Site icon Vistara News

ಆಗಸ್ಟ್‌ನಲ್ಲಿ ಮನೆ ಮನೆಯಲ್ಲಿ ರಾಷ್ಟ್ರಧ್ವಜ ಅಭಿಯಾನ

national flag at each house campaign

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸುತ್ತಿರುವ ʼಅಮೃತ ಭಾರತಿಗೆ ಕನ್ನಡದ ಆರತಿʼ ಕಾರ್ಯಕ್ರಮದ ಭಾಗವಾಗಿ ಆಗಸ್ಟ್‌ 9 ರಂದು ʼಹರ್ ಘರ್ ಝಂಡಾʼ (ಮನೆ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ) ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ. ಈ ಅಭಿಯಾನದಲ್ಲಿ ರಾಜ್ಯದ ಎಲ್ಲ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವಂತೆ ಕರೆ ನೀಡಲಾಗುವುದು ಎಂದು ಕನ್ನಡ- ಸಂಸ್ಕ್ರತಿ ಮತ್ತು ಇಂಧನ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.

ತಮ್ಮ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸುವುದಕ್ಕೆ ಯಾರೆಲ್ಲಾ ಮೀನ-ಮೇಷ ಎಣಿಸಲಿದ್ದಾರೆ ಎಂಬುದು ಈ ಅಭಿಯಾನದ ಸಂದರ್ಭದಲ್ಲಿ ಬೆಳಕಿಗೆ ಬರಲಿದೆ. ಮುಂದೇನು ಎಂಬುದನ್ನು ಆಮೇಲೆ ನೋಡಿಕೊಳ್ಳೋಣ ಎಂದು ಅವರು ಹೇಳಿದ್ದಾರೆ. ಹೀಗಾಗಿ ಈ ಅಭಿಯಾನ ವಿವಾದದ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿವೆ.
ʼʼವೀರ ಸಾವರ್ಕರ್ ಜಯಂತಿಯ ದಿನ ಈ ಕಾರ್ಯಕ್ರಮ ಉದ್ಘಾಟನೆಯಾಗುತ್ತಿದೆ, ಅಂದು ಧ್ವಜ ಹಾರಿಸಬೇಕು ಎಂದ ಕೂಡಲೇ ಕೆಲವರಲ್ಲಿ ಕಳವಳ ಆರಂಭವಾಗುತ್ತದೆ. ಹಲವರ ಮನಸ್ಸಿನಲ್ಲಿರುವ ವಿಷ ಒಂದೇ ಸಲ ಹೊರಬರಲಿ, ನೋಡೋಣʼʼ ಎಂದು ಸಚಿವರು ಹೇಳಿದ್ದಾರೆ.

ಮೇ 28 ಸಾವರ್ಕರ್ ಜನ್ಮ ದಿನಾಚರಣೆ ದಿನದಂದೇ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಆದರೆ ಎಲ್ಲಿ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆಯೋ, ಅಂಥ ಜಿಲ್ಲೆಗಳಲ್ಲಿ ಜೂನ್ 25 ರಿಂದ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ. ಮೇ 28 ರಂದು 45 ಕಾರ್ಯಕ್ರಮ ಹಾಗೂ ಜೂನ್ 25 ರಂದು 30 ಕಾರ್ಯಕ್ರಮ ಸೇರಿ 75 ಕಾರ್ಯಕ್ರಮಗಳನ್ನು ರಾಜ್ಯಾದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸ್ವಾತಂತ್ರ್ಯ ನೆಲದಲ್ಲಿ ಕಾರ್ಯಕ್ರಮ: ಜುಲೈ 1 ರಿಂದ 15 ರ ವರೆಗೆ ರಾಜ್ಯದ ಪ್ರಮುಖ ಸ್ವಾತಂತ್ರ್ಯ ಹೋರಾಟದ ತಾಣಗಳಲ್ಲಿ ‘ಸ್ವಾತಂತ್ರ್ಯದ ನೆಲದಲ್ಲಿ ಒಂದು ದಿನ ‘ ಎಂಬ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸ್ಥಳೀಯ ಸಂಘಟನೆಗಳು, ಸ್ವಸಹಾಯ ಸಂಘ, ವಿದ್ಯಾರ್ಥಿ ಸಮುದಾಯದ ಜತೆಗೆ ಈ ತಾಣಗಳಿಗೆ ತೆರಳಿ, ಒಂದೆರಡು ಗಂಟೆಗಳ ಕಾಲ ಕಳೆದು ಈ ಸ್ಥಳಗಳನ್ನು ಪ್ರಸಿದ್ಧಗೊಳಿಸುವ ಕೆಲಸವಾಗಬೇಕು ಎಂದು ಸಚಿವರು ಶನಿವಾರ ದಾವಣಗೆರೆಯಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದ ಆರತಿ ಚಿಂತನಾ ಸಭೆ ಉದ್ಘಾಟಿಸಿ ಮಾತನಾಡುತ್ತಾ ಹೇಳಿದ್ದಾರೆ.

ಆಗಸ್ಟ್‌ ನಲ್ಲಿ ರಥಯಾತ್ರೆ : ಆಗಸ್ಟ್‌ 1 ರಿಂದ ಆಗಸ್ಟ್‌ 8 ರ ವರೆಗೆ ರಾಜ್ಯದ ನಾಲ್ಕು ಕಂದಾಯ ಜಿಲ್ಲೆಗಳಲ್ಲಿ ರಥಯಾತ್ರೆ ನಡೆಸಲಾಗುವುದು. ಇದಕ್ಕೆ ಸಂಬಂಧಪಟ್ಟ ರೂಟ್ ಮ್ಯಾಪ್ ಅನ್ನು ಸದ್ಯದಲ್ಲೇ ನೀಡಲಾಗುವುದು. ಆಡಳಿತ ಯಂತ್ರದ ಜತೆಗೆ ಸಂಘಟನಾ ಬಲವನ್ನೂ ಈ ಕಾರ್ಯಕ್ರಮಕ್ಕೆ ಬಳಸಿಕೊಳ್ಳೋಣ ಎಂದರು.
ಆಗಷ್ಟ್ 9 ರಿಂದ 11 ರವರೆಗೆ ಬೆಂಗಳೂರಿನಲ್ಲಿ ಸಮಾರೋಪ ಸಭೆ ನಡೆಯಲಿದೆ. ಆಗಸ್ಟ್‌ 11 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Exit mobile version