Site icon Vistara News

Siddaramotsava | ನಾನೂ ಸಿಎಂ ಆಕಾಂಕ್ಷಿ ಅನ್ನೋದರಲ್ಲಿ ತಪ್ಪೇನಿದೆ?: ಸಿದ್ದರಾಮಯ್ಯ ನೇರ ಮಾತು

Siddaramotsava

ಸಂದರ್ಶನ: ಮಾರುತಿ ಪಾವಗಡ, ಬೆಂಗಳೂರು
ದಾವಣಗೆರೆಯಲ್ಲಿ ಆ. 3ರಂದು ಸಿದ್ದರಾಮಯ್ಯ ಅಭಿಮಾನಿಗಳು ಅಮೃತ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಬಿಂಬಿಸುವುದೇ ಈ ಕಾರ್ಯಕ್ರಮದ ಗುರಿ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್ ಜತೆ ಸಿದ್ದರಾಮಯ್ಯ ಮುಕ್ತವಾಗಿ ಮಾತನಾಡಿದ್ದಾರೆ. ಅವರ ಸಂದರ್ಶನದ ಸಂಪೂರ್ಣ ಸಾರ ಇಲ್ಲಿದೆ.

ವಿಸ್ತಾರ ನ್ಯೂಸ್: ಹುಟ್ಟು ಹಬ್ಬವೇ ಬೇಡ ಎನ್ನುತ್ತಿದ್ದ ನೀವು ಈ ಬಾರಿ ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವುದರ ಮರ್ಮವೇನು?

ಸಿದ್ದರಾಮಯ್ಯ: ನನ್ನ ಹುಟ್ಟುಹಬ್ಬ ಆಚರಣೆ ಚರ್ಚೆ ಆಗಬಾರದು. ನಾನು ಎಂದೂ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ. ಇದೇ ಮೊದಲ ಬಾರಿಗೆ ಒಪ್ಪಿಗೆ ಕೊಟ್ಟಿರುವೆ. ಇದೇ ಮೊದಲು, ಇದೇ ಕೊನೆ. ಮುಂದೆ ಎಂದೂ ಹುಟ್ಟು ಹಬ್ಬ ಮಾಡಿಕೊಳ್ಳುವುದಿಲ್ಲ. ನಾನು 75 ದಾಟಿದ್ದೇನೆ. ಹೀಗಾಗಿ ಅಮೃತ ಮಹೋತ್ಸವ ಮಾಡೋಣ ಎಂದು ಹಿತೈಷಿಗಳು ಹೇಳಿದ್ದಕ್ಕೆ ಒಪ್ಪಿಕೊಂಡಿದ್ದೇನೆ ಅಷ್ಟೆ. ದಾವಣಗೆರೆ ನಗರ ರಾಜ್ಯಕ್ಕೆ ಕೇಂದ್ರ ಸ್ಥಾನದಲ್ಲಿ ಇರೋದರಿಂದ ಅಲ್ಲಿಯೇ ಮಾಡಿ ಎಂದು ಹೇಳಿದ್ದೇನೆ.

ವಿಸ್ತಾರ ನ್ಯೂಸ್: ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮಾಡಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರಲ್ಲ?

ಸಿದ್ದರಾಮಯ್ಯ: ಅವರು ಹಲವು ಬಾರಿ ಇದನ್ನ ಹೇಳಿದ್ದಾರೆ. ನಾನೂ ಹೇಳ್ತೀನಿ, ವ್ಯಕ್ತಿ ಪೂಜೆ ಬೇಡ ಎಂದು. ಒಮ್ಮೆ ಕಾಂಗ್ರೆಸ್‌ಗೆ ಸೇರಿದ ಮೇಲೆ ಸಿದ್ಧಾಂತಕ್ಕೆ ಬದ್ಧರಾಗಿ ಕೆಲಸ ಮಾಡಬೇಕು. ಆ ಕೆಲಸ ಮಾಡೋರು ಲೀಡರ್. ಆ ಸಿದ್ಧಾಂತಕ್ಕೆ ಬದ್ಧವಾಗಿ ಕೆಲಸ ಮಾಡಬೇಕು ಹೊರತು ವ್ಯಕ್ತಿ ಪೂಜೆ ಪಕ್ಷ ಪೂಜೆ ಮುಖ್ಯವಲ್ಲ.ನಮ್ಮ ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿ ಕೆಲಸ ಮಾಡಿ. ನಮ್ಮ ಸಿದ್ಧಾಂತವನ್ನ ಗಟ್ಟಿ ಧ್ವನಿಯಲ್ಲಿ ಹೇಳಿ ಎನ್ನೋದು ನನ್ನ ಕರೆ.

