ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು (Praveen Nettaru) ಅಂತಿಮ ದರ್ಶನ ಪಡೆಯಲು ಬುಧವಾರ ಆಗಮಿಸಿದ್ದ ಬಿಜೆಪಿ ಸಂಸದರು, ಸಚಿವರು, ಹಾಗೂ ಶಾಸಕರ ವಿರುದ್ಧ ಹಿಂದುಪರ ಕಾರ್ಯಕರ್ತರು ತೀವ್ರ ಆಕ್ರೋಶ ಹೊರಹಾಕಿದ್ದರಿಂದ ಪರಿಸ್ಥಿತಿ ತೀವ್ರ ಉದ್ನಿಗ್ನಗೊಂಡಿತ್ತು. ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರನ್ನು ಗುಂಪೊಂದು ಮಗುಚಲು ಯತ್ನಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಬಿಜೆಪಿ ನಾಯಕರು ಬೆಳ್ಳಾರೆಯಿಂದ ನೆಟ್ಟಾರು ಕಡೆಗೆ ತೆರಳುತ್ತಿದ್ದಾಗ ಹಿಂದು ಪರ ಕಾರ್ಯಕರ್ತರು ನಳಿನ್ ಕುಮಾರ್ ಕಟೀಲ್ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಹಿಂದುಗಳ ಸಾವಿಗೆ ಕೊನೆ ಇಲ್ಲವೇ? ತಪ್ಪಿತಸ್ಥರ ವಿರುದ್ಧ ಏಕೆ ಕ್ರಮ ಕೈಗೊಳ್ಳುವುದಿಲ್ಲ ಎಂಬ ಆಕ್ರೋಶಭರಿತ ಮಾತುಗಳು ಕೇಳಿಬಂದಿವೆ. ಮಂಗಳವಾರ ಹತ್ಯೆಯಾದರೂ ಬಿಜೆಪಿ ನಾಯಕರು ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಪ್ರತಿಭಟನಾಕಾರರು, ಕಟೀಲ್ ಅವರು ಕುಳಿತಕೊಂಡಿದ್ದ ಕಾರನ್ನೇ ಮಗುಚಲು ಪ್ರಯತ್ನಪಟ್ಟರು.
ಬಳಿಕ ಕೆಲವರು ಕಾರಿನ ಟಯರ್‌ನಲ್ಲಿ ಗಾಳಿ ತೆಗೆದು ಆಕ್ರೋಶವನ್ನು ಹೊರಹಾಕಿದರು. ಕಾರ್ಯಕರ್ತರು ಬಿಜೆಪಿ ನಾಯಕರಿಗೆ ದಿಗ್ಬಂಧನ ಹೇರಿದ್ದರಿಂದ ಪೊಲೀಸರು ಅವರನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದರು. ಈ ವೇಳೆ ಹಿಂದು ಕಾರ್ಯಕರ್ತನಿಗೆ ತೀವ್ರ ಗಾಯಗಳಾಗಿವೆ.
ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ವಿ.ಸುನಿಲ್ ಕುಮಾರ್, ಅಂಗಾರ ಎದುರು ಹಿಂದು ಕಾರ್ಯಕರ್ತರು ತೊಲಗಲಿ ತೊಲಗಲಿ ಬಿಜೆಪಿ ಸರ್ಕಾರ ತೊಲಗಲಿ ಎಂದು ಧಿಕ್ಕಾರದ ಘೋಷಣೆ ಕೂಗಿದರು.
ಇದನ್ನೂ ಓದಿ | Praveen Nettaru | ಪ್ರವೀಣ್ ಹತ್ಯೆಗೆ ವ್ಯಾಪಕ ಆಕ್ರೋಶ; ದಕ್ಷಿಣ ಕನ್ನಡದ ವಿವಿಧೆಡೆ ಬಂದ್