Site icon Vistara News

Hoax Bomb Threat: ದೆಹಲಿ ಬೆನ್ನಲ್ಲೇ ಬೆಂಗಳೂರಿನ ಪ್ರಮುಖ‌ ಆಸ್ಪತ್ರೆಗೆ ಹುಸಿ ಬಾಂಬ್ ಬೆದರಿಕೆ‌; ಆತಂಕ ಸೃಷ್ಟಿ

Hoax Bomb Threat

ಬೆಂಗಳೂರು: ದೆಹಲಿಯ ವಿಮಾನ ನಿಲ್ದಾಣ ಹಾಗೂ ಹಲವು ಆಸ್ಪತ್ರೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಇ-ಮೇಲ್‌ (Hoax Bomb Threat) ಬಂದ ಬೆನ್ನಲ್ಲೇ ಬೆಂಗಳೂರಿನ ಪ್ರಮುಖ‌ ಆಸ್ಪತ್ರೆಗೆ ಹುಸಿ ಬಾಂಬ್ ಬೆದರಿಕೆ‌ ಸಂದೇಶ ಬಂದಿದ್ದರಿಂದ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಭಾನುವಾರ ನಡೆದಿದೆ. ನಾಗವಾರದ ಸೇಂಟ್ ಫಿಲೋಮಿನಾ ಆಸ್ಪತ್ರೆ‌ಯಲ್ಲಿ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ಇಲಾಖೆಯ ಸಿಟಿ ಎಸ್.ಬಿ.ಗೆ ಇ-ಮೇಲ್ ಬಂದಿದೆ. ಹೀಗಾಗಿ ತಕ್ಷಣ ಆಸ್ಪತ್ರೆಗೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಗೋವಿಂದ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಸಂಜೆ ಬಾಂಬ್‌ ಇಡಲಾಗಿದೆ ಎಂಬ ಸಂದೇಶ ಬಂದ ಕೂಡಲೇ ಅಲರ್ಟ್ ಆದ ಪೊಲೀಸರು, ಕೂಡಲೇ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಯಾವುದೇ ಬಾಂಬ್‌ ಅಥವಾ ಸ್ಫೋಟಕಗಳು ಕಾಣದಿದ್ದರಿಂದ, ಹುಸಿ‌ ಬಾಂಬ್ ಬೆದರಿಕೆ ಬಂದಿರುವುದು ಖಚಿತವಾಗಿದೆ.

ಇದನ್ನೂ ಓದಿ | Prajwal Revanna Case: ದಿಕ್ಕು ತಪ್ಪಿದೆ ಪ್ರಜ್ವಲ್ ರೇವಣ್ಣ ಕೇಸ್‌; ಡಿಕೆಶಿ ವಿಚಾರಣೆಯೂ ಆಗಲಿ ಎಂದ ಬಸವರಾಜ ಬೊಮ್ಮಾಯಿ

ಏರ್​ಪೋರ್ಟ್​ ಸೇರಿ ದೆಹಲಿಯ ಹತ್ತಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ

Bomb Threat

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಿಮಾನ ನಿಲ್ದಾಣ (delhi airport) ಮತ್ತು ಹಲವಾರು ಆಸ್ಪತ್ರೆಗಳಿಗೆ (hospital) ಭಾನುವಾರ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ (Bomb Threat) ಸಂದೇಶಗಳು ಬಂದವು. ಇದರಿಂದಾಗಿ ಸ್ಥಳೀಯರು ಆತಂಕಕ್ಕೆ ಒಳಗಾದರು. ಅಧಿಕಾರಿಗಳು ಬಹು ಬಾಂಬ್ ನಿಷ್ಕ್ರಿಯ ದಳಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ, ವಾಹನಗಳನ್ನು ನಿಯೋಜಿಸಿದರು. ಅಗ್ನಿಶಾಮಕ ಅಧಿಕಾರಿಗಳ ಪ್ರಕಾರ, ಮೊದಲು ಬುರಾರಿ ಆಸ್ಪತ್ರೆಗೆ ಬಾಂಬ್ ಬೆದರಿಕೆ ಬಂದಿದ್ದು, ಅಪರಾಹ್ನ 3.15ರ ಸುಮಾರಿಗೆ ಸಂದೇಶ ಬಂದಿರುವುದಾಗಿ ವರದಿಯಾಗಿದೆ.