ವಿಸ್ತಾರ ನ್ಯೂಸ್: ದಾವಣಗೆರೆ ಸಮಾವೇಶದ ಒನ್ ಲೈನ್ ಅಜೆಂಡಾ ಸಿದ್ದರಾಮಯ್ಯ ಮುಂದಿನ ಸಿಎಂ ಅಂತ ಬಿಂಬಿಸುವುದಲ್ಲವೆ?

ಸಿದ್ದರಾಮಯ್ಯ: ಇದು ಸಂಪೂರ್ಣ ತಪ್ಪು. ಸಿದ್ದರಾಮಯ್ಯ ಸಿಎಂ ಆಗಲಿ ಅಂತ ಅಮೃತ ಮಹೋತ್ಸವ ಮಾಡ್ತಿಲ್ಲ. ಆದರೆ, ಇದರಿಂದ ರಾಜ್ಯದಲ್ಲಿ ಪಕ್ಷಕ್ಕೆ ಬಲ ಬರುವುದನ್ನು ನಾನು ತಳ್ಳಿ ಹಾಕುವುದಿಲ್ಲ. ಚುನಾವಣೆ ಬಳಿಕ 113 ಸ್ಥಾನ ಬಂದರೆ ಶಾಸಕಾಂಗ ಪಕ್ಷದ ಸದಸ್ಯರ ಒಪ್ಪಿಗೆ ಪಡೆದು ಹೈಕಮಾಂಡ್ ಸಿಎಂ ಯಾರು ಅಂತ ನಿರ್ಧಾರ ಮಾಡುತ್ತದೆ. ಒಂದು ಸಮಾವೇಶ ಇಲ್ಲವೇ ಕಾರ್ಯಕ್ರಮ ಮಾಡಿ ಮುಂದಿನ ಸಿಎಂ ಎಂದು ಹೇಳಿಕೊಳ್ಳುವುದು ರಾಜಕೀಯ ಪ್ರಬುದ್ಧತೆ ಅಲ್ಲ.

ವಿಸ್ತಾರ ನ್ಯೂಸ್: ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಶಾಸಕ ಜಮೀರ್ ಹೇಳಿಕೆ ಪಕ್ಷದ ಒಗ್ಗಟ್ಟಿಗೆ ಡ್ಯಾಮೇಜ್ ಅಲ್ಲವೆ? ನೀವು ಅದಕ್ಕೆ ಸಹಮತ ವ್ಯಕ್ತ ಪಡಿಸುತ್ತೀರಾ?

ಸಿದ್ದರಾಮಯ್ಯ: ಜಮೀರ್ ಆ ರೀತಿ ಹೇಳಿಲ್ಲ. ಆ ರೀತಿ ಹೇಳಿದ್ದಾರೆ ಅಂತ ರಾಜಕೀಯ ವಿರೋಧಿಗಳು ಹೇಳುತ್ತಿದ್ದಾರೆ ಅಷ್ಟೆ.

ವಿಸ್ತಾರ ನ್ಯೂಸ್: ಬಸವರಾಜ ಬೊಮ್ಮಾಯಿ ಸರ್ಕಾರದ ಬಗ್ಗೆ ಏನು ಹೇಳ್ತೀರಾ?

ಸಿದ್ದರಾಮಯ್ಯ: ಇದು ಅತ್ಯಂತ ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರ. 2018ರಲ್ಲಿ ಕೊಟ್ಟ ಪ್ರಣಾಳಿಕೆಯ ಭರವಸೆಯಲ್ಲಿ ಶೇ. 10ರಷ್ಟೂ ಈಡೇರಿಸಿಲ್ಲ. ಶೇ.40ರಷ್ಟು ಕಮಿಷನ್ ತಿನ್ನುವ ಸರ್ಕಾರ ಇದು.

