Site icon Vistara News

Holi tragedy : ಹೋಳಿ ಹಲಗೆ ಬಾರಿಸುವ ವಿಚಾರಕ್ಕೆ ಜಗಳ, ಹೊಟ್ಟೆಗೆ ಚಾಕುವಿನಿಂದ ಇರಿದು ಯುವಕನ ಕೊಲೆ

Gireesh murder

#image_title

ಬಾಗಲಕೋಟೆ: ಹೋಳಿ ಸಂಭ್ರಮದ ನಡುವೆಯೇ ಬಾಗಲಕೋಟೆ ಜಿಲ್ಲೆ ಮುಧೋಳ ನಗರದಲ್ಲಿ ಯುವಕನೊಬ್ಬನ ಕೊಲೆಯಾಗಿದೆ (Holi tragedy). ಹೋಳಿ ಹಲಗೆ ಬಾರಿಸುವ ವಿಚಾರಕ್ಕೆ ಶುರುವಾದ ಜಗಳದಲ್ಲಿ ಯುವಕನ ಹೊಟ್ಟೆಗೆ ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ. ಮುಧೋಳ ನಗರದ ಟೀಚರ್ಸ್ ಕಾಲೊನಿಯಲ್ಲಿ ಘಟನೆ ನಡೆದಿದ್ದು, ಗಿರೀಶ್ ಪಾಲೋಜಿ(೨೨) ಕೊಲೆಯಾದ ಯುವಕ.

ಕಾರ್ತಿಕ ಕಾಂಬಳೆ, ಹನುಮಂತ ಕಾಂಬಳೆ, ಅನಿಲ ಕಾಂಬಳೆ, ರಾಘವೇಂದ್ರ ಕಾಂಬಳೆ, ಕಾರ್ತಿಕ್ ಮಳಗಾವಿ, ಸುಚಿತ್ ಬಂಡಿವಡ್ಡರ್ ಇವರೇ ಕೊಲೆ ಆರೋಪಿಗಳು. ಮಂಗಳವಾರ ರಾತ್ರಿ 1 ಗಂಟೆಯ ಹೊತ್ತಿಗೆ ಕೊಲೆ ನಡೆದಿದೆ.

ಮಂಗಳವಾರ ರಾತ್ರಿ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಕಾಂಬಳೆ ಮತ್ತು ಸ್ನೇಹಿತರು ರಸ್ತೆಯಲ್ಲಿ ಹೋಳಿ ಹಲಗೆ ಬಾರಿಸುತ್ತಾ ಸಾಗಿದ್ದರು. ಈ ವೇಳೆ ಗಿರೀಶ್‌ ಸ್ವಲ್ಪ ಮುಂದೆ ಹೋಗಿ ಬಾರಿಸಿ ಎಂದು ಹೇಳಿದ್ದ ಎನ್ನಲಾಗಿದೆ. ಇದೇ ದೊಡ್ಡ ರಂಪಾಟವಾಗಿ ಅಂತಿಮವಾಗಿ ಹಲಗೆ ಬಾರಿಸುತ್ತಿದ್ದ ಯುವಕರು ಗಿರೀಶನಿಗೆ ಚೂರಿಯಿಂದ ಇರಿದಿದ್ದಾರೆ. ಹೊಟ್ಟೆಗೇ ಚೂರಿಯಿಂದ ಇರಿದ ಹಿನ್ನೆಲೆಯಲ್ಲಿ ಗಿರೀಶ್‌ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.

ಮುಧೋಳ ಪೊಲೀಸರು ಸದ್ಯಕ್ಕೆ ಆರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಹೋಳಿ ಹಬ್ಬದ ದಿನ ಕೆರೆಯಲ್ಲಿ ಈಜಲು ಹೋಗಿ ಯುವಕ ನೀರುಪಾಲು

ಧಾರವಾಡ: ರಾಜ್ಯಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗಿದೆ. ಆದರೆ, ಇಲ್ಲೊಬ್ಬ ಯುವಕನಿಗೆ ಹೋಳಿ ಸಂಭ್ರಮ ದುರಂತವಾಗಿ (Holi tragedy) ಬದಲಾಗಿದೆ. ಹೋಳಿ ಹಬ್ಬದ ದಿನವೇ ಕೆರೆಯಲ್ಲಿ ಈಜಲು ಹೋದ ಯುವಕನೊಬ್ಬ ನೀರುಪಾಲಾಗಿದ್ದಾನೆ. ಧಾರವಾಡ ತಾಲೂಕಿನ ನಿಗದಿ ಗ್ರಾಮದ ಅಣ್ಣಪ್ಪ ದಾಸನಕೊಪ್ಪ (27) ಮೃತಪಟ್ಟ ಯುವಕ.

ಹೋಳಿ ಹಬ್ಬದ ನಿಮಿತ್ತ ಬಣ್ಣದೋಕುಳಿಯಲ್ಲಿ ಮಿಂದೆದ್ದಿದ್ದ. ಬಳಿಕ ಅದನ್ನು ತೊಳೆದುಕೊಳ್ಳಲೆಂದು ನಿಗದಿ ಹಿರಿಯ ಕೆರೆಗೆ ಹೋಗಿದ್ದ. ಅಲ್ಲಿ ಆತ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ.

ಹಬ್ಬ ಆಚರಣೆ ಮಾಡಿದ ಸಂಭ್ರಮದಲ್ಲಿದ್ದ ಸಂಜೆಯೇ ಯುವಕನ ಸಾವು ಸಂಭವಿಸಿದ್ದು, ಆತನ ಮನೆಯವರು ಮತ್ತು ಗೆಳೆಯರು ಕಂಗಾಲಾಗಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Murder Attempt: ಸಹೋದರರ ಗಲಾಟೆಗೆ ಯೂತ್‌ ಕಾಂಗ್ರೆಸ್‌ ಅಧ್ಯಕ್ಷನ ಎಂಟ್ರಿ; ತಲೆಯನ್ನೇ ಒಡೆದ ಬೆಂಬಲಿಗರು

Exit mobile version