Site icon Vistara News

PSI Scam | ಅಧಿಕಾರಿಗಳ ಭಂಡತನಕ್ಕೆ ಪೆಟ್ಟು; ಎಡಿಜಿಪಿ ಅಮೃತ್‌ ಪಾಲ್‌ ಬಂಧನಕ್ಕೆ ಈ ಅಂಶಗಳು ಮುಳುವಾಯ್ತೇ?

ಅಮೃತ್‌ ಪಾಲ್

ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಎಡಿಜಿಪಿ ಅಮೃತ್‌ ಪಾಲ್‌ ಬಂಧನವು ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ. ಬಹುಶಃ ಪೊಲೀಸ್ ಇಲಾಖೆಯಲ್ಲಿ ಒಬ್ಬ ಐಪಿಎಸ್ ರೇಂಜ್ ಅಧಿಕಾರಿಯನ್ನು ಬಂಧಿಸಿರುವುದು ಇದೇ ಮೊದಲು ಎನ್ನಬಹುದು. ತಾವು ಪ್ರಭಾವಿಗಳು, ತಮಗೆ ಯಾವ ಕೋರ್ಟ್‌, ಕಾನೂನು ಏನೂ ಮಾಡಲಾರದು ಎಂದುಕೊಂಡವರ ಭಂಡತನಕ್ಕೆ ಪೆಟ್ಟು ಬಿದ್ದಂತಹ ಪ್ರಕರಣ ಇದಾಗಿದೆ. ಐಪಿಎಸ್ ಅಧಿಕಾರಿಯನ್ನು ಬಂಧಿಸುವುದಕ್ಕೆ ಕಾರಣವಾದ ಅಂಶಗಳೇನು? ಅವರಿಗೆ ಮುಳುವಾದ ಕಾರಣಗಳ ಏನು ಎಂಬ ಬಗ್ಗೆ ವಿವರಣೆ ಇಲ್ಲಿದೆ.

ಮೂರು ಬಾರಿ ವಿಚಾರಣೆ ನಡೆಸಿದ ಬಳಿಕ ನಾಲ್ಕನೇ ಬಾರಿ ವಿಚಾರಣೆ ವೇಳೆ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ನಂತರ 10 ದಿನಗಳ ಕಾಲ ಅಮೃತ್‌ ಪಾಲ್‌ ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು. ಇದರ ಜತೆಗೆ ಪಾಲ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಒಬ್ಬ ಐಪಿಎಸ್ ಮಟ್ಟದ ಅಧಿಕಾರಿಯನ್ನು ಬಂಧನ ಮಾಡಬೇಕಾದರೆ ಅದಕ್ಕೆ ಪ್ರಬಲ ಸಾಕ್ಷಿಗಳು ಬೇಕೇ ಬೇಕು. ಅಂದ ಹಾಗೆ ಅಮಾನತುಗೊಂಡ ಎಡಿಜಿಪಿ ಬಂಧನಕ್ಕೆ ಬಹುಮುಖ್ಯವಾಗಿ ಕಾರಣವಾಗಿದ್ದು ಸಿಐಡಿ ಕಚೇರಿಯ ಆವರಣದ ನೇಮಕಾತಿ ವಿಭಾಗದ ಕಚೇರಿಯಾಗಿದೆ. ಅಕ್ರಮ ನೇಮಕಾತಿ ಪ್ರಕರಣದಲ್ಲಿ ಅಮೃತ್ ಪಾಲ್ ಭಾಗಿಯಾಗಿದ್ದರೆ ಅಂತಹ ಚಟುವಟಿಕೆ ಎಲ್ಲವೂ ಆ ಕಚೇರಿಯಲ್ಲಿಯೇ ಆಗಿರುತ್ತದೆ. ಅದಲ್ಲದೆ ಒಎಂಆರ್ ಶೀಟ್‌ಗಳನ್ನು ತಿದ್ದಿದ ಭದ್ರತಾ ಕೊಠಡಿ ಇರುವುದು ಕೂಡ ನೇಮಕಾತಿ ವಿಭಾಗದ ಎಡಿಜಿಪಿ ಸುಪರ್ಧಿಯಲ್ಲಿಯೇ ಆಗಿದೆ.

