ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ವಕ್ಫ್ ಆಸ್ತಿಗಳ ರಕ್ಷಣೆಗಾಗಿ, ಬೇಲಿ ಮತ್ತು ಕಾಂಪೌಂಡ್ ನಿರ್ಮಿಸಲು 31.54 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಹಿಂದು ಜನಜಾಗೃತಿ ಸಮಿತಿಯ (Hindu Janajagruti Samiti) ರಾಜ್ಯ ವಕ್ತಾರ ಮೋಹನ್ ಗೌಡ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚಿಗೆ ಕರ್ನಾಟಕ ಸರ್ಕಾರ ಕೇವಲ ಅಲ್ಪಸಂಖ್ಯಾತರ ಅಭಿವೃದ್ಧಿಯ ಹೆಸರಿನಲ್ಲಿ ಅಲ್ಪಸಂಖ್ಯಾತರಿಗಾಗಿ ಬಜೆಟ್ ಖಾಲಿ ಮಾಡುವ ಪ್ರಯತ್ನ ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ. ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 10,000 ಕೋಟಿ ರೂಪಾಯಿಗಳನ್ನು ಅಲ್ಪಸಂಖ್ಯಾತರಿಗೆ ನೀಡುತ್ತೇವೆಂದು ಘೋಷಣೆ ಮಾಡಿದ್ದರು ಎಂದು ಹೇಳಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಿನಲ್ಲಿ ಅಲ್ಪಸಂಖ್ಯಾತರ ಕಾಲೋನಿಗಳ ನಿರ್ಮಾಣಕ್ಕಾಗಿ 1000 ಕೋಟಿ ರೂಪಾಯಿಗಳನ್ನು ಸಿಎಂ ನೀಡಿದ್ದಾರೆ. ಬಜೆಟ್‌ನಲ್ಲಿ 60 ಕೋಟಿ ರೂಪಾಯಿಗಳನ್ನು ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನಕ್ಕಾಗಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಎಸ್.ಸಿ.ಎಸ್.ಟಿಯ 11,000 ಕೋಟಿ ಅನುದಾನವನ್ನು ತಮ್ಮ ಸ್ವಾರ್ಥಕ್ಕಾಗಿ, ಚುನಾವಣಾ ಆಶ್ವಾಸನೆಗಳನ್ನು ಈಡೇರಿಸಲು ಖರ್ಚು ಮಾಡಿದರು. ಅಲ್ಪಸಂಖ್ಯಾತರಿಗಾಗಿ ಚತುಷ್ಚಕ್ರ ವಾಹನಗಳ ಖರೀದಿಗಾಗಿ 3 ಲಕ್ಷ ರೂಪಾಯಿ ಸಬ್ಸಿಡಿ ನೀಡುವ ಯೋಜನೆಯನ್ನು ಮಾಡಿದರು. ಇದೀಗ 31.54 ಕೋಟಿ ರೂಪಾಯಿಗಳನ್ನು ವಕ್ಫ್ ಆಸ್ತಿಗಳ ರಕ್ಷಣೆಗಾಗಿ, ಬೇಲಿ ಮತ್ತು ಕಾಂಪೌಂಡ್ ಗಳನ್ನು ಅಳವಡಿಸಲು ಖರ್ಚು ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ.
2009ರಲ್ಲಿ 4 ಲಕ್ಷ ಎಕರೆ ಇದ್ದ ವಕ್ಫ್ ಆಸ್ತಿ ಅನಧಿಕೃತವಾಗಿ ಖಾಸಗಿ ಹಾಗೂ ಸರ್ಕಾರಿ ಆಸ್ತಿಗಳನ್ನು ವಕ್ಫ್ ಬೋರ್ಡ್ ಕಬಳಿಸಿ ಇಂದು ದೇಶದಲ್ಲಿ 8 ಲಕ್ಷದ 52 ಸಾವಿರ ಎಕರೆ ಜಾಮೀನನ್ನು ವಕ್ಫ್ ಬೋರ್ಡ್ ಅಕ್ರಮವಾಗಿ ಕಬಳಿಸಿದೆ. ವಿವಿಧ ನ್ಯಾಯಾಲಯಗಳಲ್ಲಿ ವಕ್ಫ್ ಬೋರ್ಡ್ ಅಕ್ರಮವಾಗಿ ಜಮೀನುಗಳನ್ನು ಕಬಳಿಸಿರುವ ಪ್ರಕರಣಗಳು ನಡೆಯುತ್ತಿರುವಾಗ ಕಾಂಪೌಂಡ್ ಅಳವಡಿಸಿದರೆ ನಾಳೆ ಆ ಜಾಗವೂ ಅಧಿಕೃತವಾಗುತ್ತದೆ. ಇದರಿಂದ ಸಮಸ್ಯೆ ನಿರ್ಮಾಣವಾಗಲಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Budget Session: ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕುವಂತೆ ಪಕ್ಷಾತೀತ ಒತ್ತಾಯ; ಕಠಿಣ ಕ್ರಮ ಎಂದ ಡಾ.ಜಿ. ಪರಮೇಶ್ವರ್
ವಕ್ಫ್ ಬೋರ್ಡ್ ಅನಧಿಕೃತವಾಗಿ ಕಬಳಿಸಿರುವ ಆಸ್ತಿಗಳನ್ನು ಅಧಿಕೃತಗೊಳಿಸಲು ಬಿಡುಗಡೆಗೊಳಿಸಿರುವ ಹಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡಲೇ ರದ್ದು ಮಾಡಬೇಕು. ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ ಸಾವಿರಾರು ಕೋಟಿ ರೂಪಾಯಿಗಳ ದೇವಸ್ಥಾನಗಳ ಜಮೀನುಗಳು ಅತಿಕ್ರಮಣವಾಗಿದೆ, ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ದೇವಸ್ಥಾನದ ಜಮೀನುಗಳು ಸಮೀಕ್ಷೆ ಮಾಡದೇ ಪಾಳುಬಿದ್ದಿದೆ. ಇದರ ರಕ್ಷಣೆಗಾಗಿ ಸರ್ಕಾರ ಹಣ ಬಿಡುಗಡೆ ಮಾಡಬೇಕೆಂದು ಮೋಹನ್ ಗೌಡ ಆಗ್ರಹಿಸಿದ್ದಾರೆ.