Site icon Vistara News

Home loan: ಮನೆಕೊಳ್ಳಲು ಇದು ಸೂಕ್ತ ಸಮಯ, ಆದರೆ ಈ ವಿಷಯಗಳನ್ನು ಮರೆಯಬೇಡಿ!

home loan

ಸ್ವಂತ ಮನೆ ಹೊಂದಬೇಕೆಂಬುದು ನಗರಗಳಲ್ಲಿ ವಾಸಿಸುವ ಬಹುತೇಕರ ಕನಸು. ಕೊರೊನಾ ಕಾಲಘಟ್ಟದಲ್ಲಿನ ಲಾಕ್‌ಡೌನ್‌ ಮತ್ತು ವರ್ಕ್‌ ಫ್ರಮ್‌ ಹೋಮ್‌ ಬಹುತೇಕರಿಗೆ ಸ್ವಂತ ಮನೆಯ ಅವಶ್ಯಕತೆಯನ್ನು ಮನದಟ್ಟು ಮಾಡಿಸಿದೆ. ಅಲ್ಲದೆ ಬ್ಯಾಂಕುಗಳು ಗೃಹಸಾಲದ (home loan) ಮೇಲಿನ ಬಡ್ಡಿದರವನ್ನು ದಾಖಲೆ ಪ್ರಮಾಣದಲ್ಲಿ ಇಳಿಸಿ ಹಾಗೂ ಸರ್ಕಾರ ಮುದ್ರಾಂಕ ಶುಲ್ಕವನ್ನು ಕಡಿತಮಾಡಿ ಮನೆಕೊಳ್ಳುವವರಿಗೆ ಉತ್ತೇಜನ ನೀಡುತ್ತಿವೆ.

ʼʼಕೊರೊನಾ ನಂತರ ದೇಶದ ಆರ್ಥಿಕತೆ ಮತ್ತೆ ಹಳಿಗೆ ಮರಳಿದ್ದು, ಬಹುತೇಕ ವ್ಯವಹಾರಗಳು ಈ ಹಿಂದಿನಂತೆ ನಡೆಯುತ್ತಿವೆ. ರಿಯಾಲ್ಟಿ ಚಟುವಟಿಕೆ ಕೂಡ ಗರಿಗೆದರಿವೆ. ಉದ್ಯೋಗಾವಕಾಶಗಳು ಹೆಚ್ಚಿದ್ದು, ವೇತನ ಕೂಡ ನಿರೀಕ್ಷೆಗೂ ಮೀರಿ ಹೆಚ್ಚಳವಾಗುತ್ತಿದೆ. ಹೀಗಾಗಿ ಮನೆ ಖರೀದಿಗೆ  ಇದು ಸೂಕ್ತ ಸಮಯʼʼ ಎನ್ನುತ್ತಾರೆ ರಿಯಾಲ್ಟಿ ತಜ್ಞ ಅನುರೂಪ್‌ ಕೆ. ವಿ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ರೆಪೊ ದರವನ್ನು ಈಗಾಗಲೇ ಹೆಚ್ಚಿಸಲು ಆರಂಭಿಸಿದೆ. ಮುಂದೆ ಕೂಡ ಹಣದುಬ್ಬರವನ್ನು ಇಳಿಸುವ ಉದ್ದೇಶದಿಂದ ಇನ್ನಷ್ಟು ಹೆಚ್ಚಿಸಬಹುದು. ಆಗ ಸಹಜವಾಗಿ ಗೃಹ ಸಾಲದ (home loan) ಮೇಲಿನ ಬಡ್ಡಿದರವೂ ಹೆಚ್ಚಲಿದೆ. ಹೀಗಾಗಿ ತಡ ಮಾಡದೆ ಈಗಲೇ ನಿರ್ಧಾರ ತೆಗೆದುಕೊಂಡರೆ ಹೆಚ್ಚು ಲಾಭವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸರಿಯಾಗಿ ಪ್ಲಾನ್‌ ಮಾಡಿ

