Site icon Vistara News

Himavad Gopalaswamy Betta : ಒಮ್ಮೆಯಾದರೂ ನೋಡಲೇಬೇಕು ಹಿಮವದ್‌ ಗೋಪಾಲಸ್ವಾಮಿ ಬೆಟ್ಟ!

Himavad Gopalaswamy Betta

ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವುದು ಹಿಮವದ್‌ ಗೋಪಾಲಸ್ವಾಮಿ ಬೆಟ್ಟ(Himavad Gopalaswamy Betta). ಸಮುದ್ರ ಮಟ್ಟದಿಂದ 1454 ಮೀಟರ್‌ ಎತ್ತರದಲ್ಲಿರುವ ಈ ಬೆಟ್ಟ ಬಂಡೀಪುರ ರಾಷ್ಟ್ರೀಯ ಉದ್ಯಾನನಕ್ಕೆ ಹತ್ತಿರದಲ್ಲಿಯೇ ಇದೆ. ಕೃಷ್ಣನ ರೂಪವಾದ ವೇಣು ಗೋಪಾಲಸ್ವಾಮಿಗೆ ಈ ಬೆಟ್ಟದ ಮೇಲೆ ಪೂಜೆ ಮಾಡಲಾಗುತ್ತದೆ. ಮಂಜಿನಿಂದ ಆವೃತವಾದ ಈ ಬೆಟ್ಟ ಧಾರ್ಮಿಕ ಮಹತ್ವ ಹೊಂದಿರುವುದು ಮಾತ್ರವಲ್ಲದೆ, ನಿಸರ್ಗ ಪ್ರೇಮಿಗಳಿಗೂ ಹೆಚ್ಚಾಗಿ ಇಷ್ಟವಾಗುವಂತದ್ದಾಗಿದೆ.

ಹೆಸರಿನ ಮಹತ್ವ ಏನು?


ಗೋಪಾಲಸ್ವಾಮಿ ಬೆಟ್ಟಕ್ಕೆ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ಎನ್ನುವ ಹೆಸರು ಏಕೆ ಬಂದಿರಬಹುದು ಎನ್ನುವ ಯೋಚನೆಯನ್ನು ನೀವು ಮಾಡುತ್ತಿರಬಹುದು. ಈ ಬೆಟ್ಟ ವರ್ಷ ಪೂರ್ತಿ ಹಿಮಾವೃತವಾಗಿರುತ್ತದೆ. ಅದೇ ಕಾರಣಕ್ಕೆ ಅದಕ್ಕೆ ಹಿಮವದ್‌ ಎನ್ನುವ ಹೆಸರನ್ನೂ ಸೇರಿಸಿಕೊಂಡು ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ಎಂದು ಕರೆಯಲಾಗುತ್ತದೆ.

ಎಲ್ಲಿದೆ?
ಚಾಮರಾಜನಗರ ಜಿಲ್ಲೆಯಲ್ಲಿರುವ ಈ ಬೆಟ್ಟ ರಾಜ್ಯ ರಾಜಧಾನಿ ಬೆಂಗಳೂರಿನಿಂದ 220 ಕಿ.ಮೀ ದೂರದಲ್ಲಿದೆ. ಹಾಗೆಯೇ ಮೈಸೂರಿನಿಂದ 80 ಕಿ.ಮೀ ದೂರದಲ್ಲಿದೆ.

