ಶಿವಮೊಗ್ಗ: ವೀರ ಸಾವರ್ಕರ್ ಅವರು ಹಿಂದು ಮಹಾಸಭಾ ಮೂಲಕ ಹಿಂದುತ್ವದ (Hindutva) ರಾಜನೀತಿ ಮಾಡಿದ್ದರು. ಹಿಂದು, ಹಿಂದಿ, ಹಿಂದುಸ್ತಾನ್ ಅವರ ಘೋಷಣೆಯಾಗಿತ್ತು. ಹಿಂದುಸ್ತಾನ್ ಒಂದೇ ರಾಷ್ಟ್ರ ಆಗಿರಬೇಕು. ಹಿಂದಿ ರಾಷ್ಟ್ರಭಾಷೆ ಆಗಿರಬೇಕು. ಹಿಂದು ಸಂಸ್ಕೃತಿಯೊಂದೇ ಇರಬೇಕು ಎಂಬುದು ಅವರ ಗುರಿಯಾಗಿತ್ತು ಎಂದು ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೇಳಿದರು.
ಅವರು ಶುಕ್ರವಾರ ರಾತ್ರಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ವೀರ ಸಾವರ್ಕರ್ ಅವರು ದೇಶಕ್ಕಾಗಿ, ದೇಶದ ಶ್ರೇಯೋಭಿವೃದ್ಧಿಗಾಗಿ ಬಹಳವೇ ಶ್ರಮಪಟ್ಟಿದ್ದರು. ಆದರೆ, ಅವರ ಶ್ರಮಕ್ಕೆ ತಕ್ಕಂತೆ ಯಶಸ್ಸು ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದುತ್ವದ ಪರಿಕಲ್ಪನೆ ಸಾಕಾರಕ್ಕೆ ಮೊದಲೇ ಪಾಕಿಸ್ತಾನ ನಿರ್ಮಾಣ ಆಗಿ ಹೋಯಿತು. ಆದರೆ, ಈಗ ಹಿಂದು ಸಂಸ್ಕೃತಿಯನ್ನು ಬೆಳೆಸಲು ಕಾಲ ಕೂಡಿ ಬಂದಿದೆ. ಅಲ್ಲದೆ, ಹಿಂದು ಜಾಗೃತನಾಗಿದ್ದಾನೆ. ಈಗಂತೂ ಸಾಮಾಜಿಕ ಜಾಲತಾಣವು ಬಹು ದೊಡ್ಡ ಮಾಧ್ಯಮವಾಗಿದೆ. ಆ ಮೂಲಕ ಎಲ್ಲರನ್ನೂ ಜಾಗೃತಗೊಳಿಸೋಣ ಎಂದು ಸಾತ್ಯಕಿ ಹೇಳೀದರು.
ಇಂದು ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ
ಶ್ರೀಗಂಧ ಸಂಸ್ಥೆ ಮತ್ತು ಸಾಮಗಾನ ವತಿಯಿಂದ ಶನಿವಾರ (ಅ.೨೨) ಸಂಜೆ 5 ಗಂಟೆಗೆ ಸೈನ್ಸ್ ಮೈದಾನದಲ್ಲಿ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. 1944ರಲ್ಲಿ ಸಾವರ್ಕರ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ನೆನಪಿಗಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮೊದಲು ನಗರದ ಬಸ್ ನಿಲ್ದಾಣದಿಂದ ಸೈನ್ಸ್ ಮೈದಾನದವರೆಗೆ, ಆಟೋ, ಕಾರು, ಬೈಕ್ ರ‌್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ | ಶಿವಮೊಗ್ಗಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಭೇಟಿ