Site icon Vistara News

ಮನೆ ಕೊಡಿಸಿ, ಇಲ್ದಿದ್ರೆ ಆತ್ಮಹತ್ಯೆ ಮಾಡಿಕೊಳ್ತೀವಿ: ಗ್ರಾಮ ವಾಸ್ತವ್ಯದ ವೇಳೆ ತಹಸೀಲ್ದಾರ್‌ಗೆ ದಲಿತ ಕುಟುಂಬಗಳ ಘೇರಾವ್

mundargi tehasildar

ಗದಗ: “ಕಳೆದ ಹತ್ತಾರು ವರ್ಷಗಳಿಂದ ಗೋ ಶಾಲೆಗೆ ಬಳಸುವ ಶೆಡ್‌ನಲ್ಲೇ ಬದುಕುತ್ತಿದ್ದೇವೆ. ಮನೆ ಕಟ್ಟಿ ಕೊಡಿ. ಇಲ್ಲವಾದ್ರೆ ಮನೆ ಕಟ್ಟಿಕೊಳ್ಳಲು ಅನುಮತಿಯಾದ್ರೂ ಕೊಡಿ. ಕಳೆದ ಹತ್ತಾರು ವರ್ಷಗಳಿಂದ ಮನವಿ ಮಾಡ್ತಿದ್ರೂ ನಮಗೆ ಮನೆ ಭಾಗ್ಯವೇ ಇಲ್ಲ. ಬಂದವರೆಲ್ಲ ನೋಡ್ರೀನಿ… ನೋಡ್ತೀನಿ.. ಎನ್ನುತ್ತಲೇ ಇದ್ದಾರೆ. ಈ ಬಾರಿ ಅನುಮತಿ ಕೊಡದಿದ್ದರೆ ಸಾಮೂಹಿಕವಾಗಿ ವಿಷ ಸೇವಿಸ್ತೀವಿʼʼ- ಹೀಗೆಂದು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಗಂಗಾಪುರ ಗ್ರಾಮಸ್ಥರು ತಹಸೀಲ್ದಾರ ಶ್ರುತಿ ಗೌಡರ ಅವರ ಮುಂದೆ ನಮ್ಮ ನೋವು ಹಂಚಿಕೊಂಡರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಿಮಿತ್ತ ಶಿರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಹತ್ತಾರು ಮಾದಿಗ ಕುಟುಂಬದ ಜನರು ತಹಸೀಲ್ದಾರ್‌ ಮುಂದೆ ತಮ್ಮ ಕಷ್ಟ ಹೇಳಿಕೊಂಡರು.

ಗಂಗಾಪುರ ಗ್ರಾಮದಲ್ಲಿ ವಾಸ್ತವ್ಯಕ್ಕೆ ಬಂದ ತಹಸೀಲ್ದಾರ್‌ ಶ್ರುತಿ ಗೌಡರ್‌ ಅವರಿಗೆ ಜನರು ಮುತ್ತಿಗೆ ಹಾಕಿದರು.

“ನಾ ಹೊಸದಾಗಿ ಬಂದೇನಿ. ಈ ವಿಷಯ ನನಗೆ ತಿಳಿದಿಲ್ಲ. ನಿಮ್ಗ ಮನೆ ಕೊಡಿಸೋ ವಿಚಾರ ನೋಡ್ತೀನಿ” ಎನ್ನುತ್ತಲೇ ತಹಸೀಲ್ದಾರ ಶ್ರುತಿ ಗೌಡರ್ ಮುಂದೆ ಸಾಗಿದರು. ಮನೆ ಕೊಡಿಸುವ ವಿಚಾರವಾಗಿ ಕೆಲಹೊತ್ತು ತಹಸೀಲ್ದಾರ ಅವರನ್ನು ಸುತ್ತುವರಿದು ಘೇರಾವ ಹಾಕಿದ ಘಟನೆಯೂ ಜರುಗಿತು. ಮನನೊಂದು ಕುಟುಂಬಸ್ಥರು ತಮ್ಮ ಕ್ರೋಧವನ್ನು ಹೊರಹಾಕಿದರು.

ಗಂಗಾಪುರ ಗ್ರಾಮದಲ್ಲಿ ವಾಸ್ತವ್ಯಕ್ಕೆ ಬಂದ ತಹಸೀಲ್ದಾರ್‌ ಶ್ರುತಿ ಗೌಡರ್‌ ಅವರಿಗೆ ಜನರು ಮುತ್ತಿಗೆ ಹಾಕಿದರು.

ಏನಿದು ಸಮಸ್ಯೆ?
ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಗಂಗಾಪುರ ಗ್ರಾಮದ ಸರ್ವೆ ನಂಬರ್ 32ರಲ್ಲಿ ಮಾದಿಗ ಸಮಾಜದ ಹತ್ತಾರು ಕುಟುಂಬಗಳು ಕಳೆದ ಹಲವು ತಗಡಿನ ಶೆಡ್ಡಿನಲ್ಲಿ ವಾಸವಾಗಿದ್ದಾರೆ. ಅದೇ ಸರ್ವೆ ನಂಬರ್ ನಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಮನೆ ನಿರ್ಮಿಸಿ ಜಿಪಿಎಸ್ ಪ್ರಕ್ರಿಯೆ ನಡೆಸುವ ಮೂಲಕ ಸರಕಾರ ಅನುದಾನವನ್ನೂ ನೀಡಿದೆ. ʻʻಸ್ವಂತ ಜಾಗ ಇಲ್ಲದೇ, ಮನೆ ಇಲ್ಲದೆ ತಗಡಿನ ಶೆಡ್ಡಿನಲ್ಲಿ ವಾಸವಿರುವ ನಮಗೇಕೆ ಸರಕಾರದ ಸೌಲಭ್ಯ ಇಲ್ಲ” ಎಂಬುದು ಈ ಜನರ ಅಳಲು. ʻʻನನಗೂ ಈ ಸಮಸ್ಯೆ ಈಗೀಗ ತಿಳಿದು ಬಂದಿದೆ. ಮನೆ ನೀಡಲು ಆಡಳಿತಾತ್ಮಕ ಪ್ರಕ್ರಿಯೆ ಇವೆ. ಅವುಗಳನ್ನೆಲ್ಲ ಪರಿಗಣಿಸಿ ಮನೆ ನೀಡಲಾಗುವುದುʼʼ ಎಂದು ಮುಂಡಗರಿ ತಹಸೀಲ್ದಾರರಾದ ಶ್ರುತಿ ಗೌಡರ್‌ ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.

Exit mobile version