Site icon Vistara News

Pragya Singh Thakur | ಲವ್‌ ಜಿಹಾದ್‌ ವಿರುದ್ಧ ಹಿಂದು ಹೆಣ್ಣುಮಕ್ಕಳು ಆಟಂ ಬಾಂಬ್‌ಗಳಾಗಬೇಕು: ಪ್ರಜ್ಞಾ ಸಿಂಗ್ ಕರೆ

Pragya Singh Thakur

ಶಿವಮೊಗ್ಗ: ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್‌ಗೆ ಬಲಿಯಾಗಬಾರದು. ಲವ್ ಜಿಹಾದ್ ಮಾಡುವವರಿಗೆ ತಕ್ಕ ಉತ್ತರ ನೀಡಬೇಕು. ಹೆಣ್ಣುಮಕ್ಕಳ ರಕ್ಷಣೆ ಮಾಡಬೇಕು. ಇದಕ್ಕಾಗಿ ಪ್ರತಿ ಮನೆಯಲ್ಲೂ ಶಸ್ತ್ರ ಇರಬೇಕು. ಮನೆಯಲ್ಲಿ ತರಕಾರಿ ಕೊಯ್ಯುವ ಚಾಕು ಕೂಡ ಹರಿತವಾಗಿ ಇಡಬೇಕು ಎಂದು ಭೋಪಾಲ್‌ನ ಬಿಜೆಪಿ ಸಂಸದೆ‌ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ (Pragya Singh Thakur) ಕರೆ ನೀಡಿದ್ದಾರೆ.

ನಗರದ ಎನ್‌ಇಎಸ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದು ಜಾಗರಣ ವೇದಿಕೆಯ 3ನೇ ದಕ್ಷಿಣ ಪ್ರಾಂತ ಸಮ್ಮೇಳನದಲ್ಲಿ ಮಾತನಾಡಿ, ಹೆಣ್ಣುಮಕ್ಕಳನ್ನು ತಿರುಗಾಡುವ ಆಟಂ ಬಾಂಬ್ ಮಾಡಬೇಕು. ಯಾರಾದರೂ ಅವರ ಶೀಲಕ್ಕೆ ಕೈ ಹಾಕಿದರೆ ಅಲ್ಲೇ ಉತ್ತರ ಕೊಡಬೇಕು. ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್‌ಗೆ ಬಲಿ ಆಗಬಾರದು. ಅದಕ್ಕೆ ತಕ್ಕ ಉತ್ತರ ನಾವು ಕೊಡಬೇಕು. ದೇಶದ ರಕ್ಷಣೆಗೆ ನಾವೆಲ್ಲ ಸದಾ ಬದ್ಧರಾಗಿರಬೇಕು. ಇನ್ನು ಮುಂದೆ ಯಾವುದೇ ಲವ್‌ ಜಿಹಾದ್‌, ಅತ್ಯಾಚಾರ, ಅನಾಚಾರವಾಗಲು ನಾವು ಬಿಡಬಾರದು. ಪ್ರತಿಮನೆಯಲ್ಲಿ ಶಸ್ತ್ರ ಇಟ್ಟುಕೊಳ್ಳಬೇಕು. ಅದಕ್ಕೆ ಅಗತ್ಯ ಲೈಸೆನ್ಸ್ ಹೊಂದಬೇಕು ಎಂದು ಹೇಳಿದರು.

ನಾನು ಸಂಸದೆ, ಹಿಂದುಗಳ ಪರವಾಗಿ ಮಾತನಾಡುತ್ತೇನೆ, ಹಿಂದುಗಳ ರಕ್ಷಣೆಗಾಗಿ ಹೋರಾಡುತ್ತಿದ್ದೇನೆ. ಜೀವವಿರುವವರೆಗೂ ಸನಾತನ ರಕ್ಷಣೆಗೆ ಬದ್ಧ. ಇದಕ್ಕಾಗಿ ಜೀವ ಬೆದರಿಕೆಗಳು ಬರುತ್ತಲೇ ಇವೆ. ಬೆದರಿಕೆ ಹಾಕುವವರು ಒಮ್ಮೆ ನನ್ನ ಮುಂದೆ ಬರಲಿ, ಅವರಿಗೆ ಪ್ರಜ್ಞಾ ಸಿಂಗ್ ಏನೆಂದು ತೋರಿಸುತ್ತೇನೆ. ನಾರಿಶಕ್ತಿ ಏನೆಂದು ತೋರಿಸುತ್ತೇನೆ. ನಾವು ಹೆದರುವುದಿಲ್ಲ, ಹೆದರಿಸುತ್ತೇವೆ. ಈಗ ಸಾಯುವ ಸಮಯವಲ್ಲ, ಸಾಯಿಸುವ ಸಮಯ ಎಂದು ಹೇಳಿದರು.