ನಿಮಗೂ ತಜ್ಞರ ಈ ಮಾತು ಸತ್ಯ ಎನಿಸಿರಬಹುದು. ಸ್ವಂತ ಮನೆ ಖರೀದಿಗೆ ನೀವು ನಿರ್ಧರಿಸಿದ್ದೀರಿ ಎಂದಾದರೆ ಮೊದಲು ಹಣಕಾಸಿನ ಬಗ್ಗೆ ಸರಿಯಾಗಿ ಪ್ಲಾನ್‌ ಮಾಡಿಕೊಳ್ಳಿ. ಸ್ವಂತ ಮನೆ ಅಥವಾ ಅಪಾರ್ಟ್‌ಮೆಂಟ್‌ ಖರೀದಿಗೆ ಎಷ್ಟು ಹಣ ಬೇಕಾಗಬಹುದು, ಈ ಹಣವನ್ನು ಹೊಂದಿಸುವುದು ಹೇಗೆ? ಉಳಿತಾಯ ಮಾಡಿದ ಹಣ ಎಷ್ಟಿದೆ ಎಂದೆಲ್ಲಾ ಲೆಕ್ಕಾಚಾರ ಹಾಕಿ. ಎಷ್ಟು ಸಾಲಮಾಡಿದರೆ ತೀರಿಸಲು ಸಾಧ್ಯ , ಮುಂದೆ  ಏನೆಲ್ಲಾ ಖರ್ಚುಗಳು (ಮಕ್ಕಳ ವಿದ್ಯಾಭ್ಯಾಸ, ಮದುವೆ ಇತ್ಯಾದಿ) ಹೆಚ್ಚುವರಿಯಾಗಿ ಬರುತ್ತವೆ, ಅನಾರೋಗ್ಯದ ಸಮಸ್ಯೆ ಎದುರಾದರೆ ಖರ್ಚಿಗೆ ಹಣ ಹೊಂದಿಸಲು ಸಾಧ್ಯವೇ… ಹೀಗೆ ಎಲ್ಲವನ್ನೂ ಯೋಚಿಸಿಯೇ ಮುಂದುವರಿಯಿರಿ.

ನಿಮಗೆ ಗೃಹಸಾಲ ಸಿಗದಿರಬಹದು!

ಹೌದು, ನೀವು ಮನೆ ಖರೀದಿಯ ತೀರ್ಮಾನ ತೆಗೆದುಕೊಂಡು ಒಂದೊಳ್ಳೆಯ ಮನೆ ನೋಡಿ, ಡೀಲ್‌ ಕೂಡ ಫೈನಲ್‌ ಹಂತಕ್ಕೆ ಬಂದಿದೆ ಎಂದಿಟ್ಟುಕೊಳ್ಳಿ. ನಿಮ್ಮ ಜೀವನದ ಕನಸು ನನಸಾಗುವ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಈ ಸಮಯದಲ್ಲಿ ಬ್ಯಾಂಕ್‌ ನಿಮಗೆ ಗೃಹ ಸಾಲ ನೀಡಲು ನಿರಾಕರಿಸುವ ಸಾಧ್ಯತೆಗಳೂ ಇವೆ.

ಏಕೆ ಹೀಗಾಗುತ್ತದೆ ಎಂದರೆ ಗೃಹಸಾಲಕ್ಕೆ ಅರ್ಹತೆ ಇದೆಯೇ ಇಲ್ಲವೇ ಎಂದು ತಿಳಿದುಕೊಳ್ಳದೇ ನೀವು ಮುಂದವರಿದಿದ್ದೀರಿ. ಕೆಲವರಿಗೆ ಈ ಹಂತದಲ್ಲಿ ಕ್ರೆಡಿಟ್‌ ಅಥವಾ ಸಿಬಿಲ್‌ ಸ್ಕೋರ್‌ ಕಡಿಮೆ ಇರುವ ಕಾರಣಕ್ಕೆ ಸಾಲದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಈ ಬಗ್ಗೆಯು ನೀವು ಪರಿಶೀಲಿಸಿಕೊಳ್ಳಿ. ಈ ಹಿಂದೆ ನಾನು ಮಾಡಿದ್ದ ಸಾಲಗಳನ್ನು ಸರಿಯಾಗಿ ಪಾವತಿಸಿದ್ದೇನೆಯೇ? ಕ್ರಿಡಿಟ್‌ ಕಾರ್ಡ್‌ ಬಿಲ್‌ಗಳನ್ನು ನಿಗದಿತ ಸಮಯದಲ್ಲಿ ಪಾವತಿಸಿದ್ದೇನೆಯೇ? ನನ್ನ ಕ್ರೆಡಿಟ್‌ ಸ್ಕೋರ್‌ ಎಷ್ಟಿದೆ ಎಂಬುದುನ್ನು ನೋಡಿಕೊಂಡೇ ಸಾಲದ ಕುರಿತು ಯೋಚಿಸಿ. ಒಂದು ವೇಳೆ ಕ್ರೆಡಿಟ್‌ ಸ್ಕೋರ್‌ ಕಡಿಮೆ ಇದ್ದರೆ ಅದನ್ನು ಉತ್ತಮಪಡಿಸಿಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸುವುದೇ ಇದಕ್ಕಿರುವ ಪರಿಹಾರ.

