Site icon Vistara News

ಹಿಜಾಬ್‌ ವಿವಾದ: ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ ಸುಪ್ರೀಂ, ಅರ್ಜಿದಾರರಿಗೆ ತೀವ್ರ ತರಾಟೆ

ನವದೆಹಲಿ: ಮುಸ್ಲಿಂ ಮಹಿಳೆಯರು ಧರಿಸುವ ಹಿಜಾಬ್‌ ಇಸ್ಲಾಂ ಧಾರ್ಮಿಕ ಪದ್ಧತಿಯಲ್ಲಿ ಅನಿವಾರ್ಯ ಭಾಗವೇನೂ ಅಲ್ಲ ಎಂಬ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ೨೩ ಅರ್ಜಿಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ ಸೋಮವಾರ ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ. ಕಳೆದ ಮಾರ್ಚ್‌ನಿಂದಲೇ ಬಾಕಿ ಉಳಿದಿರುವ ಈ ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್‌ ಐದರಂದು ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಪೀಠ ಪ್ರಕಟಿಸಿದೆ. ಇದರ ನಡುವೆಯೇ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದ ಅರ್ಜಿದಾರರನ್ನು ಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಜಸ್ಟಿಸ್‌ ಉದಯ್‌ ಯು. ಲಲಿತ್‌ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಸೋಮವಾರ ಮೊದಲ ಬಾರಿಗೆ ಕಲಾಪ ನಡೆಸಿದರು. ಹಿಜಾಬ್‌ ವಿಚಾರಣೆ ನ್ಯಾಯಮೂರ್ತಿಗಳಾದ ಹೇಮಂತ್‌ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಿದೆ. ನ್ಯಾಯಮೂರ್ತಿಗಳು ಹಿಜಾಬ್‌ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ರಾಜ್ಯ ಸರಕಾರಕ್ಕೆ ನೋಟಿಸ್‌ ನೀಡಿದರು. ಅದರ ಜತೆಗೆ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್‌ ೫ಕ್ಕೆ ನಿಗದಿಪಡಿಸಿದರು.

ಗರಂ ಆದ ನ್ಯಾಯಮೂರ್ತಿಗಳು
ಈ ನಡುವೆ, ಅರ್ಜಿದಾರರು ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದ್ದಾರಲ್ಲವೇ ಎಂಬ ವಿಚಾರವನ್ನು ಸರಕಾರದ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೇಳಿದರು. ಇದರಿಂದ ಪೀಠ ಗರಂ ಆಯಿತು. ʻʻಇದನ್ನು ಒಪ್ಪಲು ಸಾಧ್ಯವಿಲ್ಲ. ನೀವು ಮೊದಲು ಅರ್ಜೆಂಟ್‌ ಲಿಸ್ಟಿಂಗ್‌ ಮಾಡುವಂತೆ ಒತ್ತಡ ಹೇರುತ್ತಿದ್ದೀರಿ. ನಾವು ಲಿಸ್ಟ್‌ ಮಾಡಿದಾಗ ಮುಂದೂಡಿ ಅಂತೀರಲ್ಲಾ.. ನಾವು ಈ ರೀತಿಯ ಫಾರಂ ಶಾಪ್ಪಿಂಗ್‌ (ಮಾರ್ಕೆಟ್‌ ತಂತ್ರ) ಒಪ್ಪುವುದಿಲ್ಲʼʼ ಎಂದು ಹೇಳಿದರು.

