ಬೆಂಗಳೂರು: ರಾಜ್ಯದಲ್ಲಿ ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿನಿಯರು ಹಿಜಾಬ್ ಧರಿಸಬಾರದು (Hijab Row) ಎಂಬ ವಿಚಾರದಲ್ಲಿ ಸಾಕಷ್ಟು ವಾದ ವಿವಾದ, ತೀರ್ಪುಗಳು ಬಂದಿವೆ. ಅದರ ನಡುವೆಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority- KEA) ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಒದಗಿಸಿದೆ.
ಅಕ್ಟೋಬರ್ 28 ಮತ್ತು 29ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗಾಗಿ (Examination on October 28, 29) ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲಿರುವ ಪರೀಕ್ಷೆಗೆ ಹಿಜಾಬ್ ಧರಿಸಿ ಹಾಜರಾಗಲು ಅನುಮತಿ ನೀಡಲಾಗಿದೆ. ಆದರೆ ಅದಕ್ಕೆ ಷರತ್ತು ವಿಧಿಸಲಾಗಿದೆ.
ಹಿಜಾಬ್ ಧರಿಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಪರೀಕ್ಷೆ ಆರಂಭವಾಗುವುದಕ್ಕೆ ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಅವರು ಮಹಿಳಾ ಸಿಬ್ಬಂದಿಯಿಂದ ತಪಾಸಣೆಗೆ ಒಳಪಡಬೇಕಾಗುತ್ತದೆ ಎಂದು ಪರೀಕ್ಷಾ ಪ್ರಾಧಿಕಾರ ತಿಳಿಸಿದೆ
ಪರೀಕ್ಷೆಗೆ ಹಾಜರಾಗುವವರು ಪ್ರವೇಶ ಪತ್ರ, ಇತ್ತೀಚಿನ ಪಾಸ್ ಪೋರ್ಟ್ ಅಳತೆಯ 2 ಫೋಟೋ, ಸರ್ಕಾರ ಮಾನ್ಯ ಮಾಡಿರುವ ಗುರುತಿನ ಚೀಟಿ ತರಬೇಕು. ಪರೀಕ್ಷೆ ಮುಗಿಯುವವರೆಗೂ ಹೊರ ಹೋಗಲು ಅವಕಾಶವಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಈ ನಿಯಮಗಳು ಹಿಂದಿನಿಂದಲೂ ಇವೆ ಮತ್ತು ಅದನ್ನೇ ಯಥಾವತ್ತಾಗಿ ಮುಂದುವರಿಸಲಾಗಿದೆ.
ಏನಿದು ಹಿಜಾಬ್ ವಿವಾದ? ಈಗ ಪರಿಸ್ಥಿತಿ ಹೇಗಿದೆ?
2022ರ ಜನವರಿಯಲ್ಲಿ ಉಡುಪಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಅರು ಮಂದಿ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡುತ್ತಿಲ್ಲ ಎಂದು ಆಕ್ಷೇಪಿಸುವುದರೊಂದಿಗೆ ಜಿಜಾಬ್ ವಿವಾದ ರಾಜ್ಯದಲ್ಲಿ ತಲೆ ಎತ್ತಿತ್ತು. ಬಳಿಕ ಅದು ರಾಜ್ಯಾದ್ಯಂತ ಹರಡಿತ್ತು. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದರೆ ತಾವು ಕೇಸರಿ ಶಾಲು ಧರಿಸಿ ಬರುವುದಾಗಿ ಹಿಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದರು.
ಈ ಪ್ರಕರಣದ ಹೈಕೋರ್ಟ್ ಮೆಟ್ಟಿಲೇರಿದಾಗ ಹೈಕೋರ್ಟ್ ಇದು ಆಯಾ ಶಾಲೆ, ಕಾಲೇಜಿನ ಸಮವಸ್ತ್ರ ಸಂಹಿತೆಗೆ ಸಂಬಂಧಿಸಿದ ವಿಷಯ ಎಂದು ತೀರ್ಪು ನೀಡಿತ್ತು. ಸರ್ಕಾರ ಕೂಡಾ ಹಿಜಾಬ್ ಧರಿಸಬಾರದು ಎಂಬ ನಿಲುವನ್ನು ಪ್ರಕಟಿಸಿತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದಾಗಲೂ ಹೆಚ್ಚಿನ ವ್ಯತ್ಯಾಸವೇನೂ ಆಗಲಿಲ್ಲ.
ಇದನ್ನೂ ಓದಿ: Hijab Row: ಮಕ್ಕಳಿಗೆ ಹಿಜಾಬ್ ತೊಡಿಸಿ ಮಸೀದಿಗೆ ಕರೆದುಕೊಂಡು ಹೋದ ಪ್ರಾಂಶುಪಾಲ ಸಸ್ಪೆಂಡ್!
ಈ ನಡುವೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಹಿಜಾಬ್ ನೀತಿಯಲ್ಲಿ ಬದಲಾವಣೆ ಮಾಡಲಿದೆ ಎಂಬ ಸುದ್ದಿ ಹರಡಿತ್ತು. ಆದರೆ, ಸರ್ಕಾರ ಇದುವರೆಗೆ ಅದರ ಗೋಜಿಗೆ ಹೋಗಿಲ್ಲ. ರಾಜ್ಯದಲ್ಲಿ ನಡೆಯುವ ಯಾವುದೇ ಶಾಲೆ, ಕಾಲೇಜುಗಳ ಪರೀಕ್ಷೆಗಳಿಗೆ ಹಿಜಾಬ್ ಧರಿಸಿ ಹಾಜರಾಗುವಂತಿಲ್ಲ ಎಂಬ ನಿಯಮ ಈಗ ಜಾರಿಯಲ್ಲಿದೆ. ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪರೀಕ್ಷೆಗೆ ಈ ವಿವಾದ ಬಾಧಿಸಿಲ್ಲ. ಇದು ಯಾವುದೇ ಕಾಲೇಜು ಆಡಳಿತ ಮಂಡಳಿಯ ನಿರ್ಧಾರಕ್ಕೆ ಒಳಪಟ್ಟಿಲ್ಲ ಮತ್ತು ಸಾರ್ವತ್ರಿಕ ಪರೀಕ್ಷೆಯಾಗಿರುವುದರಿಂದ ಹಿಂದಿನ ನೀತಿಯೇ ಜಾರಿಯಲ್ಲಿದೆ.