Site icon Vistara News

Hanuman Chalisa: ನಗರ್ತಪೇಟೆ ಹಲ್ಲೆ ಕೇಸ್‌ ದಿಕ್ಕು ತಪ್ಪಿಸಲು ಹಿಂದು ಯುವಕರ ಬಂಧನ‌: ಹರಿಪ್ರಕಾಶ್ ಕೋಣೆಮನೆ ಆರೋಪ

Hariprakash Konemane

ಬೆಂಗಳೂರು: ನಗರ್ತಪೇಟೆಯಲ್ಲಿ ಹನುಮಾನ್ ಚಾಲೀಸಾ (Hanuman Chalisa) ಹಾಕಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ‌ ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ, ಹಿಂದು ವಿರೋಧಿ ನೀತಿಯಿಂದ ಸಮಾಜಘಾತುಕ ಶಕ್ತಿಗಳ ಅಟಾಟೋಪ ಎಲ್ಲೆ ಮೀರಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಹಿಂದುಗಳ ಧಾರ್ಮಿಕ ಮನೋಭಾವನೆಗೆ ಧಕ್ಕೆ ತರುವಂತಹ ಹಲವು ಘಟನೆಗಳು ನಡೆಯುತ್ತಿದ್ದು‌, ಇದು ಅದರ ಮುಂದುವರಿದ ಭಾಗವಾಗಿದೆ. ಹಿಂದುಗಳು ತಮ್ಮ ದೇವರ ಆರಾಧನೆಯನ್ನೂ ಮಾಡಬಾರದು ಅಂದರೆ ಏನರ್ಥ? ಮಸೀದಿಗಳಿಂದ ಇಡೀ ಊರಿಗೆ ಕೇಳುವಷ್ಟು ದೊಡ್ಡದಾಗಿ ಆಜಾನ್ ಕೂಗುವಾಗ ಹಿಂದುಗಳು ಸಹಿಸಿಕೊಳ್ಳುವುದಿಲ್ಲವೇ? ಹನುಮಾನ್ ಚಾಲೀಸಾ ಹಾಕಿದರೆ ಬಂದು ಹೊಡೆಯೋ ಮಟ್ಟಕ್ಕೆ ಬಂದಿದ್ದಾರೆ ಅಂದರೆ, ಇದು ಆತಂಕಕಾರಿ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾದಿ ತಪ್ಪಿದೆ’ ಎಂದಿದ್ದಾರೆ.

ಈ ಪ್ರಕರಣದಲ್ಲಿ ಹಿಂದು ಯುವಕರನ್ನು ಬಂಧಿಸುವ ಮೂಲಕ ಸರ್ಕಾರ ಪ್ರಕರಣದ ದಾರಿ ತಪ್ಪಿಸಲಾಗುತ್ತಿದೆಯೇ ಎಂದು ಸಂಶಯ ಮೂಡುತ್ತಿದೆ. ಮೊದಲಿನಿಂದಲೂ ಅಲ್ಪಸಂಖ್ಯಾತರನ್ನು ಓಲೈಸಿಕೊಂಡು ಬಂದಿರುವ ಕಾಂಗ್ರೆಸ್ ಆರೋಪಗಳ ರಕ್ಷಣೆಗಾಗಿ ಹಿಂದು ಯುವಕರನ್ನೂ ಬಂಧಿಸಿದೆಯೇ ಎನ್ನುವ ಅನುಮಾನ ವ್ಯಕ್ತಪಡಿಸಿರುವ ಅವರು, ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿ ಮತ್ತು ಅವರ ಹಿಂದಿರುವ ಸಮಾಜಘಾತುಕ ಶಕ್ತಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಸರ್ಕಾರ ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Hanuman Chalisa : ಇವತ್ತು ಜೈಲ್, ನಾಳೆ ಬೇಲ್, ಮತ್ತೆ ಅದೇ ಖೇಲ್‌; ನಗರ್ತ ಪೇಟೆ ಕಿರಾತಕರ ಸ್ಟೇಟಸ್‌

ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದರೆ ರಾಜ್ಯಾದ್ಯಂತ ಹನುಮಾನ್ ಚಾಲೀಸಾ ಬಹಿರಂಗ ಪಠಣ, ಪ್ರಸಾರದ ಅಭಿಯಾನ ಕೈಗೊಳ್ಳಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ.

ಏನಿದು ಘಟನೆ?

ಬೆಂಗಳೂರಿನ ನಗರ್ತಪೇಟೆಯಲ್ಲಿ ಮೊಬೈಲ್ ಸರ್ವೀಸ್ ಅಂಗಡಿ ಮಾಲೀಕ ಮುಖೇಶ್, ಭಾನುವಾರ ಸಂಜೆ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಭಕ್ತಿಗೀತೆ ಹಾಕಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಅಂಗಡಿಯತ್ತ ನುಗ್ಗಿದ ಐದು ಜನರ ಗುಂಪು, ನಾವು ನಮಾಜ್ ಮಾಡುವ ವೇಳೆ ಹನುಮಾನ್ ಚಾಲೀಸಾವನ್ನು ಜೋರಾಗಿ ಹಾಕಿದ್ದೇಕೆ ಎಂದು ಪ್ರಶ್ನಿಸಿ, ಭಜನೆಯನ್ನು ನಿಲ್ಲಿಸುವಂತೆ ಧಮ್ಕಿ ಹಾಕಿದ್ದಾರೆ. ಅದಕ್ಕೆ ಮುಖೇಶ್ ಆಕ್ಷೇಪ ವ್ಯಕ್ತಪಡಿಸಿದಾಗ ಐದೂ ಜನರೂ ಸೇರಿ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಈ ಎಲ್ಲ ಘಟನೆಯೂ ಅಂಗಡಿಯ ಸಿಸಿಟಿವಿಯಲ್ಲಿ ದಾಖಲಾಗಿದೆ. ನಂತರ ಹಲ್ಲೆಗೊಳಗಾಗಿ ಗಾಯಗೊಂಡ ಅಂಗಡಿ ಮಾಲೀಕ ಮುಖೇಶ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ | Hanuman Chalisa: ನಗರ್ತಪೇಟೆ ಹಲ್ಲೆ ಕೇಸ್‌; ರಾಜ್ಯದಲ್ಲಿ ಹೆಚ್ಚಿದ ಹಿಂದೂ ವಿರೋಧಿ ನಡೆ: ಪ್ರಲ್ಹಾದ್‌ ಜೋಶಿ ಆಕ್ರೋಶ

ಭಾನುವಾರ ಸಂಜೆ 6.30ರ ಸುಮಾರಿಗೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳಾದ ಸುಲೇಮಾನ್, ಶಹನವಾಜ್ ಮತ್ತು ರೋಹಿತ್ ನನ್ನು ಬಂಧಿಸಿದ್ದು, ಇಬ್ಬರು ತಲೆಮರಿಸಿ ಕೊಂಡಿದ್ದಾರೆ. ಹನುಮಾನ್ ಚಾಲೀಸಾ ಪಠಣೆಗಾಗಿ ಹಲ್ಲೆಯಾದ ಪ್ರಕರಣದಲ್ಲಿ ಹಿಂದು ಯುವಕರನ್ನು ಬಂಧಿಸಿರುವುದು ಸಂಶಯಕ್ಕೆ ಕಾರಣವಾಗಿದೆ.

Exit mobile version