Site icon Vistara News

Highway robbery : ಯುವಕ-ಯುವತಿಯನ್ನು ಅಡ್ಡಗಟ್ಟಿ ಬೈಕ್‌, ಐಫೋನ್‌ ಕಿತ್ತುಕೊಂಡು ಹೋದ ಮೂವರು ಸುಲಿಗೆಕೋರರು ಅರೆಸ್ಟ್‌

High way robbery

#image_title

ಉಳ್ಳಾಲ(ಮಂಗಳೂರು): ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಯನ್ನು ಅಡ್ಡಗಟ್ಟಿ, ಐ-ಪೋನ್ ಮತ್ತು ಬೈಕನ್ನ ದೋಚಿದ್ದ ಮೂವರು ಖದೀಮರನ್ನು ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ (Highway robbery) ನಡೆಸಿ ಬಂಧಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಬಳಿ ಈ ಘಟನೆ ನಡೆದಿತ್ತು.

ಸೋಮವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಯುವಕ ಮತ್ತು ಯುವತಿ ಬೈಕಲ್ಲಿ ಜತೆಯಾಗಿ ತೆರಳುತ್ತಿದ್ದರು. ಈ ವೇಳೆ ಎರಡು ಸ್ಕೂಟರಲ್ಲಿ ಬಂದ ಮೂವರು ಖದೀಮರು‌ ಉಚ್ಚಿಲದ ಜಿಯೋ ಪೆಟ್ರೋಲ್ ಪಂಪ್ ಬಳಿ ಅವರನ್ನು ಅಡ್ಡಗಟ್ಟಿದರು.

ಯುವಕ ಮತ್ತು ಯುವತಿಯನ್ನು ಬೆದರಿಸಿದ ಸುಲಿಗೆಕೋರರು ಯುವತಿ ಕೈಯಲ್ಲಿದ್ದ ಬೆಲೆ ಬಾಳುವ ಐ-ಫೋನ್ ಕಿತ್ತುಕೊಂಡಿದ್ದರು. ಮೋಟಾರು ಬೈಕನ್ನೂ ಕೂಡಾ ಕಸಿದುಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ಬೈಕ್ ಸವಾರ ಅಬ್ದುಲ್ಲ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಉಳ್ಳಾಲ ಬಸ್ತಿಪಡ್ಪು ನಿವಾಸಿ ಝಾಕೀರ್ ಹುಸೇನ್‌ ಅಲಿಯಾಸ್ ಶಾಕೀರ್-ಜಾಹೀರ್(27), ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿ ಮಹಮ್ಮದ್ ಉಬೈದುಲ್ಲಾ ಅಲಿಯಾಸ್ ಉಬ್ಬಿ (33), ಉಳ್ಳಾಲ ಮೇಲಂಗಡಿ ನಿವಾಸಿ ಇಬ್ರಾಹಿಮ್ ಖಲೀಲ್ ಅಲಿಯಾಸ್ ಖಲೀಲ್(22) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾಗಿದ್ದ 2 ಸ್ಕೂಟರ್ ಗಳು, ಸುಲಿಗೆ ನಡೆಸಿದ್ದ ಐಫೋನ್‌ ಮತ್ತು ಯಮಹಾ ಮೋಟಾರು ಬೈಕನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು ಆರೋಪಿಗಳನ್ನು ನಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮಂಗಳೂರು ನಗರ ಪೊಲೀಸ್‌ ಆಯುಕ್ತರಾದ ಕುಲದೀಪ್ ಜೈನ್ ಮಾರ್ಗದರ್ಶನದ ಮೇರೆಗೆ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್ ಮತ್ತು ಉಪನಿರೀಕ್ಷಕರಾದ ಕೃಷ್ಣ ಕೆ.ಎಚ್ ,ಸಂತೋಷ್ ಮತ್ತು ಪಿಸಿಗಳಾದ ಪ್ರವೀಣ ಶೆಟ್ಟಿ, ಅಶೋಕ್, ವಾಸುದೇವ ಸಿಬ್ಬಂದಿಗಳ ತಂಡ ಪ್ರಕರಣವನ್ನು ಶೀಘ್ರದಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದೆ.

ಈ ಭಾಗದಲ್ಲಿ ಇತ್ತೀಚೆಗೆ ವಾಹನಗಳ ಕಳ್ಳತನ ಹೆಚ್ಚಾಗಿದ್ದು, ಅದಕ್ಕೆ ಹೆದ್ದಾರಿ ದರೋಡೆಯೂ ಸೇರಿಕೊಂಡಂತಾಗಿದೆ. ಪೊಲೀಸರು ಈ ದರೋಡೆ ಪ್ರಕರಣವನ್ನು ತ್ವರಿತವಾಗಿ ಪತ್ತೆ ಹಚ್ಚಿದ್ದನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ಈ ಭಾಗದಲ್ಲಿ ಹೈವೇ ಪ್ಯಾಟ್ರೋಲಿಂಗ್‌ ಹೆಚ್ಚಿಸುವಂತೆ, ಬೈಕ್‌ ಕಳವು ಪ್ರಕರಣಗಳನ್ನು ಕೂಡಾ ಪತ್ತೆ ಹಚ್ಚುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : Bike theft : ಉಳ್ಳಾಲದಲ್ಲಿ ಸರಣಿ ಬೈಕ್‌ ಕಳ್ಳತನ, ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳರಿಗಾಗಿ ಪೊಲೀಸರ ಹುಡುಕಾಟ!

Exit mobile version