಡೆ ಮಾಡಿದ್ದು, ಅದೀಗ ಎಲ್ಲ ಕಡೆ ವೈರಲ್‌ ಆಗಿದೆ. ಶಿಕ್ಷಕರನ್ನು ಅಮಾನತು ಮಾಡಬೇಕು ಎಂಬ ಕೂಗು ಜೋರಾಗಿದೆ.

ಇದನ್ನೂ ಓದಿ | Crime news | ಮಗನಿಂದಲೇ ತಾಯಿಯ ಹತ್ಯೆ: ಕುಡಿತಕ್ಕೆ ಹಣ ಕೊಡಲಿಲ್ಲ ಎಂಬ ಸಿಟ್ಟಿನಲ್ಲಿ ಹೊಡೆದೇ ಕೊಂದ!

Exit mobile version