ಬೆಂಗಳೂರು: 2017ರಲ್ಲಿ ರಾಜ್ಯಾದ್ಯಂತ ಸುದ್ದಿಯಾಗಿದ್ದ ಸೆಂಟ್ರಲ್ ಜೈಲು ಅವ್ಯವಸ್ಥೆ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ತಮ್ಮ ವಿರುದ್ಧ ₹2 ಕೋಟಿ ಆರೋಪ ಹಾಗೂ ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಮೂಲಕ ಮಾನನಷ್ಟ ಉಂಟುಮಾಡಿದ್ದಾರೆ ಏಂದು ಕಾರಾಗೃಹ ಡಿಜಿಪಿ ಸತ್ಯನಾರಾಯಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದುಪಡಿಸಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳ ನಡುವೆ ಅನೇಕ ವರ್ಷಗಳಿಂದ ನಡೆಯುತ್ತಿದ್ದ ವಿವಾದಕ್ಕೆ ತೆರೆ ಬಿದ್ದಂತಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ್ದರಿಂದ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಅವರ ಜತೆಗೆ ಆಪ್ತೆ ಶಶಿಕಲಾ ಸಹ ಇದ್ದರು. ಜಯಲಲಿತಾ ಹಾಗೂ ಶಶಿಕಲಾ ಅವರಿಗೆ ಸತ್ಯನಾರಾಯಣ ಅವರು ವಿಶೇಷ ಸೌಲಭ್ಯ ನೀಡಿದ್ದಾರೆ, ಇದಕ್ಕಾಗಿ ಲಂಚ ಪಡೆದಿದ್ದಾರೆ ಎನ್ನುವುದು ಸೇರಿ ಜೈಲು ಅವ್ಯವಸ್ಥೆ ಬಗೆಗ ವಿಸ್ತೃತ ವರದಿಯನ್ನು ಮೇಲಧಿಕಾರಿಗಳಿಗೆ ರೂಪಾ ಸಲ್ಲಿಕೆ ಮಾಡಿದ್ದರು.
ಪ್ರಮುಖವಾಗಿ, ಜೈಲಿನಿಂದ ಹೊರಗಡೆ ಚಿಕಿತ್ಸೆಗೆ ಸೂಚಿಸುವಂತೆ ವೈದ್ಯರಿಗೆ ಕೈದಿಗಳಿಂದ ಜೀವ ಬೆದರಿಕೆ, ಔಷಧಾಲಯಕ್ಕೆ ಕೈದಿಗಳ ನಿಯೋಜನೆ, ಅವರಿಂದಲೇ ನಿದ್ರೆ ಮಾತ್ರೆಗಳ ದುರುಪಯೋಗ, ಜೂನ್ 23ರಂದು ನರ್ಸ್ಗೆ ಕಿರುಕುಳ ಕೊಟ್ಟ ಕೈದಿ ಮೇಲೆ ಕ್ರಮ ಕೈಗೊಂಡಿಲ್ಲ, ಜೂನ್ 29ರಂದು ಕಾರಾಗೃಹದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಸಂಬಂಧ ಕ್ರಮ ಕೈಗೊಂಡಿಲ್ಲ, ಕೈದಿಗಳು ದಾಖಲೆ ಕೊಠಡಿಯಲ್ಲಿ ಕೆಲಸ ಮಾಡುತ್ತಿರುವುದು, ಕೈದಿಗಳಿಂದ ದಾಖಲೆಗಳ ದುರ್ಬಳಕೆ, ಜೈಲಿಗೆ ಭೇಟಿ ನೀಡುತ್ತಿರುವುದನ್ನು ಪ್ರಶ್ನಿಸುತ್ತಿರುವುದು, ಜೈಲಿನಲ್ಲಿ ಗಾಂಜಾ ಬಳಕೆಯನ್ನು ತಡೆಯುವಲ್ಲಿ ವಿಫಲ. 25 ಕೈದಿಗಳ ಪೈಕಿ 18 ಜನರಲ್ಲಿ ಗಾಂಜಾ ಅಂಶ, ತೆಲಗಿ ಐಷಾರಾಮಿ ಸೌಲಭ್ಯ ಪಡೆಯುತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು, ವಿಶೇಷ ಆತಿಥ್ಯ ನೀಡಲು ಶಶಿಕಲಾರಿಂದ 2 ಕೋಟಿ ಲಂಚ ಪಡೆದಿರುವುದು ಸೇರಿ ಅನೇಕ ಆರೋಪಗಳನ್ನು ರೂಪಾ ಮಾಡಿದ್ದರು.
ಈ ಕುರಿತು ವಿಚಾರಣೆ ನಡೆಸಿದನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ, ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ವಜಾಗೊಳಿಸಿದೆ.