ಬಾಗಲಕೋಟೆ: ಹಿಂದು ಜಾಗರಣಾ ವೇದಿಕೆಯ ಮುಖಂಡ ಜಗದೀಶ್ ಕಾರಂತ (Jagadish Karanth) ಅವರ ಭಾಷಣ ತುಣಕೊಂದನ್ನು ತಿರುಚಿದ ಆರೋಪದಡಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಮೂವರು ಯುವಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಾರ್ಯಕ್ರಮವೊಂದರಲ್ಲಿ ಹಿಂಜಾವೇ ಮುಖಂಡ ಜಗದೀಶ್ ಕಾರಂತ ಅವರು ಭಾಷಣ ಮಾಡಿದ್ದರು. ಈ ಭಾಷಣದ ವಿಡಿಯೊವನ್ನು ಇಟ್ಟುಕೊಂಡು ಅದನ್ನು ತಮಗೆ ಬೇಕಾದಂತೆ ತಿರುಚಿಕೊಂಡಿದ್ದಾರೆ. ಇಸ್ಲಾಂ ಧರ್ಮವನ್ನು ಹೊಗಳಿದಂತೆ ತಿರುಚಲಾಗಿದೆ ಎಂಬ ದೂರು ಕೇಳಿಬಂದಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ತಿರುಚಿದ ಭಾಷಣದಲ್ಲೇನಿದೆ?
“ಆ ಇಸ್ಲಾಂ ಸಾಧಾರಣವಾದ ಇಸ್ಲಾಂ ಅಲ್ಲ, ಇಡೀ ಜಗತ್ತನ್ನೇ ಗೆದ್ದಂತಹ ಇಸ್ಲಾಂ..” ಎಂದು ಜಗದೀಶ್ ಕಾರಂತ ಅವರು ಹೇಳಿದ ರೀತಿಯಲ್ಲಿ ಆಡಿಯೊವನ್ನು ಮಾರ್ಪಾಡು ಮಾಡಲಾಗಿದೆ. ಅಲ್ಲದೆ, ಈ ವಿಡಿಯೊಕ್ಕೆ “ದಿ ಪವರ್ ಆಫ್ ಇಸ್ಲಾಂ” ಎಂಬ ತಲೆಬರಹವನ್ನೂ ನೀಡಲಾಗಿತ್ತು. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಇದನ್ನು ಗಮನಿಸಿದ ಹಿಂದುಪರ ಕಾರ್ಯಕರ್ತರು ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಎಫ್ಐಆರ್ ದಾಖಲಿಸಿಕೊಂಡ ಕೆರೂರು ಪೊಲೀಸರು, ಆರೋಪಿಗಳಾದ ಅಫ್ರಿದಿ, ಶಾರುಖ್ ಹಾಗೂ ಸಾಧಿಕ್ ಎಂಬುವವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಎನ್‌ಐಎ ಎಫ್‌ಐಆರ್ ದಾಖಲಿಸಿ ನಾಲ್ಕೇ ದಿನಕ್ಕೆ ಮಂಗಳೂರಲ್ಲಿ ಸ್ಫೋಟಿಸಿದ್ದ ಶಾರಿಕ್!