ಬೆಂಗಳೂರು: ಭಾರಿ ಮಳೆಯಿಂದ (Rain News) ಸಿಲಿಕಾನ್ ಸಿಟಿಯ ವಿವಿಧ ಭಾಗಗಳಿಗೆ ಜಲದಿಗ್ಭಂದನವಾಗಿ ಜನರು ಪರದಾಡುತ್ತಿದ್ದಾರೆ. ಹೀಗಾಗಿ ನಗರದ ವಿವಿಧೆಡೆ ಗೃಹ ಸಚಿವ ಆರಗ ಜ್ಞಾನೇಂದ್ರ ಗುರುವಾರ ಭೇಟಿ ನೀಡಿ ಮಳೆ ಹಾನಿ ಪರಿಶೀಲಿಸಿದರು.
ಯಮಲೂರಿನ ಎಪ್ಸಿಲಾನ್ ಪ್ರತಿಷ್ಠಿತ ವಸತಿ ಪ್ರದೇಶ, ಬೆಳ್ಳಂದೂರು, ರೈನ್‌ಬೋ ಲೇಔಟ್ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ಧೈರ್ಯ ತುಂಬಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಬಹಳಷ್ಟು ಮನೆಗಳು ಜಲಾವೃತಗೊಂಡು ಜನರು ಪರದಾಡುತ್ತಿದ್ದಾರೆ. ಎಸ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಅಧಿಕಾರಿಗಳು ಮಳೆಹಾನಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.
ಇದನ್ನೂ ಓದಿ | ಏಕೀಕೃತ ಪ್ರಾಧಿಕಾರಕ್ಕೆ ಗ್ರೀನ್ ಸಿಗ್ನಲ್ ಎಂದ ಸಿಎಂ ಬೊಮ್ಮಾಯಿ: ಎರಡು ವರ್ಷದಿಂದ ನನೆಗುದಿಗೆ ಬಿದ್ದಿರುವ ಯೋಚನೆ
518 ಸಿಬ್ಬಂದಿ 70 ಸ್ಥಳಗಳಲ್ಲಿ ಮಳೆ ಹಾನಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಮನೆಗಳಿಗೆ ನುಗ್ಗಿದ ನೀರನ್ನು ಹೊರಹಾಕಲು ಸಿಬ್ಬಂದಿ ನೆರವಾಗುತ್ತಿದ್ದು, ಕಾಡಗೋಡಿಯಲ್ಲಿನ ಜೋಪಡಿಯಲ್ಲಿದ್ದ ಜನರನ್ನು ರಕ್ಷಣೆ ಮಾಡಲಾಗಿದೆ. ಒಂದೇ ದಿನ 1011 ಜನರನ್ನು ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ ಎಂದರು.
ಜನ ಕಷ್ಟದಲ್ಲಿದ್ದಾಗ ಸಿದ್ದರಾಮಯ್ಯ ರಾಜಕೀಯ ಮಾಡಬಾರದು
ಮಳೆಹಾನಿಯಿಂದ ಬ್ರ್ಯಾಂಡ್ ಬೆಂಗಳೂರಿನ ಹೆಸರಿಗೆ ಧಕ್ಕೆಯಾಗುತ್ತಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜನರು ಕಷ್ಟದಲ್ಲಿದ್ದಾಗ ಯಾರೂ ರಾಜಕೀಯ ಮಾಡಬಾರದು. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಲಾಭ ಪಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡಬಾರದು. ನಾಲ್ಕು ವರ್ಷಗಳ ಹಿಂದೆ ಸಿದ್ದರಾಮಯ್ಯ ಕೂಡ ಆಡಳಿತ ನಡೆಸಿದ್ದರು. ಇವೆಲ್ಲ ನಾಲ್ಕು ವರ್ಷದ ಈಚೆಗೆ ಆಗಿರುವ ಬಿಲ್ಡಿಂಗ್‌ಗಳಲ್ಲ. ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಸಲಹೆ ಕೊಡಬೇಕು. ಒತ್ತುವರಿಯಾಗಿರುವ ರಾಜಕಾಲುವೆಗಳ ತೆರವು ಮಾಡುವ ಕೆಲಸವನ್ನು ಬಿಬಿಎಂಪಿ ಹಾಗೂ ಸರ್ಕಾರ ಮಾಡುತ್ತಿದೆ ಎಂದರು.
ಇದನ್ನೂ ಓದಿ | ಬೆಂಗಳೂರು-ಮೈಸೂರು ಹೆದ್ದಾರಿ ಸದ್ಯಕ್ಕಿಲ್ಲ ಉದ್ಘಾಟನೆ: ಭೂಸ್ವಾಧೀನ ಸಮಸ್ಯೆ ಎಂದ ಸಿಎಂ ಬೊಮ್ಮಾಯಿ