ಹಲವು ಆಸ್ಪತೆಗಳಿಗೆ ಬೆದರಿಕೆ

ಬಾಂಬ್ ಬೆದರಿಕೆಯ ಬಗ್ಗೆ ಬುರಾರಿ ಆಸ್ಪತ್ರೆಗೆ ಇ-ಮೇಲ್ ಬಂದಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು, ಬಾಂಬ್ ಸ್ಕ್ವಾಡ್, ಶ್ವಾನ ದಳಗಳು ಸ್ಥಳಕ್ಕೆ ಧಾವಿಸಿತ್ತು. ತಂಡಗಳು ಆಸ್ಪತ್ರೆಯನ್ನು ಪರಿಶೀಲಿಸುತ್ತಿವೆ. ಇನ್ನೂ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಎಂ.ಕೆ. ಮೀನಾ ತಿಳಿಸಿದ್ದಾರೆ.

ಸಂಜೆ 4.26ರ ಸುಮಾರಿಗೆ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಿಂದ ಎರಡನೇ ಕರೆ ಬಂದಿದ್ದು, ಬಳಿಕ ಹಿಂದೂ ರಾವ್ ಆಸ್ಪತ್ರೆ ಸೇರಿದಂತೆ ಎಂಟರಿಂದ 10 ಇತರ ಆಸ್ಪತ್ರೆಗಳಿಗೆ ಇದೇ ರೀತಿಯ ಬೆದರಿಕೆ ಇ-ಮೇಲ್‌ಗಳು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ಬೆದರಿಕೆ

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆಯ ಕುರಿತು ಸಂಜೆ 6.15 ರ ಸುಮಾರಿಗೆ ಕರೆ ಬಂದಿತ್ತು ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಐಜಿಐ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆಯ ಕುರಿತು ಸಂಜೆ 6.15 ರ ಸುಮಾರಿಗೆ ನಮಗೆ ಕರೆ ಬಂದಿತ್ತು. ಅಗ್ನಿಶಾಮಕ ವಾಹನಗಳನ್ನು ಸಿಬ್ಬಂದಿ ಸಮೇತ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಗಾರ್ಗ್ ಹೇಳಿದರು.
ಶಾಲೆಗಳಿಗೆ ಹಿಂದೆ ಬೆದರಿಕೆ ಹಾಕಲಾಗಿತ್ತು.

ಇತ್ತೀಚೆಗೆ ಬೆಂಗಳೂರು, ದೆಹಲಿ ಮತ್ತು ಅಹಮದಾಬಾದ್‌ನಲ್ಲಿ ಇದೇ ರೀತಿಯ ಬೆದರಿಕೆಗಳನ್ನು ಹಾಕಲಾಗಿತ್ತು. ಕೆಲವೇ ದಿನಗಳ ಹಿಂದೆ ದೆಹಲಿ-ಎನ್‌ಸಿಆರ್‌ನಾದ್ಯಂತ 130 ಕ್ಕೂ ಹೆಚ್ಚು ಶಾಲೆಗಳು ತಮ್ಮ ಆವರಣದಲ್ಲಿ ಸ್ಫೋಟಕಗಳಿರುವುದಾಗಿ ಇ-ಮೇಲ್‌ ಸಂದೇಶಗಳನ್ನು ಸ್ವೀಕರಿಸಿದವು. ಬೆದರಿಕೆಗಳು ವ್ಯಾಪಕವಾದ ಭೀತಿಗೆ ಕಾರಣವಾಗಿತ್ತು. ಇದರ ಪರಿಣಾಮವಾಗಿ ತಕ್ಷಣದ ಸ್ಥಳಾಂತರಿಸುವಿಕೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಸಂಪೂರ್ಣ ಹುಡುಕಾಟಗಳನ್ನು ನಡೆಸಲಾಯಿತು.