ಇದನ್ನೂ ಓದಿ | ಅಜಾತಶತ್ರು ಜನ ನಾಯಕ ಅಟಲ್‌ ಬಿಹಾರಿ ವಾಜಪೇಯಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ಕಾಶ್ಮೀರ ಭಾರತ ದೇಶದ ಶಿರ. ಅದನ್ನು ಕತ್ತರಿಸಲು ಬಿಡುವುದಿಲ್ಲ. ಈ ಭೂಮಿ ನಮ್ಮ ತಾಯಿ, ಜೀವಿಸುವುದಾದರೆ ಭಾರತ ಮಾತೆಯ ಮಕ್ಕಳಾಗಿ ಇರಬೇಕು. ನಾವೆಲ್ಲ ಹುಟ್ಟಿನಿಂದಲೇ ಹಿಂದು ಆಗಿರುತ್ತೇವೆ. ಕೆಲವರಿಗೆ ಹಿಂದು ಪರಿಭಾಷೆ ಈಗ ನೆನಪಾಗುತ್ತಿದೆ. ಅವರಿಗೆ ಅದರ ಯೋಗ್ಯತೆ ಇಲ್ಲ ಎಂದು ಕಿಡಿ ಕಾರಿದರು.

ಜನರು ಧರ್ಮದ ಜತೆಗಿದ್ದಾರೆ, ಹೀಗಾಗಿ ನನ್ನನ್ನು ಮತ್ತೆ ಗೆಲ್ಲಿಸಿದರು. ಮೋದಿಯವರು ಈ ದೇಶದ ಬಗ್ಗೆ ಸಮರ್ಪಣಾಭಾವ ಹೊಂದಿದ್ದಾರೆ. ಗೋಧ್ರಾ ಹತ್ಯಾಕಾಂಡದ ವಿಷಯದಲ್ಲಿ ಮೋದಿ ಸಾಕಷ್ಟು ಸಂಕಟ ಅನುಭವಿಸಿದರು. ಅಮೆರಿಕ ವೀಸಾ ಕೊಟ್ಟಿರಲಿಲ್ಲ. ದೇಶದ ಮೇಲೆ ದಾಳಿಯಾದರೆ ಹಿಂದಿನ ಆಡಳಿತ ಪಾಕಿಸ್ತಾನದ ವಿರುದ್ಧ ಮಾತನಾಡುತ್ತಿರಲಿಲ್ಲ. ಈಗ ನಮ್ಮ ಸೇನೆ ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತಿದೆ ಎಂದರು.

ಶಿವಮೊಗ್ಗದಲ್ಲಿ ಆತಂಕ ಮನೆಮಾಡಿದೆ. ಆದರೆ ಅದರಲ್ಲೂ ತುಷ್ಟೀಕರಣ ನಡೆಯುತ್ತಿದೆ. ನಾವು ಅತಿಥಿ ದೇವೋಭವ ಎನ್ನುತ್ತೇವೆ. ಆದರೆ ಅತಿಥಿ ಯಜಮಾನನಾದರೆ ಸುಮ್ಮನಿರುವುದಿಲ್ಲ. ಒಂದು ವೇಳೆ ಹಿಂದು ಉಗ್ರವಾದಿ ಆಗಿದ್ದಿದ್ದರೆ ಆ ಮಾತು ಹೇಳಿದವರ ಯಾರ ಮುಖವೂ ಕಾಣುತ್ತಿರಲಿಲ್ಲ. ದೇಶದಲ್ಲಿ ವಾಸಿಸಲು ಕಷ್ಟ ಎಂದು ಕೆಲ ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಅವರಿಗೆ ಇಲ್ಲಿ ಇರಲು ಹೇಳಿದವರು ಯಾರು ಎಂದು ಪ್ರಶ್ನಿಸಿದರು.

ಮಿಷನರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬೇಡಿ. ಅಂತಹವರು ಮುಂದೆ ವೃದ್ಧಾಶ್ರಮಕ್ಕೆ ಹೋಗಬೇಕಾಗುತ್ತದೆ. ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು. ಗೀತೋಪದೇಶ, ರಾಮಾಯಣ, ಹನುಮಾನ್ ಚಾಲಿಸಾ ಕಲಿಸಬೇಕು ಎಂದು ಕರೆ ನೀಡಿದರು. ದೇಶದಲ್ಲಿ ಅಚ್ಛೇ ದಿನ ಬಂದಿದೆ. ದೇಶದಲ್ಲಿ ಭವ್ಯ ಮಂದಿರಗಳು ನಿರ್ಮಾಣಗೊಳ್ಳುತ್ತಿವೆ. ಪ್ರಭು ರಾಮಚಂದ್ರನ ದೇಗುಲ ನಿರ್ಮಾಣವಾಗುತ್ತಿದೆ. ಕಾಶಿಯ ಜ್ಞಾನವಾಪಿ ಮಸೀದಿಯಲ್ಲೂ ಮಹಾದೇವನ ದೇಗುಲವಿದೆ. ಕೋರ್ಟ್‌ನಲ್ಲೂ ಇದಕ್ಕೆ ನ್ಯಾಯ ಸಿಗುತ್ತದೆ. ಹೀಗಾಗಿ ವಿರೋಧಿಗಳು ತಳಮಳಗೊಂಡಿದ್ದಾರೆ. ಭಾರತ ವಿಶ್ವಗುರುವಾಗುವ ಕಾಲ ಸನ್ನಿಹಿತವಾಗಿದೆ ಎಂದರು.