ವಿಸ್ತಾರ ನ್ಯೂಸ್: ನಿಮ್ಮ ಬಳಿ ದಾಖಲೆ ಇದ್ದರೆ ನನಗೆ ಕೊಡಿ ಎಂದು ಸಿಎಂ ಕೇಳಿದ್ದಾರೆ ಕೊಡಿ…

ಸಿದ್ದರಾಮಯ್ಯ: ನಮ್ಮ ಅವಧಿಯಲ್ಲಿ 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡಿದರು. ಇವತ್ತಿಗೂ ಅವರು ದಾಖಲೆ ಕೊಟ್ಟಿಲ್ಲ. ಇವರ ಸರ್ಕಾರದಲ್ಲಿ ಶೇ. 40 ಕಮಿಷನ್ ನಡೆಯುತ್ತಿದೆ ಅಂತ ಆರೋಪ ಮಾಡಿದ್ದು ನಾನಲ್ಲ ಗುತ್ತಿಗೆದಾರರ ಸಂಘ. ಪಿಎಂಗೆ ಸಂಘವೇ ಪತ್ರ ಬರೆದಿದೆ. ಇನ್ನೇನು ದಾಖಲೆ ಬೇಕು?. ನನ್ನ ಮೇಲೆ ಏಕವಚನ ಪದಪ್ರಯೋಗ ಮಾಡುವ ಸಿಎಂ ಬಸವರಾಜ ಬೊಮ್ಮಾಯಿಗೆ ಸಂಸ್ಕೃತಿ ಇಲ್ಲ ಎಂದೇ ಹೇಳಬೇಕಾಗುತ್ತದೆ.

ವಿಸ್ತಾರ ನ್ಯೂಸ್: ಕರಾವಳಿಯ ಸರಣಿ ಕೊಲೆಗಳ ರಾಜಕೀಯ ಲಾಭಕ್ಕೆ ಕಾಂಗ್ರೆಸ್ ಮುಂದಾಗಿದೆಯೆ?

ಸಿದ್ದರಾಮಯ್ಯ: ಪ್ರತಿಪಕ್ಷದವರು ಸರ್ಕಾರದ ವೈಪಲ್ಯ ಹೇಳೋದು ತಪ್ಪಾ? ಸಿಎಂ ಪ್ರವೀಣ್ ಮನೆಗೆ ಹೋಗಿ ಬಂದಿದ್ದಾರೆ. ಹಾಗಾದ್ರೆ ಫಾಜಿಲ್, ಮಸೂದ್ ಮನೆಗೆ ಯಾಕೆ ಹೋಗಿಲ್ಲ? ಒಂದು ವರ್ಗಕ್ಕೆ ಮಾತ್ರ ಅವರು ಮುಖ್ಯಮಂತ್ರಿಯಾ? ಬೊಮ್ಮಾಯಿ ನಾಲಾಯಕ್ ಸಿಎಂ ರೀತಿ ನಡೆದುಕೊಂಡಿದ್ದಾರೆ.

ವಿಸ್ತಾರ ನ್ಯೂಸ್: ನೀವು ಎಸ್ಡಿಪಿಐ, ಪಿಎಫ್ಐ ಮೇಲಿನ ಕೇಸ್ ವಾಪಸು ತೆಗೆದುಕೊಂಡಿದ್ದು ತಪ್ಪಲ್ಲವೆ?

ಸಿದ್ದರಾಮಯ್ಯ: ನನ್ನ ಕಾಲದಲ್ಲಿ 23 ಜನ ಸತ್ತಿದ್ರು. ಅದು ಎಲ್ಲವೂ ಕೊಲೆ ಅಲ್ಲ. ಕೊಲೆಗಳ ಹಿನ್ನೆಲೆ ಬಗ್ಗೆ ಆಗ ಚರ್ಚೆ ಆಗಿದೆ. ನಿಮ್ಮ ಕಾಲದಲ್ಲಿ ಏನು ಕ್ರಮ ತಗೊಂಡ್ರಿ? ಎಸ್ಡಿಪಿಐ, ಪಿಎಫ್ಐ ಕಾರಣವಾಗಿದ್ರೆ ಬ್ಯಾನ್ ಮಾಡಿ. ಇಂತಹ ಸಂಘಟನೆಗಳು ಹುಟ್ಟದಂತೆ ಕಾನೂನು ತನ್ನಿ. ಸಿಎಂ ಆಗಿ ಮುಂದುವರಿಯುವ ಯಾವುದೇ ನೈತಿಕತೆ ಬೊಮ್ಮಾಯಿಗೆ ಇಲ್ಲ.