ಏನಿದು ಪ್ರಕರಣ?
೨೦೨೨ರ ಜನವರಿ ೧ರಂದು ಉಡುಪಿ ಸರಕಾರಿ ಪದವಿಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರು ತಮಗೆ ಹಿಜಾಬ್‌ ಧರಿಸಿ ಕ್ಲಾಸಿಗೆ ತೆರಳಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸುವುದರೊಂದಿಗೆ ಈ ವಿವಾದ ಬೆಳಕಿಗೆ ಬಂದಿತ್ತು. ಯಾವುದೇ ಮಾತುಕತೆ, ಸಂಧಾನಗಳಿಗೆ ಬಗ್ಗದ ವಿದ್ಯಾರ್ಥಿನಿಯರು ಹಲವು ವಾರಗಳ ಕಾಲ ಕಾಲೇಜಿನ ಅಂಗಳದಲ್ಲೇ ಉಳಿದು ಪ್ರತಿಭಟಿಸಿದರು. ಈ ಸಂಬಂಧ ಜನವರಿ ೩೧ರಂದು ರಾಜ್ಯ ಹೈಕೋರ್ಟ್‌ಗೆ ದಾವೆ ಸಲ್ಲಿಸಿ ಹಿಜಾಬ್‌ ಧರಿಸಲು ಅವಕಾಶ ಕೋರುವುದರೊಂದಿಗೆ ಪ್ರಕರಣ ಕೋರ್ಟ್‌ ಮೆಟ್ಟಿಲು ಹತ್ತಿತು. ಇದರ ನಡುವೆ ವಿವಾದ ರಾಜ್ಯ ಮಾತ್ರವಲ್ಲ ದೇಶದ ನಾನಾ ಕಡೆಗಳಿಗೆ ಹರಡಿ ಪರ-ವಿರುದ್ಧ ಭಾರಿ ಪ್ರತಿಭಟನೆ ನಡೆದಿತ್ತು.

ರಾಜ್ಯ ಸರಕಾರ ನಿಗದಿ ಮಾಡಿದ ಸಮವಸ್ತ್ರ ಸಂಹಿತೆಯಲ್ಲಿ ಹಿಜಾಬ್‌ನ ಉಲ್ಲೇಖವಿಲ್ಲ ಎನ್ನುವುದು ವಿದ್ಯಾರ್ಥಿನಿಯರ ವಾದವಾಗಿದ್ದರೆ, ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಹಕ್ಕು ಶಾಲಾಭಿವೃದ್ಧಿ ಸಮಿತಿಗಳಿಗೆ ಇವೆ ಎಂದು ಸರಕಾರ ತಿಳಿಸಿತ್ತು. ಅಂತಿಮವಾಗಿ ಹಿಜಾಬ್‌ ಧರಿಸುವುದು ಧಾರ್ಮಿಕ ಹಕ್ಕು ಎಂಬ ವಿಚಾರಕ್ಕೆ ಬಂದಾಗ ಹೈಕೋರ್ಟ್‌ ಮಹತ್ವದ ತೀರ್ಪನ್ನು ನೀಡಿತ್ತು. ಹಿಜಾಬ್‌ ಧಾರಣೆಗೆ ಧಾರ್ಮಿಕ ಮಹತ್ವವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದನ್ನು ಆಧರಿಸಿ ರಾಜ್ಯ ಸರಕಾರದ ಶಿಕ್ಷಣ ಇಲಾಖೆ, ಶಾಲೆ ಕಾಲೇಜುಗಳಲ್ಲಿ ಹಿಜಾಬ್‌ ಧಾರಣೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಅದು ಪ್ರಸಕ್ತ ಜಾರಿಯಲ್ಲಿದೆ.

ಈ ನಡುವೆ, ಮಾರ್ಚ್‌ ೧೫ರಂದು ರಾಜ್ಯ ಹೈಕೋರ್ಟ್‌ ನೀಡಿದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಅದರ ತುರ್ತು ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿತ್ತು.