ಸೋಮವಾರ ಕಸ್ಟಡಿಗೆ ತೆಗೆದುಕೊಂಡ ಸಿಐಡಿ ಪೊಲೀಸರು 10 ದಿನಗಳ ಕಾಲ ವಿಚಾರಣೆ ನಡೆಸಲಿದ್ದಾರೆ. ಈ ವೇಳೆ ತನಿಖೆ ಸಂಪೂರ್ಣವಾಗಿ ಸಿಐಡಿ ಕಚೇರಿಯ ಒಳಗೇ ನಡೆಯಲಿದೆ. ಸ್ಥಳಮಹಜರು ಹಾಗೂ ವಿಚಾರಣೆ ಎಲ್ಲವೂ ವಿಡಿಯೋ ಚಿತ್ರೀಕರಣದ ಮುಖಾಂತರವೇ ನಡೆಯಲಿದೆ. ಇನ್ನು ಡಿವೈಎಸ್ಪಿ ಶಾಂತಕುಮಾರ್ ಹಾಗೂ ಪ್ರಥಮ ದರ್ಜೆ ಸಹಾಯಕ ಹರ್ಷ ವಿಚಾರಣೆ ನಡೆಸಿದ ಸಂಧರ್ಭದಲ್ಲಿ ಅಮೃತ್ ಪಾಲ್ ಅವರ ಭಾಗಿ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದರು. ಇಲ್ಲಿ ಒಎಂಆರ್ ಶೀಟ್‌ಗಳಿರುವ ಸ್ಟ್ರಾಂಗ್ ರೂಂಗೆ ಪ್ರವೇಶಿಸುವ ಅಧಿಕಾರವು ಎಡಿಜಿಪಿ ಅಧಿಕಾರಿಗೆ ಮಾತ್ರವೇ ಇರುತ್ತದೆ. ಆದರೆ, ಇಲ್ಲಿ ಅಳವಡಿಸಲಾಗಿರುವ ಬಯೋಮೆಟ್ರಿಕ್‌ನಲ್ಲಿ ಮತ್ತಿಬ್ಬರ ಬೆರಳು ಗುರುತು ಸಹ ಸೇರ್ಪಡೆಗೊಂಡಿತ್ತು. ಅದು ಡಿವೈಎಸ್ಪಿ ಶಾಂತಕುಮಾರ್ ಹಾಗೂ ಎಫ್‌ಡಿಎ ಹರ್ಷ ಅವರಿಬ್ಬರದ್ದಾಗಿತ್ತು. ಅಕ್ರಮ ಮಾಡಲೆಂದೇ ಅಮೃತ್ ಪಾಲ್ ಅವರು‌ ಇವರಿಬ್ಬರಿಗೆ ಬಯೋಮೆಟ್ರಿಕ್‌ ಪ್ರವೇಶಕ್ಕೆ ಅಧಿಕಾರವನ್ನು ನೀಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ | ಭ್ರಷ್ಟಾಚಾರ ಪ್ರಕರಣದ ಆರೋಪಿಗಳಾದ ಐಪಿಎಸ್‌ ಅಮೃತ್‌ ಪಾಲ್‌ – ಐಎಎಸ್‌ ಜೆ. ಮಂಜುನಾಥ್‌ ಸಸ್ಪೆಂಡ್‌

ಸ್ಟ್ರಾಂಗ್ ರೂಂ ಪ್ರವೇಶಕ್ಕೆ ಅವಕಾಶ ಇದ್ದಿದ್ದರಿಂದ ಶಾಂತಕುಮಾರ್ ಹಾಗೂ ಹರ್ಷ ಅವರಿಬ್ಬರ ವರ್ತನೆಯೇ ಬದಲಾಗಿತ್ತು. ಇದರ ಜತೆಗೆ ಅಮೃತ್ ಪಾಲ್ ಅವರು ಬಹುತೇಕ ಕಚೇರಿಗೆ ಬರುವುದನ್ನೇ ನಿಲ್ಲಿಸಿಬಿಟ್ಟಿದ್ದರು.‌‌ ಇದರಿಂದಾಗಿ ಈ ಇಬ್ಬರೇ ಅಲ್ಲಿನ ಸಂಪೂರ್ಣ ಅಕ್ರಮಗಳನ್ನು ನೋಡಿಕೊಳ್ಳುತ್ತಿದ್ದರು. ಇನ್ನು ಒ‌ಎಂಆರ್ ಶೀಟ್‌ಗಳನ್ನು ತಿದ್ದುವ ಕೆಲಸವನ್ನ ಬೆಳಗಿನ ಜಾವ ಅಥವಾ ರಾತ್ರಿ ಸಂದರ್ಭದಲ್ಲಿ ಆಗುತ್ತಿದ್ದಿದ್ದಲ್ಲದೆ, ಇದಕ್ಕಾಗಿ ಸಿಸಿಟಿವಿ ಕ್ಯಾಮೆರಾವನ್ನು ಆಫ್ ಮಾಡಿಕೊಳ್ಳಲಾಗುತ್ತಿತ್ತು. ಈ ವಿಷಯವು ತನಿಖೆ ವೇಳೆ ಗಮನಕ್ಕೆ ಬಂದಿದ್ದು, ಪಾಲ್‌ ಬಂಧನಕ್ಕೆ ಮತ್ತಷ್ಟು ಪುರಾವೆ ಸಿಗಲು ಕಾರಣವಾಯಿತು.

