ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ರಾಜ್ಯದ ಎಲ್ಲ ಜನತೆಗೂ 200 ಯೂನಿಟ್ ವಿದ್ಯುತ್ ಉಚಿತ (Free Electricity) ಎಂದು ಘೋಷಣೆ ಮಾಡಿದ್ದರು. ಕೊನೆಗೆ ವಾರ್ಷಿಕ ಸರಾಸರಿ ಬಳಕೆ ಮೇಲೆ ಶೇಕಡಾ 10ರಷ್ಟು ಏರಿಕೆ ಮಾಡಿ ವಿದ್ಯುತ್ ಬಿಲ್ ನೀಡುವುದಾಗಿ ಹೇಳಿದ್ದರು. ಈಗ ಗೃಹ ಜ್ಯೋತಿ (Gruha Jyoti) ಮಾರ್ಗಸೂಚಿ ಬಿಡುಗಡೆಯಾಗಿದ್ದು, ಬಾಡಿಗೆದಾರನಿಗೆ ಈ ಗ್ಯಾರಂಟಿ (Congress Guarantee) ಭಾಗ್ಯ ಇದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಆದೇಶದಲ್ಲಿರುವ ಷರತ್ತನ್ನು ನೋಡಿದರೆ ಗೊಂದಲ ಸೃಷ್ಟಿಯಾಗುತ್ತದೆ.
ಒಂದು ಮೀಟರ್ ಅನ್ನು ಮಾತ್ರ ಪರಿಗಣನೆ ಎಂಬ ರೀತಿಯಲ್ಲಿ ಒಂದು ಷರತ್ತನ್ನು ನೀಡಲಾಗಿದೆ. ಅಂದರೆ, ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ ಒಂದು ಸ್ಥಾನಕ್ಕೆ ಮಾತ್ರ ಈ ಯೋಜನೆಯ ಸೌಲಭ್ಯಕ್ಕೆ ಅರ್ಹರಾಗುವರು ಎಂದು ಉಲ್ಲೇಖಿಸಲಾಗಿದೆ. ಇದೇ ಈಗ ಗೊಂದಲಕ್ಕೆ ಕಾರಣವಾಗಿದೆ.
ಕಾರಣ, ಒಂದು ಕಟ್ಟಡದಲ್ಲಿ ಒಂದಕ್ಕಿಂತ ಹೆಚ್ಚು ಬಾಡಿಗೆ ಮನೆಗಳು ಇರುತ್ತವೆ. ಎಲ್ಲ ಮನೆಗಳ ಮೀಟರ್‌ಗಳೂ ಮನೆ ಮಾಲೀಕನ ಹೆಸರಿನಲ್ಲಿ ಇರುತ್ತದೆ. ಹೀಗಾಗಿ ಈಗಿರುವ ಷರತ್ತಿನ ಪ್ರಕಾರ “ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ ಒಂದು ಸ್ಥಾನಕ್ಕೆ ಮಾತ್ರ ಈ ಯೋಜನೆಯ ಸೌಲಭ್ಯಕ್ಕೆ ಅರ್ಹರಾಗುವರು” ಎಂಬ ಅಂಶಕ್ಕೆ ಸರ್ಕಾರ ಗಟ್ಟಿಯಾಗಿ ಕುಳಿತರೆ ಬಾಡಿಗೆದಾರರಿಗೆ ಉಚಿತ ವಿದ್ಯುತ್ ಸಿಗುವುದಿಲ್ಲ. ಹಾಗಾಗಿ ಮನೆಯ ಮಾಲೀಕನಿಗೆ ಮಾತ್ರ ಗೃಹ ಜ್ಯೋತಿ ಭಾಗ್ಯ ಒಲಿಯಲಿದೆ.
ಇದನ್ನೂ ಓದಿ: Weather Report: ಕರಾವಳಿ, ಮಲೆನಾಡಿಗೆ ಜೂ. 7ರವರೆಗೆ ಮಳೆ ಅಲರ್ಟ್
ಗೃಹ ಜ್ಯೋತಿ ಮಾರ್ಗಸೂಚಿಯಲ್ಲೇನಿದೆ?
ಈ ಸಂಬಂಧ ಹತ್ತು ಮಾರ್ಗಸೂಚಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
- ಈ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ. ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ ಎಂದೂ ಆದೇಶದಲ್ಲಿ ಹೇಳಿದೆ.
- ಪ್ರತಿ ತಿಂಗಳ ಮಿಟರ್ ರೀಡಿಂಗ್ ಮಾಡಿದಾಗ, ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ಲನ್ನು ನಮೂದಿಸುವುದು.
