Site icon Vistara News

Highway Robbery | ಹೈವೇ ರಾಬರಿಯಲ್ಲಿ ತೊಡಗಿದ್ದ ನಕಲಿ ಪೊಲೀಸ್‌ ಇನ್ಫಾರ್ಮರ್‌ ಬಂಧನ

Highway Highway Robbery

ಚಿಕ್ಕಬಳ್ಳಾಪುರ: ಇಲ್ಲಿನ ಚಿಕ್ಕಬಳ್ಳಾಪುರ-ಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಪೊಲೀಸ್‌ ಮಾಹಿತಿದಾರರೆಂಬ ಸೋಗಿನಲ್ಲಿ ರಾಬರಿ ಮಾಡುತ್ತಿದ್ದ ಹೈವೇ ರಾಬರಿಕೋರರನ್ನು (Highway Robbery) ಬಂಧಿಸಲಾಗಿದೆ.

ಕಳೆದ ಡಿಸೆಂಬರ್‌ 13ರಂದು ಮುಂಜಾನೆ 4:30ರ ಸುಮಾರಿಗೆ ಬಾಗೇಪಲ್ಲಿ ಹೈವೇ ಬಳಿಯ ಕೀರ್ತಿ ಹೈಟೆಕ್ ಡಾಬಾ ಮುಂಭಾಗದಲ್ಲಿ ಶಂಕರದತ್ತ ಮತ್ತು ಮುರಳಿ ಶರ್ಮ ಎಂಬುವವರು ಕಾರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಪೊಲೀಸ್‌ ಇನ್ಫಾರ್ಮರ್‌ ಎಂದು ಬಂದ ದರೋಡೆಕೋರರು ಎರಡು ಚಿನ್ನದ ಚೈನ್‌, ಹಣ ಮತ್ತು ವಾಚ್‌ ಅನ್ನು ಸುಲಿಗೆ ಮಾಡಿದ್ದಾರೆ.

ಈ ಸಂಬಂಧ ನಂದಿ ಗಿರಿಧಾಮ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ತಂಡ ರಚಿಸಿದ ಪೊಲೀಸರು ಖತರ್ನಾಕ್‌ ಗ್ಯಾಂಗ್‌ ಅನ್ನು ಕೇವಲ 24 ಗಂಟೆಯಲ್ಲಿ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಗಂಗಾಧರ್ (31), ರತೀಶ್ ಕುಮಾರ್ (27), ಅರುಣ್ ಕುಮಾರ್ (29) ಧರೋಡೆಕೋರರಾಗಿದ್ದಾರೆ. ಆರೋಪಿಗಳಿಂದ ಎರಡು ಚಿನ್ನದ ಸರ ,ಒಂದು ಕಾರು, ಎರಡು ಚಾಕು ಸೇರಿದಂತೆ ಆರು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಆಂದ್ರಪ್ರದೇಶದಲ್ಲೂ ಕೈಚಳಕ ತೋರಿದ್ದ ಗ್ಯಾಂಗ್‌
ಆರೋಪಿ ಗಂಗಾಧರ್‌ ಮೇಲೆ ವಿವಿಧ ಪೊಲೀಸ್‌ ಠಾಣೆಯಲ್ಲಿ 19 ಪ್ರಕರಣಗಳು ದಾಖಲಾಗಿವೆ. ಡೈವರ್‌ ಕೆಲಸ ಮಾಡಿಕೊಂಡಿರುವ ಈ ಗಂಗಾಧರ್‌ ಪೊಲೀಸ್ ಮಾಹಿತಿದಾರನೆಂದು ಹೇಳಿಕೊಂಡು ಕೃತ್ಯವೆಸಗುತ್ತಿದ್ದ. ಈತನ ವಿರುದ್ಧ ಆಂಧ್ರಪ್ರದೇಶದ ಮದನಪಲ್ಲಿ, ಚಾಮರಾಜನಗರ, ದೊಡ್ಡಬಳ್ಳಾಪುರ, ಉಡುಪಿ, ಬಳ್ಳಾರಿ, ಶಿವಮೊಗ್ಗ, ಚಿಕ್ಕಬಳ್ಳಾಪುರ ಸೇರಿ ಬೆಂಗಳೂರು ಕಡೆಗಳಲ್ಲಿ ಕಳವು, ಮನೆಗಳ್ಳತನ, ಸುಲಿಗೆ ಮುಂತಾದ ಒಟ್ಟು 19 ಪ್ರಕರಣಗಳು ದಾಖಲಾಗಿವೆ.

ಮತ್ತೊಬ್ಬ ಆರೋಪಿ ರತೀಶ್‌ ಕುಮಾರ್‌ ಡೆಲಿವರಿ ಬಾಯ್‌ ಆಗಿದ್ದು, ಈತನ ವಿರುದ್ಧವು ಆಂಧ್ರಪ್ರದೇಶದ ಪುಂಗನೂರು, ಕೋಲಾರ, ಶ್ರೀರಂಗಪಟ್ಟಣ, ಮಂಡ್ಯ ಕಡೆಗಳಲ್ಲಿ ಒಟ್ಟು 5 ಸುಲಿಗೆ ಮತ್ತು ಡಕಾಯಿತಿ ಪ್ರಕರಣಗಳು ದಾಖಲಾಗಿವೆ. ಇನ್ನು ಕೋಲಾರದ ನಿವಾಸಿ ಆಗಿರುವ ಅರುಣ್‌ ಕುಮಾರ್‌ ಆಟೋ ಡ್ರೈವರ್‌ ಆಗಿದ್ದು, ಬೆಂಗಳೂರು ಸೂರ್ಯನಗರ, ಬೇಗೂರು, ಕೋಲಾರ, ಮಾಲೂರು, ಆನೇಕಲ್‌ ಹಾಗೂ ನಾಗಮಂಗಲ ಕಡೆಗಳಲ್ಲಿ ಕೊಲೆ, ಸುಲಿಗೆ, ಡಕಾಯಿತಿಯಂತಹ ಒಟ್ಟು 9 ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಹೈವೇ ದರೋಡೆಕೋರರಲ್ಲಿ ಎ-4 ಆರೋಪಿ ವಿಜಿ ಎಂಬಾತ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಇದನ್ನೂ ಓದಿ | ಮೂಗ ಭಿಕ್ಷುಕನಿಗೆ ಡಿಕ್ಕಿ ಹೊಡೆದ ಬೈಕ್​; ಗಾಯಗೊಂಡ ಆತನ ಕಿಸೆಯಲ್ಲಿ ಸಿಕ್ಕ ಹಣ ನೋಡಿ ಪೊಲೀಸರಿಗೇ ಅಚ್ಚರಿ!

Exit mobile version