ಬಾಗಲಕೋಟೆ: ʻʻನಾನು ಹಿಂದು ಆದರೆ, ಹಿಂದುತ್ವ ಒಪ್ಪಲ್ಲ (Hindu Vs Hindutva)ʼʼ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ʻʻʻಸಿದ್ದರಾಮಯ್ಯ ಅವರ ದ್ವಂದ್ವ ಹೇಳಿಕೆಯಲ್ಲಿ ಅರ್ಥವೇ ಇಲ್ಲ. ನಾನು ಹಿಂದೂ ಅಂದಮೇಲೆ, ಹಿಂದುತ್ವವನ್ನು ಆಧರಿಸಲೇ ಬೇಕು, ಒಪ್ಪಲೇಬೇಕುʼʼ ಎಂದು ಸ್ವಾಮೀಜಿ ಬಾಗಲಕೋಟೆಯಲ್ಲಿ ಹೇಳಿದರು.
ʻʻಅವರು ಯಾವ ಹಿನ್ನೆಲೆಯಲ್ಲಿ ಈ ಮಾತು ಹೇಳುತ್ತಾರೆ ಎನ್ನುವುದು ಗೊತ್ತಿಲ್ಲ. ಹಿಂದುತ್ವ ವಿಚಾರದಲ್ಲಿ ಅವರಿಗೆ ಸ್ವಲ್ಪ ಅಭಿಪ್ರಾಯಭೇದ ಇರಬಹುದೇ ಹೊರತು ಹಿಂದುಗಳಾದವರೆಲ್ಲರೂ ಹಿಂದುತ್ವವನ್ನು ಆಧರಿಸಲೇಬೇಕು. ಹಿಂದುಗಳಲ್ಲಿ ಇರುವುದೇ ಹಿಂದುತ್ವʼʼ ಎಂದಿದ್ದಾರೆ ಸ್ವಾಮೀಜಿ
ನನ್ನ ತಾಯಿ ನೀನು, ನಿನಗೆ ಸಂತಾನವಿಲ್ಲ ಎಂದರೆ ಹೇಗೆ?
ಹಿಂದು ಮತ್ತು ಹಿಂದುತ್ವದ ಸಿದ್ದರಾಮಯ್ಯ ಹೇಳಿಕೆಯನ್ನು ತಾಯಿ ಮತ್ತು ಮಗುವಿಗೆ ಹೋಲಿಸಿದ್ದಾರೆ ಸ್ವಾಮೀಜಿ, ʻʻನೀನು ನನ್ನ ತಾಯಿ ಅಂತ ಯಾರನ್ನೋ ಹೇಳುವುದು, ಮತ್ತು ಆಮೇಲೆ ನಿನಗೆ ಮಕ್ಕಳೇ ಇಲ್ಲ, ನೀನು ನಿಸ್ಸಂತಾನಿ ಎಂದು ಹೇಳುವುದು ಎಷ್ಟು ಅಪಹಾಸ್ಯವೋ ಅಷ್ಟೇ ಅಪಹಾಸ್ಯ ಈ ಮಾತು. ತಾಯಿ ಎಂದ ಮೇಲೆ, ಅವಳಿಗೆ ನೀವು ಸಂತಾನ ಅಂತಾ ಆಯ್ತಲ್ಲʼʼ ಎಂದು ಸಿದ್ದುಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ ಸ್ವಾಮೀಜಿ.
ʻʻನಾನು ಹಿಂದು ಎಂದ ಮೇಲೆ ಹಿಂದುತ್ವಕ್ಕೆ ಗೌರವ ಕೊಡಲೇಬೇಕು. ಯಾವುದಾದರೂ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ವಿಚಾರ ವಿನಿಮಯ ಮಾಡಿಕೊಂಡು ಅದನ್ನು ಪರಿಹರಿಸಿಕೊಳ್ಳಬೇಕು. ಹಿಂದು ಎಂದು ಹೇಳಿಕೊಳ್ಳುತ್ತಾ ಹಿಂದುತ್ವ ವಿರೋಧಿಸುತ್ತೇನೆ ಎನ್ನುವುದು ಅರ್ಥಹೀನʼʼ ಎಂದು ಸ್ವಾಮೀಜಿ ಹೇಳಿದ್ದಾರೆ.
