ಬೆಳಗಾವಿ: ಮೊದಲು ಮೊಘಲರು ಭಾರತ ದುರ್ಬಲಗೊಳಿಸುವ ಕೆಲಸ ಮಾಡುತ್ತಿದ್ದರು. ಇಂದು ಕಾಂಗ್ರೆಸ್ ನವಭಾರತವನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನವರು ಹೊಸ ಮೊಘಲರಾಗಿದ್ದಾರೆ, ದೇಶವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.
ಬೆಳಗಾವಿಯಲ್ಲಿ ಶಿವಚರಿತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ನಮ್ಮ ಭಾರತ ಹೊಸ ಮಾರ್ಗದಲ್ಲಿ ಹೋಗುತ್ತಿದೆ. ನಮ್ಮ ಜೀವಮಾನದಲ್ಲಿ ಯಾರೂ ರಾಮಮಂದಿರ ನಿರ್ಮಾಣ ಆಗುತ್ತದೆ ಎಂದು ಯೋಚಿಸಿರಲಿಲ್ಲ. ಮೋದಿ ಸರ್ಕಾರದಿಂದ ರಾಮ ಮಂದಿರ ನಿರ್ಮಾಣ ಸಾಧ್ಯವಾಗಿದೆ. ನವಭಾರತ ಆರ್ಥಿಕತೆ ಬ್ರಿಟನ್‌ಗಿಂತ ಹೆಚ್ಚಿದೆ. ಪಾಕಿಸ್ತಾನಕ್ಕೆ ಒಳನುಗ್ಗಿ ಉಗ್ರರ ಸದೆಬಡೆಯುತ್ತಿದೆ. ರಾಮಮಂದಿರ ನಿರ್ಮಾಣ ಆಗುತ್ತದೆ ಎಂದರೆ ಕಾಂಗ್ರೆಸ್‌ನವರಿಗೆ ಆಪತ್ತು ಎದುರಾಗುತ್ತೆ. ಕಾಂಗ್ರೆಸ್‌ನವರೇನು ಮೊಘಲರ ಮಕ್ಕಳೇ ಎಂದು ಅವರು ಟೀಕಿಸಿದರು.
ಶಿವಾಜಿ ಮಹಾರಾಜರು, ಸ್ವಾಮಿ ವಿವೇಕಾನಂದ, ಕಿತ್ತೂರು ರಾಣಿ ಚೆನ್ನಮ್ಮ ಕನಸು ಕಂಡಿದ್ದ ಭಾರತ ನಿರ್ಮಾಣ ಆಗಬೇಕು. ಮೋದಿ ನೇತೃತ್ವದಲ್ಲಿ ಭಾರತ ಹೊಸ ಇತಿಹಾಸ ನಿರ್ಮಾಣ ಮಾಡುತ್ತಿದೆ. ನೀವು 600 ಮದರಸಾ ಬಂದ್ ಮಾಡಿದಿರಿ, ನಿಮ್ಮ ಉದ್ದೇಶ ಏನು ಎಂದು ಮಾಧ್ಯಮದವರು ನನ್ನನ್ನು ಸಂದರ್ಶನದಲ್ಲಿ ಕೇಳಿದರು. ಎಲ್ಲಾ ಮದರಸಾ ಬಂದ್ ಮಾಡುವುದು ನನ್ನ ಉದ್ದೇಶ ಎಂದಿದ್ದೆ. ನಮಗೆ ಮದರಸಾ ಅವಶ್ಯಕತೆ ಇಲ್ಲ, ಡಾಕ್ಟರ್ ಇಂಜಿನಿಯರ್‌ಗಳನ್ನು ಸಿದ್ಧಪಡಿಸುವ ಶಾಲಾ ಕಾಲೇಜುಗಳ ಅವಶ್ಯಕತೆ ಇದೆ ಎಂದಿದ್ದೆ ಎಂದರು.
ತಿರುಚಿದ ಇತಿಹಾಸವನ್ನು ತಿರಸ್ಕರಿಸಿ ಹೊಸ ಇತಿಹಾಸ ಬರೆಯುವ ಸಮಯ ಬಂದಿದೆ. ನಾವು ಹಿಂದೂಗಳು ಒಂದಾಗಿದ್ದರೆ ಜಗತ್ತಿನಲ್ಲಿ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ನುಡಿದರು.
ಇದನ್ನೂ ಓದಿ: Himanta Biswa Sarma: ಹೆಣ್ಣುಮಕ್ಕಳು 22 ವರ್ಷದ ನಂತರವೇ ಗರ್ಭ ಧರಿಸಲಿ, ಅಸ್ಸಾಂ ಸಿಎಂ ಸಲಹೆ