ಬೆಂಗಳೂರು: ದೇವರ ಹೆಸರಲ್ಲಿ, ದೇಶದ ಹೆಸರಲ್ಲಿ ಅಪಹಾಸ್ಯ ಮಾಡಿ ಭಾರತೀಯರ, ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿರುವ ಕಮಿಡಿಯನ್ ವೀರ್ ದಾಸ್ ವಿರುದ್ಧ ಬೆಂಗಳೂರಿನಲ್ಲಿ ಆಕ್ರೋಶದ ಕಟ್ಟೆ ಒಡೆದಿದೆ. ಬುಧವಾರ (ನ.೧೦) ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಏರ್ಪಡಿಸಲಾಗಿರುವ “ವೀರ್ ದಾಸ್ ವಾಂಟೆಡ್ ಶೋ”ಗೆ (Vir Das comedy show) ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿಂದು ಜಾಗರಣಾ ಸಮಿತಿಯವರು ಪ್ರತಿಭಟನೆ ನಡೆಸುತ್ತಿದ್ದು, ಲಾಠಿ ಚಾರ್ಜ್ ಮಾಡಲಾಗಿದೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ವೀರ್ ದಾಸ್ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು. ಧಾರ್ಮಿಕ ವಿಚಾರಗಳ ಕುರಿತು ಅಪಹಾಸ್ಯ ಮಾಡುತ್ತಿರುವ ವ್ಯಕ್ತಿಗೆ ಇಲ್ಲಿ ಅವಕಾಶ ಇಲ್ಲ. ಅದೂ ಅಲ್ಲದೆ, ಮಹಿಳೆಯರ ವಿರುದ್ಧವೂ ಲೇವಡಿ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಅವರ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಚೌಡಯ್ಯ ಮೆಮೋರಿಯಲ್ ಹಾಲ್ ಎದುರು ಪ್ರತಿಭಟಿಸಿದ್ದಾರೆ.
ಹಿಂದು ಜಾಗೃತ ವೇದಿಕೆ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಕಾರ್ಯಕರ್ತನೊಬ್ಬನ ತಲೆಗೆ ಪೆಟ್ಟುಬಿದ್ದಿದ್ದರೆ, ಮತ್ತೊಬ್ಬನ ಕಾಲಿಗೆ ಪೆಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Vir Das comedy show| ವೀರ್ ದಾಸ್ ಕಾಮಿಡಿ ಶೋ ನಿಷೇಧಿಸಲು ಹಿಂದೂ ಪರ ಸಂಘಟನೆಗಳ ಒತ್ತಾಯ
ವೀರ್ ದಾಸ್ ಫೋಟೊಗೆ ಚಪ್ಪಲಿ ಏಟು
ಚೌಡಯ್ಯ ಮೆಮೋರಿಯಲ್ ಹಾಲ್ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ವೀರ್ ದಾಸ್ ಫೋಟೊಗೆ ಚಪ್ಪಲಿಯಲ್ಲಿ ಹೊಡೆದು ಆಕ್ರೋಶವನ್ನು ಹೊರಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಆದರೆ, ಕಾರ್ಯಕ್ರಮ ರದ್ದು ಮಾಡುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.