ವಿಸ್ತಾರ ನ್ಯೂಸ್: ನೀವು ಒಂದು ಸಮುದಾಯದ ಓಲೈಕೆ ಮಾಡುವ ಕೆಲಸ ಮಾಡುತ್ತಿದ್ದಿರಿ ಎಂಬ ಆರೋಪ ಇದೆ…

ಸಿದ್ದರಾಮಯ್ಯ: ನಾವು ಎಲ್ಲ ಸಮುದಾಯಗಳನ್ನು ಒಟ್ಟಾಗಿ ಮನುಷ್ಯರಾಗಿ ನೋಡಿದ್ದೇವೆ. ನಾವು ಯಾರನ್ನೂ ಓಲೈಕೆ ಮಾಡಿಲ್ಲ. ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಿದ್ದೇವೆ.

ವಿಸ್ತಾರ ನ್ಯೂಸ್: ಮೊತ್ತೊಮ್ಮೆ ಸಿಎಂ ಎಂದು ನೀವು ಆಗಾಗ ಹೇಳುವುದು ಯಾಕೆ?
ಸಿದ್ದರಾಮಯ್ಯ: ನಾನು ಸಿಎಂ ಆಗಬೇಕು ಎಂದು ಬಹಿರಂಗವಾಗಿ ಎಲ್ಲೂ ಹೇಳಿಲ್ಲ. ನಾನು, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ ಪರಮೇಶ್ವರ್, ಡಿ ಕೆ ಶಿವಕುಮಾರ್, ಎಂ ಬಿ ಪಾಟೀಲ್ ಸಿಎಂ ಆಗಬೇಕು ಎಂದು ಹೇಳುವುದು ತಪ್ಪಲ್ಲ. ಅಂತಿಮವಾಗಿ ಶಾಸಕಾಂಗ ಪಕ್ಷದ ಸಭೆ ಮತ್ತು ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತದೆ. ನನಗೂ ಅವಕಾಶ ಬೇಕು ಅಂತ ಕೇಳುವುದರಲ್ಲಿ ತಪ್ಪಿಲ್ಲ.

ವಿಸ್ತಾರ ನ್ಯೂಸ್: 2023ರಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿರಾ?

ಸಿದ್ದರಾಮಯ್ಯ: ಸದ್ಯ ನಾನು ಬಾದಾಮಿ ಕ್ಷೇತ್ರದ ಶಾಸಕ. ಅಲ್ಲಿಯೇ ನಿಲ್ಲಬೇಕು ಅನ್ನೋ ಒತ್ತಡ ಇದೆ. ಕೋಲಾರ, ಹುಣಸೂರು, ಹೆಬ್ಬಾಳ, ವರುಣಾ, ಚಾಮರಾಜಪೇಟೆ, ಕೊಪ್ಪಳದವರು ಕರೆಯುತ್ತಿದ್ದಾರೆ. ಬಾದಾಮಿ ದೂರ, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಆಗ್ತಿಲ್ಲ ಅನ್ನೋ ಕೊರಗು ಇದೆ. ಬೆಂಗಳೂರಿಗೆ ಹತ್ತಿರದಲ್ಲಿ ಇರುವ ಕ್ಷೇತ್ರದಲ್ಲಿ ನಿಲ್ಲುತ್ತೇನೆ.

ವಿಸ್ತಾರ ನ್ಯೂಸ್: ಸಿದ್ದರಾಮಯ್ಯ ಎಲ್ಲಿಯೇ ನಿಂತರೂ ಸೋಲಿಸುತ್ತಿದ್ದೇವೆಂದು ಬಿಜೆಪಿ ನಾಯಕರು ಹೇಳುತ್ತಿದ್ದಾರಲ್ಲ?
ಸಿದ್ದರಾಮಯ್ಯ: ನನ್ನನ್ನು ಬಹಳ ಚುನಾವಣೆಯಲ್ಲಿ ಸೋಲಿಸಲು ಜೆಡಿಎಸ್, ಬಿಜೆಪಿ ಕೆಲಸ ಮಾಡಿದೆ. ಐ ಆಮ್ ಫೈಟರ್, ಫೈಟ್ ಮಾಡ್ತೀನಿ. ವರುಣಾ, ಕೋಲಾರ, ಚಾಮರಾಜಪೇಟೆಯಲ್ಲಿ ಬಿಜಿಪಿಗೆ ಶಕ್ತಿಯೇ ಇಲ್ಲ. ಇನ್ನು ಹೇಗೆ ಸೋಲಿಸುತ್ತಾರೆ?

ವಿಸ್ತಾರ ನ್ಯೂಸ್: ಸಿದ್ದರಾಮಯ್ಯ ಬಣ ಮತ್ತು ಡಿಕೆಶಿ ಬಣದ ಗದ್ದಲದ ನಡುವೆ ಸ್ಪಷ್ಟ ಬಹುಮತ ಸಾಧ್ಯವೇ?