ಇನ್ನು ಸೂಕ್ತವಾದ ದಾಖಲೆಪತ್ರಗಳನ್ನು ನೀಡದೇ ಇದ್ದರೂ ನಿಮ್ಮ ಅರ್ಜಿ ತಿರಸ್ಕೃತವಾಗಬಹುದು. ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲೇ ಯಾವೆಲ್ಲ ದಾಖಲೆಗಳು ಬೇಕಾಗಬಹುದು ಎಂದು ತಿಳಿದುಕೊಂಡು, ಅರ್ಜಿಯೊಂದಿಗೆ ಅವುಗಳನ್ನು ಲಗತ್ತಿಸಿ. ಕೆಲವು ಮನೆಗಳಿಗೆ ಸಂಬಂಧಿಸಿದ ದಾಖಲೆಗಳು ಸರಿಯಾಗಿರದಿರಬಹುದು. ಹೀಗಾಗಿ ಮನೆಯೊಂದನ್ನು ಕೊಳ್ಳುವ ನಿರ್ಧಾರವನ್ನು ಅಂತಿಮಗೊಳಿಸುವ ಮುನ್ನ ತಜ್ಞ ವಕೀಲರಿಂದ ದಾಖಲೆಗಳನ್ನುಪರಿಶೀಲನೆಗೊಳಪಡಿಸಿ, ಬ್ಯಾಂಕಿನವರೂ ಇವುಗಳನ್ನು ಪರಿಶೀಲಿಸಿಯೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೆನಪಿನಲ್ಲಿಡಿ.

ವಿವಿಧ ಶುಲ್ಕಗಳ ಬಗ್ಗೆ ಮಾಹಿತಿ ಇರಲಿ

ಇನ್ನು ಮನೆ ಖರೀದಿಗೆ ಹಣ ಹೊಂದಿಸುವ ಕುರಿತು ನೀವು ಎಷ್ಟೇ ಪ್ಲಾನ್‌ ಮಾಡಿಕೊಂಡರೂ ಕೆಲವೊಂದು ಖರ್ಚುಗಳು ಅನಿರೀಕ್ಷಿತವಾಗಿ ಎದುರಾಗುತ್ತವೆ. ಗೃಹಸಾಲ ಪಡೆಯುವಾಗ ಬ್ಯಾಂಕುಗಳು ವಿಧಿಸುವ ಶುಲ್ಕಗಳು. ಗೃಹಸಾಲ ಪಡೆದಾಗ ಕೇವಲ ಬಡ್ಡಿ ಮಾತ್ರ ಪಾವತಿಸಿದರೆ ಸಾಕು ಎಂಬ ಲೆಕ್ಕಾಚಾರ ನಿಮ್ಮದಾಗಿರಬಹುದು. ಬ್ಯಾಂಕಿನವರು ಹೆಚ್ಚುವರಿ ಶುಲ್ಕ ಪಾವತಿಸಬೇಕು ಎಂದಾದಾಗ ನಿಮಗೆ ಲೆಕ್ಕಾಚಾರ ತಲೆಕೆಳಗಾದಂತೆ ಅನ್ನಿಸಬಹದು. ಇದಕ್ಕೆ ಗೃಹಸಾಲದ ವಿಚಾರಣೆಗೆ ಹೋದಾಗಲೇ ವಿವಿಧ ಶುಲ್ಕಗಳ ಬಗ್ಗೆಯೂ ಕೇಳಿ ತಿಳಿಯಬೇಕಾದದು ಅಗತ್ಯ. ಮುಖ್ಯವಾಗಿ ವಿವಿಧ ಮರೆಮಾಚಿದ ಶುಲ್ಕಗಳು ಇರುತ್ತವೆ.

ಈ ಬಗ್ಗೆ ಬಿಡಿಸಿ ಕೇಳಿ ಮಾಹಿತಿ ಪಡೆದುಕೊಳ್ಳಬೇಕು. ಸಂಸ್ಕರಣಾ ಶುಲ್ಕ, ಕಾನೂನು ಶುಲ್ಕಗಳು, ದಾಖಲೆಗಳಿಗೆ ಸಂಬಂಧಪಟ್ಟ ಶುಲ್ಕಗಳು, ಆಸ್ತಿ ಮೌಲ್ಯಮಾಪನ ಶುಲ್ಕ ಸೇರಿದಂತೆ ಹತ್ತು ಹಲವು ಶುಲ್ಕಗಳನ್ನು ಬ್ಯಾಂಕ್‌ಗಳು ವಿಧಿಸುತ್ತವೆ. ಈ ಬಗ್ಗೆ ಮೊದಲೇ ಮಾಹಿತಿ ಪಡೆದುಕೊಂಡರೆ ದುಡ್ಡಿನ ವಿಚಾರದಲ್ಲಿ ಲೆಕ್ಕತಪ್ಪುವ ಸಾಧ್ಯತೆಗಳಿರುವುದಿಲ್ಲ.