- ಗೃಹ ವಿದ್ಯುತ್ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್‌ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ net bill ನೀಡುವುದು ಹಾಗೂ ಗ್ರಾಹಕರು net bill ಅನ್ನು ಪಾವತಿಸುವುದು.
- ಅರ್ಹ ಯೂನಿಟ್ / ಮೊತ್ತಕ್ಕಿಂತ ಒಳಗೆ ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ಲನ್ನು ನೀಡಲಾಗುವುದು.
- ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು.
- ಪ್ರತಿ ಫಲಾನುಭವಿಯು ತನ್ನ Customer ID / Account ID ಅನ್ನು ಆಧಾರ್‌ಗೆ ಕಡ್ಡಾಯವಾಗಿ ಜೋಡಣೆ ಮಾಡುವುದು.
- ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿ ಗ್ರಾಹಕರನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡಿಸುವುದು.
- ದಿನಾಂಕ 30.06.2023ರ ಅಂತ್ಯಕ್ಕೆ (ಜೂನ್ 2023ರ ಮಾಹೆಯಲ್ಲಿ ಬಳಸಿದ ವಿದ್ಯುತ್ ಪ್ರಮಾಣಕ್ಕೆ ಜುಲೈ 2023ರಲ್ಲಿ ವಿತರಿಸಿದ ಬಿಲ್ಲಿನ ಮೊತ್ತ ಒಳಗೊಂಡಂತೆ) ಬಾಕಿ ಇರುವ ವಿದ್ಯುತ್ ಶುಲ್ಕದ ಬಾಕಿ ಮೊತ್ತವನ್ನು 3 ತಿಂಗಳೊಳಗೆ ಪಾವತಿಸತಕ್ಕದ್ದು, ಬಾಕಿ ಮೊತ್ತವನ್ನು ನಿಗದಿತ ಅವಧಿಯೊಳಗೆ ಪಾವತಿಸದಿದ್ದಲ್ಲಿ ಅಂತಹ ಗ್ರಾಹಕರ ವಿದ್ಯುತ್ ಸ್ಥಾವರಗಳ ಸಂಪರ್ಕವನ್ನು ಕಡಿತಗೊಳಿಸಲಾಗುವುದು.
- ಗೃಹ ವಿದ್ಯುತ್ ಗ್ರಾಹಕರ ಸ್ಥಾವರಗಳಿಗೆ ಮಾಪಕವನ್ನು ಅಳವಡಿಸುವುದು ಹಾಗೂ ಮಾಪಕ ಓದುವುದು ಕಡ್ಡಾಯವಾಗಿರುತ್ತದೆ.
- ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ, ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರಾಗುವರು
ಇದನ್ನೂ ಓದಿ: Free Bus: ಉಚಿತ ಬಸ್ ಪ್ರಯಾಣಕ್ಕೆ ಸಿಕ್ಕಿತು ಅನುಮೋದನೆ; ಏಳು ಕಂಡೀಷನ್‌ನೊಂದಿಗೆ ಚಾಲನೆ!
ಈ ಹತ್ತು ಕಂಡೀಷನ್ ಅನ್ನು ನೀಡಲಾಗಿದ್ದು, ಕೊನೇ ಕಂಡೀಷನ್ ಈಗ ಬಾಡಿಗೆದಾರರಿಗೆ ತಲೆನೋವಾಗಿ ಪರಿಣಮಿಸಿದೆ. ಆದರೆ, ಐದು ಮತ್ತು ಆರನೇ ಕಂಡೀಷನ್ ಅನ್ನು ಗಮನಿಸಿದರೆ, “ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು” ಹಾಗೂ “ಪ್ರತಿ ಫಲಾನುಭವಿಯು ತನ್ನ Customer ID / Account ID ಅನ್ನು ಆಧಾರ್‌ಗೆ ಕಡ್ಡಾಯವಾಗಿ ಜೋಡಣೆ ಮಾಡುವುದು” ಎಂದು ಇದೆ. ಇದರ ಪ್ರಕಾರ, ಬಾಡಿಗೆದಾರ ತಾನಿರುವ ಮನೆಯ ಆರ್‌ಆರ್ ಸಂಖ್ಯೆಯೊಂದಿಗೆ ಹೇಳಲಾದ ಸೂಚನೆಗಳ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದಾ ಎಂಬ ಪ್ರಶ್ನೆಯೂ ಉದ್ಭವಿಸಿದ್ದು, ಇದಕ್ಕೆ ಈಗ ಸರ್ಕಾರವೇ ಸ್ಪಷ್ಟನೆಯನ್ನು ನೀಡಬೇಕಿದೆ.