ಸಿದ್ದರಾಮಯ್ಯ: ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಗೊಂದಲ ಇರುವುದು ಬಿಜೆಪಿಯಲ್ಲಿ. ಕಾಂಗ್ರೆಸ್ನಲ್ಲಿ ಬರೀ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಬಣಗಳಷ್ಟೇ ಇರೋದು. ನಮ್ಮ ರಾಜಕೀಯ ವಿರೋಧಿಗಳು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.

ವಿಸ್ತಾರ ನ್ಯೂಸ್: ಕುಗ್ರಾಮದಲ್ಲಿ ಹುಟ್ಟಿದ ನೀವು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರುತ್ತೇನೆಂದು ಎಂದಾದರು ಕನಸು ಕಂಡಿದ್ರಾ?
ಸಿದ್ದರಾಮಯ್ಯ: ಇಲ್ಲ. ಎಂದೂ ಈ ಬಗ್ಗೆ ಕನಸು ಕಂಡಿರಲಿಲ್ಲ. ನಮ್ಮದು ರೈತ ಕುಟುಂಬ. ನಮ್ಮ ಮನೆಯಲ್ಲಿ ಯಾರಿಗೂ ರಾಜಕೀಯದ ಹಿನ್ನೆಲೆ ಇರಲಿಲ್ಲ. ನನಗೆ ಪ್ರೊ. ನಂಜುಡಸ್ವಾಮಿ ಪರಿಚಯವಾಗಿ ರಾಜಕಾರಣದ ಮೇಲೆ ಆಸಕ್ತಿ ಬಂತು. ಜನರ ಸೇವೆ ಮಾಡಬಹುದು ಅಂತ ರಾಜಕಾರಣದಲ್ಲಿ ಸಕ್ರಿಯನಾದೆ. ಮುಂದೆ ನಾನು ತಾಲ್ಲೂಕು ಬೋರ್ಡ್ ಸದಸ್ಯ , ಶಾಸಕ, ಸಿಎಂ ಆಗುವುದಕ್ಕೆ ಅಂಬೇಡ್ಕರ್ ಬರೆದ ಸಂವಿಧಾನ ಮತ್ತು ಜನರ ಆಶೀರ್ವಾದ ಕಾರಣ.

ವಿಸ್ತಾರ ನ್ಯೂಸ್: ಐದು ವರ್ಷ ಸಿಎಂ ಆಗಿದ್ರಿ. ಸಾಕಷ್ಟು ಕೆಲಸ ಮಾಡಿದ್ದೀರಿ. ನಾನು ಇದನ್ನ ಮಾಡಿಲ್ಲ, ಮಾಡಬೇಕಿತ್ತು ಎಂಬ ಭಾವನೆ ಇದೆಯಾ?

ಸಿದ್ದರಾಮಯ್ಯ: ದೇವರಾಜು ಅರಸು ಬಳಿಕ ನಾನು ಐದು ವರ್ಷ ಸಿಎಂ ಆಗಿ ಕೆಲಸ ಮಾಡಿದೆ. ಎಸ್ ಎಂ ಕೃಷ್ಣಾಗೂ ಅವಕಾಶ ಸಿಕ್ಕಿತ್ತು. ಆದರೆ ಅವರು ಅವಧಿಗೂ ಮೊದಲೇ ಚುನಾವಣೆಗೆ ಹೋದ್ರು. ಕಟ್ಟಕಡೆಯ ಮನುಷ್ಯನಿಗೆ ಪ್ರಯೋಜನವಾಗುವ ಕೆಲಸ ಮಾಡಿದ್ದೇನೆ. ಎಲ್ಲವೂ ಮಾಡಿದ್ದೇನೆ ಎಂದು ಹೇಳಲ್ಲ. ಹಲವು ಕೆಲಸ ಇನ್ನೂ ಮಾಡಬೇಕಿದೆ.

