ಕಲಬುರಗಿ: ʻʻನಾನು ಹಿಂದು ಧರ್ಮದವನು, ಹಿಂದು ಧರ್ಮದ ಬಗ್ಗೆ (Hindu Vs Hindutva) ನಾನು ಮಾತಾಡಿಯೇ ಇಲ್ಲ, ವಿರೋಧಾನೇ ಮಾಡಿಲ್ಲʼʼ- ಹೀಗೆಂದು ಹೇಳಿದ್ದಾರೆ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ.
ʻʻಯಾವ ಧರ್ಮದಲ್ಲೂ ಕೊಲೆ ಮಾಡಿ, ಹಿಂಸೆ ಮಾಡಿ ಅಂತ ಹೇಳಿಲ್ಲ. ನಾವೆಲ್ಲಾ ಹಿಂದುಗಳೇ, ನಾವೆಲ್ಲಾ ಹಿಂದು ಧರ್ಮ ಪಾಲನೆ ಮಾಡುವವರು ಅಲ್ವಾ? ನಮಗೆ ಎಲ್ಲೂ ಕೂಡಾ ಕ್ರೌರ್ಯಕ್ಕೆ ಹಿಂಸೆಗೆ ಅವಕಾಶ ಇಲ್ಲ ಎಂದು ನಾನು ಹೇಳಿದೆ ಅಷ್ಟೆʼʼ ಎಂದು ಸಿದ್ದರಾಮಯ್ಯ ಕಲಬುರಗಿಯಲ್ಲಿ ಹೇಳಿದ್ದಾರೆ.
ʻʻಯಾವುದೇ ಧರ್ಮ, ಹಿಂಸೆಗೆ ಪ್ರಚೋದನೆ ಮಾಡಿದರೆ ಅಥವಾ ಹಿಂಸೆಗೆ ಧರ್ಮದ ಚೌಕಟ್ಟು ನೀಡಿದರೆ ಅದು ಸರಿಯಲ್ಲ. ಯಾವ ಧರ್ಮದಲ್ಲಿಯೂ ಕ್ರೌರ್ಯ, ಹಿಂಸೆಯ ಬಗ್ಗೆ ಹೇಳುವುದಿಲ್ಲʼʼ ಎಂದು ಹೇಳಿದ್ದಾರೆ ಸಿದ್ದರಾಮಯ್ಯ.
ಅತಿ ಹೆಚ್ಚು ಹಿಂದುಗಳ ಕೊಲೆ ಬಿಜೆಪಿ ಕಾಲದಲ್ಲಿ
ʻʻಅತಿ ಹೆಚ್ಚು ಹಿಂದುಗಳ ಕೊಲೆ ಆಗಿದ್ದೇ ಬಿಜೆಪಿ ಅಧಿಕಾರಾವಧಿಯಲ್ಲಿʼʼ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಜಾಧ್ವನಿ ಕಾರ್ಯಕ್ರಮದ ನಿಮಿತ್ತ ಕಲಬುರಗಿಗೆ ಬಂದಿರುವ ಅವರು ಮಾಧ್ಯಮದ ಜತೆ ಮಾತನಾಡಿದರು.
ʻʻನಮ್ಮ ಕಾಲದಲ್ಲಿ ಹಿಂದುಗಳ ಮರ್ಡರ್ ಆಗಿಲ್ಲ. ಕೆಲವು ಹಿಂದುಗಳು, ಅಲ್ಪಸಂಖ್ಯಾತರ ಕೊಲೆ ನಡೆದಿರುವುದು ನಿಜ. ಆದರೆ, ಈ ಮರ್ಡರ್‌ಗಳು ಆಗಲು ಕಾರಣ ಬಿಜೆಪಿ ಮತ್ತು ಆರ್ ಎಸ್ ಎಸ್ ನವರು. ಕೆಲವೊಂದು ಸಾವುಗಳ ಬಗ್ಗೆ ಅವರು ಸುಳ್ಳು ಹೇಳುತ್ತಾರೆ. ಪರೇಶ್ ಮೇಸ್ತಾ ಕೊಲೆ ಎಂದು ಬೊಬ್ಬೆ ಹೊಡೆದರು. ಸಿಬಿಐ ತನಿಖೆಯಲ್ಲಿ ಅದು ಸುಳ್ಳು ಅಂತಾಯಿತು, ಸಹಜ ಸಾವು ಎಂದಾಯಿತು. ಬಿಜೆಪಿಯವರ ಎಲ್ಲ ಸುಳ್ಳುಗಳಿಗೆ ಉತ್ತರ ಕೊಡಲು ಆಗಲ್ಲʼʼ ಎಂದರು ಸಿದ್ದರಾಮಯ್ಯ.
ಸಿ.ಟಿ. ರವಿ ಮೇಲೆ ವಾಗ್ದಾಳಿ
ʻʻಪಾಕಿಸ್ತಾನದಲ್ಲಿ ಸ್ಪರ್ಧೆ ಮಾಡಿದ್ರೆ ಕಾಂಗ್ರೆಸ್ 150 ಸೀಟ್ ಗೆಲ್ಲಬಹುದುʼʼ ಎಂಬ ಸಿ ಟಿ ರವಿ ಹೇಳಿಕೆಗೆ ಸಿದ್ದರಾಮಯ್ಯ ಫುಲ್ ಗರಂ ಆದರು. ʻʻಕರ್ನಾಟಕ ಏನು ಪಾಕಿಸ್ತಾನದಲ್ಲಿ ಇದೆಯಾ ಭಾರತದಲ್ಲಿದೆಯಾ? ಎಲೆಕ್ಷನ್ ನಡೀತಿರೋದು ಪಾಕಿಸ್ತಾನದಲ್ಲಾ ಇಲ್ಲಾ ಕರ್ನಾಟಕದಲ್ಲ? ಏನು ಪೆದ್ದ ಪೆದ್ದಾಗಿ ಮಾತಾಡ್ತಿಯಾ ಅಂತ ಸಿ ಟಿ ರವಿಯನ್ನೇ ಕೇಳಿʼʼ ಎಂದರು.
ʻಸಾಮರಸ್ಯವನ್ನು ಹಾಳು ಮಾಡುವುದೇ ಬಿಜೆಪಿಯವರ ಕೆಲಸ. ಸಿ.ಟಿ ರವಿ ಇವರು ಆರೆಸ್ಸೆಸ್ ಗಿರಾಕಿಗಳು. ಬರಿ ಸುಳ್ಳು ಹೇಳುವುದೆ ಇವರ ಕೆಲಸʼʼ ಎಂದರು ಸಿದ್ದರಾಮಯ್ಯ.
ಇದನ್ನೂ ಓದಿ : Hindu Vs Hindutva : ಹಿಂದು ಅಂದಮೇಲೆ ಹಿಂದುತ್ವ ಒಪ್ಪಲೇ ಬೇಕು: ಸಿದ್ದು ಮಾತಿಗೆ ಮಂತ್ರಾಲಯ ಶ್ರೀ ತಿರುಗೇಟು