ಹಾಸನ: ಮಹಿಳೆಗೆ ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಮುಖಂಡ, ವಕೀಲರೂ ಆಗಿರುವ ದೇವರಾಜೇಗೌಡ (Devaraje Gowda) ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಮೇ 24ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಹೊಳೆನರಸೀಪುರದ ಜೆಎಂಎಫ್‌ಸಿ ನ್ಯಾಯಾಲಯವು ಆದೇಶ ಹೊರಡಿಸಿದೆ. ಇದರೊಂದಿಗೆ, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌ನಲ್ಲಿ (Prajwal Revanna Case) ಸುದ್ದಿಯಾಗಿದ್ದ ದೇವರಾಜೇಗೌಡ ಅವರೂ ಜೈಲುಪಾಲಾದಂತಾಗಿದೆ.
ಹಿರಿಯೂರಿನಲ್ಲಿ ವಕೀಲ ದೇವರಾಜೇಗೌಡ ಅವರನ್ನು ಮೇ 10ರಂದು ಪೊಲೀಸರು ವಶಕ್ಕೆ ಪಡೆದಿದ್ದರು. ಹೊಳೆನರಸೀಪುರ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಬೆಂಗಳೂರಿನಿಂದ ಬಳ್ಳಾರಿಗೆ ಹೋಗುತ್ತಿದ್ದಾಗ ಅವರನ್ನು ವಶಕ್ಕೆ ಪಡೆಯಲಾಗಿದೆ. ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಹೊಳೆನರಸೀಪುರ ಠಾಣೆಯಲ್ಲಿ ದೇವರಾಜೇಗೌಡ ವಿರುದ್ಧ ಏ.1ರಂದು ಕೇಸ್ ದಾಖಲಾಗಿತ್ತು. ಹಾಗಾಗಿ, ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಆಡಿಯೊ ವೈರಲ್
ಪೊಲೀಸರು ವಶಕ್ಕೆ ಪಡೆಯುವ ಮುನ್ನ ವಿಡಿಯೊದಲ್ಲಿ ಮಾತನಾಡಿದ್ದ ವಕೀಲ ದೇವರಾಜೇಗೌಡ, ನಾನು ಎಲ್ಲೂ ಕಾಣೆ ಆಗಿಲ್ಲ. ಮೂರು ದಿನ ರಜೆ ಇರುವುದರಿಂದ ದೇವಾಲಯಕ್ಕೆ ಹೊಗುತ್ತಿದ್ದೇನೆ. ಕಾಣೆ ಆಗುವ ಪರಿಸ್ಥಿತಿ ನನಗೆ ಬಂದಿಲ್ಲ. ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳಿದ್ದೇನೆ. ಆಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದರು.
ಇನ್ನು ಇದೇ ವೇಳೆ ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಸಂಬಂಧ ಅಜ್ಞಾತ ಸ್ಥಳದಿಂದ ದೇವರಾಜೇಗೌಡ ಮೂರು ಆಡಿಯೊ ಕ್ಲಿಪ್ ಬಿಡುಗಡೆ ಮಾಡಿದ್ದರು. ಮಾಜಿ ಸಂಸದ ಶಿವರಾಮೇಗೌಡ ಜತೆ ಮಾತನಾಡಿರುವ ಎನ್ನಲಾದ ಎರಡು ಆಡಿಯೊ ತುಣುಕು ವೈರಲ್ ಆಗಿದ್ದವು. ಹನಿಟ್ರ್ಯಾಪ್ ಸಂಬಂಧ ಮಹಿಳೆ ಗಂಡನ ಜತೆ ಮಾತನಾಡಿದ ಒಂದು ಆಡಿಯೊ ಇದೆ. ಇನ್ನು ಡಿಕೆಶಿ ವಿಚಾರ ಶಿವರಾಮೇಗೌಡ ಜತೆ ದೇವರಾಜೇಗೌಡ ಮಾತನಾಡುತ್ತಿರುವ ಆಡಿಯೊ ಕೂಡ ಇದ್ದು, ಎಸ್‌ಐಟಿ ವಿಚಾರಣೆಯಲ್ಲಿ ಡಿಕೆಶಿ ಹೆಸರೇಳದಂತೆ ಶಿವರಾಮೇಗೌಡ ಸೂಚಿಸಿದ್ದರು.
ಕಾರ್ತಿಕ್, ದೇವರಾಜೇಗೌಡ ಪೆನ್‌ಡ್ರೈವ್ ರೂವಾರಿಗಳು
ದೇವರಾಜೇಗೌಡ ಬಂಧನದ ಬಳಿಕ ಮಾತನಾಡಿದ್ದ ಮಾಜಿ ಸಂಸದ ಶಿವರಾಮೇಗೌಡ, ಹಲವು ಆರೋಪ ಮಾಡಿದ್ದಾರೆ. “ಪೆನ್‌ಡ್ರೈವ್ ರಿಲೀಸ್ ಮಾಡಿರುವುದರ ಹಿಂದೆ ಕಾರು ಚಾಲಕ ಕಾರ್ತಿಕ್ ಹಾಗೂ ದೇವರಾಜೇಗೌಡ ಇದ್ದಾರೆ. ಏಟ್ರಿಯಾ ಹೋಟೆಲ್‌ನಲ್ಲಿ ಮಾತನಾಡುವಾಗ ನನ್ನ ವಿರುದ್ಧ ತನಿಖೆ ಮಾಡಬೇಕು ಅಂತಿದ್ದಾರೆ ಎಂದ. ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಬಗ್ಗೆ ಪದೇಪದೆ ಮಾತನಾಡಬೇಡ ಎಂದೆ. ನಿನ್ನದು ನೀನು ಸರಿಮಾಡಿಕೊ. ಉಳಿದ ಉಸಾಬರಿ ನಿನಗೆ ಬೇಡ ಎಂಬುದಾಗಿ ಹೇಳಿದ್ದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