ವಿಸ್ತಾರ ನ್ಯೂಸ್: ಸಿದ್ದರಾಮಯ್ಯ ಕೆಲವು ಸಮುದಾಯಗಳಿಗೆ ಸಿಮೀತವಾಗಿ ಕಾರ್ಯಕ್ರಮ ರೂಪಿಸಿದರು ಎಂಬ ಆಪಾದನೆ ಇದೆ. ಇದು 2018ರಲ್ಲಿ ಕಾಂಗ್ರೆಸ್ 80ಕ್ಕೆ ಇಳಿಯಲು ಕಾರಣವಾಯಿತು ಎನ್ನಬಹುದೆ?
ಸಿದ್ದರಾಮಯ್ಯ: ಇಂತಹ ಆರೋಪಗಳು ರಾಜಕೀಯ ಪ್ರೇರಿತ. ನಾನು ಮಾಡಿದ ಅನ್ನಭಾಗ್ಯ, ಕೃಷಿ ಭಾಗ್ಯ, ಇಂದಿರಾ ಕ್ಯಾಂಟಿನ್ ಸೇರಿದಂತೆ ಹತ್ತು ಹಲವು ಯೋಜನೆಗಳು ಎಲ್ಲ ವರ್ಗಗಳಿಗೂ ಸಿಕ್ಕಿವೆ. ಸಿದ್ದರಾಮಯ್ಯ ಅಹಿಂದ ವರ್ಗಕ್ಕೆ ಮಾತ್ರ ಯೋಜನೆ ಕೊಟ್ಟರು ಎಂದು ಅಪಪ್ರಚಾರ ಮಾಡಲಾಯಿತು. ನಾನು ಮೇಲ್ಜಾತಿ ವಿರೋಧಿ ಎಂದು ಆರೋಪ ಮಾಡಿದರು. ನಾನು ಮಾಡಿದ ಯೋಜನೆಗಳು ಎಲ್ಲ ಜಾತಿಗಳಲ್ಲಿ ಇರುವ ಬಡವರಿಗೆ ಅನುಕೂಲಕರವಾಗಿತ್ತು.

ವಿಸ್ತಾರ ನ್ಯೂಸ್: ಕಾಂಗ್ರೆಸ್ ನಿಮ್ಮ ಸಾಧನೆಗಳನ್ನು ಜನರ ಮುಂದೆ ಇಡುವುದರಲ್ಲಿ ವಿಫಲವಾಯಿತೆ?

ಸಿದ್ದರಾಮಯ್ಯ: ಹೌದು. ನಮ್ಮ ಸಾಧನೆಗಳನ್ನು ಜನರ ಮುಂದೆ ಗಟ್ಟಿಯಾಗಿ ನಾವು ಹೇಳಲಿಲ್ಲ. ನಮ್ಮ ಪಕ್ಷದವರು ಸತ್ಯ ಹೇಳುವುದಕ್ಕೆ ಹಿಂದೇಟು ಹಾಕುತ್ತಾರೆ. ಜನರಿಗೆ ಸತ್ಯ ಏನು ಅಂತ ಗೊತ್ತಾಗಲ್ಲ. ನಮ್ಮ ಕಾರ್ಯಕರ್ತರು ಮತ್ತು ನಾಯಕರು ಗಟ್ಟಿಯಾಗಿ ಹೇಳಬೇಕಿತ್ತು. ನಾವು ಜನ ಸಂಪರ್ಕ ಮಾಡದೇ ಇದ್ದಿದ್ದೇ ಚುನಾವಣೆಯಲ್ಲಿ ಸೋಲುವುದಕ್ಕೆ ಕಾರಣವಾಯಿತು. ಬಿಜೆಪಿ ಮತ್ತು ಜೆಡಿಎಸ್ ಅಪಪ್ರಚಾರ ಮಾಡುವುದರಲ್ಲಿ ಯಶಸ್ವಿಯಾದವು. ಬಿಜೆಪಿಯವರು ಸುಳ್ಳು ಬೇಕಾದ್ರೆ ನೂರು ಬಾರಿ ಹೇಳಿ ಸತ್ಯ ಎಂದು ಸಾಧಿಸುತ್ತಾರೆ. ನಮ್ಮವರು ಸತ್ಯ ಇರೋದನ್ನ ಹೇಳುವುದಕ್ಕೂ ಹಿಂಜರಿಯುತ್ತಾರೆ. ಇದೇ ನಮ್ಮ ಹಿನ್ನಡೆಗೆ ಮೂಲ.