ಇತಿಹಾಸ ಮತ್ತು ಜಾತ್ರೆ


ಈ ದೇವಾಲಯವನ್ನು ಕ್ರಿ.ಶ 1315ರಲ್ಲಿ ಚೋಳ ರಾಜ ಬಲ್ಲಾಳ ನಿರ್ಮಿಸಿದನು. ಪ್ರತಿ ವರ್ಷ ಇಲ್ಲಿ ಜಾತ್ರಾ ಉತ್ಸವ ನಡೆಸಲಾಗುತ್ತದೆ. ಏಳು ದಿನಗಳ ಕಾಲ ಉತ್ಸವ ನಡೆಯುತ್ತದೆ. ಪ್ರತಿ ವರ್ಷ ಜಾತ್ರೆಗೆಂದು ರಥ ತಯಾರಿಸಿ, ಜಾತ್ರೆ ಮುಗಿದಾಗ ಅದನ್ನು ವಿಸರ್ಜಿಸಲಾಗುತ್ತದೆ. ದೇವಸ್ಥಾನದಿಂದ ಒಂದು ಕಿ.ಮೀ ದೂರದಲ್ಲಿ ಬಂಡೆಯೊಂದನ್ನು ಕಾಣಬಹುದು. ಮಕ್ಕಳಾಗದವರಿಗೆ ಇಲ್ಲಿ ಪೂಜೆ ಮಾಡಿದರೆ (ಸಂತಾನ ಪ್ರಾಪ್ತಿ) ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ನಿಸರ್ಗ ತಾಣ

ಅಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಹೊರತುಪಡಿಸಿ, ಈ ಸ್ಥಳವು ಎಲ್ಲರಿಗೂ ಅತ್ಯುತ್ತಮವಾದ ಪಿಕ್ನಿಕ್ ತಾಣವಾಗಿದೆ. ಈ ಗುಡ್ಡಗಾಡು ಪ್ರದೇಶದ 5-6 ಕಿ.ಮೀ ದೂರದಲ್ಲಿ ಒಟ್ಟು 77 ಕೆರೆಗಳಿವೆ. ಬೆಟ್ಟಗಳು ಮತ್ತು ಅರಣ್ಯ ಪ್ರದೇಶಗಳ ಮೂಲಕ ನಡೆದು ಸಾಗಿದರೆ ಮಾತ್ರ ಇವುಗಳನ್ನು ನೋಡಬಹುದು. ಇವುಗಳಲ್ಲಿ ಒಂದು ಸರೋವರವನ್ನು ಹಂಸ ತೀರ್ಥ (ಹಂಸ ಸರೋವರ) ಎಂದು ಕರೆಯಲಾಗುತ್ತದೆ. ಈ ಕೆರೆಯ ಹಿಂದೆ ಒಂದು ಕಥೆಯಿದೆ. ಒಮ್ಮೆ ಕಾಗೆಯೊಂದು ಈ ಸರೋವರದಲ್ಲಿ ಸ್ನಾನ ಮಾಡಿ ಹಂಸವಾಯಿತು ಎಂದು ಹೇಳಲಾಗುತ್ತದೆ. ಅದೇ ಕಾರಣಕ್ಕೆ ಈ ಸರೋವರಕ್ಕೆ ಹಂಸ ಸರೋವರ ಎನ್ನುವ ಹೆಸರಿದೆ. ಕುತೂಹಲಕಾರಿ ಅಂಶವೆಂದರೆ, ಈ ಸ್ಥಳದ ಸುತ್ತಲೂ ಯಾವುದೇ ಕಾಗೆಗಳು ಕಾಣಿಸಿಕೊಳ್ಳುವುದಿಲ್ಲ ಕೂಡ!

ಹೋಗುವುದು ಹೇಗೆ?

ಕಾರು ಅಥವಾ ತಮ್ಮದೇ ವಾಹನದಲ್ಲಿ ಹೋಗುವವರು ಮೈಸೂರಿನಿಂದ ಊಟಿ ರಸ್ತೆಯಾದ NH212 ದಾರಿಯಲ್ಲಿ ತೆರಳಬೇಕು. ಗುಂಡ್ಲುಪೇಟೆಯ ನಂತರ ಬಂಡೀಪುರಕ್ಕೆ ಹೋಗುವುದಕ್ಕೆ ಮೊದಲು ಹಿಮವದ್‌ ಗೋಪಾಲಸಾಮಿ ಬೆಟ್ಟಕ್ಕೆ ಹೋಗುವ ದಾರಿಗೆ ನಿದರ್ಶನಗಳನ್ನು ನೀಡಲಾಗಿದೆ. ಅದನ್ನು ಪಾಲಿಸಿ.