ಇನ್ನು ಕೆಲ ಕೋಡ್ ವರ್ಡ್‌ಗಳನ್ನು ಬಳಸಿ ಅಕ್ರಮದ ಬಗ್ಗೆ ಮಾತನಾಡುತ್ತಿರುವ ಚಾಟಿಂಗ್‌, ಮೆಸೇಜ್‌ಗಳೂ ಸಿಐಡಿಗೆ ಸಿಕ್ಕಿವೆ. ಸದ್ಯ ಸಿಐಡಿ ಅಧಿಕಾರಿಗಳು ಪುನಃ ಕಸ್ಟಡಿಗೆ ಪಡೆದಿದ್ದ ಡಿವೈಎಸ್ಪಿ ಸೇರಿ‌ ನಾಲ್ಕು ಜನರನ್ನು ಮುಖಾಮುಖಿ ಕೂರಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಬೆಂಗಳೂರು ಕಮಿಷನರ್‌ ಆಗುವ ಆಸೆ
ಪಂಜಾಬ್‌ ರಾಜ್ಯದ ಮನ್ನಾ ಮೂಲದ ಅಮೃತ್‌ ಪಾಲ್‌ 1995ನೇ ಬ್ಯಾಚ್‌ ಐಪಿಎಸ್‌ ಅಧಿಕಾರಿ. 1997ರಲ್ಲಿ ರಾಜ್ಯ ಪೊಲೀಸ್‌ ಇಲಾಖೆಗೆ ಸೇರಿದ ಅವರು ಉಡುಪಿ, ಹಾಸನ ಹಾಗೂ ಬಳ್ಳಾರಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಡಿಐಜಿಯಾಗಿ ಮುಂಬಡ್ತಿ ಪಡೆದ ಅವರು, ಕರಾವಳಿ ಪಡೆ ಹಾಗೂ ನಕ್ಸಲ್‌ ನಿಗ್ರಹ ಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಪೂರ್ವ ಹಾಗೂ ಕೇಂದ್ರ ವಲಯದ ಐಜಿಪಿಯಾಗಿಯೂ ಕಾರ್ಯ ನಿರ್ವಹಿಸಿದ್ದ ಅವರು, 2020ರಲ್ಲಿ ಎಡಿಜಿಪಿ ಹುದ್ದೆಗೆ ಮುಂಬಡ್ತಿ ಪಡೆದು ನೇಮಕಾತಿ ವಿಭಾಗಕ್ಕೆ ವರ್ಗಾವಣೆಗೊಂಡಿದ್ದರು. ಪಿಎಸ್‌ಐ ಹಗರಣ ಬೆಳಕಿಗೆ ಬಂದ ನಂತರ ರಾಜ್ಯ ಆಂತರಿಕ ಭದ್ರತಾ ವಿಭಾಗಕ್ಕೆ ಅವರು ಎತ್ತಂಗಡಿಯಾಗಿದ್ದರು.

2020ರಲ್ಲಿ ಎಡಿಜಿಪಿ ಹುದ್ದೆಗೆ ಮುಂಬಡ್ತಿ ಪಡೆದ ಅಮೃತ್‌ ಪಾಲ್‌, ಹಿರಿಯ ಅಧಿಕಾರಿಗಳನ್ನು ಪಕ್ಕಕ್ಕೆ ಸರಿಸಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಹುದ್ದೆಗೆ ತೀವ್ರ ಲಾಬಿ ನಡೆಸಿದ್ದರು. ಇದಕ್ಕಾಗಿ ಅಗತ್ಯವಾದ ಆರ್ಥಿಕ ವೆಚ್ಚ ಭರಿಸುವುದಾಗಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಆದರೆ, ಕೊನೆಗೆ ಸೇವಾ ಹಿರಿತನದ ಮೇಲೆ ಸರ್ಕಾರ ಭಾಸ್ಕರ್‌ ರಾವ್‌ ಹಾಗೂ ಬಳಿಕ ಕಮಲ್‌ ಪಂತ್‌ಗೆ ಅವಕಾಶ ನೀಡಿತ್ತು. ಇದೀಗ ಪಿಎಸ್‌ಐ ಅಕ್ರಮದಲ್ಲಿ ಭಾಗಿಯಾದ ಆರೋಪದಲ್ಲಿ ಅಮೃತ್‌ ಪಾಲ್‌ ಬಂಧನವಾಗಿ, ಸೇವೆಯಿಂದ ಅಮಾನತುಗೊಂಡಿದ್ದಾರೆ.

ಇದನ್ನೂ ಓದಿ | PSI Scam: 545 ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕದಲ್ಲಿ ಅಕ್ರಮ ನಡೆದಿದ್ದು ಈ ಎರಡು ರೀತಿಯಲ್ಲಿ

Exit mobile version