ಕುಮಾರಸ್ವಾಮಿ ಹೇಳಿಕೆ ಪರಿಶೀಲಿಸುವೆ ಎಂದು ಶ್ರೀಗಳು
ಈ ನಡುವೆ, ಬಾಹ್ಮಣ ಮುಖ್ಯಮಂತ್ರಿ ವಿಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಆಡಿದ ಮಾತಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ, ದೇವೇಗೌಡರು ಕೂಡಾ ತುಂಬಾ ದೈವ ಭಕ್ತರು. ಬ್ರಾಹ್ಮಣರು, ಗುರು ಹಿರಿಯರಲ್ಲಿ ಅತ್ಯಂತ ಶ್ರದ್ಧಾ ಭಕ್ತಿ ಇರುವಂತವರು. ದಂಪತಿ ಸಮೇತವಾಗಿ ಮಂತ್ರಾಲಯಕ್ಕೆ ಆಗಮಿಸಿದ್ದರು. ರಾಯರ ಸೇವೆ ಮಾಡಿ ಆಶೀರ್ವಾದ ಪಡೆದಿದ್ದಾರೆ. ಯಾವತ್ತೂ ಕೂಡಾ ಬ್ರಾಹ್ಮಣರ ಬಗ್ಗೆ ಹಗುರವಾಗಿ ಮಾತನಾಡಿಲ್ಲ ಎಂದು ಭಾವಿಸಿದ್ದೇವೆ. ಒಂದೊಮ್ಮೆ ಅವರು ಹಾಗೆ ಮಾತನಾಡಿದ್ದಾರೆ ಅಂದರೆ ಯಾವ ಹಿನ್ನೆಲೆಯಲ್ಲಿ ಆ ರೀತಿಯಾಗಿ ಮಾತನಾಡಿದ್ದಾರೆ ಎನ್ನುವುದನ್ನು ನಾವು ಪರಿಶೀಲಿಸಬೇಕಿದೆʼʼ ಎಂದು ಹೇಳಿದರು.
ಜಾತಿ ರಾಜಕಾರಣ ತೊಲಗಲಿ ಎಂದ ಸ್ವಾಮೀಜಿ
ʻʻಜಾತಿ ರಾಜಕಾರಣ ಎಲ್ಲ ಕಡೆಯಲ್ಲೂ ತೊಲಗಬೇಕು. ಸಂವಿಧಾನದಲ್ಲಿ ಇಂತವರೇ ಮುಖ್ಯಮಂತ್ರಿ ಆಗಬೇಕು, ಇಂಥವರು ಆಗಬಾರದು ಎಂದು ಹೇಳಿಲ್ಲ. ಹೀಗಿರುವಾಗ ನಮಗೆಲ್ಲ ಸಂವಿಧಾನ ಮುಖ್ಯವಾದದ್ದು. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲ ಜನಾಂಗಕ್ಕೂ ಸರಿಯಾದ ಅವಕಾಶ ನೀಡಿದ್ದಾರೆ. ಹೀಗಾಗಿ ಬ್ರಾಹ್ಮಣರು ಮುಖ್ಯಮಂತ್ರಿಗಳಾಗಬಾರದು ಎಂಬ ಹೇಳಿಕೆಗಳು ಸಂವಿಧಾನಕ್ಕೆ ವಿರೋಧʼʼ ಎಂದು ಬ್ರಾಹ್ಮಣ ಸಿಎಂ ವಿಚಾರಕ್ಕೆ ಸಂಬಂಧಿಸಿ ಶ್ರೀಗಳು ವಿವರಣೆ ನೀಡಿದರು.
ʻʻಬ್ರಾಹ್ಮಣ ಸಮುದಾಯ ಎಲ್ಲರಿಗೂ ಕ್ಷೇಮ ಕೋರುವ ಸಮುದಾಯ. ಬ್ರಾಹ್ಮಣ ಸಮುದಾಯವನ್ನು ನಿಂದಿಸುವುದನ್ನು ಸಂಪೂರ್ಣವಾಗಿ ಖಂಡಿಸುತ್ತೇವೆ. ಯಾವುದೇ ಸಮುದಾಯವನ್ನು ಯಾರೂ ಕೂಡಾ ತೆಗಳಬಾರದು. ಯಾವುದೇ ಸಮುದಾಯವನ್ನು ತೆಗಳಿದರೆ ಸಂವಿಧಾನವನ್ನು ಅಗೌರವಿಸಿದ ಹಾಗೆʼʼ ಎಂದು ಹೇಳಿದ ಅವರು, ʻಬ್ರಾಹ್ಮಣರು ಅರ್ಹರಾಗಿದ್ದು, ಸಮಾಜಮುಖಿಗಳಾಗಿದ್ದರೆ ಸಿಎಂ ಆಗುವುದಕ್ಕೆ ಯಾವುದೇ ಅಡ್ಡಿ ಇಲ್ಲʼʼ ಎಂದರು.
ಇದನ್ನೂ ಓದಿ | Hindutva fight : ಹಿಂದು-ಹಿಂದುತ್ವ ಬೇರೆ- ಸಿದ್ದರಾಮಯ್ಯ ಪುನರುಚ್ಚಾರ, ಒಂದೇ ನಾಣ್ಯದ ಎರಡು ಮುಖ ಎಂದ ಸಿ.ಟಿ ರವಿ