ಸಾರ್ವಜನಿಕ ಸಾರಿಗೆ ಬಳಸಿಕೊಂಡು ಹೋಗುವುದಾದರೆ ಗುಂಡ್ಲುಪೇಟೆಯಿಂದ ಇಲ್ಲಿಗೆ ಕೆಎಸ್‌ಆರ್‌ಟಿಸಿ ಬಸ್ಸುಗಳು ಸಂಚರಿಸುತ್ತವೆ. ಅಲ್ಲದೆ ಗುಂಡ್ಲುಪೇಟೆಯಿಂದ ಊಟಿ/ಗುಡಲೂರು ಕಡೆಗೆ ಹೋಗುವ ಎಲ್ಲ ಬಸ್ಸುಗಳು ಇದೇ ಮಾರ್ಗವಾಗಿ ಹೋಗುತ್ತವೆ.

ಈ ಸಂಗತಿ ನೆನಪಿನಲ್ಲಿರಲಿ

ಬೆಟ್ಟ ಹತ್ತುವುದಕ್ಕೆ ಖಾಸಗಿ ವಾಹನಗಳಿಗೆ ಅವಕಾಶವಿರುವುದಿಲ್ಲ. ಹಾಗಾಗಿ ಬೆಟ್ಟದ ಬುಡದಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು. ಬೆಟ್ಟದ ಮೇಲೆ ಕೆಎಸ್‌ಆರ್‌ಟಿಸಿ ಬಸ್ಸುಗಳು ಹೋಗುತ್ತವೆ. ಅದರಲ್ಲಿ ನೀವು ಸಂಚರಿಸಬಹುದು. ಬೆಳಗ್ಗೆ 8.30ರಿಂದ ಸಂಜೆ 4 ಗಂಟೆಯವರೆಗೆ ಇಲ್ಲಿ ಬಸ್‌ಗಳ ಸಂಚಾರವಿರುತ್ತದೆ.
ಇದು ಬಂಡೀಪುರ ಅಭಯಾರಣ್ಯ ವಲಯದಲ್ಲಿರುವ ದೇವಸ್ಥಾನ. ಇಲ್ಲಿ ವನ್ಯ ಜೀವಿಗಳ ಸಂಚಲನವಿರುತ್ತದೆ. ಹಾಗಾಗಿ ಇಲ್ಲಿ ಅಧಿಕೃತ ಸಮಯದ ಹೊರತು ಬೇರೆ ಸಮಯದಲ್ಲಿ ಸಂಚಾರ ಮಾಡುವುದು ಸರಿಯಲ್ಲ ಮತ್ತು ಅದಕ್ಕೆ ಅವಕಾಶವಿರುವುದಿಲ್ಲ. ಜುಲೈನಿಂದ ಫೆಬ್ರವರಿಗೆ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.
ದೇವಸ್ಥಾನದ ಬಳಿ ಧೂಮಪಾನ ಮತ್ತು ಮದ್ಯಪಾನವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಬೆಟ್ಟದ ಮೇಲೆ ವಾಹನ ಹೋಗುತ್ತದೆಯೆ?

ಬೆಟ್ಟ ಹತ್ತುವುದಕ್ಕೆ ಖಾಸಗಿ ವಾಹನಗಳಿಗೆ ಅವಕಾಶವಿರುವುದಿಲ್ಲ. ಹಾಗಾಗಿ ಬೆಟ್ಟದ ಬುಡದಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು. ಬೆಟ್ಟದ ಮೇಲೆ ಕೆಎಸ್‌ಆರ್‌ಟಿಸಿ ಬಸ್ಸುಗಳು ಹೋಗುತ್ತವೆ. ಅದರಲ್ಲಿ ನೀವು ಸಂಚರಿಸಬಹುದು. ಬೆಳಗ್ಗೆ 8.30ರಿಂದ ಸಂಜೆ 4 ಗಂಟೆಯವರೆಗೆ ಇಲ್ಲಿ ಬಸ್‌ಗಳ ಸಂಚಾರವಿರುತ್ತದೆ.

Exit mobile version