ಈ ಹಿಂದೆ ದುರ್ಗಾಮಾತಾ ಕಾರ್ಯಕ್ರಮಕ್ಕಾಗಿ ಉಡುಪಿಗೆ ಹೋಗಬೇಕಿತ್ತು. ಆದರೆ ಪೊಲೀಸರ ದೌರ್ಜನ್ಯದಿಂದ ದೇಹ ಸ್ಪಂದಿಸಲಿಲ್ಲ. ಆದರೆ ಈ ಕಾರ್ಯಕ್ರಮಕ್ಕೆ ಬರಲೇಬೇಕೆಂಬ ಹಠದಿಂದ ಬಂದಿದ್ದೇನೆ. ಜನ್ಮ ಕೊಟ್ಟ ಭೂಮಿಯ ಋಣ ನಾವೆಲ್ಲ ತೀರಿಸಲೇಬೇಕು. ಶಿವಮೊಗ್ಗದ ನೆಲ, ರಾಜ್ಯ, ದೇಶಕ್ಕಾಗಿ ತನ್ಮ ಪ್ರಾಣ ತ್ಯಾಗ ಮಾಡಿದವರ ಆತ್ಮ ಧನ್ಯವಾಗಲಿ. ನಾವು ಜೀವ ಕೊಡಲೂ ಸಿದ್ಧ, ತೆಗೆಯಲೂ ಸಿದ್ಧ ಎಂದು ನಮ್ಮ ಧರ್ಮಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗಾಗಿ ನಮನ ಎಂದು ಹೇಳಿದ ಅವರು, ಹತ್ಯೆಗೀಡಾದ ಹಿಂದು ಕಾರ್ಯಕರ್ತರಾದ ವಿಶ್ವನಾಥ ಶೆಟ್ಟಿ, ಶಿವಮೂರ್ತಿ, ಗೋವಿಂದ ರಾಜ್, ಗೋಕುಲ್, ಹರ್ಷ, ಪ್ರವೀಣ್ ನೆಟ್ಟಾರ್, ಪ್ರಶಾಂತ್ ಪೂಜಾರಿ, ರುದ್ರೇಶ್, ಸೌಮ್ಯ ಭಟ್ ಮತ್ತಿತರರನ್ನು ಸ್ಮರಿಸಿದರು.

ಈ ಹಿಂದೆ ಒಂದೇ ಪಕ್ಷವಿತ್ತು. ನಂತರ ರಾಷ್ಟ್ರಭಕ್ತ ಪಕ್ಷ ಸ್ಥಾಪನೆಯಾಯಿತು. ಏಕರೂಪ ನಾಗರಿಕ ಸಂಹಿತೆ ಬರಬೇಕು. ಜನಸಂಖ್ಯೆ ನಿಯಂತ್ರಣ ಆಗಲೇಬೇಕು. ಆರೋಗ್ಯ ಪೂರ್ಣ ಸಮಾಜಕ್ಕೆ ಇದು ಅಗತ್ಯ. ಆದರೆ ಇದಕ್ಕೂ ಕೆಲವರು ವಿರೋಧ ಮಾಡುತ್ತಿದ್ದಾರೆ. ಹಿಂದು ರಾಷ್ಟ್ರ ನಿರ್ಮಾಣ ಆಗಲೇಬೇಕು. ಶಿವಾಜಿಯ ರಣನೀತಿ ಬಳಸುವಾಗ ಹಿಂದೆ ಸರಿಯಬಾರದು ಎಂದು ಹೇಳಿದರು.

