ಮಂಗಳೂರು: ಹಿಜಾಬ್ (Hijab Controversy) ವಿವಾದದ ಹಿನ್ನೆಲೆಯಲ್ಲಿ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರದ ಹೊರತು ಇತರೆ ಯಾವುದೇ ಧಾರ್ಮಿಕ ಉಡುಪುಗಳನ್ನು ಧರಿಸುವಂತಿಲ್ಲ ಎಂದು ಕೋರ್ಟ್ ಆದೇಶ ಬಂದಿರುವ ಕಾರಣ, ಈಗ ಮಂಗಳೂರಿನಲ್ಲಿ ಮುಸ್ಲಿಂ ಕಾಲೇಜುಗಳ ಸ್ಥಾಪನೆಗೆ ಬೇಡಿಕೆ ಹೆಚ್ಚಿದೆ.
ಹಿಜಾಬ್ (HIJAB) ವಿವಾದವು ಮಂಗಳೂರಿನಲ್ಲಿ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಹುಟ್ಟಿಗೆ ಕಾರಣವಾಗುತ್ತಿದೆ ಎನ್ನಲಾಗುತ್ತಿದ್ದು, ಪಿಯು ಬೋರ್ಡ್‌ಗೆ ಬಂದಿರುವ ಅರ್ಜಿಗಳು ಇದನ್ನು ಪುಷ್ಟೀಕರಿಸುತ್ತವೆ. ಹಿಜಾಬ್ (HIJAB) ವಿವಾದದ ಬೆನ್ನಲ್ಲೇ ಮುಸ್ಲಿಮರಿಂದ ಪಿಯು ಕಾಲೇಜು ಸ್ಥಾಪನೆಗೆ ಆಸಕ್ತಿ ಹೆಚ್ಚಿದೆ.
ಇದನ್ನೂ ಓದಿ | ಹಿಜಾಬ್ ವಿವಾದ ಬಳಿಕ ಉಡುಪಿಯಲ್ಲಿ ಹೆಚ್ಚಾಯ್ತು ಮುಸ್ಲಿಂ ಕಾಲೇಜುಗಳಿಗೆ ಬೇಡಿಕೆ
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುಮಾರು 13 ಮುಸ್ಲಿಂ ಆಡಳಿತ ಮಂಡಳಿಗಳಿಂದ ಹೊಸ ಪಿಯು ಕಾಲೇಜುಗಳ ಸ್ಥಾಪನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಈ ಬಾರಿ ಬಂದಿರುವ 14 ಅರ್ಜಿಗಳ ಪೈಕಿ 13 ಮುಸ್ಲಿಂ ಶಿಕ್ಷಣ ಸಂಸ್ಥೆಗಳದ್ದೇ ಆಗಿದೆ. ಇತ್ತ 14 ಅರ್ಜಿಗಳ ಪೈಕಿ 2 ಕಾಲೇಜಿಗಷ್ಟೇ ಪಿಯು ಕಾಲೇಜು ಸ್ಥಾಪಿಸಲು ಪಿಯು ಬೋರ್ಡ್ ಅನುಮತಿ ನೀಡಿದೆ.
ಗುರುಪುರದ ಮುಸ್ಲಿಂ ಮತ್ತು ಸುಬ್ರಹ್ಮಣ್ಯದ ಒಂದು ಮುಸ್ಲಿಮೇತರ ಆಡಳಿತದ ಕಾಲೇಜಿಗೆ ಅನುಮತಿ ಸಿಕ್ಕಿದ್ದು, ಉಳಿದ 12 ಮುಸ್ಲಿಂ ಆಡಳಿತದ ಕಾಲೇಜಿನ ಅನುಮತಿ ಅರ್ಜಿಗಳು ಮೂಲಭೂತ ಸೌಕರ್ಯ ಸೇರಿ ನಾನಾ ಕಾರಣಗಳಿಗೆ ತಿರಸ್ಕರಿಸಿದೆ. ಈ ನಿಟ್ಟಿನಲ್ಲಿ ಸೂಕ್ತ ದಾಖಲೆ ಸಲ್ಲಿಸಿ ಮುಂದಿನ ವರ್ಷ ಅರ್ಜಿ ಸಲ್ಲಿಸುವಂತೆ ಪಿಯು ಬೋರ್ಡ್ ಸೂಚನೆ ನೀಡಿದೆ.
ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಹಲವೆಡೆ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಬರಲು ಹಿಂದೇಟು ಹಾಕುತ್ತಿದ್ದು, ಇದೀಗ ಖಾಸಗಿ ಮುಸ್ಲಿಂ ಕಾಲೇಜುಗಳಿಗೆ ಬೇಡಿಕೆ ಹೆಚ್ಚಿದೆ. ಮಂಗಳೂರಿನಲ್ಲಿ ಮುಸ್ಲಿಂ ಕಾಲೇಜು ಸ್ಥಾಪನೆಗೆ ಉದ್ಯಮಿಗಳು ಉತ್ಸಾಹ ತೋರುತ್ತಿದ್ದಾರೆ.
ಇದನ್ನೂ ಓದಿ | ಮತ್ತೆ ಮುನ್ನೆಲೆಗೆ ಬಂದ ಹಿಜಾಬ್: ಗರ್ಲ್ಸ್ ಕಾನ್ಫರೆನ್ಸ್ ಮೂಲಕ ಸಿಎಫ್‌ಐ ಶಕ್ತಿ ಪ್ರದರ್ಶನ