ವಿಸ್ತಾರ ನ್ಯೂಸ್: ಮೊದಲ ಬಜೆಟ್ ವೇಳೆ ನಿಮ್ಮ ಅನುಭವ ಹೇಗಿತ್ತು?
ಸಿದ್ದರಾಮಯ್ಯ: 1994ರಲ್ಲಿ ಹಣಕಾಸು ಮಂತ್ರಿಯಾದೆ. ಸಿದ್ದರಾಮಯ್ಯಗೆ ನೂರು ಕುರಿ ಲೆಕ್ಕ ಹಾಕಲೂ ಬರುವುದಿಲ್ಲ. ಈ ರಾಜ್ಯದ ಬಜೆಟ್ ಹೇಗೆ ನಿಭಾಯಿಸುತ್ತಾರೆ ಎಂದು ಕೆಲವರು ಬರೆದರು. ನಾನು ಇದನ್ನ ಸವಾಲಾಗಿ ಸ್ವೀಕರಿಸಿದೆ. ನಾನು ಬಜೆಟ್ ಮಂಡಿಸಿದ ಮರು ದಿನ ಪ್ರಮುಖ ಇಂಗ್ಲಿಷ್ ಪತ್ರಿಕೆಯೊಂದು, ಇದು ಅತ್ಯುತ್ತಮ ಬಜೆಟ್ ಎಂದು ಸಂಪಾದಕೀಯ ಬರೆಯಿತು. ಅದನ್ನ ನೋಡಿ ನನಗೆ ಸಮಾಧಾನವಾಯಿತು. ನನಗೂ ಬಜೆಟ್ ಮಂಡಿಸುವ ಸಾಮಾರ್ಥ್ಯ ಇದೆ ಎಂಬ ವಿಶ್ವಾಸ ಬಂತು. ಯಾವುದೇ ವ್ಯಕ್ತಿಯನ್ನು ಜಾತಿಯ ಮೇಲೆ ಅಳತೆ ಮಾಡಬಾರದು!

ವಿಸ್ತಾರ ನ್ಯೂಸ್: ನಿಮ್ಮ ಮನೆಯ ಬಜೆಟ್ ಬಗ್ಗೆ ಯಾವತ್ತಾದರೂ ಗಮನ ಹರಿಸಿದ್ದು ಇದೆಯಾ? ನಿಮ್ಮ ಮನೆಯ ತಿಂಗಳ ಬಜೆಟ್ ಎಷ್ಟು?

ಸಿದ್ದರಾಮಯ್ಯ: ನಾನು ಯಾವತ್ತೂ ಮನೆಗೆ ಏನು ಬೇಕು ಎಂದು ಕೇಳಿಲ್ಲ. ನಮ್ಮ ಊರಿನಿಂದ ದವಸಧಾನ್ಯಗಳು ಬರುತ್ತವೆ. ಎಣ್ಣೆ,ತುಪ್ಪ,ಬೆಣ್ಣೆ ತರಕಾರಿ ಅಕ್ಕಿ ಬರುತ್ತವೆ. ಮನೆಗೆ ಇತ್ತಿಷ್ಟು ಹಣ ಬೇಕು ಎಂದಾಗ ಕೊಡ್ತೀನಿ. ನನ್ನ ಹೆಂಡತಿ ನಮ್ಮ ಮನೆಯ ವ್ಯವಹಾರ ನೋಡಿಕೊಳ್ಳುತ್ತಾರೆ. ನನ್ನ ಮಕ್ಕಳ ಶಿಕ್ಷಣ ಸಹ ಅವರೇ ನೋಡಿಕೊಂಡಿದ್ದರು. ಇಂದಿಗೂ ನಮ್ಮ ಮನೆಯ ತಿಂಗಳ ಬಜೆಟ್ ಎಷ್ಟು ಅನ್ನೋದು ನನಗೆ ಗೊತ್ತಿಲ್ಲ.

ವಿಸ್ತಾರ ನ್ಯೂಸ್: ನಿಮ್ಮ ಅಧಿಕಾರದ ಅವಧಿಯಲ್ಲಿ ಕುಟುಂಬದ ಹಸ್ತಕ್ಷೇಪ ಇತ್ತೇ?