ಪ್ರಜ್ಞಾ ಪ್ರವಾಹದ ಮುಖ್ಯಸ್ಥ ರಘುನಂದನ್ ಮಾತನಾಡಿ, ಜಗತ್ತಿನ ಅತ್ಯಂತ ಪ್ರಾಚೀನ, ಶ್ರೇಷ್ಠ ಸಂತತಿ ಹಿಂದುಗಳಾಗಿದ್ದಾರೆ. ಉಳಿದವರಿಗೆ ಯಾವ ಇತಿಹಾಸವಿದೆ? ಅವರ ಪೂರ್ವಜರು ಏನು ಮಾಡಿದರು? ಯುದ್ಧ, ದಾಳಿ, ತಲೆ ಕಡಿದದ್ದೇ ಅವರ ಸಾಧನೆ. ನಮ್ಮ ಪೂರ್ವಜರು ನೀಡಿದ ಕೊಡುಗೆ ಅಪಾರ. ಕತ್ತುಗಳನ್ನು ಕೊಯ್ಯುವ ನಿಮ್ಮಂಥ ಪರಂಪರೆ ನಮ್ಮದಲ್ಲ. ಋಷಿ ಪರಂಪರೆ ನಮ್ಮದು ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು. ಯಹೂದಿಗಳಿಗೆ ಆಶ್ರಯ ನೀಡಿದ್ದು ಭಾರತ. ವಿವೇಕಾನಂದರಿಗೆ ಆ ಹಮ್ಮೆ ಇತ್ತು ಎಂದರು.

ಈಗ ಹಲವರು ಚುನಾವಣೆ ವೇಳೆ ಹಿಂದುಗಳಾಗುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಮಾತ್ರ ಹಿಂದು. ಆದರೆ ಹಿಂಜಾವೇ ಕಾರ್ಯಕರ್ತರು ಸೀಜನಲ್ ಹಿಂದು ಅಲ್ಲ. ಜಗತ್ತೇ ಉಲ್ಟಾ ಹೊಡೆದರೂ ನಾವು ಹಿಂದು ಎನ್ನುತ್ತಾರೆ. ನಾಮ ಇಟ್ಟುಕೊಂಡರೆ ಹಿಂದು ಆಗಲ್ಲ, ನಡವಳಿಕೆಯಿಂದ ಹಿಂದು ಆಗಿರಬೇಕು. ಕನಸಿನಲ್ಲೂ ನಾನು ಹಿಂದು ಎನ್ನುವವ ಹಿಂಜಾವೇ ಕಾರ್ಯಕರ್ತ ಎಂದು ಹೇಳಿದರು.

ಜಗದೀಶ್ ಕಾರಂತ ಮಾತನಾಡಿ, ಭಾರತವನ್ನು ನಾಶ ಮಾಡಬೇಕು ಎಂಬ ನೆಲೆಯಲ್ಲಿ ಸಾಮಾಜಿಕ ಯುದ್ಧ ನಡೆಯುತ್ತಿದೆ. ಭಾರತ ಭಾರತವಾಗಿ ಉಳಿಯಬಾರದು ಎಂಬುವುದು ಕೆಲವರ ಧೋರಣೆ. ಶತ್ರುಗಳು ಯಾರು, ಷಡ್ಯಂತ್ರವೇನು ಎಂಬುದನ್ನು ಅರಿಯದಿದ್ದರೆ ಇದಕ್ಕೆ ಪರಿಹಾರ ಸಾಧ್ಯವಿಲ್ಲ. ಭಾರತವನ್ನು ಇಸ್ಲಾಮೀಕರಣಗೊಳಿಸುವ ಪ್ರಯತ್ನ ನಡೀಯುತ್ತಲೇ ಇದೆ. ಇದು ಒಬ್ಬನ ಷಡ್ಯಂತ್ರವಲ್ಲ. ಭಾರತದಲ್ಲಿ ಸಾವಿರಾರು ವರ್ಷದಿಂದ ಇಸ್ಲಾಮಿಕ್ ಆಕ್ರಮಣ ನಡೆಯುತ್ತಿದೆ. ಆದರೂ ಭಾರತ ಉಳಿದಿದೆ ಎಂದರೆ ಅದಕ್ಕೆ ನಮ್ಮ ಜನರ ಪೌರುಷ ಕಾರಣ. ಭಾರತ ಮುಸ್ಲಿಂ ರಾಷ್ಟ್ರ ಮಾಡುವುದು ಹಗಲುಗನಸು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದೋ.ಕೇಶವಮೂರ್ತಿ, ರಘುನಂದನ್, ಬಿ ವಿ ರಂಗನಾಥ, ಬಾಲಕೃಷ್ಣ ಪೈ ಮತ್ತಿತರ ಗಣ್ಯರು ಭಾಗಿಯಾಗಿದ್ದರು.

ಇದನ್ನೂ ಓದಿ | Ram Madhav | ಮೋದಿಯನ್ನು ಭ್ರಷ್ಟರನ್ನಾಗಿಸಲು ಯಾರಿಂದಲೂ ಸಾಧ್ಯವಿಲ್ಲ: ಆರ್‌ಎಸ್‌ಎಸ್‌ ಮುಖಂಡ ರಾಮ ಮಾಧವ್‌

Exit mobile version