ಹಿಂದುಗಳ ಬಗ್ಗೆ ಮಾತನಾಡೋರು ಹೆಚ್ಚುತ್ತಿದ್ದಾರೆ
ವೀರ್ ದಾಸ್ ಎಂಬಾತ ಹಿಂದುಗಳ ಬಗ್ಗೆ ಅವಹೇಳನ ಮಾಡುತ್ತಿದ್ದಾನೆ. ದೇವರ ಮೇಲೆ, ದೇಶದ ಮೇಲೆ ಆತ ಹಾಸ್ಯ ಮಾಡುತ್ತಿದ್ದಾನೆ. ಈದು ಅಕ್ಷಮ್ಯವಾಗಿದೆ. ಹಿಂದುಗಳ ಬಗ್ಗೆ ಮಾತನಾಡುವುದು ಹೆಚ್ಚಾಗುತ್ತಿದೆ. ಮುಸಲ್ಮಾನರು, ಕ್ರಿಶ್ಚಿಯನ್ನರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಆದರೆ, ಹಿಂದುಗಳ ಬಗ್ಗೆ ಮಾತ್ರ ಅಪಹಾಸ್ಯ ಹೆಚ್ಚುತ್ತಿದೆ. ಇದನ್ನು ಸಹಿಸಲಾಗದು ಎಂದು ಹಿಂದು ಜಾಗರಣ ವೇದಿಕೆಯ ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿಭಟನೆಗೆ ಅವಕಾಶ ಕೊಡ್ಡದಕ್ಕೆ ಹೆಚ್ಚಿದ ಆಕ್ರೋಶ
ಇದಕ್ಕೂ ಮೊದಲು ಚೌಡಯ್ಯ ಮೆಮೋರಿಯಲ್ ಹಾಲ್ ಬಳಿ ಪ್ರತಿಭಟನಾಕಾರರು ಜಮಾಯಿಸಿ ಸಂಜೆ ನಡೆಯುವ ಕಾರ್ಯಕ್ರಮಕ್ಕೆ ಅವಕಾಶ ಕೊಡಲಾರೆವು ಎಂದು ಘೋಷಣೆಗಳನ್ನು ಕೂಗಿದರು. ಆದರೆ, ಆಗ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದರು. ಈ ವೇಳೆ ಪೊಲೀಸರ ಜತೆಗೆ ತೀವ್ರ ವಾಗ್ವಾದ ನಡೆಯಿತು. ಬಳಿಕ ಪೊಲೀಸರು, ಹಿಂದು ಕಾರ್ಯಕರ್ತರ ಮಧ್ಯೆ ನೂಕಾಟವೂ ನಡೆಯಿತು. ಆಗ ಕೆಲ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಪ್ರತಿಭಟನೆ ವಾಪಸ್ ಪಡೆದು ತೆರಳುವಂತೆ ಪೊಲೀಸರು ಈ ಸಂದರ್ಭದಲ್ಲಿ ಮನವಿ ಮಾಡಿದ್ದಕ್ಕೆ ಒಪ್ಪದ ಪ್ರತಿಭಟನಾಕಾರರು, ಸಂಜೆವರೆಗೂ ಸ್ಥಳದಲ್ಲಿಯೇ ಇರುವುದಾಗಿ ಪಟ್ಟುಹಿಡಿದು ಕುಳಿತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಯಾರು ಈ ವೀರ್ ದಾಸ್?
ವೀರ್ ದಾಸ್ ಒಬ್ಬ ಕಮಿಡಿಯನ್ ಆಗಿದ್ದಾರೆ. ಇವರು 2005ರಿಂದ ಕಾಮಿಡಿ ಶೋಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ, ಹಾಸ್ಯಕ್ಕಿಂತ ಇವರು ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದ್ದಾರೆ. ದೇಶವಿರೋಧಿ, ಧರ್ಮ ವಿರೋಧಿ ಹೇಳಿಕೆಗಳು ಸೇರಿದಂತೆ ಕಾಪಿರೈಟ್ ವಿಷಯವಾಗಿಯೂ ಇವರ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಇತ್ತೀಚೆಗೆ ಅಮೆರಿಕದಲ್ಲಿ ಶೋವೊಂದನ್ನು ನಡೆಸಿಕೊಡುವಾಗ, “ನಾನು ಭಾರತದಿಂದ ಬಂದಿದ್ದೇನೆ. ನಮ್ಮ ದೇಶದಲ್ಲಿ ಸ್ತ್ರೀಯರನ್ನು ಪೂಜಿಸಲಾಗುತ್ತದೆ ಎಂದು ಹೇಳುವುದು ತೋರಿಕೆಗೆ ಮಾತ್ರ. ಏಕೆಂದರೆ ರಾತ್ರಿಯಾದರೆ ಅವರ ಮೇಲೆ ಸಾಮೂಹಿಕ ಅತ್ಯಾಚಾರಗಳು ನಡೆಯುತ್ತವೆ” ಎಂದು ಹೇಳಿಕೆ ನೀಡಿದ್ದರು. ಇದು ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಹಲವಾರು ದೂರುಗಳು ದಾಖಲಾಗಿವೆ.
ಇದನ್ನೂ ಓದಿ | ಪ್ರತಿಭಟನೆ ವೇಳೆ ಕಲ್ಲು ತೂರಾಟ; ಸಿಪಿಐಗೆ ಗಾಯ, ಆಸ್ಪತ್ರೆಗೆ ದಾಖಲು