ಅರ್ಜಿದಾರರಾದ ನಿಬಾ ನಾಜ್‌ ಪರವಾಗಿ ಹಿರಿಯ ವಕೀಲರಾದ ಸಂಜಯ್‌ ಹೆಗ್ಡೆ ಮತ್ತು ಐಶತ್‌ ಶಿಫಾ ಅವರ ಪರವಾಗಿ ದೇವದತ್ತ ಕಾಮತ್‌ ಅವರು ಮಾರ್ಚ್‌ ೨೬ರಂದು ಮನವಿ ಮಾಡಿದ್ದರೂ ಸಿಜೆಐ ಅವರು ಯಾವುದೇ ದಿನಾಂಕ ನಿಗದಿಗೆ ಮನಸು ಮಾಡಿರಲಿಲ್ಲ. ಮಾರ್ಚ್‌ ೨೪ರಂದು ಮತ್ತೊಮ್ಮೆ ಮನವಿ ಸಲ್ಲಿಸಿದಾಗ ʻʻಹಿಜಾಬ್‌ ನಿಷೇಧಕ್ಕೂ ಶಾಲಾ ಪರೀಕ್ಷೆಗಳಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಈ ವಿಚಾರದಲ್ಲಿ ಭಾವೋದ್ರೇಕಗೊಳಿಸಬೇಡಿʼ ಎಂದು ಹೇಳಿದ್ದರು. ಅದೇ ವೇಳೆ ಮಧ್ಯಪ್ರವೇಶ ಮಾಡಿದ ಕರ್ನಾಟಕ ಸರಕಾರದ ವಾದಿಸುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ತುರ್ತು ವಿಚಾರಣೆಯ ಅವಶ್ಯಕತೆ ಇಲ್ಲ ಎಂದಿದ್ದರು.

ಏಪ್ರಿಲ್‌ ೨೬ರಂದು ಸಿಜೆಐ ಅವರ ಮುಂದೆ ಮತ್ತೊಮ್ಮೆ ಮನವಿ ಮಾಡಿದಾಗ ವಿಚಾರಣೆ ದಿನಾಂಕ ನಿಗದಿ ಮಾಡುವ ಬಗ್ಗೆ ಪರಿಗಣಿಸಲಾಗುವುದು ಎಂದು ಹೇಳಿದ್ದರು. ಆದರೆ ಯಾವುದೇ ಮುನ್ನಡೆ ಕಾಣಲಿಲ್ಲ. ಈ ನಡುವೆ, ಮೇ ೨೩ರಿಂದ ಜುಲೈ ೧೦ರವರೆಗೆ ನ್ಯಾಯಾಲಯಕ್ಕೆ ಬೇಸಿಗೆ ರಜೆ ಇತ್ತು. ಈ ವೇಳೆ ತುರ್ತು ಪ್ರಕರಣಗಳನ್ನು ಮಾತ್ರ ಪರಿಗಣಿಸಲಾಗಿತ್ತು. ನ್ಯಾಯಾಲಯದ ಬೇಸಿಗೆ ರಜೆ ಕಳೆದು ಮರು ಆರಂಭವಾದಾಗ ವಕೀಲರಾದ ಪ್ರಶಾಂತ್‌ ಭೂಷಣ್‌ ಅವರು ಮತ್ತೊಮ್ಮೆ ಮುಖ್ಯ ನ್ಯಾಯಾಧೀಶ ಎನ್‌.ವಿ. ರಮಣ ಅವರಲ್ಲಿ ವಿಚಾರ ಪ್ರಸ್ತಾಪಿಸಿದಾಗ ಜುಲೈ ಅಂತ್ಯಕ್ಕೆ ವಿಚಾರಣೆ ನಿಗದಿ ಮಾಡುವುದಾಗಿ ಹೇಳಿದ್ದರು. ಆದರೆ, ಅದು ಕೂಡಾ ಫಲ ನೀಡಿರಲಿಲ್ಲ. ಆದರೆ, ಈಗ ಆಗಸ್ಟ್‌ ೨೯ರಂದು ವಿಚಾರಣೆಗೆ ದಿನ ನಿಗದಿ ಮಾಡಲಾಗಿದೆ. ಸೆಪ್ಟೆಂಬರ್‌ ೫ರಂದು ವಿಚಾರಣೆ ನಡೆಯಲಿದೆ.

‌ ಹಿಂದಿನ ಸುದ್ದಿ| ಹಿಜಾಬ್‌ ವಿವಾದ: ಸುಪ್ರೀಂಕೋರ್ಟ್‌ನಲ್ಲಿ ಮುಂದಿನ ವಾರ ವಿಚಾರಣೆ ಆರಂಭ

Exit mobile version