ದೂರು ದಾಖಲು

ಇ-ಮೇಲ್‌ಗಳ ನಿಖರವಾದ ಮೂಲವನ್ನು ಪತ್ತೆ ಹಚ್ಚಲು ದೆಹಲಿ ಪೊಲೀಸರು ಇಂಟರ್‌ಪೋಲ್ ಮೂಲಕ ರಷ್ಯಾದ ಮೇಲಿಂಗ್ ಸೇವಾ ಕಂಪೆನಿ Mail.ru ಅನ್ನು ಸಂಪರ್ಕಿಸಿದರು. ಬಾಂಬ್ ಹುಸಿ ಇ-ಮೇಲ್‌ಗಳ ಉದ್ದೇಶವು ಸಾಮೂಹಿಕ ಭೀತಿಯನ್ನು ಸೃಷ್ಟಿಸುವುದು ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದಾಗಿದೆ ಎಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಸುಳ್ಳು ಬಾಂಬ್ ಬೆದರಿಕೆಗಳ ಸಂದರ್ಭಗಳನ್ನು ಎದುರಿಸಲು ವಿವರವಾದ ಪ್ರೋಟೋಕಾಲ್ ಮತ್ತು ಸ್ಟ್ಯಾಂಡರ್ಡ್ ಆಪರೇಷನ್ ಪ್ರೊಸೀಜರ್ಸ್ (SOP) ಗಾಗಿ ಕೇಂದ್ರ ಗೃಹ ಸಚಿವಾಲಯ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ವಾರದ ಆರಂಭದಲ್ಲಿ, ಗೃಹ ಕಾರ್ಯದರ್ಶಿ ದೆಹಲಿ ಪೊಲೀಸರು ಮತ್ತು ಶಾಲೆಗಳಿಗೆ ತಪ್ಪು ಮಾಹಿತಿಯಿಂದಾಗಿ ಯಾವುದೇ ಅನಗತ್ಯ ಭಯವನ್ನುಉಂಟಾಗದಂತೆ ತಡೆಯಲು ವ್ಯವಸ್ಥೆಗೊಳಿಸುವಂತೆ ಕೇಳಿಕೊಂಡಿದ್ದರು.
ಭದ್ರತೆ ಹೆಚ್ಚಳಕ್ಕೆ ಸೂಚನೆ

ಹುಸಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಭದ್ರತೆ, ಸಿಸಿಟಿವಿ ಕೆಮರಾ ಮತ್ತು ಇಮೇಲ್‌ಗಳ ನಿಯಮಿತ ಮೇಲ್ವಿಚಾರಣೆಯನ್ನು ಹೆಚ್ಚಿಸುವ ಅಗತ್ಯವನ್ನು ಸಚಿವಾಲಯ ಒತ್ತಿಹೇಳಿದೆ.

ಇದನ್ನೂ ಓದಿ | Vijayapura News: ಮೀನುಗಳ ಮಾರಣ ಹೋಮ; ಬಿಸಿಲ ತಾಪಕ್ಕೆ 17 ಸಾವಿರ ಮತ್ಸ್ಯಗಳ ಸಾವು

ತಪ್ಪು ಮಾಹಿತಿಯು ಯಾವುದೇ ಅನಗತ್ಯ ಭೀತಿಯನ್ನು ಸೃಷ್ಟಿಸದಂತೆ ಪರಿಣಾಮಕಾರಿ ಪ್ರತಿಕ್ರಿಯೆ ಕಾರ್ಯವಿಧಾನಕ್ಕಾಗಿ ನಿಕಟ ಸಮನ್ವಯವನ್ನು ಹೊಂದಲು ದೆಹಲಿ ಪೊಲೀಸರು ಮತ್ತು ಶಾಲೆಗಳಿಗೆ ಗೃಹ ಕಾರ್ಯದರ್ಶಿ ತಿಳಿಸಿದ್ದಾರೆ. ಈ ಕುರಿತು ನಡೆದ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಮತ್ತು ದೆಹಲಿ ಪೊಲೀಸ್ ಕಮಿಷನರ್ ಭಾಗವಹಿಸಿದ್ದರು.

Exit mobile version