ಸಿದ್ದರಾಮಯ್ಯ: ನನ್ನ ಹೆಂಡತಿ ಸಾಮಾನ್ಯ ಕುಟುಂಬದಿಂದ ಬಂದವಳು. ಎಂದೂ ನನ್ನ ವಿಚಾರದಲ್ಲಿ ಹಸ್ತಕ್ಷೇಪ ಮಾಡಲಿಲ್ಲ. ಅದು ರಾಜಕೀಯ ಆಗಿರಬಹುದು, ಕಚೇರಿ ವಿಚಾರವಾಗಿರಬಹುದು. ಅಷ್ಟರ ಮಟ್ಟಿಗೆ ನಾನು ಅದೃಷ್ಟವಂತ. ನನ್ನ ತಂದೆ, ನನ್ನ ಸಹೋದರರೂ ಹಸ್ತಕ್ಷೇಪ ಮಾಡಿಲ್ಲ.ಮಗ ರಾಕೇಶ್ನಿಗೆ ರಾಜಕೀಯದಲ್ಲಿ ಆಸಕ್ತಿ ಇತ್ತು. ನನ್ನ ಕ್ಷೇತ್ರ ನೋಡಿಕೊಳ್ಳುತ್ತಿದ್ದ. ಅವನು ಬದುಕಿರುವವರೆಗೂ ಕ್ಷೇತ್ರದಲ್ಲಿ ರಾಜಕೀಯವಾಗಿ ನನಗೆ ಸಮಸ್ಯೆ ಇರಲಿಲ್ಲ. ಅವನು ಸತ್ತ ಮೇಲೆ ನನಗೆ ಸಮಸ್ಯೆಯಾಯಿತು. ಆ ಸ್ಥಾನ ಈಗ ಯತೀಂದ್ರ ತುಂಬುತ್ತಿದ್ದಾನೆ. ಜನರು ಸಹ ಯತೀಂದ್ರನನ್ನು ಒಪ್ಪಿಕೊಳ್ಳುತ್ತಿದ್ದಾರೆ.

ವಿಸ್ತಾರ ನ್ಯೂಸ್: ನಿಮ್ಮ ಸಹೋದರರು ರಾಜಕೀಯಕ್ಕೆ ಬರಲು ನೀವು ಅಡ್ಡಿಯಾದಿರಿ ಎಂಬ ಮಾತಿದೆ.

ಸಿದ್ದರಾಮಯ್ಯ: ನೋ ನೋ ನೋ. ನಮ್ಮ ಕುಟುಂಬ ರಾಜಕೀಯದ ಕುಟುಂಬವಲ್ಲ. ನಮ್ಮ ಅಣ್ಣ ಮಾತ್ರ ಪಂಚಾಯಿತಿ ಮಟ್ಟದಲ್ಲಿ ಓಡಾಡುತ್ತಿದ್ದ. ವೋಟ್ ಹಾಕಿಸಲು ಓಡಾಡುತ್ತಿದ್ದ ನಮ್ಮ ಸಹೋದರರು ಬೇಸಾಯಕ್ಕೆ ಸೀಮಿತರಾಗಿದ್ದರು. ರಾಜಕಾರಣಕ್ಕೆ ಬರಬೇಕು ಎಂದು ಅವರು ಎಂದೂ ಹೇಳಲಿಲ್ಲ.

ವಿಸ್ತಾರ ನ್ಯೂಸ್: ಚಾಮುಂಡೇಶ್ವರಿಯಲ್ಲಿ ನಿಮ್ಮ ಸೋಲಿಗೆ ನಿಜವಾದ ಕಾರಣ ಏನು ?

ಸಿದ್ದರಾಮಯ್ಯ: ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿತು. ಶ್ರೀನಿವಾಸ್ ಪ್ರಸಾದ್, ವಿಶ್ವಾನಾಥ್ ನನ್ನ ಸೋಲಿಗೆ ಪ್ರಯತ್ನ ಮಾಡಿದರು. ಕೆಲವರು ಹ್ಯಾಂಡ್ ಬಿಲ್ ಹಂಚಿಕೆ ಮಾಡಿದರು. ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ಆಗ್ತಾನೆ ಸೋಲಿಸಿ ಅಂತ ಹ್ಯಾಂಡ್ ಬಿಲ್ ಹಂಚಿದರು. ಇದನ್ನು ಹಾಕಿಸಿದ್ದು ಯಾರು ಅಂತ ಗೊತ್ತಾಗಲಿಲ್ಲ. ಆದ್ರೆ ಹತ್ತು ವರ್ಷಗಳ ಕಾಲ ಕ್ಷೇತ್ರ ಬಿಟ್ಟಿದ್ದು ಸಹ ಹಿನ್ನಡೆಗೆ ಕಾರಣ. ಹಳ್ಳಕ್ಕೆ ಬಿದ್ದವನಿಗೆ ನೂರೆಂಟು ಕಲ್ಲು ಅನ್ನೋ ರೀತಿ ಆ ಟೈಮ ಲ್ಲಿ ನನ್ನ ಸೋಲಿಸಲು ಷಡ್ಯಂತ್ರ ನಡೆಯಿತು.

Exit mobile version