ವ್ಯಾಲ್ಯೂವೇಷನ್‌ನಲ್ಲಿ ವ್ಯತ್ಯಾಸ
ನೀವು ಒಂದು ಮನೆಯನ್ನು ಅಥವಾ ನಿವೇಶನವನ್ನು 90 ಲಕ್ಷ ರೂ. ನೀಡಿ ಖರೀದಿಸಲು ಮುಂದಾಗಿದ್ದೀರಿ ಎಂದಿಟ್ಟುಕೊಳ್ಳಿ. ಆದರೆ, ಬ್ಯಾಂಕ್‌ ತನ್ನ ಮೌಲ್ಯಮಾಪನ ಸಂದರ್ಭದಲ್ಲಿ ಆ ಪ್ರಾಪರ್ಟಿಗೆ ಅಷ್ಟೇ ದರ ನಿಗದಿಪಡಿಸುತ್ತದೆ ಎಂದು ಹೇಳಲಾಗದು. ಪ್ರಾಪರ್ಟಿ ಮೌಲ್ಯಮಾಪನದಲ್ಲಿ ಶೇ 5-10ರಷ್ಟು ವ್ಯತ್ಯಾಸ ಬರಬಹುದು. ಇದರಿಂದ ನಿಮಗೆ ಕಡಿಮೆ ಪ್ರಮಾಣದಲ್ಲಿ ಸಾಲ ದೊರಕಬಹುದು. ಈ ಬಗ್ಗೆಯೂ ನೀವು ಮೊದಲೇ ಯೋಚಿಸಿದ್ದರೆ ಕೊನೆಯ ಕ್ಷಣದಲ್ಲಿ ಗೊಂದಲಕ್ಕೆ ಬೀಳುವುದು ತಪ್ಪುತ್ತದೆ. ಇಂತಹ ಸಂದರ್ಭ ಬಂದರೆ ಇತರೆ ಬ್ಯಾಂಕ್‌ಗಳು, ಎಚ್‌ಎಫ್‌ಸಿಗಳಲ್ಲಿ ಸಾಲಕ್ಕೆ ಪ್ರಯತ್ನಿಸಬಹುದು. ಏಕೆಂದರೆ ಪ್ರಾಪರ್ಟಿ ವ್ಯಾಲ್ಯೂವೇಷನ್‌ ಪ್ರಮಾಣವು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ವ್ಯತ್ಯಾಸವಾಗಿರುತ್ತದೆ.

ಇದನ್ನೂ ಓದಿ| Explainer: Land in moon- ಹೋಗಲಾಗದ ಚಂದ್ರನ ಮೇಲೆ ಜಮೀನು ಖರೀದಿ ಯಾಕೆ?

ಇನ್ನು ಬ್ಯಾಂಕುಗಳು ನಿಮಗೆ ಬೇಕಾದಷ್ಟು ಮೊತ್ತವನ್ನು ಸಾಲ ನೀಡುವುದಿಲ್ಲ. ನೀವು ಕೊಳ್ಳುವ ಮನೆ ಅಥವಾ ಅಪಾರ್ಟ್‌ಮೆಂಟ್‌ನ ಮೌಲ್ಯದ ಶೇ. 80-85ರಷ್ಟೇ ಸಾಲ ನೀಡಬಹುದು. ಉಳಿದ ಹಣವನ್ನು ನೀವೇ ಹೊಂದಿಸಿಕೊಳ್ಳಬೇಕಾಗಿರುತ್ತದೆ. ಇದೆಲ್ಲವನ್ನು ನೋಡಿಕೊಂಡೇ ನೀವು ಮನೆ ಕೊಳ್ಳುವ ನಿರ್ಧಾರವನ್ನು ಅಂತಿಮಗೊಳಿಸಿದರೆ ಯಾವುದೇ ಗೊಂದಲವಿಲ್ಲದೆ ನಿಮ್ಮ ಕನಸನ್ನು ಈಡೇರಿಸಿಕೊಳ್ಳಬಹುದು.

Exit mobile version