Site icon Vistara News

ಶ್ರೀರಂಗಪಟ್ಟಣ ಮಸೀದಿ ವಿವಾದ; ಮದರಸಾ ತೆರವಿಗೆ ಡೆಡ್‌ಲೈನ್‌ ಕೊಟ್ಟ ಹಿಂದೂ ಪರ ಸಂಘಟನೆಗಳು

srirangapatna jamia masjid

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಭಾನುವಾರದಿಂದ ಸೋಮವಾರ ಬೆಳಗ್ಗೆಯವರೆಗೆ(ಜೂ.5-6) ಜಾಮಿಯಾ ಮಸೀದಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಮಿತ್ತ ಜಿಲ್ಲಾಧಿಕಾರಿ ಅಶ್ವಥಿ ಈ ಆದೇಶ ಹೊರಡಿಸಿದ್ದಾರೆ. ಸದ್ಯ ಜಾಮಿಯಾ ಮಸೀದಿ ವಿವಾದ ಬೂದಿ ಮುಚ್ಚಿದ ಕೆಂಡದಂತೆ ಇದ್ದು, ಮಸೀದಿಯೊಳಗೆ ನಡೆಯುತ್ತಿರುವ ಮದರಸಾವನ್ನು ಖಾಲಿ ಮಾಡಿಸಲು ಹಿಂದೂ ಪರ ಸಂಘಟನೆಗಳು ಜೂ.30ರ ಗಡುವು ನೀಡಿವೆ. ಅದರೊಳಗೆ ಖಾಲಿ ಮಾಡದೆ ಇದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇನ್ನೊಂದೆಡೆ ಮುಸ್ಲಿಂ ಸಂಘಟನೆಗಳೂ ತಿರುಗಿಬಿದ್ದಿವೆ. ಈ ಮಸೀದಿ ವಕ್ಫ್‌ಬೋರ್ಡ್‌ ಆಸ್ತಿಯಾಗಿದ್ದು, ಹಾಗಾಗೇ ಇಲ್ಲಿ ಮದರಸಾ ನಡೆಸುತ್ತಿದ್ದೇವೆ. ವಕ್ಫ್‌ಬೋರ್ಡ್‌ ವ್ಯಾಪ್ತಿಯಲ್ಲಿರುವ ಯಾವುದೇ ಮಸೀದಿಯನ್ನೂ ಪುರಾತತ್ವ ಇಲಾಖೆಯೇ ನೋಡಿಕೊಳ್ಳುತ್ತದೆ ಎಂದು ಮುಸ್ಲಿಂ ಮುಖಂಡರು ಸ್ಪಷ್ಟನೆ ಕೊಡುತ್ತಿದ್ದಾರೆ. ಆದರೆ ಈ ಬಗ್ಗೆ ಸ್ಥಳೀಯ ಆಡಳಿತ ಇದುವರೆಗೆ ಏನನ್ನೂ ಹೇಳಿಲ್ಲ.

ಕಳೆದ ಕೆಲವು ದಿನಗಳಿಂದಲೂ ಶ್ರೀರಂಗಪಟ್ಟಣದಲ್ಲಿ ದೇಗುಲ-ಮಸೀದಿ ವಿವಾದ ಶುರುವಾಗಿದೆ. ಜಾಮಿಯಾ ಮಸೀದಿ ಇದ್ದ ಜಾಗದಲ್ಲಿ ಹನುಮಾನ್‌ ದೇವಸ್ಥಾನ ಇತ್ತು ಎಂಬುದಕ್ಕೆ ಸಾಕ್ಷಿ ಇದೆ. ಹೀಗಾಗಿ ಇಲ್ಲಿ ಉತ್ಖನನ ನಡೆಸಬೇಕು. ವಿಡಿಯೋಗ್ರಫಿ ಸಮೀಕ್ಷೆ ಮಾಡಬೇಕು. ಮುಸ್ಲಿಮರ ಮದರಸಾ ತೆರವುಗೊಳಿಸಿ, ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಮತ್ತು ಇತರ ಹಿಂದೂ ಪರ ಸಂಘಟನೆಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಲ್ಲದೆ, ಜೂ.4ರಂದು ಶ್ರೀರಂಗಪಟ್ಟಣ ಚಲೋ ಕೂಡ ನಡೆಸಿವೆ. ಆದರೆ ಯಾವುದೇ ಗಲಭೆಯಾಗಬಾರದು ಎಂಬ ಕಾರಣಕ್ಕೆ ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಹಾಗಿದ್ದಾಗ್ಯೂ ನಿನ್ನೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಾಂಡವರಪುರದಿಂದ ಶ್ರೀರಂಗ ಪಟ್ಟಣಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಆದರೆ ನಿಷೇಧಾಜ್ಞೆ ಇದ್ದ ಕಾರಣ ಅವರಿಗೆ ಶ್ರೀರಂಗಪಟ್ಟಣಕ್ಕೆ ಪ್ರವೇಶಿಸಲು ಅವಕಾಶ ಸಿಗಲಿಲ್ಲ. ಆದರೂ ಬಿಡದೆ, ಕಿರಂಗೂರು ಸರ್ಕಲ್‌ ಬಳಿ ತಾತ್ಕಾಲಿಕವಾಗಿ ಆಂಜನೇಯ ಮೂರ್ತಿ ಸ್ಥಾಪಿಸಿ ಭಜನೆ ಮಾಡಿದ್ದಾರೆ.

ಇದನ್ನೂ ಓದಿ: ಶ್ರೀರಂಗಪಟ್ಟಣ ಚಲೋ | ಬನ್ನಿ ಮಂಟಪದ ಬಳಿ ಹೈಟೆನ್ಷನ್‌

Exit mobile version